ಬುಧವಾರ, ಮೇ 12, 2021
26 °C

ಸೋರದಿರಲಿ ಮನೆಯ ಮಾಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

~ದಾಂಪತ್ಯ~ ಅತೀ ಸೂಕ್ಷ್ಮವಾದ ಹಾಗೂ ಅಷ್ಟೇ ಜಟಿಲವಾದ ವಿಚಾರ. ಇಲ್ಲಿ ಗೆದ್ದವರೂ ಉಂಟು ಸೋತವರೂ ಉಂಟು. ಆದರೆ ಯಾವುದೇ ದಾಂಪತ್ಯದ ವೈಫಲ್ಯಕ್ಕೂ ಕೇವಲ ಸ್ತ್ರೀಯನ್ನು ಹೊಣೆಯಾಗಿಸುವ ಪರಂಪರೆ ಪುರುಷ ಪ್ರಧಾನ ಸಮಾಜದಲ್ಲಿ ಬೆಳೆದು ಬಿಟ್ಟಿದೆ. ಈಗ ನಡೆದದ್ದೂ ಅದೇ.`ನಾನೇ ಸುಪ್ರೀಂ~ ಎನ್ನುವ ಭಾವ ಸಾರ್ಜಜನಿಕ ವಲಯದಲ್ಲಿರುವ ಅನೇಕ ವ್ಯಕ್ತಿಗಳಲ್ಲಿ ತಾನು ಸುಪ್ರೀಂ ಎನ್ನುವ ಅಹಂ ಭಾವ ಬೇರೂರಿ ಬಿಟ್ಟಿರುತ್ತದೆ. ಅಂಥವರಲ್ಲಿ ತಾನು ಮಾಡಿದ್ದೆಲ್ಲ ಸರಿ, ತನ್ನನ್ನು  ಯಾರೂ ಪ್ರಶ್ನಿಸಬಾರದು, ತನ್ನ ಮೇಲೆ ಯಾರೂ ಹಿಡಿತ ಸಾಧಿಸಬಾರದು ಎಂಬ ಮನೋಭಾವವನ್ನು ಕಾಣಬಹುದು. ಅದರಲ್ಲೂ ಹೆಂಡತಿಯಾದವಳು ಅವನನ್ನು ಪ್ರಶ್ನಿಸಿದಾಗ ಆತ ವ್ಯಗ್ರನಾಗುತ್ತಾನೆ. ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ದರ್ಶನ್ ಜೀವನ ಹಳಿ ತಪ್ಪಲು ಇಂತಹ ಉತ್ಕಟ ಮನೋಭಾವವೇ ಕಾರಣವಾಗಿರಬಹುದು.ಇತ್ತ ವಿಜಯಲಕ್ಷ್ಮಿ ಕೂಡ ಅಂತಹದೇ ಸ್ತ್ರೀ ಸಹಜ ಸಂವೇದನೆಗಳ ತಾಕಲಾಟಕ್ಕೆ ಸಿಲುಕಿದ್ದವರು. ತನ್ನ ಪತಿ ಎಷ್ಟೇ ಜನಪ್ರಿಯ ವ್ಯಕ್ತಿಯಾದರೂ ಅದು ಮನೆಯಿಂದ ಹೊರಗೆ. ಮನೆಯಲ್ಲಿ ಮಾತ್ರ ಆತ ಸಂಪೂರ್ಣವಾಗಿ ತನ್ನವನಾಗಿರಬೇಕು ಎಂಬ ವಿಜಯಲಕ್ಷ್ಮಿಯ ಇಂಗಿತಕ್ಕೂ, ಪತ್ನಿ ತನಗೆ ಸಂಪೂರ್ಣವಾಗಿ ಶರಣಾಗತಳಾಗಿ ಬದುಕಬೇಕು  ಎಂಬ ಮಾನಸಿಕ ಸ್ಥಿತಿ ಹೊಂದಿದ ದರ್ಶನ್‌ನ ನಿರೀಕ್ಷೆಗೂ ತಾಳೆಯಾಗದೇ ಇಬ್ಬರ ನಡುವೆ ವೈಮನಸ್ಸು ಬೆಳೆಯುತ್ತ ಹೋಗಿದೆ.ತನ್ನ ಮನಸ್ಸಿನ ಭಾವಾವೇಶಗಳನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳುವಲ್ಲಿ ಪತ್ನಿ ವಿಫಲವಾದರೆ, ತನ್ನ ಅವಗುಣಗಳನ್ನು ತಾನೇ ಸರಿಪಡಿಸಿಕೊಂಡು ಪತ್ನಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪತಿ ಸೋತಿದ್ದಾನೆ. ಅವರಿಬ್ಬರ ನಡುವೆ `ನಾವು~ `ನಮ್ಮ ಸಂಸಾರ~ ಎಂಬ ಬೆಚ್ಚನೆಯ ಭಾವದ ಬದಲು `ನಾನು~ `ನನ್ನತನ~ ಎಂಬ ಪ್ರತಿಷ್ಠೆಯ ಪರಿಕಲ್ಪನೆ ಕೆಲಸ ಮಾಡಿದಂತೆ ಕಾಣುತ್ತದೆ. ಇದೆಲ್ಲದರ ಒಟ್ಟು ಫಲಿತಾಂಶವೇ ಈ ಪ್ರಕರಣ.`ಸ್ಯಾಡಿಸ್ಟ್~ ಮನೋಭಾವ

ದರ್ಶನ್ ಅವರ ಪ್ರಾಣಿ ಪ್ರೀತಿಯ ಹಿಂದೆಯೂ ಅವರ `ಅಹಂ~ ಭಾವವನ್ನು ಕಾಣಬಹುದು. ಪ್ರಾಣಿ ಎಂದರೆ ದರ್ಶನ್‌ಗೆ ಹೆಚ್ಚು ಪ್ರೀತಿ. ಏಕೆಂದರೆ ಪ್ರಾಣಿಗಳು ತಿರುಗಿ ಮಾತನಾಡುವುದಿಲ್ಲ. ಪ್ರತಿಭಟಿಸುವುದಿಲ್ಲ, ಅವನ ಮೇಲೆ ಹಿಡಿತ ಸಾಧಸಲು ಪ್ರಯತ್ನಿಸುವುದಿಲ್ಲ.  ಅವನಿಗೆ ಸಂಪೂರ್ಣ ಶರಣಾಗತವಾಗಿ ಸ್ವಾಮಿ ನಿಷ್ಠೆಯನ್ನು ಪ್ರದರ್ಶಿಸುತ್ತವೆ. ಆದರೆ ಪತ್ನಿಯೂ ಹಾಗೇ ಇರಬೇಕು ಎಂಬುದು ದರ್ಶನ್ ಅವರ ಇಂಗಿತವಾಗಿತ್ತೆಂದು ಕಾಣುತ್ತದೆ ಆದರೆ ವಿಜಯಲಕ್ಷ್ಮಿ ಒಬ್ಬ ಪತ್ನಿಯಾಗಿ ತಮ್ಮ ಹಕ್ಕು ಉಳಿಸಿಕೊಳ್ಳುವಲ್ಲಿ ನಡೆಸಿದ ಹೋರಾಟ ಈ ಬೆಳವಣಿಗೆಗೆ ಕಾರಣವಾಗಿರಬಹುದು ಎಂಬುದು ದಾಂಪತ್ಯ, ಮನೋಚಿಕಿತ್ಸಕರಾದ ಡಾ.ವಿನೋದ ಛೆಬ್ಬಿ ಅವರ ವ್ಯಾಖ್ಯಾನ.ಇದನ್ನು ಮನೋವಿಜ್ಞಾನದ  ಭಾಷೆಯಲ್ಲಿ ಸ್ಯಾಡಿಸ್ಟ್ ಅಥವಾ `ಪರಪೀಡನೆಯಿಂದ ಸಂತೋಷಿಸುವ ಮನೋವಿಕಾರ~ ಎಂದು ಕರೆಯಲಾಗುತ್ತದೆ. ತನಗೆ ಎದುರು ಮಾತನಾಡುವ, ತನ್ನ ಸಂತೋಷಕ್ಕೆ (ಸ್ವೇಚ್ಛಾಚಾರಕ್ಕೆ) ಅಡ್ಡಿಯಾಗುವ ವ್ಯಕ್ತಿಗಳನ್ನು ಹೀಗೆ ಹಿಂಸಿಸುವ ಮನೋಭಾವವದು. ಇಂಥವರಿಗೆ ಎದುರು ನಿಲ್ಲುವುದೂ ಕಷ್ಟವೇ.ಆದರೆ ಅವರನ್ನು ಸಹಿಸಿಕೊಂಡು ಅವರಿಗೆ ಅಧೀನರಾಗಿ ನಡೆದುಕೊಳ್ಳುವುದು ಇನ್ನೂ ಅಪಾಯಕಾರಿ. ಅಂಥವರಿಗೆ ಎದುರು ನಿಂತರೆ ಅವರ ಅಹಂ ಇನ್ನೂ ಘಾಸಿಗೊಳಗಾಗುತ್ತದೆ, ಪರಿಣಾಮವಾಗಿ ಅವರು ಇನ್ನೂ ಮೃಗೀಯ ರೀತಿಯಲ್ಲಿ ಕ್ರೌರ್ಯ ಎಸಗುತ್ತಾರೆ. ಇಂದಲ್ಲ ನಾಳೆ ಅದು ಸರಿಹೋಗುತ್ತದೆ ಎಂದು ಸಹಿಸಿದಂತೆಲ್ಲ ತಾನು ಮಾಡಿದ್ದೇ ಅಂತಿಮ ಎನ್ನುವಂತೆ ಅಂತಹ ವರ್ತನೆ ಹೆಚ್ಚಾಗುತ್ತದೆ. ಅಂಥವರೊಂದಿಗೆ ಬಹಳ ಜಾಣ್ಮೆಯಿಂದ ವರ್ತಿಸಬೇಕು. ಪರಿಹಾರವೇನು?

ಇಂದು ದರ್ಶನ್ ಜೀವನದಲ್ಲಿ ನಡೆದ ಈ ಅಹಿತಕರ ಬೆಳವಣಿಗೆ ನಾಳೆ ಇನ್ನೊಬ್ಬ ನಟ ಅಥವಾ ಇನ್ನಾವುದೇ ಖ್ಯಾತರ ಬಾಳಿನಲ್ಲೂ ಕಾಣಿಸಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಸಂಸಾರವನ್ನು ಉಳಿಸಿಕೊಳ್ಳಬಹುದಷ್ಟೆ...* ಎಷ್ಟೇ ಬ್ಯೂಸಿ ಇದ್ದರೂ ಕುಟುಂಬಕ್ಕೆ ಅಗತ್ಯ ಸಮಯ ನೀಡುವುದು ಎಲ್ಲರಿಗೂ ಒಳ್ಳೆಯದು. ಏಕೆಂದರೆ ವೈಯಕ್ತಿಕ ಬದುಕು ಸಾಮಾಜಿಕ ಬದುಕಿನಷ್ಟೇ ಮುಖ್ಯ.* ಪತಿ ಪತ್ನಿಯನ್ನೂ ಹಾಗೂ ಪತ್ನಿ ಪತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ದಾಂಪತ್ಯದಲ್ಲಿ ಮುಚ್ಚು-ಮರೆ ಅಗತ್ಯವಿಲ್ಲ.*ಪರಸ್ಪರ ಪ್ರೀತಿ-ಗೌರವವನ್ನು ಬೆಳೆಸಿಕೊಳ್ಳಲು ಅಗತ್ಯ ವಾತಾರಣವನ್ನು ಸೃಷ್ಟಿಸಿಕೊಳ್ಳಬೇಕು.* ಏನೇ ಸಣ್ಣ-ಪುಟ್ಟ ಸಮಸ್ಯೆ ಇದ್ದರೂ ಮೊದಲು ತಾವಿಬ್ಬರೇ ಕುಳಿತು ಚರ್ಚಿಸಬೇಕು. ಆದರೆ ಅದು ಪರಸ್ಪರ ದೋಷಾರೋಪಣೆಯಾಗಬಾರದು, ಆತ್ಮವಿಮರ್ಶೆಯಾಗಬೇಕು* ಈ ಹಂತವನ್ನೂ ದಾಟಿದರೆ ಕುಟುಂಬ ಸ್ನೇಹಿತರು ಅಥವಾ ಬಂಧುಗಳಿಂದ ಬುದ್ಧಿವಾದ.* ಪರಿಸ್ಥಿತಿ ಅದಕ್ಕೂ ಮೀರಿದಲ್ಲಿ ಸೂಕ್ತ ದಾಂಪತ್ಯ ಚಿಕಿತ್ಸಕರನ್ನು ಕಾಣಬೇಕು. ಅವರು ಕೇವಲ ಬುದ್ಧಿವಾದ ಹೇಳಿ ಕಳುಹಿಸುವುದಿಲ್ಲ. ದಂಪತಿಯ ಸಂಪೂರ್ಣ ಇತಿಹಾಸವನ್ನು ಅಧ್ಯಯನ ಮಾಡಿ. ಅವರ ಮನಸ್ಥಿತಿಗೆ ಕಾರಣ ಕಂಡು ಹಿಡಿದು ಮನಸ್ಸಿನಾಳದಿಂದಲೇ ಚಿಕಿತ್ಸೆ ನೀಡುತ್ತ ಬರುತ್ತಾರೆ.ಸಂಸಾರ ಮುಖ್ಯ. ಏನಾದರೂ ಮಾಡಿ ಸಂಸಾರವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಆಗಬೇಕು. ಆದರೆ ಮನುಷ್ಯನ ಪ್ರಾಣಕ್ಕೂ ಬೆಲೆ ಇದೆ. ಇದ್ಯಾವುದಕ್ಕೂ ಸರಿ ಹೋಗದ ಮೇಲೆ ಆ ಸಂಬಂಧದಿಂದ ಹೊರಬಂದು ಹೊಸ ಬದುಕಿಗೆ ಕೈಚಾಚುವುದರಲ್ಲಿ ತಪ್ಪಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.