ಭಾನುವಾರ, ಮೇ 9, 2021
25 °C

ಸ್ವಾತಂತ್ರ್ಯ ಯೋಧನಿಗೆ ಕಸಾಪ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ರಾಮಪ್ಪ ನಾಯ್ಡು ನಾಡಿನ ಗಡಿ ಭಾಗದ ಜನರಲ್ಲಿ ಹಾಡುಗಳ ಮೂಲಕ ಸ್ವಾತಂತ್ರ್ಯದ ಕೆಚ್ಚನ್ನು ತುಂಬಿದವರು. ಗಾಂಧೀಜಿ ತತ್ವಗಳನ್ನು ಮೈಗೂಡಿಸಿಕೊಂಡು, ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.ತಾಲ್ಲೂಕಿನ ಗಡಿ ಗ್ರಾಮ ರಾಯಲ್ಪಾಡ್‌ನಲ್ಲಿ 1927ರಲ್ಲಿ ಪಿ.ರಾಮಯ್ಯ ಮತ್ತು ಅಚ್ಚಮ್ಮ ದಂಪತಿಗಳಿಗೆ ಜನಿಸಿದ ಪಿ.ರಾಮಪ್ಪ ನಾಯ್ಡು, ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಕೃಷಿಕ ಜೀವನ ಆರಂಭಿಸಿದರು. ಚಿಕ್ಕಂದಿನಿಂದಲೇ ರೂಢಿಸಿಕೊಂಡಿದ್ದ ಗಾಯನ ಕಲೆಯನ್ನು ಸ್ವಾತಂತ್ರ್ಯದ ಹೋರಾಟಕ್ಕಾಗಿ ಬಳಸಿದರು. ರಾತ್ರಿ ಹೊತ್ತು ಗ್ರಾಮಗಳಿಗೆ ಗುಟ್ಟಾಗಿ ಹೋಗಿ ದೇಶ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸ್ವಾತಂತ್ರ್ಯ ಸಮರಕ್ಕೆ ಜನರನ್ನು ಸಂಘಟಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು.1942ರಲ್ಲಿ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬ್ರಿಟಿಷ್ ಆಡಳಿತದ ವಿರುದ್ಧ ಗಡಿ ಪ್ರದೇಶದ ಜನರನ್ನು ಪ್ರೇರೇಪಿಸಿದರು. ಕೆ.ಪಟ್ಟಾಭಿರಾಮನ್, ಹರ್ಡಿಕರ್, ಕೆಂಗಲ್ ಹನುಮಂತಯ್ಯ, ಕೆ.ಸಿ.ಚಂಗಲರಾಯರೆಡ್ಡಿ ಮುಂತಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಯಲ್ಪಾಡ್‌ಗೆ ಕರೆಯಿಸಿ ಭಾಷಣ ಮಾಡಿಸಿ, ಸ್ವಾತಂತ್ರ್ಯ ಚಳವಳಿಗೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರು.1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿ.ನಾರಾಯಣರೆಡ್ಡಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗುಂಪೊಂದು ರಾಯಲ್ಪಾಡ್ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಠಾಣೆಯಲ್ಲಿ ಇರಿಸಲಾಗಿದ್ದ ಬಂದೂಕುಗಳು, ಮದ್ದುಗುಂಡು ಮತ್ತು ದಾಖಲೆ ಸುಟ್ಟುಹಾಕಿತು. ಆ ಗುಂಪಿನಲ್ಲಿ ಪಿ.ರಾಮಪ್ಪನಾಯ್ಡು ಅವರೂ ಇದ್ದರು.ಪೊಲೀಸ್ ಠಾಣೆ ಮೇಲೆನ ದಾಳಿ ಬ್ರಿಟಿಷ್ ಆಡಳಿತಕ್ಕೆ ಅವಮಾನ ಉಂಟುಮಾಡಿತ್ತು. ದಾಳಿಯಲ್ಲಿ 80 ಮಂದಿ ಭಾಗವಹಿಸಿದ್ದರಾದರೂ, 40 ಮಂದಿಗೆ ಬಂಧನದ ವಾರಂಟ್ ಆಗಿತ್ತು. ಆ ಪೈಕಿ ತಾವೂ ಸೇರಿದಂತೆ 35 ಮಂದಿ ಪೊಲೀಸರಿಗೆ ಸಿಕ್ಕಿಬಿದ್ದೆವು. ಪೊಲೀಸ್ ಠಾಣೆಯಲ್ಲಿ ನಮಗೆ ನೀಡಿದ ದೈಹಿಕ ಹಿಂಸೆ ನೆನೆಸಿಕೊಂಡರೆ ರಕ್ತ ಕುದಿಯುತ್ತದೆ. ಏರೋಪ್ಲೇನ್ ಶಿಕ್ಷೆ ನೀಡುವಾಗ ಹಗ್ಗ ತುಂಡಾಗಿ ನೆಲಕ್ಕೆ ಬಿದ್ದಿದ್ದೆ, ಕೈಕಾಲು ಕದಲಿಸಲಾಗದೆ ನರಳಿದ ದಿನ ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ ಎಂದು ಹೇಳುವಾಗ ಅವರ ಮುಖದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಧನ್ಯತಾ ಭಾವ ಗೋಚರಿಸುತ್ತಿತ್ತು.

ದೇಶಕ್ಕೆ ಸ್ವಾತಂತ್ರ್ಯ ಬಂದನಂತರವೇ ಅವರ ಬಿಡುಗಡೆ ಆಗಿದ್ದು. ಪಿ.ರಾಮಪ್ಪನಾಯ್ಡು ಜೈಲು ಸೇರುವ ಮೊದಲು ಸುಬ್ಬಮ್ಮ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ನಾಯ್ಡು ಜೈಲು ಸೇರಿದ ಮೇಲೆ, ಅವರು ಜೈಲಿನಿಂದ ಬಿಡುಗಡೆ ಆಗುವುದಿಲ್ಲ ಎಂದು ತಿಳಿದ ಸುಬ್ಬಮ್ಮ ಅವರ ಪೋಷಕರು ಬೇರೊಬ್ಬರೊಂದಿಗೆ ಮದುವೆ ಮಾಡುವ ಪ್ರಸ್ತಾವ ಮುಂದಿಟ್ಟರು. ಆದರೆ ದೇಶ ಪ್ರೇಮಿಯಾದ ಸುಬ್ಬಮ್ಮ ಅದಕ್ಕೆ ಒಪ್ಪಲಿಲ್ಲ. ನಾನು ಮದುವೆಯಾದರೆ ನಾಯ್ಡು ಅವರನ್ನು ಮದುವೆಯಾಗುತ್ತೇನೆ.

ಇಲ್ಲವಾದರೆ ಆ ಸ್ವಾತಂತ್ರ್ಯ ಯೋಧನ ಹೆಸರಲ್ಲಿ ಹಾಗೆಯೇ ಉಳಿಯುತ್ತೇನೆ ಎಂದು ಹೇಳುವ ಮೂಲಕ ಪೋಷಕರನ್ನು ದಂಗುಬಡಿಸಿದರು. ಬಿಡುಗಡೆ ಬಳಿಕ ಅವರ ಮದುವೆಯಾಯಿತು. ವಿನೋಬಾ ಬಾವೆಯವರ ಭೂದಾನ ಚಳವಳಿಯಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಭಾಗವಹಿಸಿದ್ದ ನಾಯ್ಡು 1959ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಕೃಷಿ ವಸ್ತು ಪ್ರದರ್ಶನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್, ಪ್ರಧಾನ ಮಂತ್ರಿ ನೆಹರು ಅವರನ್ನು ಭೇಟಿಯಾಗಿದ್ದರು.ನಾಯ್ಡು ಸಮಾಜ ಸೇವೆ ಹಾಗೂ ಕಲಾ ಸೇವೆಗಾಗಿ ಸಂಘ ಸಂಸ್ಥೆಗಳು ನೀಡಿರುವ ಸನ್ಮಾನ, ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಕನ್ನಡ-ತೆಲುಗು ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ಇವರು ಸಾಹಿತ್ಯ ಪರಿಚಾರಕರಾಗಿ, ಸಂಗೀತ ಕಲಾವಿದರಾಗಿ ಪರಿಚಿತರಾಗಿದ್ದಾರೆ. ಅವರ ಏಳು ಮಕ್ಕಳ ಪೈಕಿ ನಾಡಿನ ಹೆಸರಾಂತ ಚಲನಚಿತ್ರ ನಿರ್ದೇಶಕ ಪಿ.ಆರ್.ರಾಮದಾಸ್ ನಾಯ್ಡು ಒಬ್ಬರು. ಇನ್ನೊಬ್ಬ ಮಗ ಪಿ.ಆರ್.ವಿಶ್ವನಾಥ ನಾಯ್ಡು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐವರು ಹೆಣ್ಣು ಮಕ್ಕಳು ಗೃಹಿಣಿಯರಾಗಿದ್ದಾರೆ.ತಮ್ಮ ಹಿರಿಯರಿಂದ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಕೈಗೊಂಡು ಸರಳ ಜೀವನ ನಡೆಸುತ್ತಿರುವ ರಾಮಪ್ಪನಾಯ್ಡು, ಗಡಿನಾಡು, ನಡುನಾಡು ಎಂಬ ಭೇದವಿಲ್ಲದೆ ಕನ್ನಡ ಬೆಳೆಯಬೇಕು. ಕನ್ನಡಕ್ಕೆ ಅಗ್ರಸ್ಥಾನ ನೀಡಿ, ನೂರು ಭಾಷೆ ಕಲಿತರೂ ನಷ್ಟವಿಲ್ಲ. ಪ್ರತಿಯೊಬ್ಬರೂ ದೇಶ ಪರ್ಯಟನೆ ಮಾಡಬೇಕು. ಇಲ್ಲವಾದರೆ ದೇಶದ ಸಮಗ್ರತೆ ಅರಿವಾಗುವುದಿಲ್ಲ. ಭಿನ್ನ ಸಂಸ್ಕೃತಿಗಳ ನೇರ ಪರಿಚಯವೂ ಆಗುವುದಿಲ್ಲ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

-ಆರ್.ಚೌಡರೆಡ್ಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.