ಬುಧವಾರ, ಏಪ್ರಿಲ್ 21, 2021
30 °C

ಹತ್ತಿ-ತೊಗರಿ ಬೆಲೆ ನಿಗದಿ- ಪ್ರತಿಭಟನಾ ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹತ್ತಿಬೆಳೆಗೆ 6 ರಿಂದ 6,500 ರೂಪಾಯಿಗಳನ್ನು ನಿಗದಿಪಡಿಸಬೇಕು, ಭಾರತೀಯ ಹತ್ತಿ ನಿಗಮದ(ಸಿಸಿಐ) ದರದಲ್ಲಿ ಖರೀದಿಸಬೇಕು ಹಾಗೂ ತೊಗರಿ ಬೆಳೆಗೆ 6ಸಾವಿರ ರೂಪಾಯಿ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು.ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ನಗರದ ರಾಜೇಂದ್ರಗಂಜ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ನೀರಾವರಿ ಹಾಗೂ ಬಯಲು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಹತ್ತಿ ಮತ್ತು ತೊಗರಿ ಬೆಳೆಯನ್ನು ಬೆಳೆಯಲಾಗುತ್ತಿದೆ. ಆದರೆ, ಬೆಳೆ ಬೆಳೆಯಲು ಮಾಡಿದ ಖರ್ಚು ದುಬಾರಿಯಾಗಿರುತ್ತದೆ. ಬೆಲೆ ಮಾತ್ರ  ಕಡಿಮೆ ಇದ್ದು, ಇರುವ ಬೆಲೆಗೆ ರೈತರು ಮಾರಾಟ ಮಾಡಿದರೆ, ರೈತರು ಹಾಕಿದ ಬಂಡವಾಳ ಬರುತ್ತಿಲ್ಲ ಎಂದು ಸಮಸ್ಯೆ ವಿವರಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ  ತೂಕದ ಯಂತ್ರಗಳನ್ನು ಅಳವಡಿಸಬೇಕು, ಹತ್ತಿ ಬೆಲೆ ನಿಗದಿ ಪಡಿಸಿದ ನಂತರ ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದರ ಕಡಿಮೆ ಮಾಡಬಾರದು ಎಂದು ಆಗ್ರಹಿಸಿದರು.ಹತ್ತಿ ಮಾರುಕಟ್ಟೆಯಲ್ಲಿ ರೈತರ ವಿಶ್ರಾಂತಿಗಾಗಿ ಸುಸಜ್ಜಿತ ರೈತ ಭವನ ನಿರ್ಮಾಣ ಮಾಡಬೇಕು, ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 6ಸಾವಿರ ರೂಪಾಯಿ ನಿಗದಿಪಡಿಸಬೇಕು. ತೊಗರಿ ಮಂಡಳಿಯಿಂದಲೇ ತೊಗರಿ ಖರೀದಿಸಬೇಕು, ತೊಗರಿ ರಾಶಿಯಲ್ಲಿ ಅನವಶ್ಯಕವಾಗಿ ಶ್ಯಾಂಪಲ್ ತೆಗೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಗಂಜ್‌ನಲ್ಲಿರುವ ಹಳೆ ರೈತ ಭವನದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಬೇಕು, ಕೃಷಿ ಉತ್ಪನ್ನಗಳನ್ನು ಟೆಂಡರ್ ಇಲ್ಲದೇ ಖರೀದಿ ಮಾಡುವುದನ್ನು ನಿಲ್ಲಿಸಬೇಕು, ರೈತರಿಗೆ ಹಣ ಪಾವತಿ ಮಾಡುವಾಗ ಕಮಿಷನ್ ಪಡೆಯಬಾರದು ಎಂದು ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥರೆಡ್ಡಿ ಜಿನೂರು, ಉಪಾಧ್ಯಕ್ಷರಾದ ದೊಡ್ಡಬಸನಗೌಡ ಬಲ್ಲಟಗಿ, ವಿ.ಭೀಮೇಶ್ವರರಾವ್, ಬಿ.ವೆಂಕಟರಾವ್, ಜಿಲ್ಲಾ ಕಾರ್ಯದರ್ಶಿ ಹಂಪಣ್ಣ ಜಾನೇಕಲ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ನರಸಿಂಗ್‌ರಾವ್ ಕುಲಕರ್ಣಿ, ಯಂಕಪ್ಪ ಕಾರಬಾರಿ, ಗೇಸುದರಾಜ್, ಅಮರೇಶ ಮಾರ್ಲದಿನ್ನಿ, ಸೂಗಯ್ಯಸ್ವಾಮಿ ಹಾಗೂ ಮತ್ತಿತರರು ಪ್ರತಿಭಟನೆ    ಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.