ಭಾನುವಾರ, ಜೂನ್ 13, 2021
20 °C

ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಚಿತ್ರ ತಂಡಕ್ಕೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಚಿತ್ರ ತಂಡಕ್ಕೆ ಸನ್ಮಾನ

ಬೆಂಗಳೂರು: `ವಿಶಿಷ್ಟವಾದ ಪುಟ್ಟ `ಬ್ಯಾರಿ~ ಭಾಷೆ ಹಾಗೂ ಸಮುದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗಬೇಕೆಂಬ ಏಕೈಕ ಉದ್ದೇಶದಿಂದ ನಾನು `ಬ್ಯಾರಿ~ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಪ್ರಾದೇಶಿಕ ಮಟ್ಟದಲ್ಲಿ ಚಿತ್ರಕ್ಕೆ ಒಂದು ಸಣ್ಣ ಪ್ರಶಸ್ತಿ ಲಭಿಸಬಹುದು ಎಂದು ನಿರೀಕ್ಷಿಸಿದ್ದೆ.

 

ಆದರೆ, `ಸ್ವರ್ಣ ಕಮಲ~ದಂತಹ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶತಮಾನದ ಹಿಂದಿನ `ಬ್ಯಾರಿ~ ಸಮುದಾಯದ ಸಂಸ್ಕೃತಿ ಹಾಗೂ ಜನಜೀವನದ ಕಥಾ ವಸ್ತುವನ್ನಾಗಿಟ್ಟುಕೊಂಡು ಕನ್ನಡದಲ್ಲಿಯೂ ಚಲನಚಿತ್ರ ನಿರ್ಮಿಸಲು ಉದ್ದೇಶ ಹೊಂದಿದ್ದೇನೆ~.ಇದು `ಸ್ವರ್ಣ ಕಮಲ~ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಮೊಟ್ಟ ಮೊದಲ `ಬ್ಯಾರಿ~ ಭಾಷೆಯ ಚಲನಚಿತ್ರ ನಿರ್ಮಾಪಕ ಹಾಗೂ ನಟ ಅಲ್ತಾಫ್ ಚೊಕ್ಕಬೆಟ್ಟು  ಪ್ರತಿಕ್ರಿಯೆ.

ಬೆಂಗಳೂರಿನ `ದಕ್ಷಿಣ ಕನ್ನಡಿಗರು~ ಬಳಗವು ವಾರ್ತಾ ಇಲಾಖೆಯ ಸುಲೋಚನಾ ಮಿನಿ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಪುಟ್ಟ ಸಂವಾದ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.`2002ರಲ್ಲಿ `ಚೈತ್ರ~ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಆದರೆ, ದುರದೃಷ್ಟವಶಾತ್ ಅದು ಅರ್ಧಕ್ಕೇ ನಿಂತಿತು. ಅಂದಿನಿಂದ ಯಾವುದೇ ಚಿತ್ರ ನಿರ್ಮಾಣ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ, ಬ್ಯಾರಿ ಭಾಷೆ ಹಾಗೂ ಜನಾಂಗದ ಮೇಲಿನ ಅಭಿಮಾನದಿಂದ `ಬ್ಯಾರಿ~ ಭಾಷೆಯಲ್ಲೇ ಚಿತ್ರ ನಿರ್ಮಿಸಿದೆ~ ಎಂದು ಹೇಳಿದರು.`ರಾಜ್ಯದಲ್ಲಿ ಸುಮಾರು 20 ಲಕ್ಷ ಬ್ಯಾರಿ ಜನಾಂಗದವರಿದ್ದಾರೆ. ಆದರೆ, `ಬ್ಯಾರಿ~ ಚಿತ್ರ ತೆರೆ ಕಂಡಾಗ ಅದನ್ನು ವೀಕ್ಷಿಸಿದವರು ಕೇವಲ ಒಂದು ಸಾವಿರ ಪ್ರೇಕ್ಷಕರು ಮಾತ್ರ. ಅದರಲ್ಲೂ 400 ಮಂದಿ ಮಾತ್ರ ಬ್ಯಾರಿ ಸಮುದಾಯದವರು ಚಿತ್ರ ವೀಕ್ಷಿಸಿದ್ದಾರೆ.~ ಎಂದರು.ಕನಸಿನಲ್ಲೂ ಊಹಿಸಿರಲಿಲ್ಲ: “ `ಬ್ಯಾರಿ~ ಚಿತ್ರಕ್ಕೆ `ಸ್ವರ್ಣಕಮಲ~ ಪ್ರಶಸ್ತಿ ಲಭಿಸುತ್ತದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.~ ಎಂದು ಚಿತ್ರದ ನಿರ್ದೇಶಕ ಕೆ.ಪಿ. ಸುವೀರನ್ ಪ್ರತಿಕ್ರಿಯಿಸಿದರು.ಅತ್ಯುತ್ತಮ ಛಾಯಾಗ್ರಹಣದಿಂದ ಚಲನಚಿತ್ರಕ್ಕೆ ತನ್ನದೇ ಆದ ವರ್ಚಸ್ಸು ತಂದುಕೊಟ್ಟಿರುವ ಮುರಳಿಕೃಷ್ಣ ಹಾಗೂ ಹಿರಿಯ ನಟ ಟಿ.ಕೆ. ಮಮ್ಮುಕೋಯ ತಮ್ಮ ಸಂತಸ ಹಂಚಿಕೊಂಡರು.  ನಂತರ ನಟ-ನಿರ್ಮಾಪಕ ಅಲ್ತಾಫ್, ನಿರ್ದೇಶಕ ಕೆ.ಪಿ. ಸುವೀರನ್, ಛಾಯಾಗ್ರಾಹಕ ಮುರಳಿಕೃಷ್ಣ ಹಾಗೂ ನಟ ಮಮ್ಮುಕೋಯ, ಸಂಕಲನಕಾರ ಎಸ್. ಮನೋಹರ್ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ, `ಸಣ್ಣ ಭಾಷೆ ಹಾಗೂ ಸಮುದಾಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಸನ್ನಿವೇಶದಲ್ಲಿ ಸಣ್ಣ ಸಮುದಾಯದವರೇ ಆಯಾ ಭಾಷೆಯಲ್ಲಿ ಚಿತ್ರ ನಿರ್ಮಿಸಿ `ಸ್ವರ್ಣಕಮಲ~ ಪ್ರಶಸ್ತಿ ಗೆದ್ದದ್ದು ಭಾಷೆಯ ಬಗೆಗಿನ ಸಂವಿಧಾನದ ಆಶಯಗಳಿಗೆ ದೊಡ್ಡ ಗೌರವ ತಂದುಕೊಟ್ಟಂತಾಗಿದೆ~ ಎಂದರು. ಮತ್ತೊಬ್ಬ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, `ಕಳೆದ ಮೂರು ದಶಕಗಳಲ್ಲಿ ಸಮುದಾಯದೊಳಗಿನ ಲೇಖಕರೇ ಕಥೆ, ಸಾಹಿತ್ಯ ಬರೆಯಲು ಶುರು ಮಾಡಿದರು. ಇದೀಗ ಸಣ್ಣ ಸಮುದಾಯದೊಳಗಿನವರೇ ಆಯಾ ಭಾಷೆಯಲ್ಲಿ ಚಲನಚಿತ್ರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ~ ಎಂದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ನಟಿ ಉಮಾಶ್ರೀ, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿದರು. ಕೆಪಿಸಿಸಿ ಮುಖಂಡ ಬಿ.ಎ. ಹಸನಬ್ಬ ಸ್ವಾಗತಿಸಿದರು. ಪತ್ರಕರ್ತ ಬಿ.ಎಂ. ಹನೀಫ್ ಕಾರ್ಯಕ್ರಮ ನಿರೂಪಿಸಿದರು. `ದಕ್ಷಿಣ ಕನ್ನಡಿಗರು~ ಬಳಗದ ಸಂಚಾಲಕ ಡಾ. ಮಕ್ಸೂದ್ ಅಹ್ಮದ್, ತುಳು ಕೂಟದ ಅಧ್ಯಕ್ಷ ರಮೇಶ್ ಹೆಗಡೆ, ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಫರೂಕ್, ಪ್ರಮುಖ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.

 

ಕೃತಿ ಚೌರ್ಯ: ಪ್ರತಿಕ್ರಿಯೆ ಇಲ್ಲ

`ಬ್ಯಾರಿ~ ಚಲನಚಿತ್ರಕ್ಕೆ `ಚಂದ್ರಗಿರಿ ತೀರದಲ್ಲಿ~ನ ಕಾದಂಬರಿಯ ಕೃತಿಚೌರ್ಯ ಮಾಡಲಾಗಿದೆ ಎಂಬ ಲೇಖಕಿ ಸಾರಾ ಅಬೂಬಕರ್ ಆರೋಪದ ಬಗ್ಗೆ ಚಿತ್ರ ನಿರ್ಮಾಣ ತಂಡದ ಪ್ರಮುಖರು ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ.`ಸದ್ಯಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಹಾಗೂ ಸಮುದಾಯದ ಪ್ರಮುಖರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಚಲನಚಿತ್ರ ನಿರ್ಮಾಪಕ ಅಲ್ತಾಫ್ ಅವರ ಸಂಬಂಧಿ ಬಿ.ಎ. ಹಸನಬ್ಬ ಪ್ರತಿಕ್ರಿಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.