ಸೋಮವಾರ, ಮಾರ್ಚ್ 8, 2021
31 °C

ಸ್ಮಾರ್ಟ್‌ಫೋನ್ ಬಳಕೆ: ಚಿಣ್ಣರ ಸೂಕ್ತ ವಯಸ್ಸು ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್ ಬಳಕೆ: ಚಿಣ್ಣರ ಸೂಕ್ತ ವಯಸ್ಸು ಯಾವುದು?

ಮಕ್ಕಳು ಸ್ವತಂತ್ರ್ಯವಾಗಿ ಕಾರ್ ಓಡಿಸಲು ಯಾವ ವಯಸ್ಸಿಗೆ ಕಾರ್ ಕೀ ಕೊಡಬೇಕು? ಎಂದು ಬಹಳಷ್ಟು ಪೋಷಕರು ಕೆಲವೇ ವರ್ಷಗಳ ಹಿಂದೆ ಯೋಚಿಸುತ್ತಿದ್ದರು. ಈಗ  ಅವರ ಆಲೋಚನೆ ಬದಲಾಗಿದೆ.  ಮಕ್ಕಳ ಯಾವ ವಯಸ್ಸಿಗೆ ಅವರಿಗೆ ಸ್ಮಾರ್ಟ್‌ಫೋನ್ ಬಳಸಲು ಕೊಡಬೇಕು ಎನ್ನುವುದು ಅವರ ಸದ್ಯದ ಚಿಂತೆಯಾಗಿದೆ.ಸ್ಮಾರ್ಟ್ ಫೋನ್‌, ಅಂತರ್‌ಜಾಲ  ಎಂಬ ವಿಶಾಲ ಪರಿಧಿಗೆ ನಮ್ಮನ್ನು ತೆರೆದಿಡುತ್ತದೆ. ಅಂತರ್‌ಜಾಲದಿಂದ ಅನೇಕ ಅನುಕೂಲಗಳಿವೆ, ಹಾಗೆಯೇ ಅಪಾಯಗಳೂ ಇವೆ. ಕಾರ್ ಡ್ರೈವಿಂಗ್ ವಿಷಯ  ಬೇರೆ. ಕೆಲವು ದೇಶಗಳಲ್ಲಿ ಮಕ್ಕಳು 16ನೇ ವಯಸ್ಸಿನಿಂದ ಕಾರ್ ಓಡಿಸಲು ಕಾನೂನಿನಲ್ಲಿ ಅವಕಾಶ ಇದೆ.ಆದರೆ ಸ್ಮಾರ್ಟ್‌ಫೋನ್ ಬಳಕೆ ಅಂದಾಗ ಪೋಷಕರು ಮಕ್ಕಳಿಗೆ ಯಾವ ವಯಸ್ಸಿಗೆ ಸ್ಮಾರ್ಟ್‌ಫೋನ್ ಕೊಡಬೇಕೆಂದು ನಿರ್ಧರಿಸಲು ಕಾನೂನಿನಲ್ಲಿ ಯಾವ ಮಾರ್ಗಸೂಚಿಯೂ ಇಲ್ಲ.ಇಂದಿನ ಮಕ್ಕಳು ಬಹಳ ಸಣ್ಣ ವಯಸ್ಸಿಗೆ ಸ್ಮಾರ್ಟ್‌ಫೋನ್ ಬಳಸುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಂಶೋಧನಾ ಸಂಸ್ಥೆ ‘ಇನ್‌ಫ್ಲುಯೆನ್ಸ್ ಸೆಂಟರ್’ ನ ವರದಿಯ  ಪ್ರಕಾರ, ಮಕ್ಕಳು  ಸರಾಸರಿ  ತಮ್ಮ 10ನೇ ವಯಸ್ಸಿಗೆ ಸ್ಮಾರ್ಟ್‌ಫೋನ್ ಹೊಂದಿರುತ್ತಾರೆ. ಇನ್ನೂ ಕೆಲವು ಮಕ್ಕಳು ಏಳನೇ ವಯಸ್ಸಿಗೆ ಸ್ವಂತ ಸ್ಮಾರ್ಟ್ ಪೋನ್‌ ಹೊಂದಿರುತ್ತಾರೆಂದು ಅಂತರ್‌ಜಾಲ ಸುರಕ್ಷತಾ ತಜ್ಞರು ಹೇಳುತ್ತಾರೆ.ಮಕ್ಕಳು ಇನ್ನೂ ಸಣ್ಣ ವಯಸ್ಸಿಗೆ ಸ್ಮಾರ್ಟ್‌ಫೋನ್ ಬಳಸುವುದು ಜನಪ್ರಿಯ ಆಗಬಹುದು ಎಂದು ಅನಿಸುತ್ತಿದೆ. ಪೋಷಕರು ಕೆಲಸದ ಒತ್ತಡದಿಂದ ದಣಿದಿರುತ್ತಾರೆ. ಮಕ್ಕಳ ಜೊತೆ ಮಾತನಾಡಲು, ಆಟ ಆಡಲೂ ಆಗದಷ್ಟು ಆಯಾಸ ಆಗಿರುತ್ತದೆ. ಹೀಗಾಗಿ  ಸ್ಮಾರ್ಟ್‌ಫೋನ್ ಅನ್ನು ಮಕ್ಕಳ ಕೈಗಿಟ್ಟು ಸುಮ್ಮನಾಗುತ್ತಾರೆ ಎಂದು ಇನ್‌ಫ್ಲುಯೆನ್ಸ್ ಸೆಂಟರ್‌ನ ಮುಖ್ಯ ಕಾರ್ಯದರ್ಶಿ ಸ್ಟ್ಯಾಸಿ ಡಿಬ್ರೋಫ್ ಅಭಿಪ್ರಾಯ ಪಡುತ್ತಾರೆ.ಸರ್ಕಾರೇತರ  ಸಂಸ್ಥೆಯಾದ  ಕಾಮನ್ ಸೆನ್ಸ್ ಮೀಡಿಯಾ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಜೇಮ್ಸ್ ಪಿ ಸ್ಟೇಯರ್ ಹೇಳುವಂತೆ, ‘ಅತಿ ಚಿಕ್ಕ ವಯಸ್ಸಿಗೆ ಮಕ್ಕಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿದೆ’.  ಯಾವ ವಿಷಯ ಮತ್ತು ಉತ್ಪನ್ನಗಳು ಇಂಟರ್‌ನೆಟ್ ಮೂಲಕ ಮಕ್ಕಳಿಗೆ ನಿಲುಕಬೇಕೆಂದು ಈ ಸಂಸ್ಥೆ   ವಿಶ್ಲೇಷಿಸುತ್ತದೆ. ಪಿ. ಸ್ಟೇಯರ್ ತಮ್ಮ ಕುಟುಂಬದ ಮಕ್ಕಳು ವ್ಯಕ್ತಿ–ವ್ಯಕ್ತಿಯ ನಡುವಿನ  ನೇರ ಸಂವಹನದ ಮಹತ್ವ ಅರಿತ ಮೇಲೆ,   ಪ್ರೌಢ ಶಾಲೆ ತಲುಪಿದ ನಂತರವೇ ಸ್ಮಾರ್ಟ್‌ಫೋನ್ ಬಳಸಬೇಕೆಂದು ನಿರ್ಧರಿಸಿದ್ದಾರೆ.ಆದರೆ, ಸ್ಟೇಯರ್ ಮತ್ತೊಂದು ಸಂಗತಿ ಹೇಳುತ್ತಾರೆ. ಬೇರೆ ಪೋಷಕರು ತಮ್ಮ ಮಕ್ಕಳು ಚಿಕ್ಕ ವಯಸ್ಸಿಗೆ ಸ್ಮಾರ್ಟ್‌ಫೋನ್ ಬಳಸಬಹುದೆಂದು ನಿರ್ಧರಿಸಬಹುದು. ಕೇವಲ ವಯಸ್ಸು ಎಲ್ಲಕ್ಕೂ ಮಾನದಂಡ ಅಲ್ಲ. ಎಲ್ಲ ಮಕ್ಕಳ ಬೌದ್ಧಿಕ, ಮಾನಸಿಕ ಸಾಮರ್ಥ್ಯ ಬೇರೆ ಬೇರೆ ಆಗಿರುತ್ತದೆ.ಸಂಶೋಧನೆ

ಕೆಲವು ಅಂಕಿ-ಅಂಶಗಳನ್ನು ನೋಡುವುದಾದರೆ, ಸ್ಮಾರ್ಟ್‌ಫೋನ್ ಮತ್ತು ಅಂತರ್‌ಜಾಲ ಸುರಕ್ಷತೆಯ ಬಗ್ಗೆ ವಿಯನ್‌ಬರ್ಗರ್ ‘ದಿ ಬೋಗಿಮ್ಯಾನ್ : ಅಂಡ್ ಹೀ ಈಸ್ ಯುವರ್ ಚೈಲ್ಡ್ಸ್ ಬ್ಯಾಕ್ ಪಾಕೆಟ್’ ಪುಸ್ತಕ ಬರೆದಿದ್ದಾರೆ. ಈಕೆ ಕಳೆದ 18 ತಿಂಗಳುಗಳಲ್ಲಿ 70 ಸಾವಿರ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಮಕ್ಕಳು ಐದನೇ ತರಗತಿಯಲ್ಲಿಯುವಾಗಲೇ ಲೈಂಗಿಕತೆಗೆ ತೊಡಗಿಸಿಕೊಳ್ಳುತ್ತಾರೆ. ಎಂಟನೇ ವಯಸ್ಸಿಗೆ ಅಶ್ಲೀಲ ಚಿತ್ರಗಳನ್ನು ನೋಡಲು ಶುರು ಮಾಡಿರುತ್ತಾರೆ. 11 ನೇ ವಯಸ್ಸಿಗೆ ಅಶ್ಲೀಲ ಚಿತ್ರ ವೀಕ್ಷಣೆ ಚಟವಾಗಿ ಪರಿಣಮಿಸಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ಕಾಮನ್ ಸೆನ್ಸ್ ಮೀಡಿಯಾ ಸಂಸ್ಥೆಯು  1,240 ಪೋಷಕರು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದೆ. ಶೇಕಡ 50ರಷ್ಟು ಮಕ್ಕಳು ಸ್ಮಾರ್ಟ್‌ಫೋನ್‌ ವ್ಯಸನಕ್ಕೆ ಒಳಗಾಗಿದ್ದಾರೆ ಎಂದು  ಒಪ್ಪಿಕೊಂಡಿದ್ದಾರೆ.ಮತ್ತೊಂದು ಮುಖ್ಯವಾದ ಅಂಶವೆಂದರೆ ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಸುವ ಮಕ್ಕಳು ಬಹು ಬೇಗ ಉದ್ವೇಗಕ್ಕೆ ಒಳಗಾದರೆ, ಪೋಷಕರು ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯು  ಮಕ್ಕಳಲ್ಲಿ ಭಾವೋದ್ವೇಗ ನಿಯಂತ್ರಣ ಶಕ್ತಿ ಕ್ಚೀಣಿಸಲು ಕಾರಣವಾಗುತ್ತದೆ.ಸ್ಮಾರ್ಟ್‌ಫೋನ್‌ನಿಂದ ಅನೇಕ ಅನುಕೂಲಗಳಿರುವುದು ನಿಜ. ಬಹಳಷ್ಟು ಉಪಯುಕ್ತ ಆ್ಯಪ್‌ಗಳನ್ನು ಮಕ್ಕಳು ಬಳಸಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳಿವೆ. ಸ್ನೇಹಿತರ ಜತೆ ಮಾತನಾಡಲು, ಬೇಕೆಂದ ಮಾಹಿತಿ ಪಡೆಯಲು ಅಗಣಿತ ಜಾಲತಾಣಗಳಿಗೆ ಸಂಪರ್ಕಿಸಲು ಸ್ಮಾರ್ಟ್‌ಫೋನ್ ಸುಲಭ ದಾರಿ.ಆದರೆ, ಮಕ್ಕಳನ್ನು ದಾರಿ ತಪ್ಪಿಸುವಲ್ಲಿ ಸ್ಮಾರ್ಟ್‌ಫೋನ್ ಮತ್ತು ಅಂತರ್‌ಜಾಲ ಮುಂದಿದೆ. ಲೈಂಗಿಕತೆ ಪ್ರಚೋದಿಸುವ, ಆನ್‌ಲೈನ್ ಬೆದರಿಸುವಿಕೆಯಂತಹ  ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಪ್ರೌಢ ಶಾಲಾ ಮಕ್ಕಳೂ ಇದಕ್ಕೆ ಹೊರತಲ್ಲ. ಕಳೆದ ವರ್ಷ ಕೊಲೆರಾಡೋ  ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಣ ಗಳಿಸುವ ಉದ್ದೇಶಕ್ಕೆ  ತಮ್ಮದೇ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ  ಹಾಕುವ ದಂಧೆಗೆ ಸಿಲುಕಿದ್ದರು.‘ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಸಲು ಕೊಡುವುದನ್ನು ನಿಲ್ಲಿಸುವುದಾದರೆ, ಕಂಪ್ಯೂಟರ್, ಟ್ಯಾಬ್ಲೆಟ್ಸ್‌ನಂತಹ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಾರೆ. ಆದರೆ ಸ್ಮಾರ್ಟ್‌ಫೋನ್ ಎಲ್ಲ ಕಡೆ ಒಯ್ಯಬಹುದು. ಪೋಷಕರಿಗೆ ತಮ್ಮ ಮಕ್ಕಳು ಸ್ಮಾರ್ಟ್‌ಫೊನ್‌ನಲ್ಲಿ ಏನು ಮಾಡುತ್ತಿದ್ದಾರೆಂದು ಗಮನಿಸಲು ಆಗದೆ ಇರಬಹುದು’ ಎಂದೂ  ವೆಯಿನ್‌ಬರ್ಗ್ ಹೇಳುತ್ತಾರೆ.ಜವಾಬ್ದಾರಿ

ಪೋಷಕರು ಯಾವಾಗ ತಮ್ಮ ಮಕ್ಕಳು ಸ್ಮಾರ್ಟ್‌ಫೋನ್ ಬಳಸಬೇಕೆಂದು ನಿರ್ಧರಿಸಿದಾಗ, ಕೇವಲ ಅಕ್ಷರ ರೂಪದ ಸಂದೇಶ ಕಳುಹಿಸುವ, ಕರೆಗಳನ್ನು ಸ್ವೀಕರಿಸುವ, ಕರೆ ಮಾಡುವ ಮೊಬೈಲ್ ಕೊಟ್ಟು, ಮಗು  ಆ ಸಾಧನವನ್ನು ಜವಾಬ್ದಾರಿಯಿಂದ ಬಳಸುತ್ತಿದೆಯೇ ಎಂದು ಗಮನಿಸಬೇಕು.ಲಿನ್ ಮಸ್ಕಟ್ ಅವರು ತಮ್ಮ 10 ವರ್ಷದ ಮಗ ಬೇಸಿಗೆ ಶಿಬಿರದಲ್ಲಿ ಇರುವಾಗ ಅವನೊಂದಿಗೆ ಮಾತನಾಡಲು ಒಂದು ಮೊಬೈಲ್ ಕೊಳ್ಳಲು ನಿರ್ಧರಿಸುತ್ತಾರೆ. ಮಗನಿಗೆ  ಫೋನ್ ಕೊಡಿಸುತ್ತಾರೆ. ಈ ಫೋನ್  ಅಕ್ಷರ ರೂಪದ ಸಂದೇಶ ಕಳುಹಿಸಲು, ಕರೆ ಮಾಡಲು ಮಾತ್ರ ಬಳಸಬಹುದಾಗಿರುತ್ತದೆ. ಜೊತೆಗೆ ಫೋನ್‌ನಲ್ಲಿರುವ ಇತರ ಸಂಪರ್ಕ ಸಂಖ್ಯೆಗಳಿಗೆ ಮಗು ಕರೆ ಮಾಡದಂತೆ ಬಂದ್ ಮಾಡುವ ಸೌಲಭ್ಯ ಸಹ ಇರುತ್ತದೆ.ಮಸ್ಕಟ್ ಅವರ ಅಭಿಪ್ರಾಯದಂತೆ ಅವರು ತಮ್ಮ ಮಗ ಸ್ಮಾರ್ಟ್‌ಫೋನ್‌ಗಳಿಂದ ಆಗುವ ಅನಾಹುತಗಳಿಗೆ ಬಲಿಯಾಗುತ್ತಾನೆಂಬ ಒಂದೇ ಕಾರಣಕ್ಕೆ  ತಮ್ಮ ಮಗುವನ್ನು ದೂರ ಇಡಲಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್ ಬಳಸುವ ಇತರ ಮಕ್ಕಳ ಮೇಲೆ ಆದ ಪರಿಣಾಮವನ್ನೂ ಅವರು ಗಮನಿಸಿ ರೋಸಿ ಹೋದರು.‘ನನ್ನ ಮಗನ ಸ್ನೇಹಿತರು ಸದಾ ಸ್ಮಾರ್ಟ್‌ಫೋನ್ ಬಳಸುವುದನ್ನು ನೋಡಿದೆ. ಇದು ಸಮಾಜಘಾತುಕ ಕೃತ್ಯ ಅನ್ನಿಸಿತು’ ಎನ್ನುವ ಮಸ್ಕಟ್ ಮಗನಿಗೆ ಸ್ಮಾರ್ಟ್‌ಫೋನ್ ಕೊಡುವ ಮುನ್ನ ಸ್ಮಾರ್ಟ್‌ವಾಚ್ ಬಳಸಿ ಅವನಿಗೆ ಅದನ್ನು ಜವಾಬ್ದಾರಿಯಿಂದ ಬಳಸುವ ಪಾಠ ಹೇಳಲು ನಿರ್ಧರಿದ್ದೇನೆ ಎನ್ನುತ್ತಾರೆ.ವೆಯಿನ್‌ಬರ್ಗ್ ಸ್ಮಾರ್ಟ್‌ಫೋನ್ ಅನ್ನು ಮಕ್ಕಳಿಗೆ ಕೊಡುವ ಮುನ್ನ ಪೋಷಕರು ಯಾವೆಲ್ಲ ಒಪ್ಪಂದಗಳನ್ನು ಮಾಡಿಕೊಳ್ಳಬೇಕೆಂದು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಅದರ ಪ್ರಕಾರ ನಗ್ನ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ, ಆನ್‌ಲೈನ್ ಮೂಲಕ ಸ್ನೇಹ ಬೆಳೆಸಿದ ಅಪರಿಚಿತರನ್ನು ಭೇಟಿಯಾಗುವಂತಿಲ್ಲ. ಹೀಗೆ ಮಗ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಸ್ಮಾರ್ಟ್‌ಫೋನ್ ಅನ್ನು ಹಸ್ತಾಂತರಿಸಬೇಕು ಎಂದು ಹೇಳುತ್ತಾರೆ.ಪೋಷಕರ ನಿಯಂತ್ರಣ

ಮಕ್ಕಳು ಸ್ಮಾರ್ಟ್‌ಫೋನ್ ಬಳಸುವಾಗ ಕೆಲವು ಸೆಟ್ಟಿಂಗ್‌ಗಳ ಮೂಲಕ ಯಾವ ಸೌಲಭ್ಯ ಮಕ್ಕಳಿಗೆ ನಿಲುಕಬೇಕು ಎಂದು ನಿರ್ಧರಿಸಬಹುದು.

ಆ್ಯಪಲ್‌ನ ಐಫೋನ್‌ಗಳಲ್ಲಿ ಕೆಲವು ಫೀಚರ್‌ಗಳನ್ನು ಆ್ಯಪ್‌ಗಳನ್ನು ಬಳಸದಂತೆ ತಡೆಯುವ ಸೌಲಭ್ಯ ಇರುತ್ತದೆ. ಪೋಷಕರು ತಮ್ಮ ಮಗ ಯಾವುದನ್ನು ನೋಡಬೇಕು ಅಥವಾ ನೋಡಬಾರದೆಂದು ನಿಯಂತ್ರಿಸಬಹುದಾಗಿದೆ. ಪೋಷಕರು ತಮ್ಮ ಮಗು ಬೇಡದ ವಿಷಯಗಳನ್ನು ಅಥವಾ ವಯಸ್ಸಿಗೆ ಮೀರಿದ ಅಶ್ಲೀಲ ಚಿತ್ರಗಳನ್ನು ನೋಡದಂತೆ ತಡೆಯಲು ಇಂತಹ ತಂತ್ರಜ್ಞಾನ ನೆರವಿಗೆ ಬರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.