ಸೋಮವಾರ, ಮಾರ್ಚ್ 8, 2021
31 °C

ಹರಿಯುತಿದೆ ನೋಡಾ ಹಾಲಿನ ಹೊಳೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಯುತಿದೆ ನೋಡಾ ಹಾಲಿನ ಹೊಳೆ...

ವಿಶಾಲ ಜಾಗದಲ್ಲಿ ಹಾಯಾಗಿ ಮಲಗಿದ್ದ ಹಸುಗಳು, ಮೇಲೆ ಬೃಹತ್ ಫ್ಯಾನ್, ಸರಳುಗಳ ಮೂಲಕ ಕೆಲ ಆಕಳು ಕತ್ತು ಹೊರ ಚಾಚಿ ಮೇವು ತಿನ್ನುತ್ತಿದ್ದವು. ಆ ಮೇವನ್ನು ಹಿಡಿಯೊಂದರಲ್ಲಿ ತೆಗೆದುಕೊಂಡ ರೈತ ಡೇನಿಯಲ್ ವಾರ್ನರ್, ಮೂಸಿ ನೋಡಿ ‘ಆಹ್..!’ ಎಂದು ಉದ್ಗರಿಸಿದರು. ಜತೆಗಿದ್ದ ಜೈಪುರದ ಪತ್ರಕರ್ತ ಎಸ್.ಪಿ. ಸಿಂಗ್ ಮುಖ ಸಿಂಡರಿಸಿಕೊಂಡ. ಅದನ್ನು ಗಮನಿಸಿದ ವಾರ್ನರ್ ‘ನೀವೂ ನೋಡಿ’ ಎಂದು ಆಹ್ವಾನಿಸಿದರು.ಬೇರೇನೂ ತೋಚದೇ ಹಿಡಿಯಷ್ಟು ಮೇವನ್ನು ತೆಗೆದುಕೊಂಡು ಪರಿಮಳ ಆಘ್ರಾಣಿಸಿದಾಗ ‘ವಾಹ್..!’ ಎಂಬ ಉದ್ಗಾರ ತನ್ನಿಂತಾನೇ ಹೊರಟಿತು. ಊಟ ಮಾಡಿದ ಬಳಿಕ ಉಳಿಯುವ ಪದಾರ್ಥ ಸುರಿಯುವ ಅಕ್ಕಚ್ಚು (ಕಲಗಚ್ಚು) ಮುಂದಿಟ್ಟರೆ ಅದನ್ನೇ ಹೀರುವ ನಮ್ಮಲ್ಲಿನ ಆಕಳುಗಳು ತಕ್ಷಣ ನೆನಪಾದವು. ನಮ್ಮ ಹಸುಗಳಿಗೆ ಸಿಗದ ಭಾಗ್ಯ ಇವುಗಳಿಗೆ ಸಿಕ್ಕಿದ್ದು ಕಂಡು ಅಸೂಯೆಯೂ ಆಯಿತು. ಇಸ್ರೇಲಿನಲ್ಲಿ ಇತರ ಉದ್ಯಮಗಳಂತೆಯೇ ಡೇರಿ ಕೂಡ ಪ್ರಮುಖ ಆದಾಯದ ಮೂಲ. ಬರೀ ಹಾಲಿನ ಉತ್ಪಾದನೆ­ ಗಮನದಲ್ಲಿ ಇಟ್ಟುಕೊಳ್ಳದೇ, ಅದರ ಹಲವಾರು ಉತ್ಪನ್ನಗಳತ್ತ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಒಂದೆಡೆ ಉತ್ಪಾದನೆ ಹೆಚ್ಚಳ, ಇನ್ನೊಂದೆಡೆ ಹಾಲಿನ ಉತ್ಪನ್ನಗಳ ಹೆಚ್ಚಳ. ಇದು ಇಸ್ರೇಲಿನ ವೈಶಿಷ್ಟ್ಯ.ಮೇವಿಗಾಗಿ ಜಾನುವಾರುಗಳು ಇಲ್ಲಿ ತಿರುಗಾಡುವು­ದಿಲ್ಲ. ಏಕೆಂದರೆ ಅರ್ಧಕ್ಕೂ ಹೆಚ್ಚು ಭಾಗ ಏನೂ ಬೆಳೆಯದ ಮರಳುಗಾಡು. ಇದರಿಂದಾಗಿ ಡೇರಿಯನ್ನು ವ್ಯವಸ್ಥಿತವಾಗಿ ರೂಪಿಸುವ ಅನಿವಾರ್ಯತೆ ಇದೆ. ಪಶುಪಾಲನಾ ಇಲಾಖೆಯು ಡೇರಿ ಉದ್ಯಮದಾರರ ಜತೆಗೂಡಿ ಶಿಸ್ತುಬದ್ಧ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ.‘ಪ್ರತಿಯೊಂದು ಡೇರಿಯಲ್ಲಿ ಅಳವಡಿಸಿದ ದೊಡ್ಡ ಫ್ಯಾನ್, ಬೇಕೆಂದಾಗ ಬಿಸಿಲು ಬೀಳಲು ಅವಕಾಶ ಕೊಡುವ ಛಾವಣಿ, ನಲ್ಲಿ ನೀರು, ಮೈತೊಳೆಯುವ ಯಂತ್ರ... ಹೀಗೆ ಇಲ್ಲಿ ಆಕಳುಗಳಿಗೆ ಕೊಡುವ ಪ್ರತಿ ಸೌಲಭ್ಯದ ಹಿಂದೆಯೂ ಲೆಕ್ಕಾಚಾರವಿದೆ. ಅದ್ಕಾಗಿಯೇ ನಮ್ಮಲ್ಲಿ ಡೇರಿ ಉದ್ಯಮ ಇಷ್ಟೊಂದು ಲಾಭದಾಯಕವಾಗಿ ನಡೆಯುತ್ತಿದೆ’ ಎನ್ನುತ್ತಾರೆ ಇಸ್ರೇಲ್ ಜಾನುವಾರು ಸಾಕಣೆ ಸಂಘಟನೆಯ ವ್ಯವಸ್ಥಾಪಕ ಯಕೊವ್ ಬಚರ್.

* * *

ವೈಯಕ್ತಿಕವಾಗಿ ರೈತರು ಹಸು ಸಾಕಣೆ ಮಾಡುವುದು ತೀರಾ ಕಡಿಮೆ. ರೈತರ ಸಹಕಾರ ಸಂಘ (ಮಶಾವ್‌)ಗಳು ನೂರರಿಂದ ಇನ್ನೂರು ಆಕಳು ಸಾಕಿದರೆ, ಸಮುದಾಯ ಒಡೆತನ ವ್ಯವಸ್ಥೆ ಹೊಂದಿರುವ ‘ಕಿಬೂತ್’ಗಳು ಸಾವಿರ ಆಕಳು ಪಾಲನೆ ಮಾಡುವುದೂ ಉಂಟು. ಎಲ್ಲ ಆಕಳುಗಳನ್ನೂ ಪಶುಪಾಲನಾ ಇಲಾಖೆಯಲ್ಲಿ ನೋಂದಾಯಿಸಬೇಕು. ಪ್ರತಿಯೊಂದಕ್ಕೂ ಒಂದೊಂದು ಗುರುತಿನ ಸಂಖ್ಯೆ ಕೊಡಲಾಗುತ್ತದೆ.ಯಾವ ಸಮಯದಲ್ಲಿ ಎಂಥ ಆಹಾರ ಕೊಡಬೇಕು ಎಂಬುದನ್ನು ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದಕ್ಕೆ ತಕ್ಕಂತೆ ಆಹಾರ ಪೂರೈಸುವುದು ಪಶುಪಾಲನಾ ಇಲಾಖೆಯ ಪ್ರಾದೇಶಿಕ ಕೇಂದ್ರಗಳ ಜವಾಬ್ದಾರಿ. ಹಾಲು ಕೊಡುವ, ಗರ್ಭ ಧರಿಸಿದ ಅಥವಾ ಕರು ಇಲ್ಲದ ಆಕಳುಗಳಿಗೆ ಪ್ರತ್ಯೇಕ ಆಹಾರ. ಇನ್ನು ಬೆಳೆಯುತ್ತಿರುವ ಕರುಗಳಿಗೂ ಬೇರೆಯದೇ ಆಹಾರ. ‘ಯುನಿಫೀಡ್ ವ್ಯಾಗನ್’ ಎಂಬ ಸಂಚಾರಿ ಘಟಕಗಳು ಡೇರಿ ಇರುವಲ್ಲಿಗೇ ಬಂದು, ಪ್ರತ್ಯೇಕ ಆಹಾರ ತಯಾರಿಸಿ, ಕೊಟ್ಟು ಹೋಗುತ್ತವೆ.ಈ ಆಹಾರವಾದರೂ ಏನು?

ಗೋಧಿ ಹಾಗೂ ಮೆಕ್ಕೆಜೋಳದ ಪೈರು ಪ್ರಮುಖ ಭಾಗ. ಇದರೊಂದಿಗೆ ದ್ವಿದಳ ಧಾನ್ಯ, ಕಿತ್ತಳೆ, ದಾಳಿಂಬೆ ಹಣ್ಣುಗಳ ಸಿಪ್ಪೆ, ಬೇಕರಿಗಳಲ್ಲಿ ಉಳಿದ ಪದಾರ್ಥ, ಸಕ್ಕರೆ, ಖರ್ಜೂರದ ಅವಶೇಷ, ಅಲ್ಪ ಪ್ರಮಾಣದ ಗೋಧಿ, ಕಳೆತ ಹುಲ್ಲು. ಹಸುವಿಗೆ ಸಿಗಬೇಕಾದ ಪೋಷಕಾಂಶಗಳಿಗೆ ತಕ್ಕಂತೆ ಇದನ್ನೆಲ್ಲ ಹದವಾಗಿ ಬೆರೆಸಿ ಕೊಡಲಾಗುತ್ತದೆ. ‘ನಾವು ಆಕಳಿನಿಂದ ಬಯಸುವುದು ಪೌಷ್ಟಿಕ ಆಹಾರ. ಅದನ್ನು ಉತ್ಪಾದಿಸಲು ತಕ್ಕ ಆಹಾರ ಕೊಡಬೇಕಲ್ಲವೇ?’ ಎಂಬ ಪ್ರಶ್ನೆ ಅರವಾ ಮಶಾವ್‌ನ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬರ್ಕಾನ್ ಅವರದು.ಸರ್ವಂ ಯಂತ್ರಮಯಂ

ಆಕಳುಗಳನ್ನು ಶುಚಿಗೊಳಿಸುವುದರಿಂದ ಹಿಡಿದು ಹಾಲು ಕರೆಯುವವರೆಗೆ ಯಂತ್ರಗಳ ಬಳಕೆಯಿದೆ. ಹಾಲು ಕರೆಯುವ ಸ್ಥಳಕ್ಕೆ ಹಸು ಬಂದು ನಿಲ್ಲುತ್ತಲೇ ಅದರ ಮುಂದಿನ ಬಲಗಾಲಿಗೆ ಕಟ್ಟಿರುವ ‘ಸೆನ್ಸರ್’, ಪಕ್ಕದಲ್ಲಿನ ಯಂತ್ರಕ್ಕೆ ಅದರ ಎಲ್ಲ ಮಾಹಿತಿ ರವಾನಿಸುತ್ತದೆ. ಆಕಳ ಕೆಚ್ಚಲು ಸ್ವಚ್ಛಗೊಳಿಸಿ ಕೊಳವೆಗಳನ್ನು ಹಚ್ಚುತ್ತಲೇ ಹಾಲು ಕರೆಯುವ ಕೆಲಸ ಶುರು. ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದರೆ ಎಲ್ಲ ವಿವರ ಅದರ ಹಿಂದಿರುವ ಯಂತ್ರದ ಮೇಲೆ ಮೂಡುತ್ತದೆ. ಹಿಂದಿನ ದಿನ ಕೊಟ್ಟ ಹಾಲು ಎಷ್ಟು? ಕಡಿಮೆ ಕೊಟ್ಟಿದ್ದರೆ ಯಾಕೆ? ಅದಕ್ಕೆ ತೆಗೆದುಕೊಂಡ ಕ್ರಮಗಳೇನು? ಇನ್ನೇನಾದರೂ ಚಿಕಿತ್ಸೆ ಕೊಡಬೇಕೇ? ಎಂಬಿತ್ಯಾದಿ ವಿವರಗಳೆಲ್ಲ ಕಿರುತೆರೆ ಮೇಲೆ ಮೂಡುತ್ತವೆ. ಪ್ರತಿಯೊಂದು ಆಕಳಿಗೆ ನೋಂದಾಯಿತ ಗುರುತಿನ ಸಂಖ್ಯೆ ಇರುವುದರಿಂದ ಎಲ್ಲ ಹಸುಗಳ ಸಂಪೂರ್ಣ ವಿವರಗಳನ್ನು ಎಲ್ಲಾದರೂ ಕುಳಿತು ಪರಿಶೀಲಿಸಬಹುದು.ಹಾಲಿನ ದರ ನಿಗದಿ ಮಾಡುವ ಮುನ್ನ ಸರ್ಕಾರ ರೈತ ಪ್ರತಿನಿಧಿಗಳ ಜತೆ ಸೇರಿ ಚರ್ಚೆ ನಡೆಸುತ್ತದೆ. ಹಾಲನ್ನು ನೇರವಾಗಿ ಮಾರಾಟ ಮಾಡುವ ಬದಲಿಗೆ ಹಾಲು ಆಧಾರಿತ ಪದಾರ್ಥಗಳನ್ನು ಉತ್ಪಾದಿಸಿದರೆ ಲಾಭ ಹೆಚ್ಚು ಎಂಬುದನ್ನು ರೈತರು ಕಂಡುಕೊಂಡಿದ್ದಾರೆ. ಹೀಗಾಗಿ ಹಾಲು ಸಂಸ್ಕರಣೆ, ಸಂಗ್ರಹ ವ್ಯವಸ್ಥೆ ಮಾಡಿಕೊಂಡ ಕೆಲವು ‘ಕಿಬೂತ್’ ಹಾಗೂ ‘ಮಶಾವ್’ಗಳು ಬೇರೆ ಬೇರೆ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗಿವೆ. ರೈತರಲ್ಲಿನ ಆಸಕ್ತಿ ಹಾಗೂ ಹೊಸರುಚಿ ಹುಡುಕಾಟದಿಂದ ಪ್ರತಿ ವರ್ಷವೂ ವಿಶಾಲ ಶ್ರೇಣಿಯ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಕುದುರಿದೆ.ಅಂದ ಹಾಗೆ, ಕಳೆದ ವರ್ಷ ಹಾಲಿನಿಂದ ೮೫೦ ಬಗೆಯ ಡೇರಿ ಪದಾರ್ಥಗಳನ್ನು ಉತ್ಪಾದಿಸಲಾಗಿದೆಯಂತೆ! ‘ಇನ್ನೆರಡು ವರ್ಷಗಳಲ್ಲಿ ಆ ಸಂಖ್ಯೆ ಸಾವಿರದ ಗಡಿಯನ್ನು ದಾಟಬೇಕು ಎಂಬ ಗುರಿ ನಮ್ಮದು’ ಎಂದು ನೆಗೆವ್ ಪ್ರದೇಶವೊಂದರ ಮಶಾವ್‌ನ ರೈತ ರಫೇಲಿ ಹೇಳುತ್ತ, ೫೦ಕ್ಕೂ ಹೆಚ್ಚು ತಿನಿಸುಗಳಿದ್ದ ಪ್ಯಾಕೆಟ್ ಕೊಟ್ಟರು. ತಿಂಗಳತನಕ ಹಾಳಾಗದಂತೆ ಮಾಡಿದ ಪ್ಯಾಕಿಂಗ್ ಮನ ಸೆಳೆಯುವಂತಿತ್ತು. ಹತ್ತಾರು ದೇಶಗಳಲ್ಲಿ ಬೇಡಿಕೆಯುಳ್ಳ ಯಾವುದೇ ಕೃಷಿ ಉತ್ಪನ್ನಕ್ಕೂ ಅಷ್ಟೇ ಶ್ರೇಷ್ಠ ಗುಣಮಟ್ಟ ಹಾಗೂ ಅಂದ-–ಚೆಂದದ  ಪ್ಯಾಕಿಂಗ್ ಅಲ್ಲಿನದು.ಕುರಿಗೊಬ್ಬರ ‘ಮೌಲ್ಯವರ್ಧನೆ’

ಹಾಲಿನ ಉತ್ಪಾದನೆಗೆ ಡೇರಿ, ಮಾಂಸಕ್ಕಾಗಿ ಕುರಿ–-ಆಡು ಸಾಕಣೆ ಮಾಡಲಾಗುತ್ತದೆ. ಒಂದೂವರೆ ಸಾವಿರ ಕುರಿಗಳನ್ನು ಸಾಕುವ ಸ್ಥಳವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿ ಗೊಬ್ಬರದ ಮೌಲ್ಯವರ್ಧನೆ ನಡೆಯುತ್ತಿತ್ತು.ಹೌದು! ಕುರಿ ಹಿಕ್ಕೆ ಶ್ರೇಷ್ಠ ಗೊಬ್ಬರ ಎಂಬುದೇನೋ ಸರಿ. ಆದರೆ ಅದಕ್ಕೂ ಮೌಲ್ಯವರ್ಧನೆ ಮಾಡುವುದೆಂದರೆ? ‘ಹೌದು. ಹೀಗೆ ಮಾಡಿದರೆ ಇದಕ್ಕಿರುವ ಬೆಲೆ ಯಾವುದಕ್ಕೂ ಇಲ್ಲ!’ ಎನ್ನುತ್ತಾರೆ, ಕುರಿ ಸಾಕಣೆಗಾರ ಮೊಹಾಮ್.ಕುರಿ ಹಿಕ್ಕೆಗಳನ್ನು ಚಿೀಲದಲ್ಲಿ ತುಂಬಿ, ಅದಕ್ಕೆ ಒಂದಷ್ಟು ‘ಪೋಷಕಾಂಶ’ ಬೆರೆಸಿ ಯಂತ್ರದಿಂದ ಗಾಳಿ ಹಾಯಿಸುತ್ತಾರೆ. ಬಳಿಕ ಎರಡೂ ತುದಿ ಕಟ್ಟಿ ೧೫ ದಿನ ಬಿಡುತ್ತಾರೆ. ಇದೀಗ ಅತ್ಯುತ್ಕೃಷ್ಟ ಗೊಬ್ಬರ. ಸಾಮಾನ್ಯ ಗೊಬ್ಬರಕ್ಕಿಂತ ಹತ್ತಾರು ಪಟ್ಟು ಇದು ಹೆಚ್ಚು ಪೋಷಕಾಂಶ ಒಳಗೊಂಡಿರುತ್ತದೆ. ಗೊಬ್ಬರವನ್ನು ಹೀಗೂ ‘ಮೌಲ್ಯವರ್ಧನೆ’ ಮಾಡಬಹುದಲ್ಲವೇ?ಲೇಖಕರು ಇಸ್ರೇಲ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿಯ ಅನುಭವದ ಏಳನೇ ಕಂತು ಇದು.

ಮುಂದಿನ ವಾರ : ಅಚ್ಚುಕಟ್ಟಾದ ಪ್ಯಾಕಿಂಗ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.