ಮಂಗಳವಾರ, ಮೇ 11, 2021
27 °C

ಸೌರ ವಿದ್ಯುತ್: ಗುಜರಾತ್ ಪ್ರಯೋಗ

ಪ್ರಜಾವಾಣಿ ವಾರ್ತೆ ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಗಾಂಧಿನಗರ (ಗುಜರಾತ್): ಮನೆಗಳು, ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ವಿನೂತನ ಯೋಜನೆಗೆ ಗುಜರಾತ್ ಸರ್ಕಾರ ಗಾಂಧಿನಗರದಲ್ಲಿ ಚಾಲನೆ ನೀಡಿದ್ದು, ಈ ಸಂಬಂಧ ಎರಡು ಖಾಸಗಿ ಸಂಸ್ಥೆಗಳೊಂದಿಗೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ. `ಪೋಟೊ ವೊಲ್ಟಾಯಿಕ್ ರೂಪ್‌ಟಾಪ್~ ಕಾರ್ಯಕ್ರಮದಡಿ ಗುಜರಾತ್‌ನ ರಾಜಧಾನಿಯಾದ ಗಾಂಧಿನಗರದ ಕಟ್ಟಡಗಳು, ಮನೆಗಳ ಮೆಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್ ಉತ್ಪಾದಿಸಲು ಸರ್ಕಾರ ಮುಂದಾಗಿದೆ.ಈ ಸಂಬಂಧ ಸನ್ ಎಡಿಸನ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅಶ್ಯೂರ್ ಸನ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳೊಂದಿಗೆ ಗುಜರಾತ್‌ನ ಇಂಧನ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಈ ಎರಡೂ ಸಂಸ್ಥೆಗಳು ತಲಾ 2.5 ಮೆಗಾವಾಟ್‌ನಂತೆ ಒಟ್ಟು ಐದು ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲಿವೆ.ಒಂದು ಯೂನಿಟ್ ಸೌರ ವಿದ್ಯುತ್ ಉತ್ಪಾದನೆಗೆ 11 ರೂಪಾಯಿ ವೆಚ್ಚವಾಗಲಿದ್ದು, ಮನೆ ಅಥವಾ ಕಟ್ಟಡದ ಮಾಲೀಕರು ಒಂದು ಯೂನಿಟ್ ವಿದ್ಯುತ್ ಬಳಕೆಗೆ ಮೂರು ರೂಪಾಯಿ ಪಾವತಿ ಮಾಡಬೇಕಾಗುತ್ತದೆ.ಬಂಡವಾಳ ಹೂಡುವ ಸಂಸ್ಥೆಗಳಿಗೆ ಸರ್ಕಾರ ಸಹಾಯಧನ ನೀಡಲಿದೆ ಎಂದು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಜೆ.ಪಾಂಡಿಯನ್ ತಿಳಿಸಿದರು.ಇದಕ್ಕೂ ಮುನ್ನ ಭಾರತದ ಸೌರ ವಿದ್ಯುತ್ ಕ್ಷೇತ್ರದಲ್ಲಿನ ಹೂಡಿಕೆ ಮತ್ತು ತಂತ್ರಜ್ಞಾನ ಕುರಿತ ಎರಡು ದಿನಗಳ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಒಂದು ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಗೆ ಐದು ಎಕರೆ ಭೂಮಿ ಬೇಕಾಗುತ್ತದೆ.ಆದರೆ ಭೂಸ್ವಾಧೀನ ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಕಡಿಮೆ ಭೂಮಿಯನ್ನು ಬಳಸಿಕೊಂಡು ಹೆಚ್ಚು ಸೌರವಿದ್ಯುತ್ ಉತ್ಪಾದಿಸುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಪಿಯೂಶ್ ಷಾ ಮಾತನಾಡಿ, ದೇಶದಲ್ಲಿನ ಶೇ 40ರಷ್ಟು ಜನರಿಗೆ ಇನ್ನೂ ವಿದ್ಯುತ್ ಸೌಲಭ್ಯ ದೊರೆತಿಲ್ಲ. ಅಸಾಂಪ್ರದಾಯಿಕ ಇಂಧನ ಮೂಲಗಳಿಂದ ಆ ಜನರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ದೇಶದಲ್ಲಿನ ಸುಮಾರು 300 ಜಿಲ್ಲೆಗಳಲ್ಲಿ ವರ್ಷಪೂರ್ತಿ ಸೌರ ವಿದ್ಯುತ್ ಉತ್ಪಾದಿಸುವಂತಹ ಹವಾಮಾನ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಸಲಹೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.