ಶನಿವಾರ, ಜನವರಿ 18, 2020
26 °C

ಸೌಹಾರ್ದಯುತ ಪರಿಹಾರ: ಆಂಟನಿಗೆ ಪ್ರಧಾನಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿವೃತ್ತಿ ವಯಸ್ಸು ವಿಚಾರಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದು ಸರ್ಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸುವ  ಸುಳಿವನ್ನು ಗ್ರಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೆ ಬುಧವಾರ ಸೂಚಿಸಿದ್ದಾರೆ.ಪ್ರಧಾನಿ ನಿರ್ದೇಶನದ ಮೇರೆಗೆ ಆಂಟನಿ ಅವರು ರಕ್ಷಣಾ ಸಚಿವಾಲಯ ಕಾರ್ಯದರ್ಶಿ ಶಶಾಂಕ್ ಶರ್ಮಾ ಅವರನ್ನು ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲು ಕಳುಹಿಸಿದ್ದರು. ಶರ್ಮಾ ಮತ್ತು ವಿ.ಕೆ ಸಿಂಗ್ ನಡುವೆ ನಡೆದ ಮಾತುಕತೆ ವಿವರಗಳು ತಿಳಿದು ಬಂದಿಲ್ಲ. ಆದರೆ, ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗಳು ವಿವಾದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಪ್ರಸ್ತುತ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು  ವಿವಾದದ ಕುರಿತು ಮೃದು ಧೋರಣೆ ತಾಳಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ನಂತರವಷ್ಟೇ ನಿರ್ಧಾರ ಕೈಗೊಳ್ಳಲು ಅದು ಯೋಚಿಸುತ್ತಿದೆ.ವಿ.ಕೆ. ಸಿಂಗ್ ಅವರು ಸಲ್ಲಿಸಿರುವ ಅರ್ಜಿಯು ಶುಕ್ರವಾರದಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಒಂದು ವೇಳೆ ಈಗಲೇ ಸಿಂಗ್ ವಿರುದ್ಧ ಕಠಿಣ ನಿಲುವು ಕೈಗೊಂಡರೆ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಭೀತಿ ಸರ್ಕಾರಕ್ಕಿದೆ.  ಗಣರಾಜ್ಯೋತ್ಸವ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಪ್ರತಿಕ್ರಿಯಿಸಿ (+)