ಗುರುವಾರ , ಏಪ್ರಿಲ್ 15, 2021
31 °C

ಹಂಗಾರಕಟ್ಟೆ ಕೋಡಿಬೆಂಗ್ರೆ: ಹೂಳೆತ್ತುವ ಕಾರ್ಯ ಚುರುಕು

ಎ.ಶೇಷಗಿರಿ ಭಟ್ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಕಿರು ಬಂದರು ಯೋಜನೆಯಡಿ ನಿರ್ಮಾಣಗೊಂಡ ಹಂಗಾರಕಟ್ಟೆ ಕೋಡಿಬೆಂಗ್ರೆ ಬಂದರು ಹೂಳಿನ ಸಮಸ್ಯೆಯಿಂದ ಮುಚ್ಚುವ ಸ್ಥಿತಿಯಲ್ಲಿತ್ತು. ಹೂಳೆತ್ತುವ ಕಾಮಗಾರಿಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಚಾಲನೆ ನೀಡಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಕೋಡಿಬೆಂಗ್ರೆ ಇಳಿದಾಣದಲ್ಲಿ ತುಂಬಿಕೊಂಡ ಹೂಳನ್ನು ಸುಮಾರು 1.94 ಕೋಟಿ ರೂ. ಹಾಗೂ ಹಂಗಾರಕಟ್ಟೆ ಮೀನುಗಾರಿಕಾ ಇಳಿದಾಣದಲ್ಲಿ ತುಂಬಿಕೊಂಡಿದ್ದ ಹೂಳನ್ನು ಸುಮಾರು 1.32 ಕೋಟಿ ರೂ. ವೆಚ್ಚದಲ್ಲಿ ವಿಲೇವಾರಿ ಮಾಡುವ ಕಾರ್ಯ ನಡೆಯುತ್ತಿದೆ. ಸೀ ಈಗಲ್ ಮೆರೈನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಈ ಕಾಮಗಾರಿಯ ಗುತ್ತಿಗೆಯನ್ನು ತೆಗೆದುಕೊಂಡಿದ್ದು, ಇನ್ನು 3 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ.ಇಲ್ಲಿಯ ತನಕ ಮೀನುಗಾರರು ಇಲ್ಲಿನ ಬೋಟುಗಳ ಮೂಲಕ ಬೇರೆ ಬೇರೆ ಕಡೆಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಬಂದರಿನ ಅಳಿವೆ ಬಾಗಿಲಿನಲ್ಲಿ ಹಾಗೂ ಒಳಗಡೆ ಬೋಟ್ ನಿಲ್ಲಲು ಆಗದಷ್ಟು ಹೂಳು ತುಂಬಿ ಹೋಗಿದ್ದರಿಂದ ಮೀನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಬಂದರು ನಿರ್ಮಾಣಗೊಂಡು ಸುಮಾರು 12 ವರ್ಷಗಳ ಬಳಿಕ ಹೂಳೆತ್ತುವ ಕಾರ್ಯವನ್ನು ಇಲ್ಲಿ ಆರಂಭಿಸಲಾಗಿದೆ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.ಈ ಭಾಗದಲ್ಲಿ  ಜಟ್ಟಿ ಆರಂಭಗೊಂಡ ದಿನಗಳಲ್ಲಿ 200ಕ್ಕೂ ಹೆಚ್ಚು ಬೋಟುಗಳು ತಂಗುತ್ತಿದ್ದು ಉತ್ತಮವಾಗಿ ವ್ಯವಹಾರ ನಡೆಯುತ್ತಿತು. ರಾಷ್ಟ್ರೀಯ ಹೆದ್ದಾರಿಗೆ ಅತ್ಯಂತ ಸಮೀಪದಲ್ಲಿರುವ ಈ ಬಂದರು ಉದ್ಯಮಕ್ಕೆ ಯೋಗ್ಯ ಸ್ಥಳವಾಗಿದೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಬಂದರು ಸಂಪೂರ್ಣ ಹೂಳಿನಿಂದ ತುಂಬಿಹೋದ ಪರಿಣಾಮ ಮೀನುಗಾರರು ಭರತದ ಸಮಯವನ್ನು ಕಾದು ಸಮುದ್ರಕ್ಕೆ ಇಳಿಯಬೇಕಿತ್ತು. ಹಾಗೆಯೇ ಸಮುದ್ರದಿಂದ ಬೋಟು ಬಂದರಿಗೆ ಬರಬೇಕಾದರೆ ಅಳಿವೆಯಲ್ಲಿ ನೀರು ತುಂಬಿದರೆ ಮಾತ್ರ ಇದು ಸಾಧ್ಯವಾಗುತ್ತಿತ್ತು. ಈ ಕಾರಣಕ್ಕಾಗಿ ಬೋಟುಗಳು ಬಂದರಿನ ಒಳಭಾಗಕ್ಕೆ ಪ್ರವೇಶಿಸುವಾಗ ವಿಳಂಬವಾಗುವ ಪರಿಣಾಮ ಮಾರುಕಟ್ಟೆಯಲ್ಲಿ ದರಕುಸಿತ, ಮೀನುಗಳ ಹಾಳಾಗುವಿಕೆ ಆಗುತ್ತಿತ್ತು. ಇದರಿಂದ ಇಲ್ಲಿನ ಮೀನುಗಾರರು ಸಮಸ್ಯೆಗೆ ಸಿಲುಕಿದ್ದರು. ಇದೀಗ 2 ಬಂದರಿನಲ್ಲಿರುವ ಹೂಳನ್ನು ತೆಗೆಯುತ್ತಿರುವುದರಿಂದ ಈ ಭಾಗದ ಮೀನುಗಾರರಿಗೆ ಹೆಚ್ಚು ಅನುಕೂಲವಾದಂತಾಗಿದೆ.ಇನ್ನೊಂದೆಡೆ ಹಂಗಾರಕಟ್ಟೆ ಕೋಡಿ ಬೆಂಗ್ರೆ ಬಂದರಿಗೆ 1 ಕೋಟಿ ರೂಪಾಯಿ ವೆಚ್ಚದಲ್ಲಿ 3 ಕಾರು, 20 ಬೈಕ್‌ಗಳನ್ನು ಸಾಗಿಸುವ ಸಾಮರ್ಥ್ಯದ ಬಾರ್ಜ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಕಲ್ಪಿಸಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಇಲ್ಲಿ ಯಾಂತ್ರೀಕೃತ ಕಿರು ಬೋಟು ಓಡಾಟ ನಡೆಸುತ್ತಿದ್ದು, ಪ್ರಯಾಣಿಕರು ಕೋಡಿಬೆಂಗ್ರೆಯಿಂದ ಹಂಗಾರಕಟ್ಟೆಗೆ, ಹಂಗಾರಕಟ್ಟೆಯಿಂದ ಕೋಡಿಬೆಂಗ್ರೆಗೆ ಪ್ರಯಾಣ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಈ ಬೋಟು ಅಪಾಯಕಾರಿಯಾಗಿದ್ದು, ಬಾರ್ಜ್ ಸೇವೆ ಒದಗಿಸಿದಲ್ಲಿ ಪ್ರಯಾಣಿಕರಿಗಲ್ಲದೇ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.