ಭಾನುವಾರ, ಏಪ್ರಿಲ್ 18, 2021
33 °C

ಸ್ತ್ರೀಶಕ್ತಿ, ಕಲಾವಿದರಿಗೂ ಯಶಸ್ವಿನಿ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಯಶಸ್ವಿನಿ’ಯನ್ನು ಸ್ವಯಂನಿಧಿ ಶಸ್ತ್ರಚಿಕಿತ್ಸಾ ಯೋಜನೆಯನ್ನಾಗಿ ಬಲಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ ಗ್ರಾಮೀಣ ಕುಟುಂಬದ ಸದಸ್ಯರಿಗೂ 2011-12ನೇ ಸಾಲಿನಿಂದ ಸೌಲಭ್ಯ ವಿಸ್ತರಿಸಲಾಗಿದೆ.‘ಗ್ರಾಮೀಣ ಪ್ರದೇಶದ ಚಲನಚಿತ್ರ, ರಂಗಭೂಮಿ ಹಾಗೂ ಜಾನಪದ ಕಲಾವಿದರು ಯಶಸ್ವಿನಿ ಯೋಜನೆಯಡಿ ಸೌಲಭ್ಯ ಪಡೆಯಲಿದ್ದಾರೆ. ಸಾಂಸ್ಕೃತಿಕ ಅಭಿವೃದ್ಧಿ ಸಹಕಾರ ಸಂಘ ಸ್ಥಾಪಿಸಿಕೊಂಡಿದ್ದರೆ ಸವಲತ್ತು ಲಭಿಸಲಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಪ್ಲಾಂಟೇಷನ್ ಕಾರ್ಮಿಕರು ಯೋಜನೆಗೆ ಒಳಪಡಲಿದ್ದಾರೆ. ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗುವ ರೈತ ಪ್ರತಿನಿಧಿ ಗಳಿಗೂ ಸೌಲಭ್ಯ ಸಿಗಲಿದೆ’ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎಂ. ಶಿವಕುಮಾರಸ್ವಾಮಿ ಶುಕ್ರವಾರ ಯಶಸ್ವಿನಿ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿ ಸಭೆಗೂ ಮುನ್ನ ಪತ್ರಕರ್ತರಿಗೆ ತಿಳಿಸಿದರು.ರಾಜ್ಯ ಪತ್ರಕರ್ತರ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ಗ್ರಾಮೀಣ ಪತ್ರಕರ್ತರಿಗೂ ಸೇವೆ ವಿಸ್ತರಿಸಲಾಗಿದೆ. ಪಟ್ಟಣ ಪ್ರದೇಶದವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಅಲೆಮಾರಿ, ಅರೆಅಲೆಮಾರಿ ಜನಾಂಗಗಳ ವಿವಿದ್ದೋದ್ದೇಶ ಸಹಕಾರ ಸಂಘಗಳು ಹಾಗೂ ಇತರೇ ಸಂಘದ ಸದಸ್ಯರು ಸಹ ಯೋಜನೆ ಯಡಿ ಬರುತ್ತಾರೆ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಸಂಘಟಿಸಲ್ಪಟ್ಟಿರುವ ಎಲ್ಲಾ ಗ್ರಾಮೀಣ ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಗುಂಪಿನ ಸದಸ್ಯರನ್ನು ಯೋಜನೆಯಡಿ ಸೇರ್ಪಡೆಗೊಳಿಸ ಲಾಗಿದೆ. ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಲೈಂಗಿಕ ಅಲ್ಪಸಂಖ್ಯಾತ ರಿಗೂ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.ಗ್ರಾಮೀಣ ಮತ್ತು ನಗರ ಪ್ರದೇಶದ ಮೀನುಗಾರರು, ಬೀಡಿಕಾರ್ಮಿಕರು ಹಾಗೂ ನೇಕಾರ ಸಹಕಾರ ಸಂಘದ ಸದಸ್ಯರಿಗೂ ಸೌಲಭ್ಯ ನೀಡಲಾಗುವುದು. ಸದಸ್ಯತ್ವ ಪಡೆದು ಕನಿಷ್ಠ 6 ತಿಂಗಳಾಗಿರಬೇಕು. ಕುಟುಂಬದವರು ಪ್ರತಿವರ್ಷ ವಂತಿಗೆ ಪಾವತಿಸುವುದು ಕಡ್ಡಾಯ ಎಂದರು.ವಂತಿಗೆ ಏರಿಕೆ: ವಾರ್ಷಿಕ ವಂತಿಗೆಯನ್ನು 150 ರೂನಿಂದ 160 ರೂಪಾಯಿಗೆ ಹೆಚ್ಚಿಸಲಾಗಿದೆ. ಪ್ರತಿಯೊಬ್ಬರು ಸದಸ್ಯರು ವಂತಿಗೆ ಪಾತಿಸಬೇಕು. ಈ ಹಣದಲ್ಲಿ ಯಶಸ್ವಿನಿ ನೋಂದಣಿಗೆ ಶ್ರಮಿಸಿದವರಿಗೆ 10 ರೂ ನೀಡಲಾಗುತ್ತದೆ. ಉಳಿದ ಹಣ ಯಶಸ್ವಿನಿ ಟ್ರಸ್ಟ್‌ನ ಖಾತೆಗೆ ಜಮೆಯಾಗಲಿದೆ ಎಂದು ಶಿವಕುಮಾರಸ್ವಾಮಿ ವಿವರಿಸಿದರು.ಒಂದೇ ಕುಟುಂಬದ ಸದಸ್ಯರಿಗೆ ನೀಡುತ್ತಿದ್ದ ವಿಶೇಷ ರಿಯಾಯಿತಿ ಮುಂದುವರಿಸಲಾಗಿದೆ. ಯಾವುದೇ, ಕುಟುಂಬದ ಐವರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಯಶಸ್ವಿನಿ ಫಲಾನುಭವಿಗಳಾಗಿ ನೋಂದಾಯಿಸಿದರೆ ಅವರ ವಂತಿಗೆ ಹಣದಲ್ಲಿ ಪ್ರತಿ ಸದಸ್ಯರಿಗೆ ಶೇ. 15ರಷ್ಟು ರಿಯಾಯಿತಿ ಸಿಗಲಿದೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಡಿ ಕನಿಷ್ಠ 40 ಲಕ್ಷ ಫಲಾನುಭವಿಗಳನ್ನು ನೋಂದಾಯಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಈಗಾಗಲೇ, ಯಶಸ್ವಿನಿ ಫಲಾನುಭವಿಯ ನವೀಕರಣ ಪ್ರಕ್ರಿಯೆ ಆರಂಭವಾಗಿದೆ. ಮೇ 31ರೊಳಗೆ ಹೊಸ ನೋಂದಣಿ ಹಾಗೂ ನವೀಕರಣಕ್ಕೆ ಅಂತಿಮ ದಿನ ನಿಗದಿಪಡಿಸಲಾಗಿದೆ ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಜಿ.ಪಂ. ಸಿಇಒ ಕೆ. ಸುಂದರನಾಯಕ್, ಎಂಡಿಸಿಸಿ ವ್ಯವಸ್ಥಾಪಕ ನಿರ್ದೇಶಕ ಮಹದೇವಸ್ವಾಮಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.