ಮಂಗಳವಾರ, ಮಾರ್ಚ್ 2, 2021
28 °C
ಸ್ವಯಂಪ್ರೇರಿತ ತೆರವಿಗೆ ಹೆಚ್ಚಿನ ಕಾಲಾವಕಾಶದ ಮನವಿಗೆ ಒಪ್ಪದ ಪಾಲಿಕೆ ಅಧಿಕಾರಿಗಳು * ಕಿಟಕಿ, ಬಾಗಿಲುಗಳನ್ನು ತೆಗೆದುಕೊಳ್ಳಲು ಅವಕಾಶ

ಹಲಗೇವಡೇರಹಳ್ಳಿ: ಮೂರು ಮನೆಗಳು ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಗೇವಡೇರಹಳ್ಳಿ: ಮೂರು ಮನೆಗಳು ನೆಲಸಮ

ಬೆಂಗಳೂರು: ರಾಜರಾಜೇಶ್ವರಿ ನಗರದ ಹಲಗೇವಡೇರಹಳ್ಳಿಯಲ್ಲಿ ಬಿಬಿಎಂಪಿ ಮೂರು ಮನೆಗಳನ್ನು ಗುರುವಾರ ತೆರವುಗೊಳಿಸಿದೆ. ರಾಜರಾಜೇಶ್ವರಿನಗರ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಡಾ.ಬಿ. ವೀರಭದ್ರಪ್ಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 9ಕ್ಕೆ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡಿತು.ಈ ವೇಳೆ, ಸ್ವಯಂ ಪ್ರೇರಣೆಯಿಂದ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದು, ಮತ್ತಷ್ಟು ಕಾಲಾವಕಾಶ ನೀಡುವಂತೆ ಕಟ್ಟಡಗಳ ಮಾಲೀಕರು ಮನವಿ ಮಾಡಿದರು. ಇದಕ್ಕೆ ಒಪ್ಪದ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದರು. ಹಿಟಾಚಿ ಯಂತ್ರದ ಮೂಲಕ ಮನೆಯ ಒಂದು ಪಾರ್ಶ್ವವನ್ನು ತೆರವುಗೊಳಿಸಲಾಯಿತು.ಈ ವೇಳೆ ಮನೆಯ ಪ್ರಮುಖ ಬಾಗಿಲುಗಳನ್ನು ಬೆಲೆಬಾಳುವ ಮರಗಳಿಂದ ತಯಾರಿಸಲಾಗಿದ್ದು, ಅವುಗಳನ್ನು ಸ್ವಯಂ ತೆರವುಗೊಳಿಸಲು ಒಂದೆರಡು ತಾಸು ಕಾಲಾವಕಾಶ ನೀಡುವಂತೆ ಕಟ್ಟಡದ ಮಾಲೀಕ ನಟರಾಜ್‌ ಅವರು ಬಿಬಿಎಂಪಿ ಸಿಬ್ಬಂದಿಗೆ ಮನವಿ ಮಾಡಿದರು.

ಇದಕ್ಕೆ ಒಪ್ಪದೆ ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು. ಆಗ, ಕಟ್ಟಡದಲ್ಲಿದ್ದ ಕೆಲಸಗಾರರು ಹಾಗೂ ಬಿಬಿಎಂಪಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಮನೆಯ ಮಾಲೀಕರು ಹಾಗೂ ಕೆಲಸಗಾರರ ಕೋರಿಕೆಗೆ ಸ್ಪಂದಿಸಿದ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು.ಕಲ್ಯಾಣ ಮಂಟಪದ ಕಟ್ಟಡ ತೆರವು: ಹಲಗೇವಡೇರಹಳ್ಳಿಯ ಪದ್ಮಾವತಿ ಕಲ್ಯಾಣ ಮಂಟಪ ಹಾಗೂ ಮೀನಾಕ್ಷಿ ಕಲ್ಯಾಣ ಮಂಟಪದ ಮಧ್ಯ ಭಾಗದ ಕಟ್ಟಡವನ್ನು ನೆಲಸಮಗೊಳಿಸಲಾಯಿತು. ಈ ಕಲ್ಯಾಣ ಮಂಟಪಗಳು ತಿರುಚಿ ಸ್ವಾಮೀಜಿ ಚಾರಿಟಬಲ್‌ ಟ್ರಸ್ಟ್‌ಗೆ ಸೇರಿವೆ.ಈ ಕಾಲುವೆಯು ಕಲ್ಯಾಣ ಮಂಟಪಗಳ ನಡುವೆ ಹಾದು ಹೋಗಿದ್ದು, ಅಲ್ಲಿ ಶೌಚಾಲಯ ಹಾಗೂ ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಂಟಪದ ಆವರಣ ಗೋಡೆ ಸಹ ಕಾಲುವೆಯ ಮೇಲೆ ನಿರ್ಮಾಣಗೊಂಡಿದೆ.ಕಟ್ಟಡ ತೆರವುಗೊಳಿಸಬೇಕಾದ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಗುರುತು ಹಾಕಿ ಹೋಗಿದ್ದರು. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸದ ಕಾರಣ ಹಿಟಾಚಿ ಯಂತ್ರದ ಮೂಲಕ ಕಲ್ಯಾಣ ಮಂಟಪದ ಕಟ್ಟಡ ಹಾಗೂ ಆವರಣ ಗೋಡೆಯನ್ನು ತೆರವುಗೊಳಿಸಲಾಯಿತು.

300 ಮೀಟರ್‌ ಹಲಗೇವಡೇರಹಳ್ಳಿ ಕೆರೆಯಿಂದ ಕೆಂಚೇನಹಳ್ಳಿ ಕೆರೆ ನಡುವಿನ ಸಂಪರ್ಕಜಾಲದಲ್ಲಿ ಈವರೆಗೆ ತೆರವು ಮಾಡಿರುವ  ರಾಜಕಾಲುವೆಯ ಉದ್ದ

ಸರ್ವೆ ನಡೆಸಿ ವರದಿ ನೀಡಲು ಸೂಚನೆ

‘ಎಸ್‌.ಎಸ್‌.ಆಸ್ಪತ್ರೆ ಹಾಗೂ ನಟ ದರ್ಶನ್‌ ಮನೆ ರಾಜಕಾಲುವೆ ಪ್ರದೇಶದಲ್ಲೇ ನಿರ್ಮಾಣಗೊಂಡಿವೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ಸರ್ವೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಂಟಿ ಆಯುಕ್ತ ಡಾ.ಬಿ.ವೀರಭದ್ರಪ್ಪ ತಿಳಿಸಿದರು.

‘ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಕಾಲುವೆ ಒತ್ತುವರಿ ಆಗಿರುವ 14 ಸ್ಥಳಗಳನ್ನು ಗುರುತಿಸಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಐಡಿಯಲ್‌ ಹೋಂ ಟೌನ್‌ಶಿಪ್‌ನ 2ನೇ ಹಂತದಲ್ಲಿರುವ ಎಸ್‌.ಎಸ್‌. ಆಸ್ಪತ್ರೆ, ನಟ ದರ್ಶನ್‌ ವಾಸವಿರುವ ಮನೆ ಸೇರಿದಂತೆ ಕೆಲ ಮನೆಗಳು ರಾಜಕಾಲುವೆ ಮೇಲೆ ನಿರ್ಮಾಣಗೊಂಡಿವೆ ಎಂಬ ಮಾತು ಕೇಳಿಬರುತ್ತಿದೆ. ರಾಜಕಾಲುವೆಯ ಮಾರ್ಗವನ್ನು ನಿಖರವಾಗಿ ಗುರುತಿಸುವ ಉದ್ದೇಶದಿಂದ ಸರ್ವೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.ಕಂದಾಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಿರುವ ನಕ್ಷೆ ಪ್ರಕಾರ   ಕಾಲುವೆಯು ಎಸ್‌.ಎಸ್‌. ಆಸ್ಪತ್ರೆಯ ಮಧ್ಯ ಭಾಗದಲ್ಲಿ  ಹಾದು ಹೋಗುತ್ತದೆ. ಅಲ್ಲದೆ, ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲುವೆ ಹಾದು ಹೋಗಿದ್ದು, ಅಲ್ಲಿ ಹಲವು ಮನೆಗಳು ನಿರ್ಮಾಣಗೊಂಡಿವೆ. ಈ ಪೈಕಿ ದರ್ಶನ್‌ ಅವರ ಮನೆಯೂ ಸೇರಿದೆ.

ಹಿರಿಯ ಸರ್ವೆ ಅಧಿಕಾರಿಗಾಗಿ ಪತ್ರ

‘ದಾಸರಹಳ್ಳಿ ವಲಯದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕಾದ ಸ್ಥಳಗಳ ಸರ್ವೆ ಕಾರ್ಯ ಬಾಕಿ ಇದೆ. ಈಗಿರುವ ಸರ್ವೆ ಅಧಿಕಾರಿ ಹೊಸಬರಾಗಿದ್ದು, ಅವರಿಂದ ಸರ್ವೆ ನಡೆಸಲು ಸಾಧ್ಯವಾಗುತ್ತಿಲ್ಲ.ಹಿರಿಯ ಸರ್ವೆ ಅಧಿಕಾರಿಯನ್ನು ನೀಡುವಂತೆ ಪತ್ರ ಬರೆದಿದ್ದೇನೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತೆ ಶಶಿಕಲಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ವೆ ಕಾರ್ಯ ಮುಗಿದ ಬಳಿಕ ತೆರವುಗೊಳಿಸಬೇಕಾದ ಕಟ್ಟಡಗಳಿಗೆ ಗುರುತು ಹಾಕುತ್ತೇವೆ. ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳುತ್ತೇವೆ’ ಎಂದರು.

ಸ್ವಯಂ ತೆರವಿಗೆ ಅವಕಾಶ ನೀಡದ್ದಕ್ಕೆ ಆಕ್ರೋಶ

‘ಬಿಬಿಎಂಪಿ ಅಧಿಕಾರಿಗಳು ಗುರುತು ಹಾಕಿದ ಭಾಗವನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದೆವು.  ಆದರೆ, ಈಗ ಏಕಾಏಕಿ ಕಟ್ಟಡವನ್ನು ನೆಲಸಮಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಹಲಗೇವಡೇರಹಳ್ಳಿಯ ನಿವಾಸಿ ನಟರಾಜ್‌ ಆಕ್ರೋಶ ವ್ಯಕ್ತಪಡಿಸಿದರು.‘ಕಟ್ಟಡವನ್ನು ಸ್ವಯಂ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ  ಕಳೆದ ಶುಕ್ರವಾರ ಮನವಿ ಪತ್ರ ನೀಡಿದ್ದೆವು. ಸ್ವಯಂ ಕಟ್ಟಡ ತೆರವಿಗೆ ನಮ್ಮ ಅಭ್ಯಂತರವಿಲ್ಲ. ಒಂದು ವಾರದಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಈ ಮಧ್ಯೆ ರಜೆಗಳು ಬಂದಿದ್ದರಿಂದ ಕೆಲಸಗಾರರು ಸಿಗಲಿಲ್ಲ. ಹೀಗಾಗಿ ನಿಗದಿತ ಅವಧಿಯಲ್ಲಿ ತೆರವು ಮಾಡಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.‘ಈಗ ಯಾವುದೇ ಮುನ್ಸೂಚನೆ ನೀಡದೆ ದುರುದ್ದೇಶದಿಂದ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಹಿಟಾಚಿ ಯಂತ್ರದ ಮೂಲಕ ಮನಬಂದಂತೆ ತೆರವು ಮಾಡಲಾಗುತ್ತಿದೆ. ಇದರಿಂದ ಇಡೀ ಕಟ್ಟಡಕ್ಕೆ ಹಾನಿ ಉಂಟಾಗಲಿದೆ’ ಎಂದು ಅಳಲು ತೋಡಿಕೊಂಡರು.ನಟರಾಜ್‌ ಅವರ ಮಾತಿಗೆ ದನಿಗೂಡಿಸಿದ ಕಟ್ಟಡ ತೆರವುಗೊಳಿಸುತ್ತಿದ್ದ ಫೈರೋಜ್‌, ‘ಗ್ಯಾಸ್‌ ಕಟರ್‌ ಬಳಸಿ ವೈಜ್ಞಾನಿಕವಾಗಿ ಕಟ್ಟಡವನ್ನು ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ಕಟ್ಟಡವನ್ನು ಯದ್ವಾತದ್ವ ಒಡೆಯುತ್ತಿದ್ದಾರೆ. ಇದರಿಂದ ಕೆಲ ಬೆಲೆ ಬಾಳುವ ವಸ್ತುಗಳು ಹಾಳಾಗಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಡವರಿಗೊಂದು ನ್ಯಾಯ

ಮತ್ತೊಂದು ಕಟ್ಟಡದ ಮಾಲೀಕ ಮಹಾಲಿಂಗೇಗೌಡ ಮಾತನಾಡಿ, ‘ಪ್ರಭಾವಿಗಳು ತಮ್ಮ ಕಟ್ಟಡಗಳನ್ನು ತಾವೇ ತೆರವುಗೊಳಿಸುತ್ತೇವೆ ಎಂದು ಹೇಳಿದರೆ ಅವರಿಗೆ ಬೇಕಾದಷ್ಟು ದಿನ ಕಾಲಾವಕಾಶ ನೀಡಲಾಗುತ್ತದೆ. ಆದರೆ, ನಮಗೆ ಒಂದು ದಿನ ಅವಕಾಶ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ’ ಎಂದು ದೂರಿದರು.‘ನಿಯಮದ ಪ್ರಕಾರ ಮೊದಲು ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಆಗಿರುವ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು. ಆ ಜಾಗವನ್ನು ಬಿಟ್ಟು ಇಲ್ಲಿನ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ಸಾಲು ಸಾಲು ರಜೆಯಿಂದ ತೆರವು ಸಾಧ್ಯವಾಗಿರಲಿಲ್ಲ

ಪದ್ಮಾವತಿ ಹಾಗೂ ಮೀನಾಕ್ಷಿ ಕಲ್ಯಾಣ ಮಂಟಪಗಳ ವ್ಯವಸ್ಥಾಪಕ ನಾಗರಾಜು ಮಾತನಾಡಿ, ‘ನಾವೇ ತೆರವುಗೊಳಿಸುತ್ತೇವೆ ಎಂದು ಬಿಬಿಎಂಪಿ ಜಂಟಿ ಆಯುಕ್ತರಿಗೆ ಮನವಿ ಪತ್ರ ಕೊಟ್ಟಿದ್ದೆವು. ಆದರೆ, ರಜೆ ಬಂದಿದ್ದರಿಂದ ತೆರವು ಮಾಡಲು ಸಾಧ್ಯವಾಗಿರಲಿಲ್ಲ.ಗುರುವಾರ ಕಟ್ಟರ್‌ ಯಂತ್ರಗಳನ್ನು ತರಿಸಿದ್ದು, ತೆರವಿಗೆ ಮುಂದಾಗಿದ್ದೆವು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಹಿಟಾಚಿ ಯಂತ್ರದ ಮೂಲಕ ಕಟ್ಟಡವನ್ನು ಒಡೆಯುತ್ತಿದ್ದಾರೆ’ ಎಂದು ದೂರಿದರು.‘6 ಮೀಟರ್‌ ಜಾಗವನ್ನಷ್ಟೇ ಒಡೆಯಬೇಕಿತ್ತು. ಆದರೆ, ಮನಬಂದಂತೆ ಕಟ್ಟಡವನ್ನು ತೆರವುಗೊಳಿಸಲಾಗುತ್ತಿದೆ.  ಈಗಾಗಲೇ ಈ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡಲು ಹಲವರು ಬುಕ್ಕಿಂಗ್‌ ಮಾಡಿದ್ದಾರೆ. ಅವರಿಗೆ ಇದರಿಂದ ತೊಂದರೆ ಉಂಟಾಗಲಿದೆ’.

ಸ್ವಯಂ ಪ್ರೇರಣೆಯಿಂದ ತೆರವು

ಆರ್‌.ಆರ್‌.ನಗರದ ಬಿಇಎಂಎಲ್‌ ಬಡಾವಣೆಯಲ್ಲಿ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ನಾಲ್ಕು ಮನೆಗಳನ್ನು ಅಲ್ಲಿನ ಮಾಲೀಕರೇ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ.‘ಕಾಲುವೆಯ ನಾಲ್ಕೈದು ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮಾಲೀಕರು ಸ್ವಇಚ್ಛೆಯಿಂದ ತೆರವುಗೊಳಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

*

ಹಲಗೇವಡೇರಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳ ಸ್ವಯಂ ತೆರವಿಗೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಆದರೆ, ಕಾಲಮಿತಿಯಲ್ಲಿ ತೆರವುಗೊಳಿಸಲಿಲ್ಲ. ಹೀಗಾಗಿ ನಾವೇ ತೆರವುಗೊಳಿಸುತ್ತಿದ್ದೇವೆ

-ಡಾ.ಬಿ.ವೀರಭದ್ರಪ್ಪ, ರಾಜರಾಜೇಶ್ವರಿನಗರ ವಲಯದ ಬಿಬಿಎಂಪಿ ಜಂಟಿ ಆಯುಕ್ತ

*

ಮುಖ್ಯಾಂಶಗಳು

* ಮನೆ ಮಾಲೀಕರು, ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ

* ಎರಡು ಕಲ್ಯಾಣ ಮಂಟಪಗಳ ನಡುವಿನ ಜಾಗ ತೆರವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.