ಶನಿವಾರ, ಏಪ್ರಿಲ್ 10, 2021
32 °C

ಹಣದುಬ್ಬರಕ್ಕೆ ಗ್ರಾಮೀಣ ಜನತೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಗ್ರಾಮೀಣ ಆರ್ಥಿಕತೆಯಲ್ಲಿ ಗಮನಾರ್ಹ ಸುಧಾರಣೆ ಆಗಿರುವುದು ಹಣದುಬ್ಬರ ಏರಿಕೆಗೆ ಮುಖ್ಯ ಕಾರಣ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ. ಇಲ್ಲಿಯ ‘ಐಐಟಿ’ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗ್ರಾಮೀಣ ಜನರ ಆರ್ಥಿಕತೆ ಹೆಚ್ಚಿದೆ. ಇದರಿಂದ ಅವರ ಖರೀದಿ ಸಾಮರ್ಥ್ಯ ಹೆಚ್ಚಿದ್ದು, ಪ್ರೊಟೀನ್‌ಯುಕ್ತ ಆಹಾರಗಳ ಬೇಡಿಕೆ ದ್ವಿಗುಣಗೊಂಡಿದೆ. ಇದು ಸಹಜವಾಗಿಯೇ ಮೊಟ್ಟೆ, ಮಾಂಸ, ಮೀನು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿದೆ ಎಂದರು.ಕಳೆದ ಕೆಲವು ತಿಂಗಳುಗಳಲ್ಲಿ ಆಹಾರ ಹಣದುಬ್ಬರ ದರ ಎರಡಂಕಿ ತಲುಪಿದೆ.  ಆಹಾರ ಧಾನ್ಯಗಳ ಪೂರೈಕೆ ಮತ್ತು ಬೇಡಿಕೆಯ ನಡುವೆ ಅಂತರ ಮುಂದುವರೆದಿದೆ. ಫೆಬ್ರುವರಿ 12ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ 11.49ರಷ್ಟಾಗಿದ್ದು, ಅಗತ್ಯ ವಸ್ತುಗಳು ಮತ್ತೆ ದುಬಾರಿಯಾಗಿವೆ ಎಂದರು.‘ಹಣದುಬ್ಬರ  ನಿಯಂತ್ರಿಸಲು ‘ಆರ್‌ಬಿಐ’ ಕೂಡ ಜವಾಬ್ದಾರಿ ಹೊಂದಿದೆ. ಆದರೆ, ಈಗ ಆಹಾರ ಹಣದುಬ್ಬರ ಸೃಷ್ಟಿಯಾಗಿರುವುದು ಪೂರೈಕೆ ಕೊರತೆಯಿಂದ, ಪೂರೈಕೆ ಹೆಚ್ಚಿಸುವಂತೆ ಮಾಡುವುದು ಬ್ಯಾಂಕ್‌ಗೆ ಸಾಧ್ಯ ಇಲ್ಲ ಎಂದರು. ದೇಶದಲ್ಲಿ ಮತ್ತೊಂದು ಹಸಿರು ಕ್ರಾಂತಿಯ ಅಗತ್ಯವಿದೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ರಾಜ್ಯಗಳು ತಮ್ಮ ತಮ್ಮ ಸರಾಸರಿ ಉತ್ಪಾದನಾ ಗುರಿಯನ್ನು ತಲುಪಿದರೆ ಆಹಾರದ ಅಭಾವ ನೀಗುತ್ತದೆ ಎಂದರು.ರಾಷ್ಟ್ರೀಯ  ಸರಾಸರಿ ಉತ್ಪಾದನಾ ಸಾಮರ್ಥ್ಯ 1,909 ಕೆಜಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪ್ರತಿ ಹೇಕ್ಟರ್‌ಗೆ  4,231 ಕೆಜಿಯಷ್ಟು ಉತ್ಪಾದನಾ ಸಾಮರ್ಥ್ಯ ಇದೆ. ದೇಶದ ಶೇ 11.66ರಷ್ಟು ಆಹಾರ ಧಾನ್ಯಗಳ ಬೇಡಿಕೆಯನ್ನು ಪಂಜಾಬ್ ಪೂರೈಸುತ್ತದೆ. ಉಳಿದ ರಾಜ್ಯಗಳೂ ಸರಾಸರಿ ಮಟ್ಟವನ್ನು ತಲುಪಬೇಕು ಎಂದರು.ನೀರಾವರಿ ಸೌಲಭ್ಯ ಹೆಚ್ಚಿಸುವ ಮೂಲಕ ಉತ್ಪಾದನೆ ಹೆಚ್ಚಿಸಬಹುದು. ಇಂದಿಗೂ ದೇಶದ ಶೇ 60ರಷ್ಟು ಕೃಷಿ ಭೂಮಿ ಮಳೆ ನೀರನ್ನೇ ನಂಬಿಕೊಂಡಿದೆ. ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಕೃಷಿ ಭೂಮಿಯಿಂದ ಮಾರುಕಟ್ಟೆಗೆ ಇರುವ ಪೂರೈಕೆ ಸರಪಣಿಗೆ ಬಲ ಬರಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.