ಮಂಗಳವಾರ, ಏಪ್ರಿಲ್ 13, 2021
25 °C

ಹರಪನಹಳ್ಳಿ ತಾಲ್ಲೂಕಿನ ನಜೀರ್ ನಗರದಲ್ಲಿ ಗೋಶಾಲೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ ತಾಲ್ಲೂಕಿನ ನಜೀರ್ ನಗರದಲ್ಲಿ ಗೋಶಾಲೆಗೆ ಚಾಲನೆ

ಹರಪನಹಳ್ಳಿ: ಭೀಕರ ಬರಗಾಲದಂತಹ ಘೋರದುರಂತಗಳು ಜೀವಸಂಕುಲದ ಮೇಲೆ ಗಂಭೀರ ಪರಿಣಾಮ ಉಂಟುಮಾಡಿವೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ತಾಲ್ಲೂಕಿನ ನಜೀರ್‌ನಗರ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗೋಶಾಲೆಗೆ ಚಾಲನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಪೂರ್ವಜರ ಕಾಲದಲ್ಲಿ ಮಳೆಗಾಲ ಆರಂಭವಾದರೆ ಸಾಕು ಸಮೃದ್ಧ ಮಳೆ ಸುರಿಯುತ್ತಿದ್ದವು. ಕಾರಣ ಪ್ರಕೃತಿಯಲ್ಲಿಯೂ ಸಮತೋಲನತೆ ಕಾಣುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ದುರಾಸೆಯ ಬೆನ್ನಹಿಂದೆ ಸಾಗುತ್ತಿರುವ ಮನುಷ್ಯ ಕಾಡನ್ನು ಸಂಪೂರ್ಣ ಬರಿದು ಮಾಡಿದ್ದಾನೆ. ಹೀಗಾಗಿ, ಮಳೆಯೂ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಇಡೀ ಜೀವಸಂಕುಲ ಬಹುದೊಡ್ಡ ಗಂಭೀರತೆಗೆ ಸಿಲುಕಬೇಕಾದೀತು ಎಂದು ಎಚ್ಚರಿಸಿದರು.

ಅರಣ್ಯೀಕರಣದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹರಿದು ಬರುತ್ತಿರುವ ಸಾವಿರಾರು ಕೋಟಿ ಹಣ, ಕೇವಲ ದಾಖಲೆಗಳಲ್ಲಿ ಮಾತ್ರ ವಿನಿಯೋಗದ ಅಕ್ಷರದಲ್ಲಿ ನಮೂದಾಗುತ್ತಿದೆ. ಅಸಲಿಗೆ ಅಲ್ಲಿ ಗಿಡಗಳನ್ನೇ ನೆಟ್ಟಿರುವುದಿಲ್ಲ; ಗಿಡಗಳನ್ನು  ನೆಡಲಾಗಿತ್ತು. ಮಳೆ ಇಲ್ಲದೇ ಕಮರಿಹೋಗಿದೆ ಎಂದು ಸಬೂಬು ಹೇಳುತ್ತಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬರ ನಿರ್ವಹಣೆಗಾಗಿ ತಾಲ್ಲೂಕಿಗೆ ಇದುವರೆಗೂ ರೂ. 2ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ, ತೀವ್ರ ಬರದ ಪರಿಸ್ಥಿತಿ ಎದುರಿಸುತ್ತಿರುವ ಚಿಗಟೇರಿ ಹೋಬಳಿಯಲ್ಲಿ ರೈತರ ಜಾನುವಾರು ಸಂರಕ್ಷಣೆಗಾಗಿ ರೂ. 4.50ಲಕ್ಷ ಗೋಶಾಲೆ ಆರಂಭಿಸಲಾಗಿದೆ. ಈ ಪೈಕಿ, ರೂ. 3.50ಲಕ್ಷ ಮೊತ್ತದ ಜಾನುವಾರು ಮೇವು ಖರೀದಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮೆಳ್ಳೆಕಟ್ಟೆ ಚಿದಾನಂದ ಐಗೂರು, ಸದಸ್ಯೆ ಕವಿತಾ ಆರ್. ರಾಮಗಿರಿ, ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು, ತಹಶೀಲ್ದಾರ್ ಕೆ. ಮಲ್ಲಿನಾಥ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಮಹೇಶ್ವರಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಓಬಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸಪ್ಪ, ಮುಖಂಡರಾದ ಆರುಂಡಿ ನಾಗರಾಜ, ಕಣವಿಹಳ್ಳಿ ಮಂಜುನಾಥ, ಬಾಗಳಿ ಕೊಟ್ರೇಶಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.