ಎಲ್ಲರೂ ವಯಸ್ಸಾಗಿ ಆಯಸ್ಸು ತೀರಿದ ಮೇಲೆ ಸ್ಮಶಾನಕ್ಕೆ ಹೋಗುವುದು ಸಾಮಾನ್ಯ. ಆದರೆ ನಾನು ತುಂಬಾ ಬೇಗನೇ, ಚಿಕ್ಕವನಿದ್ದಾಗಲೇ ಸ್ಮಶಾನಕ್ಕೆ ಹೋಗಿಬಿಟ್ಟೆ. ಆಮೇಲೆ ಅದು ನನ್ನ ಬದುಕಿನ ಒಂದು ಭಾಗವೇ ಆಗಿಬಿಟ್ಟಿತು.

ನಾನು ಬಹುಶಃ ಪಿಯುಸಿ ಓದುತ್ತಿದ್ದಾಗ ಅನಿಸುತ್ತದೆ. 1970–71ರ ಅವಧಿ ಇರಬೇಕು ಅದು. ಶ್ರೀರಾಮಪುರದ ಕೊಳೆಗೇರಿಯಲ್ಲಿ ನಮ್ಮದೊಂದು ಒಂದು ಗುಡಿಸಿಲಿತ್ತು. ಬಡವರು ನಾವು. ತುಂಬ ಚಿಕ್ಕ ಮನೆ ನಮ್ಮದು. ಆ ಮನೆಯಲ್ಲಿ ನನ್ನ ತಾಯಿಯ ಗೆಳತಿಯರೋ, ನೆಂಟರೋ ಬಂದುಬಿಟ್ಟರೆ ಒಳಗಡೆ ಕುಳಿತುಕೊಳ್ಳಲಿಕ್ಕೇ ಜಾಗ ಇರ್ತಿರಲಿಲ್ಲ.

ನಾನು ಹೊರಗಡೆ ಬಂದು ನಿಂತ್ಕೋಬೇಕಾಗಿತ್ತು. ಆಗೆಲ್ಲಾ ನಾನು ಹೊರಗೆ ಬಂದು ಮನೆ ಮುಂದಿನ ರಸ್ತೆಯಲ್ಲಿ ನಿಂತ್ಕೋತಾ ಇದ್ದೆ. ಎಷ್ಟೊತ್ತು ಅಂತ ನಿಂತ್ಕೋಳ್ಳೋದು? ಗಂಟೆಗಟ್ಟಲೆ ಹಾಗೇ ನಿಂತ್ಕೊಂಡಿದ್ದರೆ ಹೋಗಿ ಬರೋ ಜನ ಏನಂದ್ಕೋತಾರೆ? ಅದಕ್ಕೆ ನಾನು ಒಂದು ದಿನ ‘ಉತ್ತರ ದಿಕ್ಕಿಗೆ ಸೀದಾ ಹೋಗೋಣ ಏನು ಸಿಗತ್ತೋ ನೋಡೋಣ’ ಎಂದು ಕೂತೂಹಲಕ್ಕೆ ಹುಡುಗು ಬುದ್ಧಿಯಲ್ಲಿ ನಡೆದುಬಿಟ್ಟೆ.

ಹಾಗೆ ಹೊರಟವನಿಗೆ ಡೆಡ್ಎಂಡ್ನಲ್ಲಿ ಸ್ಮಶಾನ (ಗಾಯತ್ರಿನಗರದಲ್ಲಿನ ಹರಿಶ್ಚಂದ್ರ ಘಾಟ್) ಸಿಕ್ತು. ಅಲ್ಲಿ ನೋಡ್ತೀನಿ, ನಮ್ಮ ಮನೆಗಿಂತ ತುಂಬಾ ಚೆನ್ನಾಗಿತ್ತು ಅಲ್ಲಿಯ ವಾತಾವರಣ. ದೊಡ್ಡ ದೊಡ್ಡ ಎತ್ತರದ ಮರಗಳಿದ್ದವು. ಕಲ್ಲು ಬೆಂಚುಗಳಿದ್ದವು. ಸ್ಮಶಾನದ ಒಳಗಡೆಯೇ ಒಂದು ರೀತಿಯ ರಸ್ತೆ ಥರವೂ ಇತ್ತು.

ಅಲ್ಲಿ ಕೆಂಪು, ಹಳದಿ ಬೇರೆ ಬೇರೆ ಬಣ್ಣಗಳ ಚೆಂಡೆ ಹೂವುಗಳು ಅರಳಿಕೊಂಡಿದ್ದವು. ಒಳ್ಳೆ ಗಾಳಿ ಬೆಳಕು. ನನಗೆ ಎಷ್ಟು ಇಷ್ಟ ಆಯ್ತು ಅಂದ್ರೆ ‘ಎಲ್ಲರೂ ತಮ್ಮ ಬದುಕಿನ ಅಂತ್ಯಕಾಲದಲ್ಲಿ ಇಲ್ಲಿಗೆ ಬರುತ್ತಾರೆ. ನಾನು ಬದುಕಿನ ಪ್ರಾರಂಭಕಾಲದಲ್ಲಿಯೇ ಬರುವಂತಾಯ್ತು. ಇದರಿಂದ ನನಗೆ ಖಂಡಿತ ಒಳ್ಳೆಯದಾಗ್ತದೆ’ ಎಂದು ಅಂದುಕೊಂಡು ಒಳಗೆ ಹೋದೆ. ನಂತರದ ದಿನಗಳಲ್ಲಿ ಅಲ್ಲಿಯೇ ಹೆಚ್ಚು ಸಮಯ ಕಳೆಯಲು ಶುರುಮಾಡಿಬಿಟ್ಟೆ.

ರಾತ್ರಿ ಹೊತ್ತೇ ಹೆಚ್ಚಾಗಿ ಅಲ್ಲಿಗೆ ಹೋಗುತ್ತಿದ್ದೆ. ಎಷ್ಟೋ ದಿನ ರಾತ್ರಿ ಒಂದು ಗಂಟೆಯವರೆಗೂ ಅಲ್ಲಿಯೇ ಇರುತ್ತಿದ್ದೆ. ಅಲ್ಲಿ ಯಾರದಾದರೂ ಸಮಾಧಿಯ ಮೇಲೆ ಕುಳಿತುಕೊಂಡು ಕವಿತೆಗಳನ್ನು ಬರೆಯುತ್ತಿದ್ದೆ. ಇಲ್ಲವೇ ಏನಾದರೂ ಓದ್ತಾ ಕುಳಿತಿರುತ್ತಿದ್ದೆ. ನಮ್ಮ ಮನೆಯಲ್ಲಿ ಆಗ ಲೈಟ್ ಇರಲಿಲ್ಲ. ಆದರೆ ಅಲ್ಲಿ ಕೆಲವರ ಸಮಾಧಿಯ ಮೇಲೆ ಲೈಟ್ ಹಾಕಿಸಿರುತ್ತಿದ್ದರು. ಅಮೃತಶಿಲೆಯ ಸಮಾಧಿ ಮಾಡಿಸಿರುತ್ತಿದ್ದರು. ಅದು ಚೆನ್ನಾಗಿರ್ತಿತ್ತು. ಅಲ್ಲಿ ಕುಳಿತುಕೊಂಡು ನಾನು ಪದ್ಯಗಳನ್ನು ಬರೀತಾ ಇದ್ದೆ.

ನನ್ನ ಪ್ರಥಮ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ಪುಸ್ತಕದಲ್ಲಿನ ಹೆಚ್ಚಿನ ಪದ್ಯಗಳು ಸ್ಮಶಾನದಲ್ಲಿಯೇ ಬರೆದವು. ‘ಮಸಣದ ಚೆಲುವೆಗೆ’ ಅಂತಾನೇ ಒಂದು ಪದ್ಯ ಇದೆ ನೋಡಿ ಅದರಲ್ಲಿ. ಸ್ಮಶಾನದ ಚಿತ್ರಣಗಳನ್ನೇ ಆ ಪುಸ್ತಕದಲ್ಲಿ ನಾನು ಹೆಚ್ಚು ಕೊಟ್ಟಿರೋದು. ಅಂದ್ರೆ ಸತ್ತೋಗಿ ಸಮಾಧಿಯೊಳಗಿರುವ ಈ ಶೋಷಿತ ವರ್ಗದ ಜನರೆಲ್ಲ ಎದ್ದು ಬಂದು ಕ್ರಾಂತಿ ಮಾಡಬೇಕು. ಈ ಮೂಳೆಗಳು ಮತ್ತೆ ಮನುಷ್ಯರಾಗಿ ಎದ್ದು ಬಂದು ಹೋರಾಟ ಮಾಡಿ ಅಸಮಾನತೆಯನ್ನು ಅಳಿಸಿ ಹಾಕಬೇಕು ಎಂಬ ಆಶಯ ಆ ಸಂಕಲನದಲ್ಲಿ ಇದೆ.

ಅಲ್ಲಿ ಕೂತು ನಾನು ಓದುವುದು ಬರೆಯುವುದು ಎಲ್ಲವನ್ನೂ ನೋಡಿ, ಅಲ್ಲಿನ ಕೆಲಸಗಾರರಿಗೆ ನನ್ನ ಬಗ್ಗೆ ಪ್ರೀತಿ ವಿಶ್ವಾಸ ಬೆಳೆಯಿತು. ನಾನು ಹೀಗೆ ರಾತ್ರಿ ಹೊತ್ತು ಸ್ಮಶಾನದಲ್ಲಿ ಕೂತು ಕವಿತೆಗಳನ್ನು ಬರೀತಾ ಇದ್ರೆ, ಅಲ್ಲಿ ಹೆಣಗಳನ್ನು ಸುಡುವವರು, ಸಮಾಧಿ ಮಾಡುವ ಕೆಲಸಗಾರರು ನನಗೆ ಟೀ ತಂದುಕೊಡುತ್ತಿದ್ದರು. ಯಾರೂ ಬಂದು ನನಗೆ ಡಿಸ್ಟರ್ಬ್ ಮಾಡದ ಹಾಗೆ ನೋಡಿಕೊಳ್ತಾ ಇದ್ರು. ತುಂಬ ಒಳ್ಳೆಯ ಸ್ನೇಹಿತರಾಗಿದ್ದರು ಅವರು.

ಆ ಹೆಣ ಸುಡುವವರ ಮನೆ ಕೂಡ ಸ್ಮಶಾನದ ಒಳಗಡೆಯೇ ಇತ್ತು. ನಾನು ಅವರ ಮನೆಗಳಲ್ಲಿ ಅನೇಕ ಸಲ ಊಟವನ್ನೂ ಮಾಡುತ್ತಿದ್ದೆ. ಹಾಗೆಯೇ ಅವರ ಮಕ್ಕಳಿಗೆ ರಾತ್ರಿ ಹೊತ್ತು ಪಾಠ ಕೂಡ ಹೇಳಿಕೊಡುತ್ತಿದ್ದೆ. ನಮ್ಮ ಸ್ನೇಹ ಬಹಳ ಕಾಲ ಮುಂದುವರಿಯಿತು. ಈಗಲೂ ಅವರು ನನಗೆ ಸ್ನೇಹಿತರಾಗಿಯೇ ಉಳಿದಿದ್ದಾರೆ.

ಅದು ತುಂಬ ಸಂತೋಷ ಕೊಟ್ಟ ಕಾಲ ನನಗೆ. ಅಲ್ಲಿನ ಏಕಾಂತ ನನಗೆ ತುಂಬ ಸಮಾಧಾನ ಕೊಡುತ್ತಿತ್ತು. ಕತ್ತಲೆಯಲ್ಲಿರುತ್ತಿದ್ದೆನಲ್ಲಾ, ಆ ಕತ್ತಲೆಯನ್ನೇ ಕುರಿತು ನಾನು ಪದ್ಯಗಳನ್ನು ಬರೆಯುತ್ತಿದ್ದೆ. ನಡುರಾತ್ರಿಯ ಸ್ಮಶಾನದ ರುದ್ರ ಚಿತ್ರಣ ಕಟ್ಟಿ ಕೊಡಲಿಕ್ಕೆ ಪ್ರಯತ್ನಪಟ್ಟಿದ್ದೀನಿ. ‘ಭವಿಷದ್ಗೀತೆ’ ಅಂತೊಂದು ಪದ್ಯ ಬರೆದಿದ್ದೇನೆ. ‘ಹೊಲೆ ಮಾದಿಗರ ಹಾಡು’ ಸಂಕಲನದಲ್ಲಿದೆ ಅದು. ಭೂದೇವಿಯ ಕಗ್ಗತ್ತಲ ರಾತ್ರಿಯಲ್ಲಿ ಬಂದು ನಿಂತುಕೊಂಡು ಈ ಸಮಾಜವನ್ನು ಬದಲಾಯಿಸುವಂತೇ ಜನರಿಗೆ ಪ್ರೇರಣೆಯನ್ನು ಕೊಡುತ್ತಾಳೆ. ಶೋಷಣೆ, ದೌರ್ಜನ್ಯವನ್ನು ನಿವಾರಿಸಿ ಎಂದು ಪ್ರೇರೇಪಿಸುವ ಚಿತ್ರಣವಿರುವ ಪದ್ಯವದು.

ಯಾರಾದರೂ ಸತ್ತೋದಾಗ ಸಮಾಧಿ ಮಾಡಿ, ಸ್ಮಶಾನದ ಕೆಲಸಗಾರರು ಮರಣ ಪ್ರಮಾಣ ಪತ್ರ ಕೊಡಬೇಕಲ್ಲಾ. ಕೆಲವು ಸಲ ಕೆಲಸಗಾರರು ಬೇರೆಲ್ಲೋ ಹೋಗಬೇಕಾಗಿದ್ದಾಗ ಆ ಕೆಲಸ ನನಗೆ ವಹಿಸಿ ಹೋಗುತ್ತಿದ್ದರು. ಆಗೆಲ್ಲಾ ನಾನೇ ಸಾವಿನ ಪ್ರಮಾಣಪತ್ರ ಕೊಡುತ್ತಿದ್ದೆ. ಹೀಗೆ ಹಲವಾರು ಸಾವಿನ ಪ್ರಮಾಣ ಪತ್ರಗಳನ್ನು ಕೊಟ್ಟಿದ್ದೇನೆ ನಾನು.

ಈಗ ಎಲ್ಲಾದರೂ ಆ ಕಡೆಹೋದಾಗ ಹಳೆಯ ನೆನಪುಗಳು ಬರುತ್ತವೆ. ಅಲ್ಲಿನ ಕೆಲಸಗಾರರ ಜತೆ ಮಾತನಾಡಿಕೊಂಡು ಬರುತ್ತೇನೆ. ಈಗ ಅವರ ಮಕ್ಕಳು ಮೊಮ್ಮಕ್ಕಳು ಅಲ್ಲಿದ್ದಾರೆ. ಅವರಿಗೂ ನನ್ನ ಬಗ್ಗೆ ಅದೇ ಪ್ರೀತಿ ಇದೆ. ಆಗೆಲ್ಲಾ ನಾನು ದೆವ್ವ–ದೇವರುಗಳ ಬಗ್ಗೆ ತುಂಬ ಯೋಚನೆ ಮಾಡುತ್ತಿದ್ದರಿಂದಲೂ ಆ ಸ್ಮಶಾನ ನನಗೆ ಹೆಚ್ಚು ಆಕರ್ಷಕವಾಗಿ ಕಂಡಿತು. ಏನಾದ್ರೂ ಹೊಸ ವಿಷಯಗಳು ಗೊತ್ತಾಗಬಹುದು ಅಂತ ಕುತೂಹಲ.

ಆದರೆ ನನಗೆ ಅಲ್ಲಿ ದೆವ್ವಗಳ ಅನುಭಗಳಿಗಿಂತಲೂ ಹೆಚ್ಚಾಗಿ ಮಾನವೀಯ ಅನುಭವ ಆಯಿತು. ಅಲ್ಲಿನ ಸ್ನೇಹಿತರ ಮಾನವೀಯ ಪ್ರೀತಿ, ಅಂತಃಕರಣ ನನ್ನ ಅನುಭವಕ್ಕೆ ಬಂತು. ಸ್ಮಶಾನದಲ್ಲಿ ಪಿಶಾಚಿಗಳಿದ್ದಾವೆ ಅನ್ನುವುದಕ್ಕಿಂತ ದೈವಿಕ ಗುಣವುಳ್ಳ ಜನರಿದ್ದಾರೆ ಅನ್ನುವ ಭಾವನೆ ಬಂತು. ಹೀಗೆ ಸಾಯುವ ಮೊದಲೇ ನನ್ನ ಜೀವನದ ಭಾಗವಾದ ಸ್ಮಶಾನ ಬದುಕಿಗೆ ಪ್ರೇರಣೆ ನೀಡಿತು. ಈಗಲೂ ನನ್ನ ಕವಿತೆಗಳಲ್ಲಿ ಸ್ಮಶಾನದ ಚಿತ್ರಗಳು ಆಗಾಗ ಬರುತ್ತಿರುತ್ತವೆ.

ನನ್ನ ಸ್ಮಶಾನದ ದಿನಗಳಲ್ಲಿಯೇ ಮುಂದೆ ನಾನು ಬಾಬಾ ಅಂಬೇಡ್ಕರ್ ಪ್ರಭಾವದಿಂದ ಹೋರಾಟಗಳಿಗೆ ಸೇರಿಕೊಂಡೆ. ವಿದ್ಯಾರ್ಥಿ ನಾಯಕನಾಗಿದ್ದೆ. ಡಿ. ಬಸವಲಿಂಗಪ್ಪನವರ ಬೂಸಾ ಚಳುವಳಿಯಲ್ಲಿಯೂ ಭಾಗವಹಿಸಿದೆ. ಪ್ರೊ. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಾವು ಚಳುವಳಿ ಮಾಡುತ್ತಿದ್ದೆವು. ಅವರು ಬರುತ್ತಿರಲಿಲ್ಲ. ಸರ್ಕಾರಿ ವಿರೋಧಿ ಕರಪತ್ರಗಳನ್ನು ಮುದ್ರಿಸಿ ನಮಗೆ ಕೊಟ್ಟುಬಿಡ್ತಾ ಇದ್ರು.

ಅದನ್ನು ನಾವು ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಂಡು ಯಾರದೋ ಪಾಸ್ ಪಡೆದುಕೊಂಡು ವಿಧಾನಸೌಧದ ಒಳಗೆ ಪ್ರವೇಶ ಪಡೆದುಕೊಂಡು ಬಿಡುತ್ತಿದ್ದೆ. ಅಲ್ಲಿ ಗ್ಯಾಲರಿಯಲ್ಲಿ ಕುಳಿತು ಸರ್ಕಾರಿ ವಿರೋಧಿ ಧೋರಣೆಯ ಕರಪತ್ರಗಳನ್ನು ಧಿಕ್ಕಾರ ಕೂಗಿಕೊಳ್ಳುತ್ತಾ ಕೆಳಗಡೆ ಎಸಿತಾ ಇದ್ವಿ. ಪೊಲೀಸರಿಂದ ಬಂಧನಕ್ಕೊಳಗಾಗ್ತಾ ಇದ್ವಿ. ಸ್ವಲ್ಪ ಹೊಡೆತಗಳೂ ಬೀಳ್ತಾ ಇದ್ವು. ಅವೆಲ್ಲ ನಮಗೆ ಸಾಮಾನ್ಯವಾಗಿಬಿಟ್ಟಿದ್ದವು. ಆಗಲೇ ಬೇಕಾದ ಕೆಲಸಗಳ ಮುಂದೆ ಈ ಸಣ್ಣ ಪುಟ್ಟ ಏಟುಗಳು ಲೆಕ್ಕಕ್ಕೇ ಇರಲಿಲ್ಲ ನಮಗೆ.

ಹೀಗೆ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡುತ್ತಿದ್ದವನು ಮುಂದೊಂದು ದಿನ ನಾನೇ ವಿಧಾನಸೌಧದಲ್ಲಿ ಭಾಷಣ ಮಾಡುವ ಸ್ಥಿತಿ ಬಂತು. 1988ರಲ್ಲಿ ರಾಮಕೃಷ್ಣ ಹೆಗಡೆ ಅವರು ನನ್ನನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದರು. ನಂತರ ಹನ್ನೆರಡು ವರ್ಷ ನಾನು ಎಂಎಲ್ಸಿ ಆಗಿದ್ದೆ. ರಾಮಕೃಷ್ಣ ಹೆಗಡೆ ನನ್ನ ಗುರುಗಳು. ಅವರ ಬಗ್ಗೆ ಈಗಲೂ ನನಗೆ ಪೂಜ್ಯ ಭಾವನೆ ಇದೆ. ಎಲ್ಲ ಜಾತಿಯವರಿಗೂ ನ್ಯಾಯ ದೊರಕಿಸುವ, ಹಿತವನ್ನು ಬಯಸುವ ರಾಜಕಾರಣವನ್ನು ಕಲಿತಿದ್ದು ರಾಮಕೃಷ್ಣ ಹೆಗಡೆ ಅವರಿಂದ ಮತ್ತು ಮಾರ್ಕ್ಸ್ ವಾದದಿಂದ.

ವಿಧಾನ ಸೌಧದಲ್ಲಿ ಕೆಲಸ ಮಾಡಿದ್ದೊಂದು ವಿಭಿನ್ನವಾದ ಅನುಭವ. ಸ್ಮಶಾನದಲ್ಲಿದ್ದವನು ವಿಧಾನಸೌಧಕ್ಕೆ ಬಂದೆ. ಸ್ಮಶಾನದಲ್ಲಿ– ಸಮಾಜದಲ್ಲಿ ಕಷ್ಟಪಡುತ್ತಿದ್ದ, ನೋವು ಅನುಭವಿಸುತ್ತಿದ್ದ ಜನಗಳ ಧ್ವನಿಯಾಗಲಿಕ್ಕೆ ವಿಧಾನಸೌಧದಲ್ಲಿ ನನಗೆ ಸಹಾಯ ಆಯಿತು. ತಿಂಗಳಿಗೆ ಎರಡು ಸಾವಿರ, ಒಂದೂವರೆ ಸಾವಿರ ಸಂಬಳ ಪಡೆದುಕೊಳ್ಳುವವರು, ಗುತ್ತಿಗೆ ಕೆಲಸಗಾರರು, ಹಾಗೆಯೇ ಸರ್ಕಾರದಲ್ಲಿಯೇ ಒಂದು ರೀತಿ ಜೀತಪದ್ಧತಿ ಇರುತ್ತದಲ್ಲ.

ಸರ್ಕಾರ ಜೀತಪದ್ಧತಿ ಹೋಗಬೇಕು ಎಂದು ಪ್ರಯತ್ನಿಸುವುದು ಬೇರೆ ವಿಷಯ. ಆದರೆ ಅದರಲ್ಲಿಯೇ ಇರುವ ಸರ್ಕಾರಿ ಜೀತ ಪದ್ಧತಿ ಇರುತ್ತದಲ್ಲ, ಅಗ್ನಿಶಾಮಕರು, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಅನೇಕ ಕಾಯಿಲೆಯಿಂದ ನರಳುತ್ತಿರುವವರು ಅವರ ಪರವಾಗಿ ಧ್ವನಿ ಎತ್ತುವುದಕ್ಕೆ ನನಗೆ ವಿಧಾನಸೌಧ ತುಂಬ ಸಹಾಯ ಮಾಡ್ತು.

ಬೀದಿಯಲ್ಲಿ ಕೂಗುತ್ತಾ ಹೋರಾಟ ಮಾಡುತ್ತಿದ್ದದ್ದನ್ನೇ ವಿಧಾನಸೌಧದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಲು ಸಾಧ್ಯವಾಯಿತು. ಬೀದಿಯಲ್ಲಿ ಕಾರ್ಮಿಕರು ರೈತರು, ದಲಿತರು, ಅಸ್ಪರ್ಶ್ಯತಾ ನಿವಾರಣೆ, ಜಾತಿ ವಿನಾಶ ಅಂತೆಲ್ಲ ವರ್ಷಗಟ್ಟಲೆ ಹೋರಾಟ ಮಾಡಿ ಪೊಲೀಸರಿಂದ ಏಟು ತಿಂದು ಲಾಕಪ್ ಸೇರ್ತಾ ಇದ್ನಲ್ಲಾ, ಅದೇ ಮಾತುಗಳನ್ನು ವಿಧಾನಸೌಧದಲ್ಲಿ ಆಡಿದಾಗ ಪತ್ರಿಕೆಗಳಲ್ಲೆಲ್ಲ ಬಂತು. ಒಬ್ಬ ಗೌರವಾನ್ವಿತ ವ್ಯಕ್ತಿ ಅನ್ನೋ ಥರ ಜನಗಳ ಪ್ರೀತಿಗೆ ಪಾತ್ರನಾದೆ. ವಿಧಾನಸೌಧ ಎನ್ನುವುದು ಜನರ ಕಣ್ಣೀರು ವರೆಸುವ ಒಂದು ಕೇಂದ್ರವಾಗಬೇಕು. ನಾನು ಪ್ರಾಮಾಣಿಕವಾಗಿ ಆ ಪ್ರಯತ್ನವನ್ನು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.