ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹದ ಬೆಸುಗೆಗೆ ತಾಣ...

Last Updated 19 ಜುಲೈ 2011, 19:30 IST
ಅಕ್ಷರ ಗಾತ್ರ

ಬೃಹತ್ ನಗರಗಳಲ್ಲಿ ಅನೇಕರಿಗೆ ಏಕಾಂಗಿತನ ಸಹಜವಾಗಿ ಕಾಡುತ್ತಿರುತ್ತದೆ. ಉತ್ತಮ ಸ್ನೇಹಿತರು ಸಿಗುವುದೂ  ಕಷ್ಟ.  ಸಮಯ ಕಳೆಯಲು ಹಲವರು ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಇಂಥವರ ನೆರವಿಗೆ ಬರುವಂಥವು, ಸೋಷಿಯಲ್ ನೆಟ್‌ವರ್ಕಿಂಗ್ ವೆಬ್‌ಸೈಟ್‌ಗಳು.

ಆರ್ಕುಟ್, ಫೇಸ್‌ಬುಕ್ ವೆಬ್‌ಸೈಟ್‌ಗಳು ಬದುಕಿನ ಚಿತ್ರವನ್ನೇ ಬದಲಿಸುತ್ತಿವೆ. ದೂರದಲ್ಲಿದ್ದರೂ ಸಾಮಿಪ್ಯದ ಅನುಭವ ಕೊಡುತ್ತವೆ. ಆಪ್ಯಾಯಮಾನ ಭಾವವನ್ನು ಸ್ಫುರಿಸುತ್ತವೆ. ಎಲ್ಲೋ ಒಂದೆಡೆ ನಾವೆಲ್ಲ ಜನ್ಮಾಂತರದ ಗಾಢ ಸ್ನೇಹಿತರು ಎಂಬಂತೆ ಭಾಸವಾಗುತ್ತದೆ.

ಇದೇ ಸಾಲಿನಲ್ಲಿ ನಿಲ್ಲುವಂಥದ್ದು, ಡೇಟಿಂಗ್. ಡೇಟಿಂಗ್ ಸಂಸ್ಕೃತಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ದೇಶದಿಂದ ದೇಶಕ್ಕೆ ಡೇಟಿಂಗ್‌ನ ಸ್ವರೂಪ ಬದಲಾಗುತ್ತದೆ.  ಭಾರತದ ಮಟ್ಟಿಗೆ ಇದು ಹೊಸದೆನಿಸಿದರೂ, ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ.

`ಡೇಟ್‌ದೋಸ್ತಿ ಡಾಟ್ ಕಾಮ್~ (datedosti.com) ಈ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ. ಇಲ್ಲಿ ಮಿತ್ರತ್ವದ ಸಂಪರ್ಕಕ್ಕೆ ವೆಬ್‌ಸೈಟ್ ಸೀಮಿತವಾಗದೇ ಹೊಸ ಸಂಬಂಧಗಳಿಗೆ ನಾಂದಿ ಹಾಡುವ ಪ್ರಯತ್ನ ನಡೆಯುತ್ತದೆ.

ಸಮಾನ ಮನಸ್ಕ ವ್ಯಕ್ತಿಗಳ ನಡುವೆ ಸುರಕ್ಷಿತವಾದ ಭೇಟಿಗೆ ವೇದಿಕೆ ಕಲ್ಪಿಸುತ್ತದೆ. ಸಂಪೂರ್ಣವಾಗಿ ಮಹಿಳೆಯರ ನಿಯಂತ್ರಣದಲ್ಲಿಯೇ ಇರುವ ಡೇಟಿಂಗ್ ಮತ್ತು ಫ್ರೆಂಡ್‌ಷಿಪ್ ವೆಬ್‌ಸೈಟ್ ಇದು.

ಡೇಟಿಂಗ್ ಎಂದರೇನು? ವಿಕಿಪೀಡಿಯಾ ವ್ಯಾಖ್ಯಾನದಂತೆ, ಇಬ್ಬರು ವ್ಯಕ್ತಿಗಳು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಭೇಟಿಯಾಗಿ ನಿರ್ದಿಷ್ಟ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವುದಕ್ಕೆ ಡೇಟಿಂಗ್ ಎನ್ನಬಹುದು.
 
ವಿವಾಹಿತರ ನಡುವೆಯೂ ಡೇಟಿಂಗ್ ನಡೆಯಬಹುದು. ಹೊಸ ಸ್ನೇಹಿತರನ್ನು, ಸ್ನೇಹವನ್ನು ಪ್ರೇಮಕ್ಕೆ ಪರಿವರ್ತಿಸಲು ಡೇಟಿಂಗ್ ನಡೆಯಬಹುದು. ಡೇಟಿಂಗ್ ಪದ ನಾನಾರ್ಥಗಳನ್ನು ಸ್ಫುರಿಸಿದರೂ ಚುಟುಕಾಗಿ ಭೇಟಿ ಎನ್ನಬಹುದು.

ಯುರೋಪ್‌ನಲ್ಲಿ ಈ ಹಿಂದೆ ವಿವಾಹವನ್ನು ಎರಡು ಕುಟುಂಬಗಳ ನಡುವೆ ನಡೆಯುವ ವಹಿವಾಟು ಎಂದು ಭಾವಿಸಲಾಗುತ್ತಿತ್ತು. ಪ್ರಣಯ, ವಿವಾಹದ ಭಾಗವಾಗಿರಲಿಲ್ಲ. ಅದನ್ನು ಕದ್ದುಮುಚ್ಚಿ ನಡೆಸಬೇಕಾಗಿತ್ತು.
 
1700ರ ಹೊತ್ತಿಗೆ ಮಹಿಳೆಯರ ಸಬಲೀಕರಣ ಪ್ರಾಶಸ್ತ್ಯ ಪಡೆಯಿತು. ಆಸ್ತಿಯನ್ನು ಪಡೆಯುವ ಹಕ್ಕು, ಸಮಾನತೆಯ ಹಕ್ಕು ದೊರೆಯಿತು. ಮತದಾನದ ಹಕ್ಕು ದೊರೆಯಿತು.

ಈ ಬದಲಾವಣೆಗಳು ಪುರುಷ ಮತ್ತು ಮಹಿಳೆಯ ನಡುವಣ ಸಂಬಂಧದ ಚಿತ್ರಣವನ್ನೇ ಬದಲಿಸಿತು. ಮನೆಯಲ್ಲಿ ಮನೋರಂಜನೆಯ ಹೆಸರಲ್ಲಿ ನಡೆಯುತ್ತಿದ್ದ ಡೇಟಿಂಗ್ ಬೀದಿಗೆ ಬಂತು.

ಕ್ರಮೇಣ ಇದು ಸಾಮಾಜಿಕ ಅಸ್ತಿತ್ವ ಪಡೆದುಕೊಂಡು ಡೇಟಿಂಗ್ ಎನಿಸಿಕೊಂಡಿತು. ದೂರವಾಣಿಯ ಆವಿಷ್ಕಾರದಿಂದಾಗಿ ಡೇಟಿಂಗ್ ಇನ್ನೊಂದು ಮಗ್ಗುಲಿಗೆ ಹೊರಳಿತು.

ಡೇಟಿಂಗ್ ವೆಬ್‌ಸೈಟ್‌ಗಳು ಹೇರಳವಾಗಿ ದೊರೆಯುತ್ತವೆ. ಆದರೆ, ಭಾರತಕ್ಕೆಂದೇ ವಿಶೇಷವಾದ ಡೇಟಿಂಗ್ ವೆಬ್‌ಸೈಟ್ ನಿರ್ಮಾಣವಾಗಿರುವುದು ಇದೇ ಮೊದಲು. 

ಸಾಮಾನ್ಯವಾಗಿ ಡೇಟಿಂಗ್ ಕುರಿತು ಇರುವ ವೆಬ್‌ಸೈಟ್ ದುರ್ಬಳಕೆ ಆಗುವುದು ಜಾಸ್ತಿ. ಅದರಲ್ಲೂ ಮಹಿಳೆಯರ ಶೋಷಣೆ ಸಂದರ್ಭಗಳು ಹೇರಳವಾಗಿರುತ್ತವೆ. ಆದರೆ, ಡೇಟ್‌ದೋಸ್ತಿ ಡಾಟ್ ಕಾಮ್ ಸಂಪೂರ್ಣವಾಗಿ ಮಹಿಳೆಯರ ನಿಯಂತ್ರಣದಲ್ಲೇ ಇರುವ ವೆಬ್‌ಸೈಟ್.

ಮಹಿಳೆಯರ ಭದ್ರತೆಗಾಗಿ ವಿಶೇಷವಾದ ಅನುಕೂಲತೆಗಳು ಇದರಲ್ಲಿವೆ. ಡೇಟಿಂಗ್‌ಗೆ ಮುನ್ನ ಮಹಿಳೆಯರು ತಮ್ಮ ಮಿತ್ರನ ಪರೀಕ್ಷೆಯನ್ನು ಆನ್‌ಲೈನ್‌ನಲ್ಲೇ ನಡೆಸಬಹುದು! ಒಂದೆಡೆ ಸಮಯದ ಉಳಿತಾಯ. ಇನ್ನೊಂದೆಡೆ ತಮ್ಮ ಮಿತ್ರ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ.

ಡೇಟ್‌ದೋಸ್ತಿ ಪ್ರಾರಂಭಿಸುವ ಮುನ್ನ ಸ್ಥಾಪಕರು ಈ ಉದ್ದೇಶಕ್ಕೆ ಇರುವ ಲಭ್ಯವಿರುವ ಎಲ್ಲ ವೆಬ್‌ಸೈಟ್‌ಗಳನ್ನು ಪರೀಕ್ಷಿಸಿದರು. ಭಾರತಕ್ಕೆಂದೇ ಸೀಮಿತವಾದ ವೆಬ್‌ಸೈಟ್ ಯಾವುದೂ ಇಲ್ಲದಿರುವುದು ಅವರ ಗಮನಕ್ಕೆ ಬಂತು. ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿಯ ಜನರ ಅಭಿರುಚಿಗಳು ವಿಭಿನ್ನ ಮತ್ತು ಆದ್ಯತೆಗಳು ಭಿನ್ನ.

ಅಮೆರಿಕ ಅಥವಾ ಇಂಗ್ಲೆಂಡ್‌ನಲ್ಲಿರುವ ವೆಬ್‌ಸೈಟ್‌ಗಳ ವಿಸ್ತರಿತ ರೂಪವಾಗಿ ಭಾರತದ ವೆಬ್‌ಸೈಟ್ ಇರುವುದು ಬೇಡ ಎಂದು ಭಾವಿಸಿದ ಅವರು `ಡೇಟ್‌ದೋಸ್ತಿ ಡಾಟ್ ಕಾಮ್~ ಪ್ರಾರಂಭಿಸಿದರು. ನಾವು ಯಾರು? ನಮಗೆ ಏನು ಬೇಕು ಎಂಬುದನ್ನು ಪ್ರತಿಬಿಂಬಿಸುವ ಸಮಕಾಲೀನ ವೆಬ್‌ಸೈಟ್ ಬೇಕು ಎಂಬ ಅನ್ವೇಷಣೆಯ ಪ್ರತಿಫಲವೇ ಡೇಟ್‌ದೋಸ್ತಿ ಡಾಟ್ ಕಾಮ್.

ಮಹಿಳೆಯರ ಸುರಕ್ಷತೆ ಹೇಗೆ? ಆಸಕ್ತ ವ್ಯಕ್ತಿ ಮಹಿಳೆಯೊಬ್ಬರಿಗೆ ಪ್ರಾರಂಭಿಕ ಸಂದೇಶ ಕಳಿಸಬಹುದು. ಆ ಸಂದೇಶದಲ್ಲಿ ಅಸಭ್ಯ ಪದಗಳಿದ್ದರೆ ಅದನ್ನು ವೆಬ್‌ಸೈಟ್ ತೆಗೆದುಹಾಕುತ್ತದೆ.

ಈ ಸಂದೇಶವನ್ನು ಮಹಿಳೆ ಡಿಲೀಟ್ ಮಾಡಿದರೆ ಆ ವ್ಯಕ್ತಿಯ ಸಂದೇಶ ಬಳಿಕ ಆಕೆಯನ್ನು ತಲುಪದಂತೆ ಬ್ಲಾಕ್ ಆಗಿ ಬಿಡುತ್ತದೆ. ಆಕೆ ಪ್ರತಿಕ್ರಿಯೆ ನೀಡಿದರೆ ವ್ಯಕ್ತಿ ಆಕೆಯೊಂದಿಗೆ ಮಾತುಕತೆ ಮುಂದುವರೆಸಬಹುದು.

ಭಾರತೀಯ ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಡೇಟ್‌ದೋಸ್ತಿ ನಿರ್ಮಿಸಲಾಗಿದೆ. ಭಾರತದಂತಹ ಸಾಂಪ್ರದಾಯಿಕ ವಾತಾವರಣದಲ್ಲಿ ಕೆಲವೊಂದು ಸವಾಲುಗಳು ನಮ್ಮ ಎದುರಿದ್ದವು. ವಿಶೇಷವಾಗಿ ಮಹಿಳೆಯ ರಕ್ಷಣೆಯ ಹೊಣೆ ಇತ್ತು.

ಜನರು ತಮ್ಮ ನಡುವೆ ಇರುವ ಗೋಡೆಗಳನ್ನು ಮೀರಿ ಪರಸ್ಪರ ಭೇಟಿ ಮಾಡಲು ಅವಕಾಶ ನೀಡಬೇಕಾಗಿತ್ತು. ಡೇಟ್‌ದೋಸ್ತಿ ಡಾಟ್ ಕಾಮ್ ಈ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ  ಎಂದು ವೆಬ್‌ಸೈಟ್‌ನ ಸಂಸ್ಥಾಪಕ ಅರ್ಜುನ್ ಸಾಹ್ನಾಯ್ ವಿಶ್ವಾಸದಿಂದ ಹೇಳುತ್ತಾರೆ.

ಡೇಟಿಂಗ್ ವೆಬ್‌ಸೈಟ್‌ಗೂ ವಿವಾಹ ವೆಬ್‌ಸೈಟ್‌ಗಳಿಗೂ ವ್ಯತ್ಯಾಸವಿರುವುದನ್ನು ಗಮನಿಸಬೇಕು. ಈ ಎರಡೂ ಬಗೆಯ ವೆಬ್‌ಸೈಟ್‌ಗಳಿಂದಾಗಿ ಭಾರತದಲ್ಲಿ ಡೇಟಿಂಗ್ ಮತ್ತು ವಿವಾಹದ ಬಗ್ಗೆ ಜನಸಾಮಾನ್ಯರ ಮನೋಭಾವ ಬದಲಾಗುತ್ತಿದೆ ಎನ್ನುವುದಂತೂ ಸತ್ಯ. 
 
ಕೆಲ ಸಲಹೆಗಳು
* ನಿಮ್ಮ ವ್ಯಕ್ತಿಚಿತ್ರದ ವಿವರಗಳನ್ನು ನೀಡುವಾಗ ಪ್ರಾಮಾಣಿಕರಾಗಿರಿ. ವಯಸ್ಸು, ಎತ್ತರ, ತೂಕ, ಉದ್ಯೋಗದ ಬಗ್ಗೆ ತಪ್ಪು ಮಾಹಿತಿ ಕೊಡಬೇಡಿ

* ಸಮಯ ವ್ಯರ್ಥವಾಗದಂತಾಗಲು ನೀವು ಡೇಟಿಂಗ್ ಮಾಡುವ ವ್ಯಕ್ತಿ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟವಾದ ಚಿತ್ರ ನಿಮ್ಮಲ್ಲಿರಲಿ,  ನೀವು ಭೇಟಿ ಖಾತ್ರಿಯಾಗುವವರೆಗೂ ವೈಯಕ್ತಿಕ ಸಂಪರ್ಕದ ವಿವರಗಳನ್ನು ನೀಡಬೇಡಿ.
 
* ಜನರು ಹೆಚ್ಚು ಸಂಚರಿಸುವ ಸಾರ್ವಜನಿಕ ಸ್ಥಳದಲ್ಲಿ ಭೇಟಿಯಾಗಿ, ನಿಮ್ಮ ಭೇಟಿಯ ಬಗ್ಗೆ ಸ್ನೇಹಿತರು ಅಥವಾ ಕುಟುಂಬಕ್ಕೆ ಪೂರ್ವಮಾಹಿತಿ ಕೊಡಿ,  ತಪ್ಪು ಕಲ್ಪನೆಗೆ ಅವಕಾಶ ನೀಡದಂತೆ ಸರಿಯಾದ ಉಡುಪು ಧರಿಸಿ,  ಎಲ್ಲ ಸಂದರ್ಭದಲ್ಲಿಯೂ ನಿಮ್ಮ ರಕ್ಷಣೆಯ ಬಗ್ಗೆ ಗಮನ ಕೊಡಿ.

* ಭೇಟಿಯಾದ ವ್ಯಕ್ತಿಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಮುನ್ನ  ಲಿಫ್ಟ್ ಗೆ ಒಪ್ಪಿಕೊಳ್ಳಬೇಡಿ,  ಸೆಲ್ ಫೋನ್ ಚಾಲನೆಯಲ್ಲಿರಲಿ. ಮದ್ಯಪಾನ ಮಾಡಬೇಡಿ. ನೀವು ಕುಡಿಯುವ ಪಾನೀಯ ಮತ್ತು ವಸ್ತುಗಳ ಬಗ್ಗೆ ಎಚ್ಚರದಿಂದಿರಿ,

* ನಿಮ್ಮಲ್ಲಿ ಅಭದ್ರತೆಯ ಭಾವ ಕಾಣಿಸಿಕೊಂಡಲ್ಲಿ ರಕ್ಷಣೆಗಾಗಿ ತಕ್ಷಣ ಸಹಾಯ ಪಡೆಯಿರಿ.                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT