ಶನಿವಾರ, ಜನವರಿ 18, 2020
21 °C

ಸೌಲಭ್ಯ ಕೊರತೆ, ಸಮಸ್ಯೆಗಳ ಗೂಡು ಈ ಆಸ್ಪತ್ರೆ

ಪ್ರಜಾವಾಣಿ ವಾರ್ತೆ/ಉ.ಮ.ಮಹೇಶ್‌ Updated:

ಅಕ್ಷರ ಗಾತ್ರ : | |

ಬೀದರ್‌: ನಗರದ ಹೃದಯಭಾಗದ ಲ್ಲಿರುವ ಜಿಲ್ಲಾ ಆಸ್ಪತ್ರೆಯ ಸುತ್ತು ಗೋಡೆಗೆ ಹೊಂದಿಕೊಂಡಂತೆ ಸುಲಭ್‌ ಶೌಚಾಲ­ಯವಿದೆ. ಅದೇ ಗೋಡೆ ಯಂಚಿಗೆ ಉದ್ದಕ್ಕೂ ತೆರೆದ ಚರಂಡಿ. ಅಲ್ಲಿಂದ ಕೆಟ್ಟ ವಾಸನೆ ಬರುತ್ತದೆ. ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವ ಜನರ ಪಾಲಿಗೆ ಅದೇ ಮುಕ್ತ ಮತ್ತು ಸುಲಭ ಮೂತ್ರಾಲಯ! ಹೀಗೆ  ಬೀದರ್‌ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಪ್ರವೇಶದ್ವಾರದಿಂದಲೇ ಆರಂಭ­ವಾಗುತ್ತದೆ.ದಿನ, ತಿಂಗಳು, ವರ್ಷ ಕಳೆದಂತೆ ಅಭಿವೃದ್ಧಿ ಕಾಣಬೇಕು ಎಂಬ ಮಾತು ಈ ಆಸ್ಪತ್ರೆಗೆ ಅಪವಾದ. 300 ಹಾಸಿ ಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ರೋಗಿಗಳ ಹಾಜರಾತಿ ಸಂಖ್ಯೆ ಎರಡು ದಶಕದ ಹಿಂದೆ 500ರ ಆಸುಪಾ ಸಿನಲ್ಲಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕಾಶೀನಾಥ ಕಾಂಬಳೆ ಪ್ರಕಾರ, ಈಗ ರೋಗಿಗಳ ಹಾಜರಾತಿ ಹೊರ ರೋಗಿಗಳು ಸೇರಿದಂತೆ ದಿನಕ್ಕೆ 1200–1500 ಇದೆ.ರೋಗಿಗಳ ಹೆಚ್ಚಿದ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳ ಸಾಮರ್ಥ್ಯ ಮತ್ತು ಇತರೆ ಸೌಲಭ್ಯಗಳು ವೃದ್ಧಿಯಾ­ಗಿಲ್ಲ. 2006ರಲ್ಲಿ ಆರಂಭವಾದ  ಬೀದರ್‌ನ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾಲೇಜಿಗೆ ಇದೇ ಆಸ್ಪತ್ರೆಯನ್ನು ಹೊಂದಿಸಲಾಗಿದೆ.

ಇಲ್ಲಿ ವೈದ್ಯರ ಕೊರತೆ ಜೊತೆಗೆ ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ರಕ್ಷಣೆಗೆ ಅಗತ್ಯವಿರುವ ಚಿಕಿತ್ಸಾ ಸೌಲಭ್ಯಗಳ ಕೊರತೆಯೂ ಇದೆ.ಡಾ. ಕಾಂಬಳೆ ಪಟ್ಟಿ ಮಾಡುವಂತೆ, ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಬೇಡಿಕೆಗೆ ಅನುಗುಣವಾಗಿ ಇಲ್ಲ. ಸಿ.ಟಿ.ಸ್ಕ್ಯಾನ್‌ ಎಂಆರ್‌ಐ ಸೌಲಭ್ಯ ಇಲ್ಲ. ಅಲ್ಟ್ರಾ ಸೌಂಡ್‌ ಸೌಲಭ್ಯ ಬೇಡಿಕೆಗೆ ಅನುಗುಣವಾಗಿ ಇಲ್ಲ. ಎಕ್ಸ್‌ರೇ, ರೇಡಿಯಾಲಜಿ ಸೌಲಭ್ಯ ಇದ್ದರೂ ಅದನ್ನು ನಿರ್ವಹಣೆ ಮಾಡಲು ಪರಿಣತ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.‘ಹೊರಗಡೆಯಿಂದ ಔಷಧ ತರಲು ಚೀಟಿ ಬರೆಯದಿರಲು ಸ್ಪಷ್ಟವಾಗಿ ತಿಳಿಸಿದ್ದೇವೆ. ಕೆಲ ಕಿರಿಯ ಸಿಬ್ಬಂದಿ ಚೀಟಿ ಬರೆದು ಕೊಟ್ಟರಬಹುದು. ಅಂಥ ದೂರುಗಳಿದ್ದರೆ ಪರಿಶೀಲಿಸುತ್ತೇವೆ’ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು.ಸಮರ್ಪಕ ಚಿಕಿತ್ಸೆ ಸಿಗುವುದಿಲ್ಲ. ಸಿಬ್ಬಂದಿ ಸ್ಪಂದಿಸುವುದಿಲ್ಲ ಎಂಬುದು ರೋಗಿಗಳ, ಅವರ ಸಂಬಂಧಿಕರ ದೂರು. ಎಷ್ಟೇ ತುರ್ತು ಇದ್ದರೂ ಔಷಧ ಪಡೆಯಲು, ಹೊರರೋಗಿಗಳಾಗಿ ನೋಂದಣಿ ಮಾಡಿಸಲು, ಗರ್ಭಿಣಿ­ಯರು ‘ಮಡಿಲು’ ಕಿಟ್‌ ಪಡೆಯಲು ಹೀಗೆ ಎಲ್ಲದಕ್ಕೂ ಸಾಲುಗಟ್ಟುವುದು ಅನಿವಾರ್ಯ. ಹೆಚ್ಚುವರಿ ಕೌಂಟರ್‌ ತೆರೆದು, ರೋಗಿಗಳಿಗೆ ಅನುಕೂಲ ಮಾಡುವ ಕನಿಷ್ಠ ಯತ್ನವೂ ಆಗಿಲ್ಲ.

ಅವ್ಯವಸ್ಥೆ ಆಸ್ಪತ್ರೆಯನ್ನು ವ್ಯಾಪಕ­ವಾಗಿ ಆವರಿಸಿದೆ. ಕಟ್ಟಡದ ಮೂಲೆ ಗಳಲ್ಲಿ ಎಸೆದಿರುವ ನಿರುಪ­ಯೋಗಿ ವಸ್ತುಗಳು ದೂಳುಮಯ­ವಾಗಿದೆ. ಶುಚಿತ್ವದ ಅರಿವು ಜನರಿಗೂ ಇಲ್ಲ, ಅಲ್ಲಲ್ಲಿ ಉಗುಳುವುದು ಸಾಮಾನ್ಯ. ಕುಡಿಯುವ ನೀರಿನ ಸಂಸ್ಕರಣ ಘಟಕಗಳು ತುಕ್ಕು ಹಿಡಿಯುತ್ತಿವೆ. ಆರೋಗ್ಯ ಸಚಿವ ಯು.ಟಿ.ಖಾದರ್‌ ಆಸ್ಪತ್ರೆಗೆ ಏಕಾಏಕಿ ಭೇಟಿ ನೀಡಿ ಅವ್ಯವಸ್ಥೆ ಕಂಡು ಹೌಹಾರಿದ್ದರು.  ಸಚಿವರ ಭೇಟಿ ನಂತರ ಏನಾದರೂ ಪ್ರಗತಿ ಕಂಡಿದೆಯೇ ಎಂದು ಪ್ರಶ್ನಿಸಿದರೆ, ‘ಈ ಆಸ್ಪತ್ರೆ ಅವರ ವ್ಯಾಪ್ತಿಗೆ ಬರುವುದಿಲ್ಲ. ಇದು, ಸ್ವಾಯ ತ್ತತೆ  ಹೊಂದಿದೆ. ವೈದ್ಯಕೀಯ ವಿಜ್ಞಾನ ಗಳ ಆಸ್ಪತ್ರೆಗೆ ಸೇರ್ಪಡೆ ಮಾಡ ಲಾಗಿದೆ. ಸಮಸ್ಯೆಗಳನ್ನು ನಿರ್ದೇಶಕರ ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ಶಸ್ತ್ರ ಚಿಕಿತ್ಸಕರು.‘ಸಂವಿಧಾನದ 371ನೇ ತಿದ್ದುಪಡಿ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿರುವ ಕಾರಣ ಕೆಲ ಹುದ್ದೆಗಳು ಖಾಲಿ ಉಳಿದಿವೆ. ಆಸ್ಪತ್ರೆ ಯಲ್ಲಿನ ಸ್ವಚ್ಛತೆಯ ಕುರಿತು ನಾನು ಪ್ರತಿಕ್ರಿಯಿಸಲು ಬರುವುದಿಲ್ಲ. ಇದರ ಹೊಣೆಗಾರಿಕೆ ಜಿಲ್ಲಾ ಶಸ್ತ್ರಚಿಕಿತ್ಸಕರದೇ ಆಗಿದೆ’ ಎಂದು ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಬಿ.ಒ.ಹನು­ಮಂತಪ್ಪ, ಪ್ರತಿಕ್ರಿಯಿ ಸುತ್ತಾರೆ.ಆಸ್ಪತ್ರೆ ಹಾಸಿಗೆಗಳ ಸಾಮ ರ್ಥ್ಯವನ್ನು 300 ರಿಂದ 750ಕ್ಕೆ ಏರಿ ಸುವ ಪ್ರಸ್ತಾಪಕ್ಕೆ ಸಮ್ಮತಿ ದೊರೆತಿದೆ. ನಿರೀಕ್ಷೆಯಂತೆ, ನಿಗದಿತ ಅವಧಿಯಲ್ಲಿ ಯೋಜನೆ ಕಾರ್ಯಗತಗೊಂಡರೆ ಜಿಲ್ಲಾ ಆಸ್ಪತ್ರೆಯ ಚಿತ್ರಣ ಬದಲಾಗಬಹುದು.ಪ್ರತಿಕ್ರಿಯಿಸಿ (+)