ಬುಧವಾರ, ಜೂನ್ 16, 2021
21 °C
ಜೂನಿಯರ್ ಮಹಿಳಾ ಹಾಕಿ ಟೂರ್ನಿ

ಸೋಲು ಕಂಡ ಕರ್ನಾಟಕ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆರು ಗೋಲು ಗಳಿಸಿದ ಮಧ್ಯಪ್ರದೇಶ ತಂಡದ ನಾಯಕಿ ಪ್ರಿಯಾಂಕಾ ವಾಂಖೆಡೆ ಮಂಗಳವಾರ ತವರಿನ ಅಂಗಳದಲ್ಲಿ ಗೆಲುವಿನ ಮಜಾ ಸವಿಯುವ ಕರ್ನಾಟಕದ ವನಿತೆಯರಿಗೆ ಸೋಲಿನ ರುಚಿ ತೋರಿಸಿದರು.ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್ ಅಂಗಳ ದಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ‘ಎ‘ ಡಿವಿಷನ್ ಹಾಕಿ  ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವು 8–1ರಿಂದ ಕರ್ನಾಟಕ ತಂಡವನ್ನು ಪರಾಭವಗೊಳಿಸಿತು.ಸಂಜೆಯ ಎಳೆಬಿಸಿಲಿನಲ್ಲಿ ಪಂದ್ಯ ನೋಡಲು ಆಗಮಿಸಿದ್ದ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರೇಕ್ಷಕರ ಚಪ್ಪಾಳೆಯ ಅಭಿನಂದನೆ ಸ್ವೀಕರಿಸಿದ ಆತಿಥೇಯ ಹುಡುಗಿಯರು ಉತ್ಸಾಹದಿಂದಲೇ ಕಣಕ್ಕಿಳಿದರು.6ನೇ ನಿಮಿಷದಲ್ಲಿಯೇ ಮುನ್ಪಡೆ ಆಟಗಾರ್ತಿ ನಿಹಾ ಅವರು, ಇಬ್ಬರು ಎದುರಾಳಿ ಆಟಗಾರ್ತಿಯರ ನಡುವಿನಿಂದ ಚೆಂಡನ್ನು ರಿವರ್ಸ್ ಶಾಟ್ ಮೂಲಕ ಗೋಲುಪೆಟ್ಟಿಗೆ ಸೇರಿಸಿದರು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂತಸ ಹೊನಲಾಗಿತ್ತು. ಆದರೆ, ಆ ಸಂಭ್ರಮ ಬಹಳ ಹೊತ್ತು ಇರಲಿಲ್ಲ.ಚಿಗರೆಯಂತೆ ಓಡುತ್ತಿದ್ದ ಕಳೆದ ಬಾರಿಯ ರನ್ನರ್ಸ್‌ ಅಪ್‌ ಮಧ್ಯಪ್ರದೇಶದ ಆಟಗಾರ್ತಿಯರ ಮಿಂಚಿನಂತಹ ಪಾಸ್‌ಗಳು ಮತ್ತು ಚುರುಕಿನ ಬಾಲ್ ರೋಲಿಂಗ್ ಮುಂದೆ ಕರ್ನಾಟಕದ ಆಟ ನಡೆಯಲಿಲ್ಲ. 10ನೇ ನಿಮಿಷದಲ್ಲಿ ನಾಯಕಿ ಪ್ರಿಯಾಂಕಾ ವಾಂಖೆಡೆ ಕರ್ನಾಟಕದ ರಕ್ಷಣಾ ತಂತ್ರವನ್ನು ವಿಫಲಗೊಳಿಸಿ ಗೋಲು ಹೊಡೆದರು. ನಂತರ ಪ್ರಿಯಾಂಕಾ (14, 28, 34, 41, 53ನಿ) ಮತ್ತೆ ಐದು ಗೋಲು ಗಳಿಸಿ ಪ್ರಹಾರವನ್ನೇ ಮಾಡಿದರು. ಅವರ ಆಕ್ರಮಣಕಾರಿ ಆಟದಿಂದಾಗಿ ಮೊದಲಾರ್ಧದಲ್ಲಿಯೇ ಮಧ್ಯಪ್ರದೇಶ 6–1ರ ಭರ್ಜರಿ ಮುನ್ನಡೆ ಗಳಿಸಿಬಿಟ್ಟಿತ್ತು. ವಿರಾಮಕ್ಕೆ ಕೆಲವೇ ನಿಮಿಷಗಳು ಬಾಕಿಯಿರುವಾಗ ಕರ್ನಾಟಕದ ಗೋಲ್‌ಕೀಪರ್ ದಮಯಂತಿ ಅವರನ್ನು ಬದಲಾಯಿಸಿ ಎನ್‌.ಎನ್‌. ನಿಶಾ ಅವರನ್ನು ಕಣಕ್ಕಿಳಿಸಲಾಯಿತು. ಮಧ್ಯಪ್ರದೇಶ ಆಟಗಾರ್ತಿಯರ ಚುರುಕಿನ ಆಟಕ್ಕೆ ಸುಸ್ತಾಗಿದ್ದ ಆತಿಥೇಯ ಹುಡುಗಿಯರು ಎರಡನೇ ಅವಧಿಯಲ್ಲಿ ತಿರುಗಿ ಬೀಳುವ ಪ್ರಯತ್ನ ಮಾಡಿದರು. ಆದರೆ, ಗೋಲ್‌ಕೀಪರ್ ದಿವ್ಯಾ ತಿಪೆ ಮತ್ತು ರಕ್ಷಣಾ ಆಟಗಾರ್ತಿ ದೀಕ್ಷಾ ತಿವಾರಿ ಬಂಡೆಯಂತೆ ಅಡ್ಡ ನಿಂತರು. ಮಧ್ಯಪ್ರದೇಶದ ಪ್ರೀತಿ ದುಬೆ  (21ನಿ) ಒಂದು ಬಾರಿ ಮತ್ತು ನೇಹಾ ಸಿಂಗ್ (32ನಿ, 49ನಿ) ಎರಡು ಬಾರಿ ಹಸಿರು ಕಾರ್ಡ್ ದರ್ಶನ ಪಡೆದರು.ಕರ್ನಾಟಕವು ಬುಧವಾರ ಬೆಳಿಗ್ಗೆ 8.30 ಗಂಟೆಗೆ  ಭೋಪಾಲ್ ತಂಡವನ್ನು ಮತ್ತು ಗುರುವಾರ ದೆಹಲಿ ಯನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೂ ಸೆಮಿಫೈನಲ್‌ ಹಾದಿ ಸುಗಮವಲ್ಲ.ಪಂಜಾಬ್‌ಗೆ ಗೆಲುವು: ‘ಸಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡವು 2–1ರಿಂದ ಮುಂಬೈ ಹಾಕಿ ಸಂಸ್ಥೆಯ ವಿರುದ್ಧ ಜಯಗಳಿಸಿತು.   ‘ಡಿ’ ಗುಂಪಿನ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಒಡಿಶಾ ತಂಡವು 15–0 ಗೋಲುಗಳಿಂದ ಬಿಹಾರ ತಂಡದ ವಿರುದ್ಧ ಗೆದ್ದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.