ಬುಧವಾರ, ಮೇ 18, 2022
27 °C

ಹನಿ, ತುಂತುರು ನೀರಾವರಿಗೆ ಆದ್ಯತೆ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಕೃಷ್ಣಾ ಮೇಲ್ದಂಡೆಯ `ಬಿ' ಸ್ಕೀಂನ ಎಲ್ಲ ನೀರಾವರಿ ಯೋಜನೆಗಳನ್ನು ಹನಿ ಮತ್ತು ತುಂತುರು ಪದ್ಧತಿಯಲ್ಲಿ ಅನುಷ್ಠಾನಗೊಳಿಸಬೇಕು. ಇಂಡಿ ತಾಲ್ಲೂಕಿನ ಯೋಜನೆಗಳಿಗೆ ಹೆಚ್ಚುವರಿ ನೀರು ಹಂಚಿಕೆ ಮಾಡಬೇಕು ಎಂದ ಜೆಡಿಎಸ್ ಮುಖಂಡ, ಜಿ.ಪಂ. ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಆಗ್ರಹಿಸಿದರು.ಹನಿ ಮತ್ತು ತುಂತುರು ನೀರಾವರಿ ಪದ್ಧತಿಯ ಅಳವಡಿಕೆಯಿಂದ ಹೆಚ್ಚಿನ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಇಳುವರಿ ಹೆಚ್ಚಲಿದ್ದು, ಸವಳು-ಜವಳು ಸಮಸ್ಯೆ ಇರುವುದಿಲ್ಲ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈಗ ರೂಪಿಸಿರುವ ನೀರಾವರಿ ಯೋಜನೆಗಳಿಂದ ಇಂಡಿ ತಾಲ್ಲೂಕಿನ 120 ಹಳ್ಳಿಗಳ ಪೈಕಿ 50 ಹಳ್ಳಿಗಳಿಗೆ ಮಾತ್ರ ನೀರಾವರಿಯಾಗಲಿದೆ. ಚಿಮ್ಮಲಗಿ ಯೋಜನೆಯಿಂದ ಶಿರಕನಹಳ್ಳಿ, ಬೆನಕನಹಳ್ಳಿ, ಅಥರ್ಗಾದ 1900 ಹೆಕ್ಟೇರ್, ಮುಳವಾಡ ಏತ ನೀರಾವರಿ ಯೋಜನೆಯಿಂದ 8400 ಹೆಕ್ಟೇರ್ ಮಾತ್ರ ನೀರಾವರಿಯಾಗುತ್ತದೆ. 70 ಹಳ್ಳಿಗಳು ನೀರಾವರಿಯಿಂದ ವಂಚಿತಗೊಳ್ಳಲಿವೆ ಎಂದರು.ಬಾಳೆಕುಂದ್ರಿ ಅವರು ರೂಪಿಸಿರುವ ಮೂಲ ಯೋಜನೆಯಲ್ಲಿ ಸರ್ಕಾರ ನೀರು ಹಂಚಿಕೆಯನ್ನು ಕಡಿಮೆ ಮಾಡಿದೆ. ಬಬಲೇಶ್ವರ ಏತ ನೀರಾವರಿ ಯೋಜನೆಗೆ ಹೆಚ್ಚುವರಿ ನೀರು ಹಂಚಿಕೆ ಮಾಡಿದಂತೆ ಇಂಡಿ ತಾಲ್ಲೂಕಿನ ಯೋಜನೆಗಳಿಗೂ ಹೆಚ್ಚುವರಿ ನೀರು ಹಂಚಿಕೆ ಮಾಡಬೇಕು. ಇಂಡಿ ಮತ್ತು ನಾಗಠಾಣ ಕ್ಷೇತ್ರದ ಶಾಸಕರು ಈ ಕುರಿತು ಒತ್ತಡ ತರಬೇಕು ಎಂದು ಆಗ್ರಹಿಸಿದರು.ಸಚಿವರು ಮಾಡುತ್ತಾರೆ: `ಈ ವಿಷಯದ ಕುರಿತು ಹೋರಾಟ ಮಾಡುವುದು ಬೇಡ. ಜಲಸಂಪನ್ಮೂಲ ಸಚಿವರು ನಮ್ಮ ಜಿಲ್ಲೆಯವರೇ ಇದ್ದಾರೆ. ಅವರನ್ನು ಭೇಟಿಯಾಗಿ ಚರ್ಚಿಸೋಣ' ಎಂದು ಜಿಲ್ಲಾ ಕೃಷಿ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ ಹೇಳಿದರು.ಸಭೆ: ಪಡಿತರ ಅಕ್ಕಿ ಬದಲು ಬಿಳಿಜೋಳ ವಿತರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಡೆದ ಸಭೆಯಲ್ಲಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಕೃಷ್ಣಾ ಕಣಿವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ, ಬ್ರಾಡ್‌ಗೇಜ್ ಹೋರಾಟ ಸಮಿತಿ ಅಧ್ಯಕ್ಷ ವಿಶ್ವನಾಥ ಭಾವಿ, ಅಪ್ಪುಗೌಡ ಪಾಟೀಲ (ಮನಗೂಳಿ), ಎಚ್.ಆರ್. ಉಟಗಿ, ಅಮೋಗಿ ಚಿಂಚಲಿ, ಎಸ್.ಎಸ್. ಬಂಟನೂರ, ಸುರೇಶ ವಿಜಾಪುರ, ನಂದಕಿಶೋರ ರಾಠೋಡ, ಮಲ್ಲಮ್ಮ ಜೋಗೂರ ಇತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.