ಶುಕ್ರವಾರ, ಮಾರ್ಚ್ 5, 2021
16 °C

ಸ್ಫೋಟ ಪ್ರಕರಣ: ಸಿಸಿಬಿ ಬಲೆಗೆ ಮತ್ತೊಬ್ಬ ಶಂಕಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಫೋಟ ಪ್ರಕರಣ: ಸಿಸಿಬಿ ಬಲೆಗೆ ಮತ್ತೊಬ್ಬ ಶಂಕಿತ

ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ 2013ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಅಲ್‌–ಉಮ್ಮಾ ಸಂಘಟನೆಯ ಸದಸ್ಯ ಮೊಹಮದ್ ಅಲಿ ಖಾನ್ ಅಲಿಯಾಸ್ ಕುಟ್ಟಿ (45) ಎಂಬಾತನನ್ನು ಬಂಧಿಸಿದ್ದಾರೆ.ತಮಿಳುನಾಡಿನ ಸತ್ಯಮಂಗಲ ನಿವಾಸಿಯಾದ ಈತ, ಸಂಘಟನೆಯ ಸದಸ್ಯರಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ್ದ. ಅವುಗಳನ್ನು ತೆಗೆದುಕೊಂಡು ಬೈಕ್‌ನಲ್ಲೇ ನಗರಕ್ಕೆ ಬಂದಿದ್ದ ಶಂಕಿತರು, ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲೇ ಬಾಂಬ್ ತಯಾರಿಸಿದ್ದರು. ಬಳಿಕ 2013ರ ಏಪ್ರಿಲ್ 17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸ್ಫೋಟಿಸಿದ್ದರು.‘ಪ್ರಕರಣಕ್ಕೆ ಸಂಬಂಧ ಇತ್ತೀಚೆಗೆ ತಿರುನಲ್ವೇಲಿಯಲ್ಲಿ ಡೇನಿಯಲ್ ಪ್ರಕಾಶ್‌ (35) ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತ ಕುಟ್ಟಿಯೇ ತಮಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದುದಾಗಿ ಹೇಳಿಕೆ ಕೊಟ್ಟ. ಆ ಸುಳಿವು ಆಧರಿಸಿ ಆಗಸ್ಟ್ 15ರಂದು ತಮಿಳುನಾಡಿಗೆ ತೆರಳಿದ ತಂಡ, ಆರೋಪಿಯನ್ನು ಪತ್ತೆ ಮಾಡಿ ನಗರಕ್ಕೆ ಕರೆತಂದಿದೆ’ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.1997ರಲ್ಲಿ ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ಪಾಲ್ಗೊಂಡಿದ್ದ ಕೊಯಮತ್ತೂರಿನ ರ‍್ಯಾಲಿಯಲ್ಲಿ ಸ್ಫೋಟ ಸಂಭವಿಸಿತ್ತು. ಅದರಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಬಂಧಿತನಾಗಿದ್ದ ಕುಟ್ಟಿ, 12 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದ.‘ಬಳಿಕ 2010ರಲ್ಲಿ ಬಿಡುಗಡೆಯಾದ ಈತ, ಚೆನ್ನೈನಿಂದ ಕೇರಳಕ್ಕೆ ಹೊರಡುವ ರೈಲುಗಳಲ್ಲಿ ಬಾಂಬ್ ಸ್ಫೋಟಿಸಿದ್ದ. ಅಲ್ಲದೆ, ಚೆನ್ನೈನ ಜಿ–1 ಪೊಲೀಸ್ ಠಾಣೆ ಬಳಿ ಹಾಗೂ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ಮನೆ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣಗಳಿಗೂ ಸ್ಫೋಟಕಗಳನ್ನು ಪೂರೈಕೆ ಮಾಡಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.