ಸೋಮವಾರ, ಮೇ 23, 2022
24 °C

ಸ್ವತಂತ್ರ ಭಾರತದ ಪ್ರತಿಬಿಂಬಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ರಾಮಚಂದ್ರ ಗುಹ ಅವರ ‘ಬಾಪೂ ನಂತರದ ಭಾರತ’ ಕೃತಿಯ ಓದು ಎರಡು ರೀತಿಯ ಭಾವನೆಗಳನ್ನು ಮೂಡಿಸಬಲ್ಲದು. ಮೊದಲನೆಯದು, ವಿಷಾದ ಭಾವ- ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶ ಎದುರಿಸಬೇಕಾದ ಘಟನೆಗಳಿಂದ ಉಂಟಾಗುವಂಥದ್ದು. ಎರಡನೆಯ ಭಾವ ನಿರುಮ್ಮಳದ್ದು- ಏನೆಲ್ಲ ಗಂಡಾಂತರಗಳ ನಡುವೆಯೂ ಭಾರತದಲ್ಲಿ ಪ್ರಜಾಸತ್ತೆ ಉಳಿದಿರುವುದಕ್ಕೆ.ಗುಹ ಅವರು ತಮ್ಮ ಬೃಹತ್ಕಥನದಲ್ಲಿ ಚರಿತ್ರೆಯ ಅಂಕಿಅಂಶಗಳನ್ನಷ್ಟೇ ಮಂಡಿಸುವುದಿಲ್ಲ. ಘಟನೆಗಳ ಹಿಂದಿನ ಕಾರಣಗಳನ್ನೂ, ನಂತರದ ಪರಿಣಾಮಗಳನ್ನೂ ಅವರು ವಿಶ್ಲೇಷಿಸುತ್ತಾರೆ. ಆ ಕಾರಣದಿಂದಾಗಿ ಅವರ ಬರಹ ಶುಷ್ಕ ಇತಿಹಾಸವಾಗದೆ, ‘ಜೀವಂತ ಭಾರತ’ದ ರಾಜಕೀಯ ಕಥನವಾಗಿ ಗಮನಸೆಳೆಯುತ್ತದೆ. ಸಂಶೋಧಕನ ಶಿಸ್ತು-ವಿದ್ವತ್ತು, ವಿಶ್ಲೇಷಕನ ಒಳನೋಟಗಳು ಹಾಗೂ ಸೃಜನಶೀಲ ಬರಹಗಾರನ ಆರ್ದ್ರತೆ- ಈ ಮೂರೂ ಗುಣಗಳನ್ನು ಹೊಂದಿರುವ ಕಾರಣದಿಂದಾಗಿ ‘ಬಾಪೂ ನಂತರದ ಭಾರತ’ ವಿಶಿಷ್ಟ ಕೃತಿಯಾಗಿದೆ.ಈ ಕೃತಿಯಲ್ಲಿ ಗುಹ ಕಾಣಿಸುವ ಭಾರತದ ಚರಿತ್ರೆಯ ಬೀಸು ವಿಸ್ತಾರವಾದುದು. ಕಳೆದ ಅರವತ್ತೈದು ವರ್ಷಗಳ ಸ್ವತಂತ್ರ ಭಾರತದ ರಾಜಕೀಯ-ಸಾಂಸ್ಕೃತಿಕ ಕಥನವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಪಾತ್ರಧಾರಿಗಳಾದರೂ ಯಾರು? ಗಾಂಧೀಜಿ ಇದ್ದಾರೆ. ನೆಹರೂ, ಮೊರಾರ್ಜಿ ದೇಸಾಯಿ, ಅಂಬೇಡ್ಕರ್, ಜಿನ್ನಾ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಅನೇಕ ಚೇತನಗಳು ಈ ಕೃತಿಯಲ್ಲಿ ನೆರೆದಿದ್ದಾರೆ. ವಿಶ್ವದ ಅತಿ ಡೊಡ್ಡ ಪ್ರಜಾಸತ್ತೆಗಳಲ್ಲಿ ಒಂದಾದ ದೇಶದ ಚಾರಿತ್ರಿಕ ಕಥನ ಮೇಲ್ನೋಟಕ್ಕೆ ರಾಜಕೀಯ ಕಥನದಂತೆ ಕಾಣಿಸಿದರೂ, ಅದು ಈ ನೆಲದ ಸಾಂಸ್ಕೃತಿಕ ಕಥನವೂ ಆಗಿದೆ.ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭ ಕೃತಿಯಲ್ಲಿ ಕಣ್ಣಿಗೆ ಕಟ್ಟಿದಂತಿದೆ. ಈ ಬಿಕ್ಕಟ್ಟಿಗೆ ಕಾರಣರಾದವರಾರು? ಅವರ ಮನಃಸ್ಥಿತಿಗಳು ಎಂಥವು? ಇದರಿಂದಾದ ಪರಿಣಾಮಗಳೇನು ಎನ್ನುವುದನ್ನು ಗುಹ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಚರಿತ್ರೆಯನ್ನು ಕಥೆಯಂತೆಯೂ ಹೇಳಬಹುದು ಎನ್ನುವುದಕ್ಕೆ ಉದಾಹರಣೆಯಂತಿರುವ ಈ ಕೃತಿ ಒಂದು ಅತ್ಯುತ್ತಮ ಕಥನ-ಕಾದಂಬರಿಯಂತೆ ಓದಿಸಿಕೊಳ್ಳಬಲ್ಲದು.ರಾಜಕಾರಣದ ಕೊಳಕು ಕಣ್ಣಿಗೆ ರಾಚುತ್ತಿರುವ ಸಂದರ್ಭದಲ್ಲಿ, ‘ಬಾಪೂ ನಂತರದ ಭಾರತ’ ಕೃತಿಯ ಓದು ಬೇರೆಯದೇ ಅನುಭವವನ್ನು ಕೊಡಬಲ್ಲದು. ನಾಯಕರ ಬಗ್ಗೆ ಅಭಿಮಾನವನ್ನೂ ನಿರಾಶೆಯನ್ನೂ ಮೂಡಿಸುವ ಈ ಕಥನ, ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಹೆಚ್ಚು ತಿಳಿಗೊಳಿಸುವಂತಿದೆ.ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಅವರು ‘ಗುಹಾ ಕಥನ’ವನ್ನು ಕನ್ನಡಕ್ಕೆ ತಂದಿದ್ದಾರೆ. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಬಾಪೂ ನಂತರದ ಭಾರತ’ ಎಲ್ಲ ಸಾಹಿತ್ಯ-ಚರಿತ್ರೆಯ ವಿದ್ಯಾರ್ಥಿಗಳಷ್ಟೇ ಅಲ್ಲ, ಎಲ್ಲ ಸಹೃದಯರೂ ಗಮನಿಸಬೇಕಾದ ಪುಸ್ತಕ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.