ಬುಧವಾರ, ಮೇ 12, 2021
24 °C

ಸ್ಪೇನ್, ಇಟಲಿ ಜಯದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯೊ ಡಿ ಜನೈರೊ/ ರಿಸೈಫ್ (ಐಎಎನ್‌ಎಸ್): ಪೆಡ್ರೊ ಮತ್ತು ರಾಬರ್ಟೊ ಸೊಲ್ಡಾಡೊ ಅವರು ಮೊದಲಾರ್ಧದಲ್ಲಿ ತಂದಿತ್ತ ಗೋಲುಗಳ ನೆರವಿನಿಂದ ಸ್ಪೇನ್ ತಂಡ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.ರಿಸೈಫ್‌ನ ಅರೆನಾ ಪೆರ್ನಾಂಬುಕಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ `ಬಿ' ಗುಂಪಿನ ಪಂದ್ಯದಲ್ಲಿ ಸ್ಪೇನ್ 2-1 ಗೋಲುಗಳಿಂದ ಉರುಗ್ವೆ ತಂಡವನ್ನು ಮಣಿಸಿತು. ಪೆಡ್ರೊ 19ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಪೇನ್‌ಗೆ ಮೇಲುಗೈ ತಂದಿತ್ತರು. ಸೊಲ್ಡಾಡೊ 32ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಸೆಸ್ ಫ್ಯಾಬ್ರೆಗಾಸ್ ನೀಡಿದ ಅತ್ಯುತ್ತಮ ಪಾಸ್‌ನಲ್ಲಿ ಸೊಲ್ಡಾಡೊ ಗೋಲು ಗಳಿಸಿದರು.ಉರುಗ್ವೆ ತಂಡ ಮರುಹೋರಾಟ ನಡೆಸಲು ಪ್ರಯತ್ನಿಸುತ್ತಲೇ ಇತ್ತು. ಆದರೆ ಸ್ಪೇನ್ ತಂಡ ರಕ್ಷಣೆಗೆ ಹೆಚ್ಚು ಒತ್ತು ನೀಡಿದ ಕಾರಣ ಗೋಲು ಗಳಿಸಲು ಆಗಲಿಲ್ಲ. ಪಂದ್ಯ ಕೊನೆಗೊಳ್ಳಲು ಮೂರು ನಿಮಿಷಗಳಿರುವಾಗ ಉರುಗ್ವೆ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿತು. ಲೂಯಿಸ್ ಸೊರೇಜ್ ಅವರು ತಂಡಕ್ಕೆ ಲಭಿಸಿದ ಫ್ರೀ ಕಿಕ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದರು.ಇಟಲಿಗೆ ಜಯ: ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಇಟಲಿ 2-1 ಗೋಲುಗಳಿಂದ ಮೆಕ್ಸಿಕೊ ವಿರುದ್ಧ ಜಯ ಸಾಧಿಸಿತು.ಆ್ಯಂಡ್ರೆ ಪಿರ್ಲೊ 27ನೇ ನಿಮಿಷದಲ್ಲಿ ಸೊಗಸಾದ ಗೋಲಿನ ಮೂಲಕ ಇಟಲಿಗೆ ಮುನ್ನಡೆ ತಂದಿತ್ತರು. ಫ್ರೀ ಕಿಕ್ ಅವಕಾಶದಲ್ಲಿ ಸುಮಾರು 25 ಮೀ. ದೂರದಿಂದ ಅವರು ಒದ್ದ ಚೆಂಡು ನಿಖರವಾಗಿ ಗುರಿ ಸೇರಿತು. ಈ ಮೂಲಕ ಪಿರ್ಲೊ ತಮ್ಮ 100ನೇ ಅಂತರರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು.ಜೇವಿಯರ್ ಹೆರ್ನಾಂಡೆಸ್ 34ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಮೆಕ್ಸಿಕೊಗೆ ಸಮಬಲದ ಗೋಲು ತಂದಿತ್ತರು. ಇಟಲಿ ತಂಡದ ಆ್ಯಂಡ್ರಿಯಾ ಬರ್ಜಾಗ್ಲಿ ಮೆಕ್ಸಿಕೊದ ಗಿಯೊವಾನಿ ಡಾಸ್ ಸಂಟೋಸ್ ಅವರನ್ನು ಕೆಳಕ್ಕೆ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು.

ಈ ಆಘಾತದಿಂದ ಚೇತರಿಸಿಕೊಂಡ ಇಟಲಿ ಮರುಹೋರಾಟ ನಡೆಸಿತಾದರೂ ವಿರಾಮದವರೆಗೆ ಹೆಚ್ಚಿನ ಗೋಲುಗಳು ಬರಲಿಲ್ಲ. ಎರಡನೇ ಅವಧಿಯಲ್ಲೂ ತುರುಸಿನ ಪೈಪೋಟಿ ಕಂಡುಬಂತು.78ನೇ ನಿಮಿಷದಲ್ಲಿ ಇಟಲಿಗೆ ಗೆಲುವಿನ ಗೋಲು ಬಂತು. ಎಮ್ಯಾನುಯೆಲ್ ಗಿಯಾಚೆರಿನಿ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಮಾರಿಯೊ ಬಲೊಟೆಲ್ಲಿ ಎದುರಾಳಿ ತಂಡದ ಇಬ್ಬರು ರಕ್ಷಣಾ ಆಟಗಾರರು ಹಾಗೂ ಗೋಲ್‌ಕೀಪರ್ ಜೋಸ್ ಕೊರೋನಾ ಅವರನ್ನು ತಪ್ಪಿಸಿ ಗುರಿ ಸೇರಿಸಿದರು. ಕೋಪಕ್ಕೆ ತುತ್ತಾದ ಬಲೊಟೆಲ್ಲಿ: ಮೆಕ್ಸಿಕೊ ವಿರುದ್ಧದ ಪಂದ್ಯದಲ್ಲಿ ಇಟಲಿಯ ಗೆಲುವಿನ ರೂವಾರಿ ಎನಿಸಿದ ಬಲೊಟೆಲ್ಲಿ ಅವರು ತಂಡದ ಕೋಚ್ ಸೆಸಾರ್ ಪ್ರಾಂಡೆಲ್ಲಿಯ ಕೋಪಕ್ಕೆ ತುತ್ತಾದ ಘಟನೆ ನಡೆದಿದೆ.ಗೋಲು ಗಳಿಸಿದ ಬಳಿಕ ಬಲೊಟೆಲ್ಲಿ ಟಿ- ಶರ್ಟ್ ಬಿಚ್ಚಿದ್ದರಲ್ಲದೆ, ತಮ್ಮ ದೇಹದ ಸ್ನಾಯುಗಳನ್ನು ತೋರಿಸಿ ಸಂಭ್ರಮಿಸಿದ್ದರು. ಇದಕ್ಕಾಗಿ ರೆಫರಿ ಹಳದಿ ಕಾರ್ಡ್ ತೋರಿಸಿದ್ದರು. ಕೋಚ್ ಪ್ರಾಂಡೆಲ್ಲಿ ಕೂಡಲೇ ಅವರನ್ನು ಅಂಗಳದಿಂದ ಹೊರಕ್ಕೆ ಕರೆಸಿ, ಬದಲಿ ಆಟಗಾರರನನ್ನು ಕಣಕ್ಕಿಳಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.ಎಸಿ ಮಿಲಾನ್ ಕ್ಲಬ್‌ಅನ್ನು ಪ್ರತಿನಿಧಿಸುವ ಬಲೊಟೆಲ್ಲಿ ಈ ಹಿಂದೆ ಯೂರೋಪಿಯನ್ ಚಾಂಪಿಯನ್‌ಷಿಪ್‌ನ ಪಂದ್ಯವೊಂದರಲ್ಲೂ ಇದೇ ರೀತಿ ಸಂಭ್ರಮಿಸಿ ವಿವಾದಕ್ಕೆ ಕಾರಣರಾಗಿದ್ದರು.`ತಮ್ಮ ವರ್ತನೆಗೆ ಬಲೊಟೆಲ್ಲಿ ಕ್ಷಮೆಯಾಚಿಸಿದ್ದಾರೆ. ಆತನ ದೇಹದ ಸ್ನಾಯುಗಳು ಎಷ್ಟು ಬಲಿಷ್ಠವಾಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಶರ್ಟ್ ಬಿಚ್ಚುವ ಮೂಲಕ ಅದನ್ನು ಮತ್ತಷ್ಟು ಜನರಿಗೆ ತೋರಿಸುವ ಅಗತ್ಯವಿಲ್ಲ' ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಾಂಡೆಲ್ಲಿ ಹೇಳಿದ್ದಾರೆ. ಕಾನ್ಫೆಡರೇಷನ್ ಕಪ್ ಟೂರ್ನಿಯ ನಿಯಮದಂತೆ ಲೀಗ್ ಹಂತದಲ್ಲಿ ಎರಡು ಹಳದಿ ಕಾರ್ಡ್ ಪಡೆದ ಆಟಗಾರ ಒಂದು ಪಂದ್ಯದ ನಿಷೇಧ ಶಿಕ್ಷೆ ಅನುಭವಿಸಬೆಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.