ಶನಿವಾರ, ಜೂಲೈ 11, 2020
28 °C

ಸ್ವಾಗತಾರ್ಹ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ ಸರ್ಕಾರ ತನ್ನ ನೌಕರರನ್ನು ಯಾವಾಗ ಬೇಕಾದರೂ ವರ್ಗಾವಣೆ ಮಾಡುವುದಕ್ಕೆ ಹೈಕೋರ್ಟ್ ಕಡಿವಾಣ ಹಾಕಿದೆ. ನೌಕರರ ವರ್ಗಾವಣೆ ಕುರಿತಂತೆ 2001ರಲ್ಲಿ ಸರ್ಕಾರ ರೂಪಿಸಿದ್ದ ನಿಯಮಾವಳಿಗಳನ್ನು ಪಾಲಿಸುವಂತೆ ಹೈಕೋರ್ಟಿನ ವಿಶೇಷ ಪೂರ್ಣಪೀಠ ಆದೇಶ ನೀಡಿದೆ. ಈ ತೀರ್ಪಿನಿಂದಾಗಿ ಅಕಾಲ ವರ್ಗಾವಣೆಯ ಭೀತಿಯಲ್ಲಿದ್ದ ಅಸಂಖ್ಯಾತ ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅದೇನೇ ಇರಲಿ, ಸರ್ಕಾರ ತನ್ನ ನೌಕರರ ವರ್ಗಾವಣೆ ವಿಷಯದಲ್ಲಿ ಒಂದು ಸ್ಪಷ್ಟ ನೀತಿ, ನಿಯಮಗಳಿಗೆ ಬದ್ಧವಾಗಿರಬೇಕು. ಸರ್ಕಾರ ನೌಕರರ ವರ್ಗಾವಣೆಗೆ ಹಲವಾರು ನಿಯಮಾವಳಿಗಳನ್ನು ರೂಪಿಸಿದೆ. ಆದರೆ ಅದನ್ನು ಪಾಲಿಸುತ್ತಿಲ್ಲ.ನಿಯಮಗಳನ್ನು ಬದಿಗಿಟ್ಟು ಅಧಿಕಾರಿಗಳು ಹಾಗೂ ನೌಕರರನ್ನು  ಪದೇ ಪದೇ ವರ್ಗಾವಣೆ ಮಾಡುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ನೌಕರರ ವರ್ಗಾವಣೆ ದಂಧೆಯ ರೂಪ ಪಡೆದುಕೊಂಡಿದೆ. ಕೆಲ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ವರ್ಗಾವಣೆ ಅನಾಯಾಸವಾಗಿ ಹಣ ತಂದುಕೊಡುವ ಕಸುಬಾಗಿದೆ.ಹಲವು ನೌಕರರು ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಇಡೀ ವರ್ಷ ನೌಕರರ ವರ್ಗಾವಣೆ ನಡೆಯುತ್ತವೆ. ಅದನ್ನು ತಡೆಯಲು ಹೈಕೋರ್ಟು ಮುಂದಾಗಿದೆ. ಈ ಬೆಳವಣಿಗೆ ಸ್ವಾಗತಾರ್ಹ.ಸಾಮಾನ್ಯ ನೌಕರರು ಹಾಗೂ ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದರಿಂದ ಸರ್ಕಾರದ ಆಡಳಿತ ಬಿಗಿ ಕಳೆದುಕೊಳ್ಳುತ್ತದೆ. ವರ್ಗಾವಣೆ ಭೀತಿ ಇರುವ ನೌಕರರು ಮನಸ್ಸಿಟ್ಟು ಕೆಲಸ ಮಾಡುವುದಿಲ್ಲ. ಇದು ಸರ್ಕಾರಕ್ಕೆ ಗೊತ್ತಿಲ್ಲವೆಂದಲ್ಲ. ಆದರೂ ಸರ್ಕಾರ ಪದೇ ಪದೇ ವರ್ಗಾವಣೆ ಮಾಡುವ ಮೂಲಕ ಆಡಳಿತವನ್ನು ದುರ್ಬಲಗೊಳಿಸಿದೆ. ಶಾಸಕರು ತಮ್ಮ ಕ್ಷೇತ್ರದ ಆಯಕಟ್ಟಿನ ಹುದ್ದೆಗಳಿಗೆ ತಮ್ಮ ಜಾತಿಯ ನೌಕರರು ಹಾಗೂ ಅಧಿಕಾರಿಗಳನ್ನು ವರ್ಗ ಮಾಡಿಸಿಕೊಳ್ಳುತ್ತಾರೆ. ಅಂಥವರನ್ನು ಬಳಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವು ನೌಕರರು ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ವರ್ಗ ಮಾಡಿಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಾರೆ.ಹಣ, ಜಾತಿ ಇತ್ಯಾದಿ ಆಮಿಷಗಳಿಗೆ ಬಲಿಯಾಗಿ ಕೆಲವೇ ನೌಕರರಿಗೆ ಅನುಕೂಲ ಮಾಡಿಕೊಡುವ ಪ್ರಕ್ರಿಯೆಯಿಂದ ಅನೇಕ ಅಮಾಯಕ ಹಾಗೂ ಪ್ರಾಮಾಣಿಕ ನೌಕರರು ಮೂಲೆಗುಂಪಾಗಿ ಕೆಲಸ ಮಾಡುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಸರ್ಕಾರ ಆಡಳಿತ ದುರ್ಬಲವಾಗುವುದಕ್ಕೆ ಇದೂ ಒಂದು ಕಾರಣ. ಸರ್ಕಾರ ಹೈಕೋರ್ಟಿನ ಆದೇಶಕ್ಕೆ ಅನುಗುಣವಾಗಿ ವರ್ಗಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ಆಡಳಿತ ಇನ್ನಷ್ಟು ಚುರುಕಾಗಿ ದಕ್ಷತೆ ಮೂಡಲು ಸಹಾಯವಾಗಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.