ಶನಿವಾರ, ಫೆಬ್ರವರಿ 27, 2021
28 °C
ಕೊಪ್ಪಳ: ಪೌರಕಾರ್ಮಿಕರು, ಸಾರ್ವಜನಿಕರೊಂದಿಗೆ ಸ್ನೇಹ ದಿನಾಚರಣೆ

ಸ್ವಚ್ಛತೆ ಅರಿವು ಮೂಡಿಸಲು ಗೆಳೆತನ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಚ್ಛತೆ ಅರಿವು ಮೂಡಿಸಲು ಗೆಳೆತನ ವೇದಿಕೆ

ಕೊಪ್ಪಳ: ಬೆಳಿಗ್ಗೆ ಸ್ವಚ್ಛತಾ ಸ್ಥಳದತ್ತ ಧಾವಿಸಿದ ನಗರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿ, ದೇವರಾಜ ಅರಸು ಕಾಲೊನಿಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಕರೆಸಿ ಪ್ರೀತಿಯಿಂದ ಮಾತನಾಡಿಸಿದರು.ಇಂದು ನಗರಸಭೆ ಅಧ್ಯಕ್ಷರದ್ದು ಎಂದಿನಂತೆ ನಗರ ಸಂಚಾರವಲ್ಲ. ಬದಲಾಗಿ ಇಡೀ ನಗರಸಭೆ ಪರಿವಾರದವರು ಸ್ವಚ್ಛತಾ ಕಾರ್ಮಿಕರ ಜತೆ ಸೇರಿ ಸ್ನೇಹ ದಿನ ಆಚರಿಸಿದರು. ಇದೇನು ಇದ್ದಕ್ಕಿದ್ದಂತೆಯೇ ಕೈಗೊಂದು ಬಣ್ಣದ ಪಟ್ಟಿ ಕಟ್ಟಿ ‘ಹ್ಯಾಪಿ ಫ್ರೆಂಡ್‌ಷಿಪ್‌ ಡೇ’ ಎಂದಾಗ ಕಾರ್ಮಿಕರಿಗೂ ತಕ್ಷಣಕ್ಕೆ ಅರ್ಥವಾಗಲಿಲ್ಲ. ಕೊನೆಗೂ ಗೆಳೆತನದ ಮಹತ್ವವನ್ನು ಹೇಳಿ ಇದು ಗೆಳೆತನದ ದಿನಾಚರಣೆ ಎಂದು ಸಿಬ್ಬಂದಿ ವಿವರಿಸಬೇಕಾಯಿತು.ಕಾರ್ಮಿಕರು ದಿನಾ ನಗರವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ, ಅವರನ್ನು ಪ್ರೀತಿಯಿಂದ ಮಾತನಾಡಿಸುವುದನ್ನೂ ಮರೆತುಬಿಡುತ್ತೇವೆ. ನಗರದ ಸ್ವಚ್ಛತೆ ಕಾಪಾಡುವಲ್ಲಿ ಕಾರ್ಮಿಕರಷ್ಟೇ ನಮ್ಮ ಜವಾಬ್ದಾರಿಯೂ ಇದೆ. ಆದ್ದರಿಂದ  ಅವರ ಭಾವನೆಗಳನ್ನು ಆಲಿಸುವುದರೊಂದಿಗೆ ಸ್ನೇಹ ದಿನದ ಹೆಸರಿನಲ್ಲಿ ಅವರೊಂದಿಗೆ ಕೆಲಕಾಲ ಕಳೆದಿದ್ದೇವೆ ಎಂದು ನಗರಸಭೆ ಸಿಬ್ಬಂದಿ ಹೇಳಿದರು.ನಗರಸಭೆಯವರು ಇಂತಹ ಕಾರ್ಯಕ್ರಮ ಮಾಡಿರುವುದಕ್ಕೆ ನಮಗೆ ಖುಷಿಯಾಗಿದೆ. ಸ್ನೇಹದಿನವೆಂದರೆ ನಮಗೆ ಗೊತ್ತಿಲ್ಲ. ಕಚೇರಿ ಕೊಠಡಿಗಳೊಳಗಿರುವವರು, ಗಣ್ಯರು ನಮ್ಮೊಂದಿಗೆ ಕೆಲಕಾಲ ಕಳೆದಿದ್ದಾರೆ. ಇದೇ ವಿಶೇಷ.ಇದೇ ರೀತಿ ನಮ್ಮ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಬೇಕು. ನಿವೇಶನ, ಉದ್ಯೋಗ ಕಾಯಂ, ಸಕಾಲದಲ್ಲಿ ವೇತನ ಇಂಥ ಸಣ್ಣಪುಟ್ಟ ಬೇಡಿಕೆಗಳಿಗೆ ಸ್ಪಂದಿಸಿದರೆ ಈ ಆಚರಣೆಗೆ ಇನ್ನೂ ಮಹತ್ವ ಸಿಗುತ್ತದೆ ಎಂದು ಕಾರ್ಮಿಕರು ಹೇಳಿದರು.ಈ ದಿನಾಚರಣೆ ನಮ್ಮನ್ನು ಮಾನವೀಯ ಕಾಳಜಿಯಿಂದ ನೋಡುವಂತಾಗಬೇಕು. ಸ್ವಚ್ಛತೆ, ಸಾರ್ವಜನಿಕರ ಜವಾಬ್ದಾರಿ ಮನದಟ್ಟು ಮಾಡುವಲ್ಲಿ ಇಂಥ ಆಚರಣೆಗಳು ಪೂರಕ ಎಂದು ಕಾರ್ಮಿಕರು ಅಭಿಪ್ರಾಯಪಟ್ಟರು.ನಗರಸಭೆಯ ಅಧ್ಯಕ್ಷ ಮಹೇಂದ್ರ ಛೋಪ್ರಾ, ಪೌರಾಯುಕ್ತ ಕೆ. ಪರಮೇಶಿ, ಸದಸ್ಯರಾದ ಪಾರಮ್ಮ, ಆರೋಗ್ಯ ನಿರೀಕ್ಷಕ ಲಾಲ್‌ಸಾಬ್‌ ಮನಿಯಾರ್, ಸ್ಥಳೀಯರಾದ ರವೂಫ್‌ಸಾಬ್‌ ಅಡ್ಡೆವಾಲೆ, ಹುಸೇನ್‌ಪೀರಾ ಚಿಕನ್, ಅರುಣ ಶೆಟ್ಟಿ, ರವಿ ಕುರಬರ, ಈಶಣ್ಣ ದಾಸರ, ಅನ್ನಪೂರ್ಣಮ್ಮ ರೇಣುಕಮ್ಮ ಮುರಡಿ, ಅನ್ವರ್‌, ಈರಣ್ಣ ಹೊನ್ನುಂಗುರದ, ಗಿರಿಯಪ್ಪ ಕಲ್ಯಾಣದವರು, ಎಸ್.ಬಿ.ಎಂ. ರಮೇಶ್ ಇದ್ದರು.

*

ವಾರ್ಡ್ 30, 31ರಲ್ಲಿ ಸ್ವಚ್ಛತೆ ನಿರ್ವಹಣೆ ತೀವ್ರ ಸಮಸ್ಯೆ ಇತ್ತು. ಈ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಗೆಳೆತನದ ದಿನ ಪರಿಕಲ್ಪನೆಯನ್ನು ಬಳಸಿದ್ದೇವೆ.

-ಮಹೇಂದ್ರ ಛೋಪ್ರಾ,

ನಗರಸಭೆ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.