ಮಂಗಳವಾರ, ಜನವರಿ 28, 2020
29 °C
ಮಡೆ ಮಡೆ ಸ್ನಾನಕ್ಕೆ ವಿರೋಧ

ಸ್ವಾಮೀಜಿಗಳಿಂದ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಡೆ ಮಡೆ ಸ್ನಾನ ವಿರೋಧಿಸಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಮಠಗಳ ಮಠಾಧೀಶರು ನಗರದ ಬಸನವಗುಡಿಯಲ್ಲಿರುವ ನಿಡು­ಮಾಮಿಡಿ ಮಠದಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಮಾಡಿದರು. ಬೆಳಿಗ್ಗೆ ಆರು ಗಂಟೆಗೆ ಸೂರ್ಯ ಉದಯಿಸಿದಾಗ ಸತ್ಯಾಗ್ರಹ ಆರಂಭಿಸಿದ ಸ್ವಾಮೀಜಿಗಳು, ಸಂಜೆ ಸೂರ್ಯಾಸ್ತದ­ವರೆಗೂ ಉಪವಾಸ ಕುಳಿತರು.

ಈ ಸಂದರ್ಭದಲ್ಲಿ ಮಾತನಾಡಿದ ನಿಡು­ಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳು, ‘ಮೌಢ್ಯದ ಸಂಕೇತ­ವಾಗಿರುವ ಮಡೆ ಮಡೆ ಸ್ನಾನವನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು. ‘ಎಂಜಲು ಎಲೆಗಳ ಮೇಲೆ ಉರುಳುವುದನ್ನು ದೇವರಿಗೆ ಸಲ್ಲಿಸುವ ಸೇವೆ ಎಂದುಕೊಂಡರೆ ಅದಕ್ಕಿಂತ ಮೌಢ್ಯ ಮತ್ತೊಂದು ಇರಲಾರದು.

ಉಡುಪಿ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ­ದಲ್ಲಿ  ಹಲವು ವರ್ಷಗಳಿಂದ ಈ ಅನಿಷ್ಟ ಪದ್ಧತಿ ಆಚರಣೆಯಲ್ಲಿದೆ. ಇದರ ನಿರ್ಮೂಲನೆಗಾಗಿ ಪ್ರತಿಯೊಬ್ಬರು ಧ್ವನಿ ಎತ್ತಬೇಕು’ ಎಂದು ಕರೆ ನೀಡಿದರು. ಮಡೆ ಮಡೆ ಸ್ನಾನವನ್ನು ನಿಷೇಧಿ­ಸು­ವಂತೆ ಕೋರಿ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾ­ರಣೆ ನಡೆಸಿದ್ದ ನ್ಯಾಯಾಲಯ  ‘ಗರ್ಭ­ಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯದ ರೂಪದಲ್ಲಿ ನೀಡಬೇಕು. ನಂತರ ನೈವೇದ್ಯವನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಭಕ್ತರಿಗೆ ಉರುಳು­ಸೇವೆಗೆ ಅವಕಾಶ ನೀಡಬಹುದು ಎಂದು ಹೇಳಿತ್ತು. ಆದರೆ, ನಿರ್ದಿಷ್ಟ ಸಮುದಾ­ಯ­ವೊಂದರ ಜನ ಉಂಡು ಬಿಟ್ಟ ಎಂಜಲು ಎಲೆಯ ಮೇಲೆ ಭಕ್ತರು ಉರುಳುವ ಪದ್ಧತಿ ನಿರ್ಮೂಲನೆ­ಯಾ­ಗಬೇಕು’ ಎಂದು ಆದೇಶಿಸಿತ್ತು.

ಆದರೂ, ಚಂಪಾ ಷಷ್ಠಿ ಜಾತ್ರೆ ವೇಳೆ ಮಡೆ ಮಡೆ ಸ್ನಾನ ಪದ್ಧತಿ ಮುಂದು­ವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಭಕ್ತರು ಸ್ವ– ಇಚ್ಛೆಯಿಂದ ಉರುಳು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳು­ತ್ತದೆ. ಆದರೆ, ಎಂಜಲು ಎಲೆಯ ಮೇಲೆ ಉರುಳುವುದರಿಂದ ತನಗೆ ಒಳ್ಳೆಯ­ದಾಗುತ್ತದೆ ಎಂಬ ಭಾವನೆಯನ್ನು ಸ್ವಇಚ್ಛೆ ಎನ್ನಲಾಗದು. ಆ ರೀತಿಯ ತಪ್ಪು ಭಾವನೆಯನ್ನು ಜನರಲ್ಲಿ ಮೂಡಿಸ­ಲಾಗಿದೆ’ ಎಂದು ಹೇಳಿದರು.ವಿಶ್ವ ಒಕ್ಕಲಿಗರ ಪೀಠದ ಕುಮಾರ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ತುಳು ಭಾಷೆಯಲ್ಲಿ ‘ಮಡೆ’ ಪದಕ್ಕೆ ಎಂಜಲು ಎನ್ನುವ ಅರ್ಥವಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚ­ರಣೆಯಲ್ಲಿರುವ ಈ ಪದ್ಧತಿಗೆ ಮಡೆ ಮಡೆ ಸ್ನಾನ ಎಂದು ಕರೆಯಲಾಗುತ್ತದೆ. ನಾವೆಲ್ಲರೂ ಸಮಾನರೆಂಬ ಭಾವನೆ ಇರುವ ಪ್ರಜ್ಞಾವಂತ ಸಮಾಜದಲ್ಲಿ ಇಂತಹ ಅಮಾನವೀಯ ಪದ್ಧತಿ ಇರಬಾರದು’ ಎಂದರು.ಹರಿಹರ ಪಂಚಮಸಾಲಿ ಪೀಠದ ಸಿದ್ದಲಿಂಗ ಸ್ವಾಮೀಜಿ, ಬಾಗಲಕೋಟೆಯ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಈಶ್ವ­ರಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿ 20ಕ್ಕೂ ಹೆಚ್ಚು ಸ್ವಾಮೀಜಿಗಳು ಸತ್ಯಾಗ್ರಹ­ದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಮೌಢ್ಯ ಆಚರಣೆ ತಡೆ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)