ಹಡಗು ಸಾಗಲಿ...
ಸಿನಿಮಾದ ಹೆಸರು ‘ಹಡಗು’. ಚಿತ್ರದ ಕಥೆ ಬಹುತೇಕ ಸಮುದ್ರ ತೀರದಲ್ಲಿಯೇ ಸಾಗುತ್ತದೆ. ಸಮುದ್ರದ ಹಿನ್ನೆಲೆಯ ಚಿತ್ರಕ್ಕೆ ‘ಹಡಗು’ ಶೀರ್ಷಿಕೆ ಒಪ್ಪುತ್ತದೆ ಎನ್ನುವ ನಿರೀಕ್ಷೆ ನಿರ್ದೇಶಕರದು. ಕಥಾಸಾರಾಂಶ ಎಲ್ಲಿ ಸೋರಿಹೋಗಿ ಸಮುದ್ರದ ಪಾಲಾಗುತ್ತದೋ ಎನ್ನುವ ಆತಂಕ ನಿರ್ದೇಶಕ ದುರ್ಗಾಪ್ರಸಾದ್ ಎಸ್. ಬಜ್ಪೆ ಅವರ ಮಾತಿನಲ್ಲಿತ್ತು.
ದುರ್ಗಾಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ನಾಲ್ಕೈದು ವರ್ಷ ಸೈಕಲ್ ಹೊಡೆದಿದ್ದಾರಂತೆ. ‘ಹಡಗು’ ಅವರ ಮೂರನೇ ಚಿತ್ರ. ಮೊದಲ ಚಿತ್ರ ‘ಹೊಂಗಿರಣ’ ಅರ್ಧಕ್ಕೆ ನಿಂತಿದೆ. ‘ಹಡಗು’ ದಡ ಸೇರಿದ ನಂತರ ‘ಹೊಂಗಿರಣ’ದ ಕಡೆ ಮತ್ತೆ ಕಣ್ಣು ಹಾಯಿಸಲಿದ್ದಾರಂತೆ.
ಗುಜರಾತ್‌ನ ಬರೋಡಾದಲ್ಲಿ ನೆಲೆಸಿರುವ ಮಂಗಳೂರು ಮೂಲದ ಹೋಟೆಲ್ ಉದ್ಯಮಿ ಸುಚೇತ್ ಕುಮಾರ್ ಶೆಟ್ಟಿ ಚಿತ್ರದ ನಿರ್ಮಾಪಕರು. ಅವರಿಗೂ ನಿರ್ದೇಶಕರಿಗೂ ಸಂಪರ್ಕ ಸೇತುವೆಯಾಗಿ ನಿಂತಿರುವವರು ಸಂಗೀತ ನಿರ್ದೇಶಕ ದಿವಾಕರ್. ಅವರು ಪ್ರಮುಖ ಪಾತ್ರವೊಂದರಲ್ಲಿಯೂ ನಟಿಸುತ್ತಿದ್ದಾರೆ.ಸದ್ಯದಲ್ಲೇ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ ನಿರ್ದೇಶಕರು, 25 ದಿನ ಮಂಗಳೂರಿನಲ್ಲಿ, 25 ದಿನ ಚೆನ್ನೈನಲ್ಲಿ, 10 ದಿನ ಜೋಗ- ಹೊನ್ನಾವರದಲ್ಲಿ ಚಿತ್ರೀಕರಿಸಲಾಗುತ್ತದೆ ಎಂದರು.
ತಮ್ಮ ಚಿತ್ರಕ್ಕೆ ನಾಯಕ-ನಾಯಕಿ ಇಲ್ಲ. ಮೂರು ಪ್ರಮುಖ ಪಾತ್ರಗಳಷ್ಟೇ ಸಿನಿಮಾದ ಜೀವಾಳ. ಈ ಮೂಲಕ ಹೊಸ ಪ್ರಯೋಗ ಮಾಡುವ ಹಂಬಲದಲ್ಲಿದ್ದಾರೆ. ಒಬ್ಬನೇ ಪಾತ್ರಧಾರಿಯಿದ್ದ ತಮ್ಮ ‘ಟಿ’ ಚಿತ್ರಕ್ಕೆ ಸಿಕ್ಕ ಪ್ರಶಂಸೆ ಪ್ರಯೋಗಗಳನ್ನು ಮಾಡಲು ಅವರಿಗೆ ಪ್ರೇರಣೆ ನೀಡಿದೆಯಂತೆ.
ತಮ್ಮ ಊರಿನವರು. ಹೊಸಬರು ಎಂಬ ಕಾರಣಕ್ಕೆ ನಿರ್ಮಾಪಕರಿಗೆ ಹೇಳಿ ದುರ್ಗಾಪ್ರಸಾದ್‌ಗೆ ಅವಕಾಶ ಕೊಡಿಸಿದ್ದಾಗಿ ಹೇಳಿದ ದಿವಾಕರ್- 1.8 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಲಾಗುತ್ತಿದೆ ಎಂದರು.
ಹುಬ್ಬಳ್ಳಿಯ ಹುಡುಗ ಕಿರಣ್ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾನೆ. ಈ ಮೊದಲು ಸಂಗೀತಾ ಶೆಟ್ಟಿ ಎನಿಸಿಕೊಂಡಿದ್ದ ಉಡುಪಿಯ ಹುಡುಗಿ ಈಗ ರಕ್ಷಾ ಹೆಸರಿನಲ್ಲಿ ಈ ಚಿತ್ರದ ನಾಯಕಿ. ‘ಯಾರೇ ನೀ ದೇವತೆ’, ‘ರಾಮ್‌ಸೇತು’, ‘ಪ್ರತಿಕ್ಷಣ’ ಮತ್ತು ಲಂಬಾಣಿ ಭಾಷೆಯ ‘ಸೋನಾ’ ಚಿತ್ರಗಳಲ್ಲಿ ನಟಿಸಿರುವ ಅವರು ಚಿತ್ರದಲ್ಲಿ ತಮ್ಮದು ಮುಗ್ಧ ಹುಡುಗಿಯ ಪಾತ್ರ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.