ಬುಧವಾರ, ಮೇ 18, 2022
28 °C

ಹಣ ದುರುಪಯೋಗ: ಅಧಿಕಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್‌ನ ನಿರ್ವಹಣೆಗೆ ಮೀಸಲಾದ ಹಣದಲ್ಲಿ ರೂ20 ಲಕ್ಷವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಹೈಕೋರ್ಟ್‌ನ ಹಣಕಾಸು ವಿಭಾಗದ ಸಹಾಯಕ ರಿಜಿಸ್ಟಾರ್ ಜಯರಾಂ ನಾಯಕ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.ಹನುಮಂತನಗರ ನಿವಾಸಿಯಾದ ಜಯರಾಂ, ಹೈಕೋರ್ಟ್‌ನ ಹಣಕಾಸು ವಿಭಾಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ನ್ಯಾಯಾಲಯದ ನಿರ್ವಹಣೆಗೆ ಮೀಸಲಾದ ಹಣದಲ್ಲಿ ರೂ20 ಲಕ್ಷಬಳಸಿಕೊಂಡಿದ್ದ ಆರೋಪ ಆತನ ಮೇಲಿತ್ತು. 3 ತಿಂಗಳ ಅವಧಿಯ ಹಣಕಾಸು ವ್ಯವಹಾರದ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಆರೋಪ ಸಾಬೀತಾಗಿದೆ.ಮೂರು ತಿಂಗಳಿಗೆ ಹೈಕೋರ್ಟ್‌ನ ನಿರ್ವಹಣಾ ವೆಚ್ಚ ಸುಮಾರು 30 ಲಕ್ಷದಿಂದ 40 ಲಕ್ಷ ರೂಪಾಯಿ ಅಂತರದಲ್ಲಿರುತ್ತದೆ. ಆದರೆ, ಕಳೆದ ಮೂರು ತಿಂಗಳ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ರೂ20 ಲಕ್ಷ ಹೆಚ್ಚುವರಿ ವೆಚ್ಚವಾಗಿದೆ. ಈ ಬಗ್ಗೆ ಅನುಮಾನಗೊಂಡ ಹೈಕೋರ್ಟ್ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.ನಿಯಮದ ಪ್ರಕಾರ ನ್ಯಾಯಾಲಯದ ಹಣಕಾಸು ವ್ಯವಹಾರ 25 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ, ಆ ಹಣವನ್ನು ಬಿಡುಗಡೆ ಮಾಡಲು ಮುಖ್ಯ ನ್ಯಾಯಾಧೀಶರ ಅನುಮತಿ ಬೇಕು. ಅನುಮತಿ ದೊರೆತ ನಂತರ ಚೆಕ್‌ಗೆ ಉಪ ರಿಜಿಸ್ಟಾರ್ ಅವರ ಸಹಿ ಆಗಬೇಕು. ಈ ಪ್ರಕರಣದಲ್ಲಿ ಆರೋಪಿ ಜಯರಾಂ, `ಮುಖ್ಯ ನಾಯಾಧೀಶರು ಅನುಮತಿ ನೀಡಿದ್ದಾರೆ' ಎಂದು ಸುಳ್ಳು ಹೇಳಿ ಉಪರಿಜಿಸ್ಟಾರ್ ಸಿ.ಚಂದ್ರಶೇಖರ್ ಅವರಿಂದ ಏ.22ರಂದು ರೂ5 ಲಕ್ಷದ  4 ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದ. ಬಳಿಕ ಆ ಚೆಕ್‌ಗಳನ್ನು ಮೇ.9ರಂದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸಲ್ಲಿಸಿ, ರೂ20 ಲಕ್ಷ ಹಣ ಡ್ರಾ ಮಾಡಿದ್ದಾನೆ ಎಂದು ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ನೀಡಿದರು.`ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡ ಹಣದಲ್ಲಿ ಸಾಲಗಾರರಿಗೆ ನೀಡಬೇಕಿದ್ದ ಹಣವನ್ನು ಹಿಂತಿರುಗಿಸಿದೆ. ಜತೆಗೆ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದ ಪತ್ನಿಯ ಚಿನ್ನಾಭರಣಗಳನ್ನು ಬಿಡಿಸಿ ಕೊಟ್ಟಿದ್ದೇನೆ' ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.