ಸೋಮವಾರ, ಆಗಸ್ಟ್ 8, 2022
24 °C

ಹರಿದ್ವರ್ಣ ಕಾಡು ಬಾನುಲಿ ಸಾಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಪ್ಪತ್ತೈದು ವರ್ಷಗಳ ಇತಿಹಾಸ ಹೊಂದಿರುವ ಆಕಾಶಾಣಿಯು ತನ್ನ ಇನ್ನೂರ ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಿಂದ ದೇಶಾದ್ಯಂತ ಹಲವು ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಸಂಗೀತ ಹೊರತುಪಡಿಸಿ ನೋಡಿದರೂ ಅದು ನಿತ್ಯವೂ ಪ್ರಸಾರ ಮಾಡುತ್ತಿರುವ ಕಥೆ, ಕವಿತೆ, ಪ್ರಬಂಧ, ಚಿಂತನ, ಭಾಷಣ, ಸಂದರ್ಶನ, ರೂಪಕ, ಚರ್ಚೆ, ನಾಟಕ, ಪ್ರಹಸನ ಅನುವಾದ ಮುಂತಾದ ಭಾಷಾಧಾರಿತ ಕಾರ್ಯಕ್ರಮಗಳ ಸಂಖ್ಯೆಯೂ ಅಗಣಿತ ಪ್ರಮಾಣದಲ್ಲಿದೆ. ಬಾನುಲಿ ಬರವಣಿಗೆಯ ಸ್ವರೂಪ ಭಿನ್ನ ರೀತಿಯದು. ಅದು ಒಂದೇ ಕಾಲಕ್ಕೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನನ್ನೂ, ಕಟ್ಟಡ ಕಾರ್ಮಿಕನನ್ನೂ, ಹಳ್ಳಿಯ ನಿರಕ್ಷರಿಯನ್ನೂ ಹಾಗೂ ವಿದ್ಯಾರ್ಥಿಯನ್ನೂ ತಲುಪುವುದು. ಇದರಿಂದಾಗಿ ಯಾವುದೇ ವಿಷಯದ ಸರಳ ಸಂಯೋಜನೆ ಮತ್ತು ಸರಳ ನಿರೂಪಣೆ ಅದರ ಉಪಾಯವಾಗಿದೆ. ಸಂಕೀರ್ಣ ವಾಕ್ಯ, ಅರ್ಥ ಸಂದಿಗ್ಧತೆಯನ್ನು ಸ್ಪಷ್ಟವಾಗಿ ಅದು ದೂರವಿರಿಸಲೇಬೇಕು. ಸಕಲ ವಿಷಯ ಪ್ರಕಾರಗಳನ್ನೂ ಒಳಗೊಳ್ಳುವ ಭಾಷಣ, ಸರಳ ತಾತ್ವಿಕ ಸ್ತರದಲ್ಲಿ ಸಾಮಾನ್ಯರ ತಿಳಿವಿನ ದಾಹ ತಣಿಸುವ ಚಿಂತನ, ವಿವಿಧ ಕ್ಷೇತ್ರಗಳ ಪರಿಣಿತರ ಜೊತೆಗಿನ ಸಂದರ್ಶನ, ಮುಂತಾದವು ಹೆಚ್ಚು ಕಡಿಮೆ ನಿತ್ಯವೂ ಪ್ರಸಾರಗೊಳ್ಳುತ್ತಿವೆ. ಇವುಗಳ ಹರಹು ಮತ್ತು ವೈವಿಧ್ಯ ಅಸಾಧಾರಣವಾದುದು.ಬಾನುಲಿ ನಾಟಕ ಒಂದು ವಿಶಿಷ್ಟ ಪ್ರಕಾರವಾಗಿದ್ದು ರಂಗನಾಟಕಗಳಿಗಿಂತಲೂ ಬೇರೆಯದೇ ಆದ ಬರವಣಿಗೆಯ ರೀತಿಯನ್ನು ಬೇಡುತ್ತದೆ.  ಪೂರ್ಣ ಕಲ್ಪಕತೆ, ಶ್ರವ್ಯ ಸಂಯೋಜನೆ, ಸೂಕ್ಷ್ಮ ಭಾಷಾ ಬಳಕೆ, ಸಂಕ್ಷಿಪ್ತ ಗುಣ, ಪರಿಣಾಮಕಾರಿ ಸಂವಹನ, ಸರಳ ನಿರೂಪಣೆ, ಸಂದೇಶಾತ್ಮಕತೆ, ಮುಂತಾದ ಲಕ್ಷಣಗಳ ಮೂಲಕ ಅದು ವಿಶಿಷ್ಟ ಪ್ರಕಾರವೆನಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಕಳೆದ ದಶಕಗಳಲ್ಲಿ ಇಂತಹ ಸಾವಿರಾರು ನಾಟಕಗಳು ರಚಿತಗೊಂಡು ನಿರ್ಮಾಣವಾಗಿವೆ. ದೇಶಾದ್ಯಂತ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಇನ್ನು ಅದೆಷ್ಟು ಸಂಖ್ಯೆಯ ಬಾನುಲಿ ನಾಟಕಗಳ ರಚನೆಯಾಗಿರಬಹುದು? ‘ರೂಪಕ’ವಂತೂ ಆಕಾಶವಾಣಿಯ ವಿಶಿಷ್ಟ ಕೊಡುಗೆ. ಮಾತು, ಸಂಗೀತ, ನಾಟಕ, ಶಬ್ದ ಪರಿಣಾಮ, ಗಮಕ, ಜನಪದ ಮುಂತಾದ ಎಲ್ಲ ಸಂವಹನ ಪ್ರಕಾರಗಳನ್ನೂ ಒಳಗೊಂಡು ಹೇಳಬೇಕಿರುವ ವಿಚಾರವನ್ನು ಕಲಾತ್ಮಕವಾಗಿ ಹೇಳಬಯಸುವ ಇದು ಅಪ್ಪಟ ಕಸುಬುಗಾರಿಕೆಯನ್ನು ಬೇಡುತ್ತದೆ. ಇಂಥ ಸಾವಿರಾರು ರೂಪಕಗಳು ಸಾಕ್ಷ್ಯ, ಸಂಗೀತ, ಸೃಜನಶೀಲ, ನುಡಿಚಿತ್ರ ಮುಂತಾದ ರೂಪಗಳಲ್ಲಿ ರಚಿತಗೊಂಡಿದ್ದು ಈ ‘ರೂಪಕ ಸಾಹಿತ್ಯ’ವೇ ಅಧ್ಯಯನ ಯೋಗ್ಯ ವಿಚಾರವಾಗಿದೆ. ವಾಸ್ತವವಾಗಿ ಇವೆಲ್ಲವೂ ಬಾನುಲಿ ಸಾಹಿತ್ಯ. ಪ್ರಶ್ನೆಯಿರುವುದು ಇದನ್ನು ಹೀಗೆಯೇ ಗ್ರಹಿಸಿ ಮುಂದುವರಿಯಬೇಕೇ ಅಥವಾ ಈ ಎಲ್ಲವೂ ಮುದ್ರಿತ ರೂಪಕ್ಕೆ ಬಂದ ಮೇಲೆ ಬಾನುಲಿ ಸಾಹಿತ್ಯವೆಂದು ಪರಿಗಣಿಸಬೇಕೇ ಎಂಬುದಾಗಿ. ಮೊದಲನೆಯ ರೀತಿಯಲ್ಲಿ, ಅಂದರೆ ಅದು ಪ್ರಸಾರಗೊಳ್ಳುವ ಬಗೆಯಲ್ಲೇ ಸಾಹಿತ್ಯವಾಗಿ ನೋಡುವುದೆಂದರೆ ಅದು ವಿದ್ಯುನ್ಮಾನ ತಾಂತ್ರಿಕತೆ, ಸೌಲಭ್ಯ ಹಾಗೂ ಬದಲಾದ ಓದುವಿಕೆಯ ಶಿಸ್ತನ್ನು ಬೇಡುತ್ತದೆ.ಇವೊತ್ತಿನ ಬ್ಲಾಗ್ ಪ್ರಪಂಚ ಭಿನ್ನ ರೀತಿಯ ಓದುವಿಕೆಗೆ ಪ್ರವೇಶ ನೀಡಿರುವುದು ಸ್ವಾಗತಾರ್ಹವಾದರೂ ಅದು ಆಶ್ರಯಿಸಿರುವುದೂ ಕಣ್ಣುಗಳನ್ನೇ. ಸ್ವಾರಸ್ಯವೆಂದರೆ ‘ಕಿವಿಯಾಧಾರಿತ ಓದುವಿಕೆ’ಯನ್ನು ಬಾನುಲಿ ಬೇಡುತ್ತದೆ. ಇದು ಸಾಧ್ಯವೆನ್ನಬಹುದಾದರೂ ಗ್ರಹಿಸುವಿಕೆಯ ಮಟ್ಟದಲ್ಲೇ ನಿಂತುಬಿಡುತ್ತದೆ. ಹೀಗಾಗಿ ಬಾನುಲಿಯೂ ಮುದ್ರಣದತ್ತ ಆಸೆ ಕಣ್ಣಿನಿಂದ ನೋಡಬೇಕಾಗಿದೆ. ಆದರೆ ಆಕಾಶವಾಣಿಯಲ್ಲಿ ತನ್ನದೇ ಆದ ಪ್ರಕಾಶನ ವ್ಯವಸ್ಥೆ ಇಲ್ಲದಿರುವುದರಿಂದ ಆಗೀಗ ಪ್ರಕಟಗೊಂಡಿರುವ ಅದರ ಸಾಹಿತ್ಯವನ್ನೂ ವ್ಯವಸ್ಥಿತವಾಗಿ ಜೋಡಿಸುವ ಕೆಲಸವನ್ನು ಮೊದಲು ಮಾಡಬೇಕಿದೆ (ಬಿ.ಬಿ.ಸಿ. ಮುಂತಾದ ವಿದೇಶಿ ಬಾನುಲಿಗಳಲ್ಲಿ ಆಯ್ದ ಪ್ರಸಾರಿತ ಬರಹಗಳೆಲ್ಲವೂ ಮುದ್ರಿತ ರೂಪದಲ್ಲಿ ಆಸಕ್ತರಿಗೆ ಲಭ್ಯವಾಗುವ ವ್ಯವಸ್ಥೆ ಇದೆ).ಕನ್ನಡದ ಅನೇಕ ಲೇಖಕರು ತಮ್ಮ ಬಾನುಲಿ ಬರವಣಿಗೆಯನ್ನು ಬಿಡಿಬಿಡಿಯಾಗಿ ಪ್ರಕಟಿಸಿರುವುದು ಉಂಟು. ಕುವೆಂಪು, ಬೇಂದ್ರೆ, ಕೈಲಾಸಂ, ಎನ್ಕೆ, ಶಾಂತಾದೇವಿ ಮಾಳವಾಡ, ಕಣವಿ, ಜಿಎಸ್‌ಎಸ್, ಕೀರ್ತಿನಾಥ ಕುರ್ತಕೋಟಿ, ಗೌರೀಶ ಕಾಯ್ಕಿಣಿ- ಹೀಗೆ ಬಹುತೇಕ ಕನ್ನಡದ ಎಲ್ಲ ಲೇಖಕರೂ ಇದನ್ನು ಗೌರವಪೂರ್ವಕವಾಗಿ ಮಾಡಿದ್ದಾರೆ. ಇತ್ತೀಚೆಗೆ ಯು.ಆರ್.ಅನಂತಮೂರ್ತಿಯವರು ನಡೆಸಿರುವ ಸಂದರ್ಶನಗಳ ಸಂಪಾದಿತ ‘ಹತ್ತು ಸಮಸ್ತರ ಜೊತೆ’ ಕೃತಿ ಬಿಡುಗಡೆಯಾಗಿದ್ದು, ಅದರಲ್ಲಿ ಅವರು ಹಿಂದೆ ಮೈಸೂರು ಆಕಾಶವಾಣಿಯಲ್ಲಿ ವ್ಯಂಗಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜೊತೆ ನಡೆಸಿದ್ದ ಸಂದರ್ಶನವೂ ಸೇರಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಅಜ್ಞಾತವಾಗಿದ್ದ ಕಾರ್ಯಕ್ರಮವೊಂದು ಬದಲಾದ ಮಾಧ್ಯಮದಲ್ಲಿ ಅಭಿವ್ಯಕ್ತಗೊಂಡಾಗ ಅದರ ತಲುಪುವಿಕೆಯ ಗಮ್ಯಗಳು ಬೇರೆಯಾಗಿರುತ್ತವೆ ಎಂಬುದು ಕುತೂಹಲಕಾರಿ. ಇಂತಹ ಎಷ್ಟೋ ಕಾರ್ಯಕ್ರಮಗಳು ಆಕಾಶವಾಣಿಯ ಭಂಡಾರದಲ್ಲಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಆಕಾಶವಾಣಿಯು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ ಹಾಗೂ ಬೇರೆ ಬೇರೆ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯ್ದ ಪ್ರಸಾರಿತ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದೂ ಉಂಟು. ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯ ಚಳವಳಿಗಳನ್ನು ಅವಲೋಕಿಸಿ ಗುಲ್ಬರ್ಗ ಆಕಾಶವಾಣಿಯಲ್ಲಿ ಪ್ರಸಾರವಾದ ಲೇಖನಗಳ ವಿಸ್ತೃತರೂಪ (ಸಂ: ಡಾ.ಬಸವರಾಜ ಸಾದರ) ‘ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು’ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಪ್ರಕಟಗೊಂಡಿದೆ. ಡಾ. ಜಿ.ಎಸ್.ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಪುರಸ್ಕಾರ ದೊರೆತ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿಯು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಿಂದ ಹೊರತಂದ ‘ಆಕಾಶದೀಪ’ (ಸಂ: ಡಾ.ಎ.ಎಸ್. ಶಂಕರನಾರಾಯಣ) ಅವರ ಬದುಕು ಬರಹ ಕುರಿತ  ಪ್ರಸಾರ ಭಾಷಣ ಮಾಲೆಯಲ್ಲದೆ ಜಿ.ಎಸ್.ಎಸ್ ಅವರ ಹಲವು ಪ್ರಸಾರ ಚಿಂತನ, ಭಾಷಣ, ಸಂದರ್ಶನಗಳನ್ನು ಒಳಗೊಂಡ ವಿಶಿಷ್ಟ ಪುಸ್ತಕವಾಗಿದೆ. ಇಂಥ ಉದಾಹರಣೆಗಳು ಕಡಿಮೆ. ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳ ಪ್ರಸಾರ ಸಾಹಿತ್ಯದ ಆಯ್ದ ಬರಹಗಳು ಒಂದು ವೇಳೆ ಪ್ರಕಟಗೊಂಡಿದ್ದಲ್ಲಿ... ಎಂದು ಊಹಿಸಿದರೇ ರೋಮಾಂಚನವಾಗುತ್ತದೆ. ಸಾಮಾನ್ಯವಾಗಿ ಹತ್ತು ನಿಮಿಷಗಳ ಭಾಷಣವು ಮುದ್ರಿತ ರೂಪದಲ್ಲಿ ಐದು ಪುಟಗಳಾಗುತ್ತವೆ ಎಂಬ ಸರಳ ಲೆಕ್ಕಾಚಾರವನ್ನು ಪರಿಗಣಿಸಿದರೂ ಲಕ್ಷಾಂತರ ಪುಟಗಳ ಸಾಹಿತ್ಯ ಪ್ರಸರಣದ ಸಾಧ್ಯತೆಯಿದೆ. ಪ್ರಕಟವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಈ ಪ್ರಮಾಣದ ಸಾಹಿತ್ಯ ಅವಜ್ಞೆಗೆ ಈಡಾಗಬೇಕೆ? ಜನರ ಬಾಯಿಗಳಲ್ಲಿ, ಸ್ಮೃತಿಯಲ್ಲಿ ಮಾತ್ರವಿದ್ದ ಜನಪದವನ್ನು ಸಂಗ್ರಹಿಸಿ, ಸಂಶೋಧಿಸಿ ಅಧ್ಯಯನದ ಹಾದಿಗಳನ್ನು ನಿರ್ಮಿಸಿದ ವಿದ್ವಾಂಸರು, ವಿ.ವಿ.ಗಳು ಬಾನುಲಿಯ ದಿಕ್ಕಿನಲ್ಲಿ ಕನಿಷ್ಠ ಕುತೂಹಲವನ್ನಾದರೂ ತೋರಿಸಬಹುದಿತ್ತೇನೋ. ಪಿಎಚ್.ಡಿ ಅಧ್ಯಯನದ ಸಂದರ್ಭದಲ್ಲಿ ಬಾನುಲಿ ಸಾಹಿತ್ಯವನ್ನು ಒಂದು ಪ್ರಮುಖ ಆಕರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಎಂದಿಗೂ ಇದ್ದೇ ಇದೆ. ಆದರೆ ಈ ಕುರಿತು ನಡೆದಿರುವ ಅಧ್ಯಯನಗಳು ಕೇವಲ ಬೆರಳೆಣಿಕೆಯಷ್ಟು.ರಂಗಭೂಮಿ ತನ್ನ ಸೃಜನಶೀಲ ಕುತೂಹಲ, ಪ್ರಯೋಗಗಳಿಂದ ಸದಾ ವಿಸ್ತಾರಗೊಳ್ಳುತ್ತಿದೆಯಾದರೂ ಬಾನುಲಿಯೆಂಬ ಶ್ರವ್ಯ ರಂಗಭೂಮಿಯನ್ನು ಎಂದಿಗೂ ತನ್ನದೆಂದು ಅದು ಭಾವಿಸಿಯೇ ಇಲ್ಲ. ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಗಳ ಎರಕದಂತೆ ಕಾಣುವ ಬಾನುಲಿಯ ಪ್ರಯೋಗಗಳು ಅಧ್ಯಯನದ ನೆಲೆಯಲ್ಲಿ ಸ್ಥಾನವನ್ನೇ ಪಡೆದಿಲ್ಲ. ಹೀಗಾಗಿ ನೂರಾರು ರೇಡಿಯೋ ನಾಟಕಗಳನ್ನು ನಿರ್ದೇಶಿಸಿದ ಡಾ. ವಸಂತ ಕವಲಿ, ಯಮುನಾಮೂರ್ತಿ, ಜಿ.ಎಂ.ಶಿರಹಟ್ಟಿ, ಪ್ರಭಾಶಿರೂರ ಮುಂತಾದವರು ಕನ್ನಡ ನಾಟಕ ಇತಿಹಾಸದಲ್ಲಿ ನಗಣ್ಯರಾಗಿಬಿಡುತ್ತಾರೆ. ‘ರೂಪಕ’ಗಳ ವಿಚಾರದಲ್ಲಿಯೂ ಇಂತಹ ಅನೇಕರನ್ನು ಹೆಸರಿಸಬಹುದು. ಇದು ಕೇವಲ ಕನ್ನಡದ ಸಮಸ್ಯೆಯಲ್ಲ.  ಭಾರತದ ಉಳಿದ ಭಾಷೆಗಳ ಬಾನುಲಿ ಸಾಹಿತ್ಯವೂ ಇದೇ ಸ್ಥಿತಿಯಲ್ಲಿದೆ.ಬಾನುಲಿ ಒಂದು ಭಾಷಿಕ ಕೈಪಿಡಿಯಿದ್ದಂತೆ. ಭಾಷಾಪಾಠಗಳ ಮೂಲಕ ಭಾಷೆಯ ವ್ಯಾಕರಣವನ್ನು, ಸಂಗೀತ ಪಾಠಗಳ ಮೂಲಕ ಸಂಗೀತ ಭಾಷೆಯನ್ನು, ಸರ್ವರೀತಿಯ ಭಾಷಿಕ ಬಳಕೆಯಿಂದ ಆಯಾ ಪ್ರಾಂತ್ಯದ ಭಾಷಾ ವಿನ್ಯಾಸಗಳನ್ನು ಸದಾ ಪ್ರಚುರಪಡಿಸುತ್ತಿರುತ್ತದೆ.  ಪರೋಕ್ಷವಾಗಿ ಇದೊಂದು ಭಾಷಾ ಶಾಲೆಯೂ ಆಗಿರುತ್ತದೆ. ಭಾಷೆಯನ್ನೇ ಆಶ್ರಯಿಸಿರುವ ಸಾಹಿತ್ಯದ ಮಾತು ಬಂದಾಗ ಇದರ ಈ ಕೊಡುಗೆ ಮಹತ್ವದ್ದಾಗುತ್ತದೆ. ಕನ್ನಡ ಭಾಷಾಕೋಶಕ್ಕೆ ಹಲವಾರು ಪದಗಳನ್ನು ಬಾನುಲಿ ಕೊಡುಗೆಯಾಗಿ ನೀಡಿದೆ. ಇದರ ಒಟ್ಟು ಸ್ವರೂಪವನ್ನು ಭಾಷಾಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಬೇಕಾದ ಜರೂರು ಇದೆ. 

ಎಲ್ಲವೂ ಜಾಗತಿಕವಾಗುತ್ತಿರುವ ಈ ದಿನಗಳಲ್ಲಿ ಇಂಗ್ಲೀಷನ್ನೇ ಹೆಚ್ಚು ಆಶ್ರಯಿಸುತ್ತಿರುವ ನಮ್ಮ ಮುಂದಿನ ತಲೆಮಾರುಗಳು ಕನ್ನಡವನ್ನು ಕೇವಲ ‘ಆಡುನುಡಿ’ಯಾಗಿಸಿಕೊಳ್ಳುವ ಲಕ್ಷಣಗಳು ನಿಚ್ಚಳವಾಗಿ ತಲೆದೋರುತ್ತಿವೆ. ಈಗಿನ ಎಷ್ಟೋ ಮಕ್ಕಳು ಕನ್ನಡದಲ್ಲಿ ಮಾತನಾಡಬಲ್ಲರಾದರೂ ಬರೆಯಲು ಮತ್ತು ಓದಲು ಕಷ್ಟಪಡುತ್ತಿವೆ. ಅಂದರೆ ನಮ್ಮ ‘ಪುರಾತನ ಶ್ರವ್ಯ ಸಂಪ್ರದಾಯ’ವು (ಓರಲ್  ಟ್ರೆಡಿಶನ್) ಆಧುನಿಕಗೊಂಡು ಹೊಸ ರೀತಿಯಲ್ಲಿ ಮತ್ತೆ ಚಾಲ್ತಿಗೆ ಬರುವ ದಟ್ಟ ಸೂಚನೆಗಳಿವೆ. ಹೀಗಿರುವಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅದರ ಸಾಹಿತ್ಯ ಸಂಸ್ಕೃತಿಯನ್ನು ಸಮರ್ಥವಾಗಿ ದಾಟಿಸುವಲ್ಲಿ ಆಕಾಶವಾಣಿಯ ಪಾತ್ರ ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ. ಅಂದರೆ ರೇಡಿಯೋ ‘ಭವಿಷ್ಯದ ಮಾಧ್ಯಮ’ ಎಂಬುದು ನಿಸ್ಸಂಶಯ. ಜಾಗತಿಕ ಮಟ್ಟದಲ್ಲಿ ಹಲವು ತಜ್ಞರು ಈ ಅಭಿಪ್ರಾಯವನ್ನು ಪ್ರತಿಪಾದಿಸಿದ್ದಾರೆ.  ಆದರೆ ಈ ಹೊಣೆಗಾರಿಕೆಯನ್ನು ಸಶಕ್ತವಾಗಿ ಹೊರಬೇಕಾದಲ್ಲಿ ಬಾನುಲಿಯನ್ನು ಅದರ ಪಾಡಿಗೆ ಬಿಟ್ಟು ಬಿಟ್ಟಲ್ಲಿ ಸಾಧ್ಯವಿಲ್ಲ. ಬದಲಾಗಿ ವಿಶ್ವವಿದ್ಯಾನಿಲಯಗಳು, ಭಾಷಾ ಅಧ್ಯಯನ ಪೀಠಗಳು, ಸಾಹಿತ್ಯ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು ತಮ್ಮ ಪಠ್ಯಕ್ರಮ ಮತ್ತು ಚಟುವಟಿಕೆಯ ಒಂದು ಮುಖ್ಯ ಭಾಗವಾಗಿ ಬಾನುಲಿಯನ್ನು ಒಳಗೊಳ್ಳಬೇಕು. ಬೇಂದ್ರೆ, ಕುವೆಂಪು ಮುಂತಾದವರ ಬಗ್ಗೆ ಕೇಳಿ ಗೊತ್ತಿರುವಾಗಲೇ ಉತ್ತಮ ಸಾಹಿತ್ಯ ಪ್ರವೇಶಿಕೆಗಳನ್ನು ಬಾನುಲಿಯಲ್ಲಿ ಮನರಂಜನೆಯ ಜೊತೆಯಲ್ಲೇ ನೀಡುವುದು ಸಾಧ್ಯವಿದೆ. ಬಾನುಲಿ ಅದನ್ನು ಮಾಡುತ್ತಿದೆ. ಸಮಸ್ಯೆಯಿರುವುದು ಅದನ್ನು ಒಳಗು ಮಾಡಿಕೊಳ್ಳಬೇಕಾದ ಹೊರ ಆವರಣದಲ್ಲಿ. ಬಾನುಲಿ ಬರವಣಿಗೆ ಕುರಿತ ಬರವಣಿಗೆ ನಮ್ಮಲ್ಲಿ ಆಗಿರುವುದು ಕಡಿಮೆ. ಉದಾಹರಣೆಗೆ ಚರ್ಚೆಯನ್ನು ಸಂಯೋಜಿಸಬೇಕಿರುವ ರೀತಿ, ಮಾತುಗಾರಿಕೆ, ಅಭಿವ್ಯಕ್ತಿಯ ಕ್ರಮಗಳು, ರೂಪಕ ನಾಟಕಗಳ ರಚನೆ, ರೇಡಿಯೋ ಭಾಷೆ, ಸಂದರ್ಶನದ ರೂಪಗಳು, ಕಾರ್ಯಕ್ರಮ ವಿಮರ್ಶೆ, ಹಾಡುವಿಕೆಯ ಜೊತೆ  ಸಾಹಿತ್ಯವನ್ನು ತಲುಪಿಸಬೇಕಿರುವ ಮಾರ್ಗಗಳು, ಕವಿತೆ-ಕಾದಂಬರಿಯ ಓದು, ಶೈಕ್ಷಣಿಕ ಸಾಧ್ಯತೆ, ಪ್ರಸಾರಕರ ಸಾಧನೆ, ವಾರ್ತಾ ಭಾಷೆ, ವಾರ್ತಾ ಸ್ವರೂಪ, ಶ್ರೋತೃ ಸಂಶೋಧನೆ- ಹೀಗೆ ಬರೆಯಲು, ಯೋಚಿಸಲು ಎಷ್ಟೊಂದು ಸಂಗತಿಗಳಿವೆ.  ಇದೂ ಬಾನುಲಿ ಸಾಹಿತ್ಯದ ಇನ್ನೊಂದು ರೂಪ. ಇದು ಕೇವಲ ಪ್ರಸಾರಕರು ಮಾಡಬೇಕಿರುವ ಕೆಲಸವಲ್ಲ. ಯಾವುದೇ ಶ್ರದ್ಧಾವಂತ ಕೇಳುಗರೂ ಮಾಡಬಹುದು. ಹೊಸ ತಂತ್ರಜ್ಞಾನದ ನೆರವಿನಲ್ಲಿ ಬಾನುಲಿ ಸಾಹಿತ್ಯವನ್ನು ತಲುಪಿಸಲು ಸಾಧ್ಯವಿರುವ ರೀತಿಗಳ ಬಗ್ಗೆಯೂ ಯೋಚನೆ ಮಾಡಲು ಇದು ಸಕಾಲ. ಇಲ್ಲಿ ಏಳುವ ಮುಖ್ಯಪ್ರಶ್ನೆಯೆಂದರೆ ಈ ಇಡೀ ಪ್ರಕ್ರಿಯೆಗೆ ಆಕಾಶವಾಣಿಯು ನೀಡಲೇಬೇಕಾದ ಮತ್ತು ನೀಡಬಹುದಾದ ಸಹಕಾರ. ಕಾರ್ಯಕ್ರಮಗಳ ಸಾರ್ವಜನಿಕ ಲಭ್ಯತೆ ಮತ್ತು ಮಾಹಿತಿ ಪೂರಣ ವಿಚಾರದಲ್ಲಿ ಅದು ತನ್ನ ಚೌಕಟ್ಟುಗಳನ್ನು ತೆರವುಗೊಳಿಸಬೇಕಿದೆ. ಈ ದಿಸೆಯಲ್ಲಿ ಮಾಡಬೇಕಿರುವ ಕಾರ್ಯಗಳತ್ತ ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಿದೆ.  

ದೇಶದಲ್ಲೇ ಮೊತ್ತಮೊದಲ ಬಾರಿಗೆ ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ಮಾಪಕರ ಸಂಘವು ಮೈಸೂರು ಆಕಾಶವಾಣಿಯ ನಿರ್ದೇಶಕಿ ಡಾ. ವಿಜಯಾ ಹರನ್ ಅವರ ನೇತೃತ್ವದಲ್ಲಿ ಇಂದು (ಜ.30) ಆಕಾಶವಾಣಿ ಸಾಹಿತ್ಯ ಸಮ್ಮೇಳನವನ್ನು ವೈಸೂರಿನಲ್ಲಿ ಆಯೋಜಿಸಿದೆ. ಲೇಖಕಿ ಎಚ್.ಎಸ್.ಪಾರ್ವತಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಡಿ.ಪಿ.ಪರಮೇಶ್ವರ ಸಮಾರೋಪ ಭಾಷಣ ಮಾಡಲಿದ್ದಾರೆ. ಸ್ಥಳ: ವಿವೇಕಾನಂದ ಸಭಾಂಗಣ, ಮಹಾಜನ ಕಾಲೇಜು, ಮೈಸೂರು. ಸಮಯ: ಬೆಳಿಗ್ಗೆ 10.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.