ಶುಕ್ರವಾರ, ಫೆಬ್ರವರಿ 26, 2021
20 °C

ಹದಗೆಟ್ಟ ರಸ್ತೆ: ಸುಗಮ ಸಂಚಾರಕ್ಕೆ ಸಂಚಕಾರ

ಪ್ರಜಾವಾಣಿ ವಾರ್ತೆ/ ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಹದಗೆಟ್ಟ ರಸ್ತೆ: ಸುಗಮ ಸಂಚಾರಕ್ಕೆ ಸಂಚಕಾರ

ಚಾಮರಾಜನಗರ: ತಡವಾಗಿ ಪೂರ್ವ ಮುಂಗಾರು ಆರಂಭವಾಗಿದೆ. ಮಳೆರಾಯನ ಮುನಿಸು ಮರೆಯಾಗಿದೆ. ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆ ಅಭಿವೃದ್ಧಿಗೆ ನಗರಸಭೆ ತಳೆದಿರುವ ದಿವ್ಯನಿರ್ಲಕ್ಷ್ಯವೂ ಬಯಲಾಗಿದೆ.

ಜಿಲ್ಲಾ ಕೇಂದ್ರದ ವ್ಯಾಪ್ತಿ ಒಟ್ಟು 106 ಕಿ.ಮೀ. ಉದ್ದದ ರಸ್ತೆಯಿದೆ. ಇದರಲ್ಲಿ ಅರ್ಧದಷ್ಟು ಕಚ್ಚಾರಸ್ತೆಯಿದೆ.ಮಳೆಗಾಲಕ್ಕೆ ಮುನ್ನವೇ ರಸ್ತೆ ದುರಸ್ತಿಗೆ ಸ್ಥಳೀಯ ಆಡಳಿತ ಮುಂದಾಗುತ್ತಿಲ್ಲ. ಇದರ ಪರಿಣಾಮ ಸುಗಮ ಸಂಚಾರಕ್ಕೆ ತೊಂದರೆಯಾಗಿ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಜತೆಗೆ, ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿ ಜೀವಕ್ಕೆ ಕುತ್ತು ತಂದುಕೊಳ್ಳುವ ಪರಿಸ್ಥಿತಿ ತಲೆದೋರಿದೆ.ನಗರದ ಹೃದಯ ಭಾಗದಲ್ಲಿರುವ ಜೋಡಿರಸ್ತೆಯ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿ ವಾಹನ ಓಡಿಸಲು ಸವಾರರು ಕಷ್ಟಪಡುತ್ತಿದ್ದರು. ಸದ್ಯಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗುಂಡಿ ಮುಚ್ಚುವ ಕೆಲಸ ನಡೆದಿದೆ. ಆದರೆ, ಭಾರೀ ಮಳೆ ಸುರಿದರೆ ಪುನಃ ಗುಂಡಿಗಳು ಸೃಷ್ಟಿಯಾಗಿ ಸಂಕಟ ಅನುಭವಿಸಬೇಕಾಗುತ್ತದೆ.

 

ರಸ್ತೆ ವಿಸ್ತರಣೆ ಮಾಡಿ ಹೊಸದಾಗಿ ಡಾಂಬರು ಹಾಕುವುದು ಉತ್ತಮ ಎಂಬ ನಾಗರಿಕರ ಒತ್ತಾಯಕ್ಕೆ ಬೆಲೆ ಸಿಕ್ಕಿಲ್ಲ. ಜತೆಗೆ, ಈ ರಸ್ತೆಯಲ್ಲಿ ನಿಗದಿತ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಭಾರಹೊತ್ತ ವಾಹನಗಳು ಸಂಚರಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿಲ್ಲ. ಹೀಗಾಗಿ, ರಸ್ತೆ ಹದಗೆಡುತ್ತಿದೆ.ಜಿಲ್ಲಾ ಕೇಂದ್ರದ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಮಾತ್ರವೇ ರಸ್ತೆಗೆ ಡಾಂಬರು ಹಾಕಲಾಗಿದೆ. ಗಾಳೀಪುರ, ಬುದ್ಧನಗರ, ಕರಿನಂಜನಪುರ, ರೈಲ್ವೆ ಬಡಾವಣೆ ಸೇರಿದಂತೆ ಹಿಂದುಳಿದ ಬಡಾವಣೆಗಳಲ್ಲಿ ಇಂದಿಗೂ ಕಚ್ಚಾರಸ್ತೆಗಳೇ ಜನರ ಸಂಚಾರಕ್ಕೆ ಆಸರೆಯಾಗಿವೆ.  ಈ ರಸ್ತೆಗಳಿಗೆ ಜಲ್ಲಿಕಲ್ಲು ಹಾಕಿ ಸಮತಟ್ಟು ಮಾಡಿ ಮಣ್ಣಿನಿಂದ ಸಮಗೊಳಿಸುವ ಕೆಲಸವಷ್ಟೇ ನಡೆಯುತ್ತಿದೆ. ಆದರೆ, ಡಾಂಬರು ಹಾಕುವ ಪ್ರಯತ್ನ ನಡೆದಿಲ್ಲ. ಇದರ ಪರಿಣಾಮ ಮಳೆ ಬಂದಾಗ ಸಂಪೂರ್ಣವಾಗಿ ರಸ್ತೆ ಹದಗೆಟ್ಟು ಸಂಚರಿಸಲು ತೊಂದರೆಯಾಗುತ್ತದೆ. ಕೇವಲ ಗುಂಡಿ ಮುಚ್ಚುವ ಆಟ ನಡೆಯುತ್ತಿದೆ ಎಂಬುದು ಸವಾರರ ದೂರು.ಸುಸಜ್ಜಿತ ರಸ್ತೆ ಇಲ್ಲದಿರುವ ಪರಿಣಾಮ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತದೆ ಎನ್ನುವುದು ಪೊಲೀಸರ ಆತಂಕ. ಆದರೂ, ಉತ್ತಮ ರಸ್ತೆ ನಿರ್ಮಿಸಲು ನಗರಸಭೆ ಆಡಳಿತ ಮುಂದಾಗಿಲ್ಲ. ಜತೆಗೆ, ನಾಗರಿಕರು ರಸ್ತೆಯನ್ನು ಅಗೆದು ಹದಗೆಡಿಸಿರುವ ನಿದರ್ಶನವೂ ಇದೆ. ಕೆಲವೆಡೆ ಪೈಪ್‌ಲೈನ್, ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ರಸ್ತೆ ಅಗೆದಿದ್ದಾರೆ. ಆದರೆ, ದುರಸ್ತಿಪಡಿಸಲು ಮುಂದಾಗಿಲ್ಲ. ಅಂತಹವರಿಗೆ ದಂಡ ವಿಧಿಸಲು ನಗರಸಭೆಯೂ ಕ್ರಮಕೈಗೊಂಡಿಲ್ಲ.ರಸ್ತೆ ಅಗೆಯುವ ಮೊದಲು ಸೂಕ್ತ ಕಾರಣ ನೀಡಿ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಜತೆಗೆ, ಸ್ಥಳೀಯ ಆಡಳಿತಕ್ಕೆ  ನಿಗದಿತ ಶುಲ್ಕ ಪಾವತಿಸಬೇಕಿದೆ. ಆದರೆ, ಎಗ್ಗಿಲ್ಲದೆ ರಸ್ತೆ ಅಗೆಯುವ ಕಾರ್ಯ ನಡೆಯುತ್ತಿದೆ. ಸರಿಯಾಗಿ ಮಣ್ಣು ಮುಚ್ಚದಿರುವ ಪರಿಣಾಮ ಗುಂಡಿಗಳು ಸೃಷ್ಟಿಯಾಗಿ ಸಂಚಾರಕ್ಕೂ ತೊಂದರೆಯಾಗುತ್ತಿದೆ.`ಮಳೆಗಾಲಕ್ಕೂ ಮೊದಲೇ ರಸ್ತೆ ದುರಸ್ತಿಪಡಿಸುವುದು ನಗರಸಭೆಯ ಹೊಣೆ. ಆದರೆ, ಪ್ರತಿವರ್ಷವೂ ಕಚ್ಚಾರಸ್ತೆಗೆ ಜಲ್ಲಿಕಲ್ಲು, ಮಣ್ಣುಹಾಕಿ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಡಾಂಬರು ಹಾಕುವುದಿಲ್ಲ. ದೀರ್ಘಕಾಲ ಬಾಳಿಕೆಗೆ ಬರುವಂತಹ ಸಿಮೆಂಟ್ ರಸ್ತೆ ನಿರ್ಮಾಣಕ್ಕೂ ಮುಂದಾಗಿಲ್ಲ. ಇದರಿಂದ ವಾಹನ ಓಡಿಸಲು ಹಾಗೂ ಜನರು ಸಂಚರಿಸಲು ತೊಂದರೆಪಡುವಂತಾಗಿದೆ~ ಎಂದು ದೂರುತ್ತಾರೆ ಬೈಕ್ ಸವಾರ ಕುಮಾರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.