ಶನಿವಾರ, ಮೇ 21, 2022
20 °C

ಸೋಮವಾರಪೇಟೆಯಲ್ಲಿ ಕಾಮಗಾರಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಹಲವು ದಶಕಗಳಿಂದ ಮಾಗಿಯ ಚಳಿಯಲ್ಲಿ ಸೋಮಾರಿಯಂತೆ ಮಲಗಿದ್ದ ಸೋಮವಾರಪೇಟೆ ನಗರ ಒಮ್ಮೆಲೆ ಕೊಡವಿಕೊಂಡು ಎಚ್ಚೆತ್ತುಬಿಟ್ಟಿದೆ. ಏಕಕಾಲದಲ್ಲಿ ಒಟ್ಟು ರೂ.7 ಕೋಟಿಗೂ ಅಧಿಕ ವೆಚ್ಚದ ಹಲವು ಕಾಮಗಾರಿಗಳು ಆರಂಭಗೊಂಡು ಯುದ್ಧಭೂಮಿಯ ವಾತಾವರಣ ಸೃಷ್ಟಿಯಾಗಿದೆ. ಎಲ್ಲಿ ನೋಡಿದರೂ ಟ್ರ್ಯಾಕ್ಟರು,  ಜೆಸಿಬಿ ಮತ್ತಿತರ ಯಂತ್ರಗಳ ಓಡಾಟ,ಧೂಳು, ಕಿವಿಗಡಚಿಕ್ಕುವ ಸದ್ದು ಪಟ್ಟಣದಲ್ಲಿ ತುಂಬಿ ತುಳುಕುತ್ತದೆ.

ತಾಲ್ಲೂಕಿನಲ್ಲಿಯೇ ಅತಿ ದೊಡ್ಡದಾಗಿರುವ ಇಲ್ಲಿನ ಸಂತೆ ಮಾರುಕಟ್ಟೆಯನ್ನು 1.25 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಯಾಗಿ ನಿರ್ಮಿಸುವ ಕೆಲಸ ಆರಂಭವಾಗಿದೆ. ಈಗಿರುವ ಮಾರುಕಟ್ಟೆ ಆವರಣವನ್ನು ಸಮತಟ್ಟುಗೊಳಿಸಿ ವರ್ತಕರಿಗೆ ವ್ಯಾಪಾರ ನಡೆಸಲು ಎತ್ತರದ ವೇದಿಕೆಗಳನ್ನು ಕಲ್ಪಿಸಲಾಗುತ್ತಿದೆ. ಇಡೀ ಮಾರುಕಟ್ಟೆಗೆ ಮೇಲ್ಛಾವಣಿ ನಿರ್ಮಾಣ ಮಾಡುವ ಮೂಲಕ ಮಳೆಗಾಲ ಹಾಗೂ ಚಳಿಗಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ವರ್ತಕರಿಗೆ ವಹಿವಾಟು ನಡೆಸಲು ಸೌಕರ್ಯ ನೀಡಲಾಗುತ್ತದೆ. ಕಾಮಗಾರಿ ನಡೆಯುವ ಈ ಜಾಗದಲ್ಲಿಯೇ ಬದಲಿ ವ್ಯವಸ್ಥೆ ಕಲ್ಪಿಸದೆ ಸಂತೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಗ್ರಾಹಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದರೂ ಮುಂದೆ ಒಳ್ಳೆಯ ವ್ಯವಸ್ಥೆಯಾಗುತ್ತದೆ ಎಂಬ ನಂಬಿಕೆಯಿಂದ ಎಲ್ಲ ತೊಂದರೆಗಳನ್ನೂ ಸಹಿಸಿಕೊಂಡಿದ್ದಾರೆ.

ಸಂತೆ ಮಾರುಕಟ್ಟೆ ಹತ್ತಿರವಿದ್ದ ಮಾಂಸ ಮಾರಾಟ ಮಳಿಗೆಗಳನ್ನು ಸಂಪೂರ್ಣ ನೆಲಸಮ ಮಾಡಿ ಈ ಸ್ಥಳದಲ್ಲಿ ರೂ. 90 ಲಕ್ಷ ವೆಚ್ಚದಲ್ಲಿ 2 ಅಂತಸ್ತಿನ ಸುಸಜ್ಜಿತ ಕಟ್ಟಡ ತಲೆ ಎತ್ತಿದೆ. ಈ ಕಟ್ಟಡದಲ್ಲಿ ಮೀನು, ಮಾಂಸ ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳದಲ್ಲಿಯೇ ಮಾಂಸ ಶುಚಿಮಾಡಿ ವರ್ತಕರಿಗೆ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ ಹಾಗೂ ಆಸ್ಪತ್ರೆಯ ಗೇಟ್‌ನಿಂದ ಸರ್ಕಾರಿ ಬಸ್ ನಿಲ್ದಾಣದ ತನಕ ರೂ. 1.35 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಇದರ ಆಸುಪಾಸಿನಲ್ಲಿ ಅಂಗಡಿ ಇಟ್ಟುಕೊಂಡಿರುವ ವರ್ತಕರಿಗೆ ವ್ಯಾಪಾರ ನಡೆಯದೆ ತೊಂದರೆಗೂ ಸಿಲುಕಿದ್ದಾರೆ. ಆದರೆ ನಗರದಲ್ಲಿ ಅಭಿವೃದ್ಧಿ ಕಾರ್ಯ ನಡೆದು ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಇಂತಹ ಕಿರಿಕಿರಿಗಳನ್ನು ಸಹಿಸಿಕೊಂಡಿದ್ದಾರೆ. ಖಾಸಗಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮಡಿಕೇರಿ ರಸ್ತೆಗೆ ಸ್ಥಳಾಂತರಿಸಲಾಗಿದೆ. ನಗರದ ಎಲ್ಲ ವಾಹನಗಳೂ ಈಗ ಎಂ.ಜಿ ರಸ್ತೆ, ಮಡಿಕೇರಿ ರಸ್ತೆ ಹಾಗೂ ಕ್ಲಬ್ ರಸ್ತೆಗಳಲ್ಲಿ ಮಾತ್ರ ಸಂಚರಿಸಬೇಕಾದ್ದರಿಂದ ವಾಹನದ ದಟ್ಟಣೆ ಅತಿಯಾಗಿ ಜನರಿಗೆ ತೊಂದರೆಯಾಗುತ್ತಿದೆ. ವಾಹನ ಸಂಚಾರ ನಿಯಂತ್ರಿಸುವುದು ಪೊಲೀಸರಿಗೂ ಈಗ ಸವಾಲಾಗಿ ಬಿಟ್ಟಿದೆ.

ನಗರದ ಆನೆಕೆರೆ ಬಳಿಯಿದ್ದ ನೇತಾಜಿ ಪಾರ್ಕಿಗೆ ರೂ.30 ಲಕ್ಷ ವೆಚ್ಚದಲ್ಲಿ ಹೊಸರೂಪ ನೀಡುವ ಕಾರ್ಯ ಶೀಘ್ರಗತಿಯಲ್ಲಿ ಸಾಗಿದ್ದು, ಈ ಪಾರ್ಕಿಗೆ ನೂತನ ಕಳೆ ಒದಗಿದೆ. ಮಹದೇಶ್ವರ ಬಡಾವಣೆಯಲ್ಲಿರುವ ದೇವರ ಬನವನ್ನೂ ಉದ್ಯಾನವಾಗಿ ಮಾರ್ಪಡಿಸುತ್ತಿದ್ದು ಇದಕ್ಕಾಗಿ ರೂ.10 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ನಗರದ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿ ರೂ.90 ಲಕ್ಷ ವೆಚ್ಚದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಒಟ್ಟು 18 ಮಳಿಗೆಗಳು ಹಾಗೂ ಒಂದು ಉಪಾಹಾರಗೃಹವೂ ಇದರಲ್ಲಿದೆ. ವಾಹನ ನಿಲುಗಡೆಗೂ ಇಲ್ಲಿ ಉತ್ತಮ ಅವಕಾಶ ಕಲ್ಪಿಸಲಾಗುತ್ತಿದೆ.

ನಗರದ ಅರ್ಧ ಭಾಗದ ಕೊಳಚೆ ನೀರು ಹರಿಯುವ ಮಹದೇಶ್ವರ ಬಡಾವಣೆಯ ಚರ್ಚ್ ಬಳಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ತಡೆಗೋಡೆ ಸಹಿತ ಬೃಹತ್ ಗಾತ್ರದ ಚರಂಡಿ ನಿರ್ಮಿಸಲಾಗಿದೆ. ಇದರಿಂದಾಗಿ ನಗರದ ತ್ಯಾಜ್ಯ ನೀರು ಸರಿಯಾಗಿ ವಿಲೇವಾರಿಯಾಗಲು ಸಹಕಾರಿಯಾಗುತ್ತದೆ. ಒಟ್ಟಿನಲ್ಲಿ ದಶಕಗಳಿಂದ ನಿಂತ ನೀರಾಗಿದ್ದ ಸೋಮವಾರಪೇಟೆ ನಗರದಲ್ಲಿ ಈಗ ಅಭಿವೃದ್ಧಿಯ ಹೊಸಗಾಳಿ ಬೀಸುತ್ತಿದೆ. ಇದರಿಂದ ಮುಂದೆ ಒಳಿತಾಗುವುದಾದರೂ ಸದ್ಯಕ್ಕೆ ತೊಂದರೆಯಾಗುತ್ತಿರುವುದು ಮಾತ್ರ ನಿಜ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.