ಶುಕ್ರವಾರ, ಫೆಬ್ರವರಿ 26, 2021
22 °C
ಅಥ್ಲೆಟಿಕ್ಸ್‌: ಒಮರ್‌ ಮೆಕ್‌ಲಿಯೊಡ್‌ಗೆ ಅಗ್ರಸ್ಥಾನ, ಮೊದಲ ಸ್ಥಾನ ಗಳಿಸಿದ ಕೆನ್ಯಾದ ಚೆಪ್ಕಟಿಜ್ ಕಿಪ್ಯೆಗನ್

ಹರ್ಡಲ್ಸ್‌ನಲ್ಲಿ ಜಮೈಕಕ್ಕೆ ಮೊದಲ ಚಿನ್ನ ತಂದ ಒಮರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರ್ಡಲ್ಸ್‌ನಲ್ಲಿ ಜಮೈಕಕ್ಕೆ ಮೊದಲ ಚಿನ್ನ ತಂದ ಒಮರ್‌

ರಿಯೊ ಡಿ ಜನೈರೊ: ಒಲಿಂಪಿಕ್ಸ್‌ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಅಮೆರಿಕದ ಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಜಮೈಕ ಮುಂದು ವರಿಸಿದ್ದು, ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದೆ.ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಜಮೈಕದ ಒಮರ್‌ ಮೆಕ್‌ಲಿಯೊಡ್‌ 13.05 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಒಲಿಂಪಿಕ್ಸ್‌ನಲ್ಲಿ ಪುರುಷರ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಜಮೈಕ ಚಿನ್ನ ಜಯಿಸಿದ್ದು ಇದೇ ಮೊದಲು.ಕ್ಯೂಬಾ ಮೂಲದ ಸ್ಪೇನ್‌ನ ಅಥ್ಲೀಟ್‌ ಒರ್ಲಾಂಡೊ ಒರ್ಟೆಗ ಎರಡನೇ ಬೆಳ್ಳಿ ಪಡೆದರೆ, ಫ್ರಾನ್ಸ್‌ನ ದಿಮಿತ್ರ ಬಾಸ್ಕೊ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಇದುವರೆಗೆ ಅಮೆರಿಕ ಪ್ರಮುಖ ಶಕ್ತಿ ಎನಿಸಿಕೊಂಡಿತ್ತು.22ರ ಹರೆಯದ ಮೆಕ್‌ಲಿಯೊಡ್‌ ಆರಂಭದಿಂದಲೇ ಮುನ್ನಡೆ ಸಾಧಿಸಿ ಗೆಲುವು ಒಲಿಸಿಕೊಂಡರು. ‘ಒಂದು ದಿನ ನಾನು ಒಲಿಂಪಿಕ್‌ ಚಾಂಪಿಯನ್‌ ಮತ್ತು ವಿಶ್ವಚಾಂಪಿಯನ್‌ ಆಗಬಲ್ಲೆ ಎಂಬು ದನ್ನು ಯೋಚಿಸಿಯೇ ಇರಲಿಲ್ಲ’ ಎಂದು ಮೆಕ್‌ಲಿಯೊಡ್‌ ಪ್ರತಿಕ್ರಿಯಿಸಿದ್ದಾರೆ.ಕಿಪ್ಯೆಗನ್‌ಗೆ ಅಗ್ರಸ್ಥಾನ: ಕೆನ್ಯಾದ ಚೆಪ್ಕೆಟಿಜ್‌ ಕಿಪ್ಯೆಗನ್‌ ಮಹಿಳೆಯರ 1500 ಮೀ. ಓಟದಲ್ಲಿ ಚಿನ್ನ ಗೆದ್ದರು. ಸ್ಪರ್ಧೆಯಲ್ಲಿ ಅರ್ಧಹಾದಿ ಕ್ರಮಿಸಿದ ಬಳಿಕ ಮಿಂಚಿನ ವೇಗದಲ್ಲಿ ಓಡಿದ ಕಿಪ್ಯೆಗನ್‌ 4 ನಿಮಿಷ 8.92 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.ಈ ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ಇಥಿಯೋಪಿ ಯದ ಗೆಂಜೆಬೆ ದಿಬಾಬ  (4:10.27ಸೆ.) ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರೆ, ಅಮೆರಿಕದ ಜೆನಿಫರ್‌ ಸಿಂಪ್ಸನ್‌ ಮೂರನೇ ಸ್ಥಾನ ಪಡೆದರು.ದಿಬಾಬ ಕೊನೆಯ 200 ಮೀ. ಇರುವವರೆಗೂ ಮುನ್ನಡೆ ಕಾಯ್ದುಕೊಂಡಿ ದ್ದರು. ಆದರೆ 22ರ ಹರೆಯದ ಕಿಪ್ಯೆಗನ್‌ ಆ ಬಳಿಕ ಅದ್ಭುತ ವೇಗದಲ್ಲಿ ಓಡಿ ಚಿನ್ನ ತಮ್ಮದಾಗಿಸಿಕೊಂಡರು.ಮೊದಲ ಲ್ಯಾಪ್‌ (400 ಮೀ.) ಅನ್ನು ಎಲ್ಲಾ ಸ್ವರ್ಧಿಗಳು 76 ಸೆಕೆಂಡುಗಳ ಒಳಗೇ ಪೂರ್ಣಗೊಳಿಸಿದರು. ನಂತರದ 400 ಮೀಟರ್ಸ್‌ ದೂರವನ್ನು ಕೊನೆಯದಾಗಿ ಕ್ರಮಿಸಿದವರು 2 ನಿಮಿಷ 27.21 ಸೆಕೆಂಡುಗಳನ್ನು ತೆಗೆದುಕೊಂಡರು.ಈ ಹಂತದಲ್ಲಿ ವೇಗ ಹೆಚ್ಚಿಸಿಕೊಂಡ ದಿಬಾಬ ಗುಂಪಿನಿಂದ ಬೇರೆಯಾದರು. ಕಿಪ್ಯೆಗನ್‌ ಮತ್ತು ಬ್ರಿಟನ್‌ನ ಲಾರಾ ಮ್ಯೂರ್‌ ಅವರೂ ಇಥಿಯೋಪಿಯದ ಸ್ಪರ್ಧಿಗೆ ಪೈಪೋಟಿ ನೀಡಲಾರಂಭಿಸಿ ದರು. ಕೊನೆಯ ಒಂದು ಲ್ಯಾಪ್‌ ಇದ್ದಾ ಗಲೂ ದಿಬಾಬ ಮುನ್ನಡೆಯಲ್ಲಿದ್ದರು.ಆ ಬಳಿಕ ಕಿಪ್ಯೆಗನ್‌ ವೇಗ ಹೆಚ್ಚಿಸಿಕೊಂಡು ಮೊದಲಿಗರಾಗಿ ಗುರಿ ತಲುಪಿದರು. ಕೆನ್ಯಾದ ಅಥ್ಲೀಟ್‌ 58.79 ಸೆಕೆಂಡುಗಳಲ್ಲಿ ಕೊನೆಯ ಲ್ಯಾಪ್‌ ಪೂರೈಸಿದರು.ಮಿಂಚಿದ ಕಿಪ್ರಟೊ:  ಬುಧವಾರ ಬೆಳಿಗ್ಗೆ ನಡೆದ ಪುರುಷರ 3 ಸಾವಿರ ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಕೆನ್ಯಾದ ಕಾನ್‌ಸೆಸ್ಲಸ್‌ ಕಿಪ್ರಟೊ ಚಿನ್ನ ಗೆದ್ದರು. ಅವರು 8 ನಿಮಿಷ 3.28 ಸೆಕೆಂಡು ಗಳಲ್ಲಿ ಗುರಿ ತಲುಪಿದರು. ಅಮೆರಿಕದ ಇವಾನ್‌ ಜಗೆರ್‌ ಮತ್ತು ಕೆನ್ಯಾದ ಎಜೆಕೆಲ್‌ ಕೆಂಬೊಯ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.ಕೆನಡಾಕ್ಕೆ ಮತ್ತೊಂದು ಚಿನ್ನ: ಹೈಜಂಪ್‌ ಸ್ಪರ್ಧಿ ಡೆರೆಕ್‌ ಡ್ರಾಯಿನ್‌ ರಿಯೊ ಕೂಟದಲ್ಲಿ ಕೆನಡಾಕ್ಕೆ ಮೂರನೇ ಚಿನ್ನ ತಂದಿತ್ತರು. ಅವರು 2.38 ಮೀ. ಎತ್ತರ ಜಿಗಿದರು.ಕತಾರ್‌ನ ಈಸಾ ಬಾರ್ಶಿಮ್‌ ಮತ್ತು ಉಕ್ರೇನ್‌ನ ಬೊಹ್ಡನ್‌ ಬೊಂಡರೆಂಕೊ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.ಅಮೆರಿಕ ಕೈತಪ್ಪಿದ ಪದಕ

ಆಧುನಿಕ ಒಲಿಂಪಿಕ್ಸ್‌ನ 120 ವರ್ಷಗಳ ಇತಿಹಾಸದಲ್ಲಿ ಪುರು ಷರ 110 ಮೀ. ಹರ್ಡಲ್ಸ್‌ನಲ್ಲಿ ಅಮೆರಿಕ ಪದಕ ಗೆಲ್ಲಲು ವಿಫಲವಾಗಿದ್ದು ಇದೇ ಮೊದಲು.

1980ರ ಮಾಸ್ಕೊ ಒಲಿಂಪಿಕ್ಸ್‌ ಅನ್ನು ಅಮೆರಿಕ ಬಹಿಷ್ಕರಿಸಿತ್ತು. ಆ ಕೂಟ ಹೊರತುಪಡಿಸಿ ಇತರ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ಪದಕ ಜಯಿಸಿದೆ.

ಈ ಬಾರಿ ಅಮೆರಿಕದ ಇಬ್ಬರು ಸ್ಪರ್ಧಿಗಳು ಫೈನಲ್‌ ಪ್ರವೇಶಿಸಿದ್ದರು. ಡೆವೊನ್‌ ಅಲೆನ್‌ ಐದನೇ ಸ್ಥಾನ ಪಡೆದರೆ, ರಾನಿ ಆ್ಯಷ್‌ ಅನರ್ಹಗೊಂಡರು.

ಒಲಿಂಪಿಕ್ಸ್‌ನ 110 ಮೀ. ಹರ್ಡಲ್ಸ್‌ನಲ್ಲಿ ಇದುವರೆಗೆ ಒಟ್ಟು 27 ಚಿನ್ನದ ಪದಕಗಳಲ್ಲಿ 19ನ್ನೂ ಅಮೆರಿಕ ತನ್ನದಾಗಿಸಿಕೊಂಡಿತ್ತು. ಆದರೆ ಈ ಬಾರಿ ನಿರಾಸೆ ಅನುಭವಿಸಿದೆ.ಫಲಿತಾಂಶ: ಪುರುಷರ ವಿಭಾಗ: 110 ಮೀ. ಹರ್ಡಲ್ಸ್‌: ಒಮರ್‌ ಮೆಕ್‌ಲಿಯೊಡ್‌, ಜಮೈಕ (ಕಾಲ: 13.05 ಸೆ.)–1,  ಒರ್ಲಾಂಡೊ ಒರ್ಟೆಗ, ಸ್ಪೇನ್‌ (13.17 ಸೆ.)–2, ದಿಮಿತ್ರಿ ಬಾಸ್ಕೊ, ಫ್ರಾನ್ಸ್‌ (13.24 ಸೆ.)–33000 ಮೀ. ಸ್ಟೀಪಲ್‌ಚೇಸ್‌: ಕಾನ್‌ಸೆಸ್ಲಸ್‌ ಕಿಪ್ರಟೊ, ಕೆನ್ಯಾ (ಕಾಲ: 8.03.28 ಸೆ.)–2, ಇವಾನ್‌ ಜಗೆರ್‌, ಅಮೆರಿಕ (8.04.28 ಸೆ.)–2, ಎಜೆಕೆಲ್‌ ಕೆಂಬೊಯ್‌, ಕೆನ್ಯಾ (8.08.47 ಸೆ.)–3ಹೈಜಂಪ್‌: ಡೆರೆಕ್‌ ಡ್ರಾಯಿನ್‌, ಕೆನಡಾ (ಎತ್ತರ: 2.38 ಮೀ.)–1, ಮುತಾಜ್‌ ಈಸಾ ಬಾರ್ಶಿಮ್‌, ಕತಾರ್‌ (2.36 ಮೀ.)–2, ಬೊಹ್ಡನ್‌ ಬೊಂಡರೆಂಕೊ, ಉಕ್ರೇನ್‌ (2.33)–3ಮಹಿಳೆಯರ ವಿಭಾಗ

1500 ಮೀ. ಓಟ: 
ಚೆಪ್ಕೆಟಿಜ್‌ ಕಿಪ್ಯೆಗನ್‌, ಕೆನ್ಯಾ (ಕಾಲ: 4:08.92 ಸೆ.)–1, ಗೆಂಜೆಬೆ ದಿಬಾಬ, ಇಥಿಯೋಪಿಯ (4:10.27)–2, ಜೆನಿಫರ್‌ ಸಿಂಪ್ಸನ್‌, ಅಮೆರಿಕ (4:10.53 ಸೆ.)–3ಮುಖ್ಯಾಂಶಗಳು

* ಕೆನಡಾದ ಡೆರೆಕ್‌ ಡ್ರಾಯಿನ್‌ಗೆ ಹೈಜಂಪ್‌ ಚಿನ್ನ

* 1500ಮೀ. ಓಟ: ಗೆಂಜೆಬೆ ದಿಬಾಬಗೆ ಆಘಾತ ನೀಡಿದ ಕಿಪ್ಯೆಗನ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.