ಶುಕ್ರವಾರ, ಮೇ 7, 2021
24 °C

ಹಣದುಬ್ಬರ ಅಲ್ಪ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಗಸ್ಟ್ 27ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಎರಡಂಕಿಯಿಂದ, ಒಂದಂಕಿಗೆ ಮರಳಿದ್ದು, ಶೇ 9.55ರಷ್ಟಾಗಿದೆ.ಹಾಲು, ಹಣ್ಣು, ತರಕಾರಿ ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಶೇ 15ರಷ್ಟು ಹೆಚ್ಚಿದ  ಹಿನ್ನೆಲೆಯಲ್ಲಿ ಕಳೆದ ವಾರ ಆಹಾರ ಹಣದುಬ್ಬರ ಶೇ 10.05ರಷ್ಟಾಗಿತ್ತು. ಆಹಾರ ಹಣದುಬ್ಬರ ದರ ಅಳೆಯುವ ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ (ಡಬ್ಲ್ಯುಪಿಐ) ದರವೂ ವಾರ್ಷಿಕ ಗರಿಷ್ಠ ಮಟ್ಟ ತಲುಪಿತ್ತು.ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಬೇಳೆಕಾಳು ಮತ್ತು ಗೋಧಿ ದರಗಳು ಶೇ 1.56 ಮತ್ತು ಶೇ 1.04ರಷ್ಟು ಇಳಿಕೆಯಾಗಿವೆ. ಆದರೆ, ಈರುಳ್ಳಿ ಮತ್ತು ಆಲೂಗಡ್ಡೆ ತುಟ್ಟಿಯಾಗಿದ್ದು, ಶೇ 42 ಮತ್ತು ಶೇ 13ರಷ್ಟು ಏರಿಕೆ ಕಂಡಿವೆ. ಹಣ್ಣು ಮತ್ತು ತರಕಾರಿ ಮತ್ತಷ್ಟು ದುಬಾರಿಯಾಗಿದ್ದು, ಶೇ 17 ಮತ್ತು ಶೇ 22ರಷ್ಟು ಏರಿಕೆಯಾಗಿವೆ.  ಮೊಟ್ಟೆ, ಮೀನು, ಮಾಂಸ ಶೇ 7ರಷ್ಟು  ತುಟ್ಟಿಯಾದರೆ, ಹಾಲು ಮತ್ತು ಬೇಳೆಕಾಳುಗಳು ಶೇ9 ಮತ್ತು ಶೇ 5ರಷ್ಟು ಇಳಿಕೆ ಕಂಡಿವೆ.ಆಹಾರೇತರ ಸರಕುಗಳ ಹಣದುಬ್ಬರ ದರ ಆಗಸ್ಟ್ 27ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಕಳೆದ ವಾರದ ಶೇ 17.19ರಿಂದ ಶೇ 19.88ಕ್ಕೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ.   ತೈಲ ಮತ್ತು ಇಂಧನ ಹಣದುಬ್ಬರ ದರ ಯಾವುದೇ ವ್ಯತ್ಯಾಸ ಕಾಣದೆ ಶೇ 12.55ರಷ್ಟಾಗಿದೆ.  ಪ್ರಾಥಮಿಕ ಸರಕುಗಳ ಮೇಲಿನ ಒಟ್ಟಾರೆ ಹಣದುಬ್ಬರ ದರ ಈ ಅವಧಿಯಲ್ಲಿ ಶೇ 13.34ರಷ್ಟಾಗಿದೆ.ಪ್ರಣವ್ ಪ್ರತಿಕ್ರಿಯೆ: ಆಹಾರ ಹಣದುಬ್ಬರ ದರ ಒಂದಂಕಿಗೆ ಮರಳಿರುವ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಹಬ್ಬಗಳ ಕಾಲ ಮುಗಿಯುತ್ತಿದಂತೆ ಆಹಾರ ಮತ್ತು ಆಹಾರೇತರ ಪದಾರ್ಥಗಳ ಬೆಲೆಗಳು ಗಣನೀಯವಾಗಿ ಇಳಿಕೆ ಕಾಣಲಿದೆ ಎಂದು ಹೇಳಿದ್ದಾರೆ.ಹಬ್ಬಗಳ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಳಿತ ಕಾಣುತ್ತಿರುತ್ತವೆ. ಓಣಂ, ದೀಪಾವಳಿ ಮುಗಿಯುತ್ತಿದ್ದಂತೆ ಬೆಲೆಗಳು ಇಳಿಕೆಯಾಗಲಿದೆ ಎಂದಿದ್ದಾರೆ.  ಆಹಾರೇತರ ಪದಾರ್ಥಗಳ ಬೆಲೆಗಳು ಹಿತಕರ ಮಟ್ಟಕ್ಕೆ ಇಳಿಯದಿರುವುದು ಆತಂಕಕಾರಿ ಎಂದಿರುವ ಅವರು ಸಗಟು ಸೂಚ್ಯಂಕ ಆಧರಿದ ವಾರ್ಷಿಕ ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ 6.5ಕ್ಕೆ ಇಳಿಯಬಹುದು ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.