ಗುರುವಾರ , ಮೇ 6, 2021
23 °C

ಹತ್ತು ದಿಕ್ಕು! ಹತ್ತು ನೋಟ! ಚಿತ್ರ: ದಶಮುಖ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಸಾಮಾಜಿಕ ವ್ಯವಸ್ಥೆ, ಕಾನೂನಿನ ಅರಿವು ಮತ್ತು ಪ್ರಾದೇಶಿಕ ಪರಿಸರದ ಸೂಕ್ಷ್ಮವಾದ ಅರಿವಿಲ್ಲದೆ ಸಿನಿಮಾಗಳನ್ನು ರೀಮೇಕ್ ಮಾಡಿದರೆ ದೊರಕುವ ಫಲಿತಾಂಶಕ್ಕೆ ಉತ್ತಮ ನಿದರ್ಶನ `ದಶಮುಖ~.ಸಾಮಾಜಿಕ ಸ್ತರ ಮತ್ತು ಸ್ಥಳೀಯತೆ ಈ ಚಿತ್ರದಲ್ಲಿ ಪ್ರಮುಖವಲ್ಲದ ಅಂಶಗಳಾಗಿದ್ದರೂ ಹಾಲಿವುಡ್ ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸುವ ಪ್ರಯತ್ನವಾದ `ದಶಮುಖ~ದಲ್ಲಿ ದೇಶದ ಕಾನೂನು ವ್ಯವಸ್ಥೆಯ ತಿಳಿವಳಿಕೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತದೆ.1957ರಲ್ಲಿ ತಯಾರಾದ `ಟ್ವೆಲ್ವ್ ಆ್ಯಂಗ್ರಿ ಮೆನ್~ ಹಾಲಿವುಡ್ ಚಿತ್ರದ ಕನ್ನಡ ಅವತರಣಿಕೆ `ದಶಮುಖ~. ಮೂಲ ಚಿತ್ರದ ಹನ್ನೆರಡು ಮಂದಿಯ ಬದಲಾಗಿ ಹತ್ತುಮುಖಗಳನ್ನು ಮಾತ್ರ ಕನ್ನಡದಲ್ಲಿ ಉಳಿಸಿಕೊಳ್ಳಲಾಗಿದೆ. ಎರಡು ಮಹಿಳಾ ಪಾತ್ರಗಳಿಗೂ ಅವಕಾಶ ನೀಡಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.ಜಟಿಲ ಪ್ರಕರಣಗಳಲ್ಲಿ ತೀರ್ಪು ಪ್ರಕಟಿಸಲು ಗೊಂದಲವಾದಾಗ ನ್ಯಾಯಾಧೀಶರು ಸಮಾಜದ ವಿವಿಧ ವಲಯಗಳಿಂದ ಆಯ್ದುಕೊಂಡ ವ್ಯಕ್ತಿಗಳನ್ನೊಳಗೊಂಡ ನ್ಯಾಯದರ್ಶಿ ಮಂಡಳಿಯ ಮೊರೆ ಹೋಗಲು ಅಮೆರಿಕದ ಕಾನೂನಿನಲ್ಲಿ ಅವಕಾಶವಿದೆ.ಆರೋಪಿ ಅಪರಾಧಿಯೇ ಅಥವಾ ನಿರಪರಾಧಿಯೇ ಎಂಬುದನ್ನು ಚರ್ಚಿಸಿ ನ್ಯಾಯಾಲಯಕ್ಕೆ ಒಮ್ಮತದ ಅಭಿಪ್ರಾಯ ತಿಳಿಸುವುದು ಈ ನ್ಯಾಯದರ್ಶಿ ಮಂಡಳಿಯ ಕೆಲಸ. ಕಥೆಯ ಸಹಿತ ಅಮೆರಿಕದ ಈ ಕಾನೂನನ್ನು ಸಹ ನಮ್ಮ ನೆಲದಲ್ಲೂ `ಅಳವಡಿಸಿದ್ದಾರೆ~ ನಿರ್ದೇಶಕರು.ತಜ್ಞರ ಅಭಿಪ್ರಾಯದ ಆಧಾರದ ಮೇಲೆಯೂ ಪ್ರಕರಣವನ್ನು ನಿರ್ಣಯಿಸಲಾಗದು ಎಂದು ಸುಪ್ರೀಂಕೋರ್ಟ್ ಉಲ್ಲೇಖವಿರುವ ಸಂದರ್ಭದಲ್ಲಿ ಯಾವುದೇ ತನಿಖೆ, ಸಾಕ್ಷಿಗಳ ವಿಚಾರಣೆ ನಡೆಸುವ ಸಂಬಂಧವೇ ಇಲ್ಲದ ವ್ಯಕ್ತಿಗಳಿಗೆ ಆರೋಪಿ ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುದನ್ನು ನಿರ್ಣಯಿಸಲು ಚಿತ್ರದಲ್ಲಿ ಅವಕಾಶ ನೀಡುವ ಪ್ರಸಂಗ ಹಾಸ್ಯಾಸ್ಪದ.ಕಾನೂನಿನ ಪರಿಮಿತಿ ಹೊರಗಿಟ್ಟು ನೋಡಿದಾಗ ಕುತೂಹಲಕಾರಿ ವಸ್ತುವನ್ನಿಟ್ಟುಕೊಂಡ `ದಶಮುಖ~ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಪ್ರಯೋಗ. ನಾಯಕ, ನಾಯಕಿ, ಖಳನಾಯಕರ ಹಂಗಿಲ್ಲದೆ ಬಹುತಾರಾಗಣವನ್ನು ನೆಚ್ಚಿಕೊಳ್ಳುವ ಚಿತ್ರ ಅಪರೂಪದ ಪ್ರಯತ್ನವೂ ಹೌದು.ನಾಲ್ಕು ಗೋಡೆಯ ಒಳಭಾಗದಲ್ಲೇ ಹೆಚ್ಚು ಸಾಗುವ ಕಥಾನಕವನ್ನು ನೋಡಲು ಪ್ರೇಕ್ಷಕನಿಗೆ ತಾಳ್ಮೆ ಅಗತ್ಯ. ಚಿತ್ರಕಥೆ (ಕೆ.ವಿ.ರಾಜು) ಆರಂಭದಲ್ಲಿ ಪೇಲವ ಎನಿಸಿದರೂ ಅಂತ್ಯದವರೆಗೂ ಕುತೂಹಲ ಉಳಿಸಿಕೊಳ್ಳುತ್ತದೆ. ಸಂಭಾಷಣೆಯಲ್ಲೂ ಚಿತ್ರಕಥೆಗೆ ಅಗತ್ಯವಾದ ಮೊನಚಿದೆ.ಉನ್ನತ ಜವಾಬ್ದಾರಿ ಹೊತ್ತವರ ಬಾಲಿಶ ವರ್ತನೆ, ನ್ಯಾಯಾಲಯದೊಳಗೆ ಧೂಮಪಾನ ಮಾಡುವುದು, ಇದ್ದಕ್ಕಿದ್ದಂತೆ ಎರಗುವ ಹಾಡು, ಆಸಕ್ತಿಕರ ಕಥೆಯನ್ನು ನಿರ್ದೇಶಕರು ಹೇಗೆ ದಿಕ್ಕುತಪ್ಪಿಸಬಲ್ಲರು ಎಂಬುದಕ್ಕೆ ಸಾಕ್ಷಿ.ಅಭಿನಯ ಸಾಮರ್ಥ್ಯ ಮೆರೆಯಲು ದಶಮುಖಗಳಿಗೆ ಇಲ್ಲಿ ಸಮಾನ ಅವಕಾಶ ದಕ್ಕುವುದಿಲ್ಲ. ರವಿಚಂದ್ರನ್ ಕಥೆಗೆ ಪ್ರಮುಖ ತಿರುವು ನೀಡುವ ವ್ಯಕ್ತಿ. ಆದರೆ ಅಭಿನಯದ ವಿಚಾರದಲ್ಲಿ ಅನಂತ್‌ನಾಗ್ ಚಿತ್ರದ ನಾಯಕ. ಅವಿನಾಶ್‌ಗೆ ನಂತರದ ಸ್ಥಾನ. ಬಹುಕಾಲದ ಬಳಿಕ ಕನ್ನಡದಲ್ಲಿ ಬಣ್ಣಹಚ್ಚಿರುವ ಸರಿತಾ ಕಚಗುಳಿಯಿಟ್ಟರೂ ಪಾತ್ರ ಪೋಷಣೆ ಗಾಂಭೀರ್ಯತೆಯನ್ನು ಮರೆಯುತ್ತದೆ.ದತ್ತಣ್ಣ, ಅಚ್ಯುತಕುಮಾರ್, ಮಾಳವಿಕಾ, ದೇವರಾಜ್, ಪ್ರವೀಣ್, ರವಿಕಾಳೆ, ಚೇತನ್ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪುಟ್ಟ ಪಾತ್ರದಲ್ಲೂ ಆಕಾಂಕ್ಷ ಅವರ ತಲ್ಲೆನತೆ ಗಮನಾರ್ಹ.ಅರುಣ್ ಸಾಗರ್ ಕಲೆಯಲ್ಲಿ ಸೃಷ್ಟಿಯಾದ ಕೋರ್ಟ್ ಸೆಟ್ ಗಮನ ಸೆಳೆಯುತ್ತದೆ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ ಒಂದು ಕೋಣೆಯೊಳಗೇ ಸುತ್ತುವ ಸನ್ನಿವೇಶಗಳ ಮಿತಿಯ ನಡುವೆಯೂ ಪ್ರತಿ ದೃಶ್ಯದಲ್ಲೂ ಹೊಸತನ ನೀಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.