ಭಾನುವಾರ, ಮೇ 22, 2022
28 °C

ಸ್ತ್ರೀಶಕ್ತಿ ಭವನ ನಿರ್ಮಾಣ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಹೊಂಬಳ ಗ್ರಾಮದಲ್ಲಿ ಸ್ತ್ರೀ ಶಕ್ತಿ ಭವನವನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಧ್ಯದಲ್ಲಿಯೇ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ತಾಲ್ಲೂಕಿನ ಹೊಂಬಳ ಗ್ರಾಮದಲ್ಲಿ ಸರ್ವ ಮಹಿಳಾ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಗ್ರಾಮದಲ್ಲಿ ಅನುಕೂಲಕರವಾದ ನಿವೇಶನವನ್ನು ಗುರುತಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು. ಮಹಿಳೆ ತ್ಯಾಗದ ಪ್ರತಿರೂಪ. ಮಹಿಳೆಯರ ಸಹಕಾರ ಸಮಾಜದ ಮುಂದುವರಿಕೆಗೆ ಅವಶ್ಯ ಎಂದರು.ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೊಸ ಆಯಾಮ ನೀಡಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ. ಇದುವರೆಗೆ 1400 ಕೋಟಿ ರೂಪಾಯಿಗಳನ್ನು ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಖರ್ಚು ಮಾಡಲಾಗಿದೆ. ಪ್ರಸಕ್ತ ವರ್ಷ 500 ಕೋಟಿ ರೂಪಾಯಿಗಳನ್ನು ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಬಾಲ ಸಂಜೀವಿನಿ ಯೋಜನೆ, ಅವಿವಾಹಿತರಿಗೆ 1000 ರೂಪಾಯಿ ಮಾಸಶಾನ, 50ವರ್ಷ ಮೇಲ್ಪಟ್ಟ ನಿರ್ಗತಿಕ ಮಹಿಳೆಯರಿಗೆ 400 ರೂಪಾಯಿಗಳ ಸಹಾಯಧನ ಜಾರಿಗೆ ತರುವುದಾಗಿ ತಿಳಿಸಿದ ಸಚಿವರು ಈ ಎಲ್ಲ ಯೋಜನೆಗಳ ಲಾಭವನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಗದಗ-ಬೆಟಗೇರಿ ನಗರಸಭೆ ಸದಸ್ಯೆ ಜಯಶ್ರೀ ಉಗಲಾಟದ ಮಾತನಾಡಿ, ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರಬೇಕು. ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಬೇಕು. ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್,ಎಸ್, ಬಾಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ, ಸುಕನ್ಯಾ ಸಾಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಎಸ್. ಕರೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಪೂಜಾರ, ಎಂ.ವೈ. ಹುಣಸಿಕಟ್ಟಿ, ಲಲಿತಾ ಸರ್ವದೇ, ವೈ.ಎಲ್. ಮೈಲಾರ, ಬಿ.ಎಂ. ಮೈಲಾರ, ವೀರಭದ್ರಪ್ಪ ಎಕಲಾಸಾಪೂರ, ಎಂಸಿ. ಬಳ್ಳೊಳಿ, ನಗರಸಭೆ ಸದಸ್ಯ ಕಮಲಾಕ್ಷಿ ಗೊಂದಿ, ಸುಲೋಚನಾ ಸೀರಿ, ಎಪಿಎಂಸಿ ಸದಸ್ಯ ಪ್ರದಿಪ ನವಲಗುಂದ ಮತ್ತಿತರರು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.