ಶುಕ್ರವಾರ, ಏಪ್ರಿಲ್ 16, 2021
31 °C

ಸ್ಕೈ ಡೈವಿಂಗ್: ಮೈಸೂರು ಯುವಕ ಸೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಸ ಕ್ರೀಡಾಸಕ್ತರ ತವರೂರು ಮೈಸೂರು. ಹಿಮಾಲಯಕ್ಕೆ ಬೈಕ್ ಟ್ರಕ್ಕಿಂಗ್, ಬೆಟ್ಟ-ಗುಡ್ಡ ಚಾರಣ, ಏಕಾಂಗಿಯಾಗಿ ಬೈಕ್‌ನಲ್ಲಿ ದೇಶ ಸಂಚಾರ... ಹೀಗೆ ವಿಶಿಷ್ಟ ಚಟುವಟಿಕೆ ಮೆರೆಯುವವರ ತಾಣ ಇದು. ಇಲ್ಲಿನ  ತರುಣರೊಬ್ಬರು ಕಳೆದ ತಿಂಗಳು ‘ಸ್ಕೈಡೈವಿಂಗ್’ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.‘ಸ್ಕೈಡೈವಿಂಗ್’. ಇದೊಂದು ಅಪಾಯಕಾರಿ ಸಾಹಸ. 1000 ಅಡಿ ಎತ್ತರದಿಂದ ಭೂಮಿಯತ್ತ ಜಿಗಿಯುವ ಸಾಹಸ ಎಷ್ಟು ರೋಚಕವೋ ಅಷ್ಟೇ ಸಾವಿನೊಂದಿಗೆ ಸೆಣಸಾಟವೂ ಸಹ ಆಗಿರುತ್ತದೆ. ಕಳೆದ ತಿಂಗಳು ಗುಜರಾತ್‌ನಲ್ಲಿ ಈ ಸಾಹಸ ಪ್ರದರ್ಶನ ನಡೆಯಿತು. ಮೈಸೂರಿನ ಸೂರಜ್ ಆರ್ ಕೃಷ್ಣಂ ಇಂತಹ ಸಾಹಸ ಯಾನದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.ಇಂಡಿಯನ್ ಪ್ಯಾರಾಶೂಟ್ ಫೆಡರೇಷನ್ ಸಂಸ್ಥೆ ‘ಸ್ಕೈ ಡೈವಿಂಗ್’ ತರಬೇತಿ ನೀಡುತ್ತಿದೆ. ದೇಶದ ಬೆರಳೆಣಿಕೆಯ ಸಂಸ್ಥೆಗಳಲ್ಲಿ ಇದೂ ಒಂದು.ಮೊದಲು ಅರ್ಜಿ ಸಲ್ಲಿಸಿ ತಮ್ಮ ಸರದಿಗಾಗಿ ಆಕಾಂಕ್ಷಿಗಳು ಕಾಯಬೇಕು. ಆಯ್ಕೆಯಾದ ಅಭ್ಯರ್ಥಿಗಳು ಐದು ದಿನ ಅಲ್ಲಿಯೇ ನೆಲೆಸಿ ಸಿದ್ಧತೆ ನಡೆಸಬೇಕು. ಈ ವೇಳೆ ದೈಹಿಕ, ಲಿಖಿತ ಪರೀಕ್ಷೆ ನಡೆಯುತ್ತದೆ. ಸಾಹಸಿಗರಿಗೆ ತಂತ್ರ, ಕೌಶಲ್ಯ ಹೇಳಿ ಕೊಡಲಾಗುತ್ತದೆ.ಗುಜರಾತ್ ರಾಜ್ಯದ ಅಹಮದಾಬಾದ್ ಸಮೀಪದ ‘ದೇಸಾ’ ಎಂಬ ಊರಿನ ವಿಶಾಲ ಮೈದಾನದಲ್ಲಿ ‘ಸ್ಕೈ ಡೈವಿಂಗ್’ ನಡೆಯುತ್ತದೆ. ಇದಕ್ಕಾಗಿ 2 ಹೆಲಿಕಾಪ್ಟರ್‌ಗಳನ್ನು ತರಬೇತಿ ನೀಡುವ ಸಂಸ್ಥೆ ಹೊಂದಿದೆ. ಈ ಬಾರಿ 17 ಜನರ ತಂಡ ಆಕಾಶದಿಂದ ಚಿಮ್ಮಲು ಅಣಿಯಾಗಿತ್ತು. ಇವರಲ್ಲಿ 8 ಮಂದಿ ಭಾರತೀಯ ರಕ್ಷಣಾ ಪಡೆ ಯೋಧರು, 9 ಜನ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಉಳ್ಳ ನಾಗರಿಕರು. ಮೈಸೂರಿನಿಂದ ಸೂರಜ್ ಸಹ ಈ ತಂಡ ಸೇರಿಕೊಂಡಿದ್ದರು.ಭೂಮಿಯಿಂದ ಸಾವಿರ ಅಡಿ ಎತ್ತರದಲ್ಲಿ ಸಾಹಸಿಗರನ್ನು ಹೊತ್ತ ಮೂರು ಸೀಟಿನ ಹೆಲಿಕಾಪ್ಟರ್ ಹಾರಾಡುತ್ತಿರುತ್ತದೆ. ಮೂರು ಜನರಲ್ಲಿ ಒಬ್ಬರು ಕೋಚ್, ಇನ್ನಿಬ್ಬರು ಸಾಹಸಿಗರು. ವ್ಯಕ್ತಿ ಕೆಳಗೆ ಧುಮುಕಿದ 3-4 ಸೆಕೆಂಡ್‌ಗಳಲ್ಲಿ ಸ್ವಯಂಚಾಲಿತ ಪ್ಯಾರಾಶೂಟ್ ಬಿಚ್ಚಿಕೊಳ್ಳುತ್ತದೆ. ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ವ್ಯಕ್ತಿ ಜಂಪ್ ಮಾಡುತ್ತಾರೆ. ಹೀಗೆ ನೆಗೆದ ಸಾಹಸಿಗರಿಗೆ ಯಾರ ನೆರವು ಇರುವುದಿಲ್ಲ. ಎಲ್ಲವೂ ಅವರ ವಿವೇಚನೆ ಮೇಲೆ ಸಾಗುತ್ತದೆ. ವಿಶಾಲ ಮೈದಾನದಲ್ಲಿ ಬಂದು ಇಳಿಯುವ ಸ್ಥಳ ಮೊದಲೇ ಗೊತ್ತು ಮಾಡಲಾಗಿರುತ್ತದೆ. ಆಕಾಶದಿಂದ ಭೂಮಿಗೆ ಬರಲು 7ರಿಂದ 8 ನಿಮಿಷಗಳ ಅವಧಿ ಬೇಕು. ಗುರಿ ಸಮೀಪಿಸಿದಾಗ ಸುರಕ್ಷಿತವಾಗಿ ಧರೆಗೆ ಇಳಿಯುವುದೇ ಜಾಣತನ. ಮೇಲಿಂದ ಜಿಗಿಯುವುದು ಸುಲಭ. ಆದರೆ, ಸುರಕ್ಷಿತವಾಗಿ ಭೂಸ್ಪರ್ಶ ಕಷ್ಟ. ಆಯ ತಪ್ಪಿದರೆ ಮಂಡಿ ಚಿಪ್ಪು ಹೊರಗೆ ಬಂದಿರುತ್ತದೆ. ಕೋಚ್ ಹೇಳಿಕೊಟ್ಟ ವಿಧಾನ ಅನುಸರಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಆತಂಕ, ಗಾಬರಿಗೆ ಒಳಗಾದರೆ ನಿರಾಯಾಸ ಭೂಸ್ಪರ್ಶ ಅಸಾಧ್ಯ.ಸ್ವಯಂಚಾಲಿತ ಪ್ಯಾರಾಶೂಟ್ ಸಹ ಕೆಲವೊಮ್ಮೆ ಕೈಕೊಡುವ ಸಾಧ್ಯತೆ ಇರುತ್ತದೆ. ಮಾರ್ಗಮಧ್ಯೆ ಅದು ಬಿಚ್ಚಿಕೊಳ್ಳದಿದ್ದರೆ ಏನು ಮಾಡಬೇಕು ಎಂಬುದನ್ನು ಸಾಹಸಿಗನಿಗೆ ಮೊದಲೇ ಹೇಳಲಾಗಿರುತ್ತದೆ. ಆ ಕ್ಷಣದಲ್ಲಿ ಜಾಣತನ ಪ್ರದರ್ಶನ ಅವಶ್ಯ. ಸ್ಕೈ ಡೈವಿಂಗ್‌ನಲ್ಲಿ ಪಾಲ್ಗೊಂಡ 17 ಜನರ ತಂಡದಲ್ಲಿ ಒಂದಿಬ್ಬರನ್ನು ಬಿಟ್ಟರೆ ಎಲ್ಲರೂ ಸುರಕ್ಷಿತವಾಗಿ ಭೂಮಿಗೆ ಬಂದು ಸೇರಿದ್ದರು. ಕೊನೆಯ ಕ್ಷಣದಲ್ಲಿ ಮಾಡಿದ ತಪ್ಪಿನಿಂದ ಇಬ್ಬರು ನೆಲಕ್ಕೆ ಅಪ್ಪಳಿಸಿ ಮೊಣಕಾಲು ಮುರಿದುಕೊಂಡರು.ಸೂರಜ್ ಮಾತ್ರ ನಿರಾಂತಕವಾಗಿ ಆಕಾಶದಿಂದ ಸಾವಿರ ಅಡಿ ದಾಟಿ ಭೂಮಿಗೆ ಬಂದು ಸೇರಿದ್ದರು. ಸುಮಾರು ಎಂಟು ನಿಮಿಷಗಳಲ್ಲಿ ಆಕಾಶದಿಂದ ಭೂಮಿಗೆ ಬಂದ ಸಮಯವನ್ನು ಸೂರಜ್ ರೋಚಕವಾಗಿ ವರ್ಣಿಸುತ್ತಾರೆ. ಪ್ರತಿ ಕ್ಷಣವೂ ವೀಡಿಯೊ ಚಿತ್ರೀಕರಣ ಹಾಗೂ ಛಾಯಾಚಿತ್ರಗಳಲ್ಲಿ ಸೆರೆ ಹಿಡಿದಿರುವುದನ್ನು ತೋರಿಸುತ್ತಾ ತಮ್ಮ ಸಾಹಸದ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಾರೆ. ಬಹಳ ದಿನಗಳ ಕನಸು ಈಡೇರಿದ ಖಷಿ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ.‘2009ರಲ್ಲಿ ಬೈಕ್‌ನಲ್ಲಿ ಏಕಾಂಗಿಯಾಗಿ ಇಡೀ ದೇಶ ಸುತ್ತಿದ್ದು ನನ್ನ ಈ ವರೆಗಿನ ಬಹು ದೊಡ್ಡ ಸಾಧನೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಂದ ಈ ಬಗ್ಗೆ ಮಾಹಿತಿ ಪಡೆದೆ. ಕೂಡಲೇ ಗುಜರಾತ್‌ನ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ ಗುರುಗಳಾದ ಸೋಲಂಕಿ ಅವರೊಂದಿಗೆ ಬಹು ನಿರೀಕ್ಷೆಯೊಂದಿಗೆ ತೆರಳಿದೆ. ಸಾಹಸ ಮುಗಿಸಿ ಧರೆಗೆ ಇಳಿದಾಗ ಮನಸ್ಸು ಹಗುರವಾಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸೂರಜ್.

ಅವರ ಮೊಬೈಲ್: 99166 66161

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.