ದಟ್ಟ ಕಾಡಿನ ನಡುವಿರುವ ಆ ಮನೆಗೆ ಆಕಸ್ಮಿಕವಾಗಿ ಬಂದು ಸಿಕ್ಕಿ ಹಾಕಿಕೊಂಡ ಆರು ಜನರ ಪೈಕಿ ಒಬ್ಬೊಬ್ಬರೇ ಸಾವನ್ನಪ್ಪುತ್ತಾರೆ. ಅದನ್ನು ರಹಸ್ಯವಾಗಿ ಚಿತ್ರೀಕರಿಸಿ, ಸಂಕಲನ ಮಾಡುವ ಎಡಿಟಿಂಗ್ ರೂಮ್ಗೆ ಆ್ಯಂಕರ್ ಮಲ್ಲಿಕಾ ಬಂದು ಕಂಪ್ಯೂಟರ್ ಮೌಸ್ ಕ್ಲಿಕ್ ಮಾಡುತ್ತಾಳೆ. ಇಡೀ ರೂಮು ಸ್ಫೋಟಗೊಳ್ಳುತ್ತದೆ. ಮರುದಿನ ಸೂರ್ಯ ಮೂಡುತ್ತಿದ್ದಂತೆ ಎಲ್ಲರೂ ಮೌನವಾಗಿ ಅಲ್ಲಿಂದ ಹೊರಬೀಳುತ್ತಾರೆ. ಸುವ್ವಿಗಡ್ಡದ ಪುರಾತನ ಮನೆಯಲ್ಲಿ ರಾತ್ರಿಯಿಡೀ ನಡೆಯುವ ಆ ಭಯಾನಕ ಘಟನೆಗಳು ನಿಜವೇ? ಬರೀ ಭ್ರಮೆಯೇ? ಈ ಪ್ರಶ್ನೆಯನ್ನು ನಾಯಕ ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಾನೆ. ಅದು ಸಿನಿಮಾ ನೋಡುವ ಎಲ್ಲ ಪ್ರೇಕ್ಷಕರ ಪ್ರಶ್ನೆಯೂ ಆಗಿರುತ್ತದೆ.

ಹಾರರ್, ಥ್ರಿಲ್ಲರ್ ಜತೆಗೆ ‘ಸೈಕಲಾಜಿಕಲ್’ ಎಂಬ ಪದವನ್ನು ಬೆರೆಸಿ ಮಾಡಿದ ‘ಲಾಸ್ಟ್ ಬಸ್’ ಹೊಸ ಬಗೆಯ ಚಿತ್ರಗಳ ಸಾಲಿನಲ್ಲಿ ನಿಲ್ಲುವಂಥದು. ರಿಯಾಲಿಟಿ ಶೋ ನಿರ್ದೇಶಕನೊಬ್ಬನ ತಂತ್ರಗಳು, ಜನಪ್ರಿಯತೆ ಪಡೆವ ದಾರಿಯಲ್ಲಿ ನಡೆಸುವ ಪ್ರಯೋಗಗಳು ಇಲ್ಲಿವೆ. ಹೀಗಾಗಿ, ಭಯ ಒಂದು ಭಾವನೆ ಎಂಬುದನ್ನು ಪ್ರತಿಪಾದಿಸುವ ಚಿತ್ರ ಇದಾಗಿದ್ದರೂ, ಅದಕ್ಕೂ ಹೊರತಾದ ಒಂದಷ್ಟು ಆಯಾಮಗಳು ದಕ್ಕಿವೆ.

ಬೇರೆ ಬೇರೆ ಉದ್ದೇಶಕ್ಕೆಂದು ಆರು ಮಂದಿ ಪ್ರಯಾಣಿಸುವ ‘ಲಾಸ್ಟ್ ಬಸ್ ’ ಅಪಘಾತಕ್ಕೆ ಸಿಲುಕಿದಾಗ, ದಾರಿ ಹುಡುಕುತ್ತ ಹೊರಟವರು ಹಳೇ ಮನೆಯಲ್ಲಿ ಬಂದಿಯಾಗುತ್ತಾರೆ. ಇಡೀ ರಾತ್ರಿ ಅವರನ್ನು ಯಾರೋ ಭಯಾನಕವಾಗಿ ಕಾಡುತ್ತಾರೆ. ಅದು ಮಾಯಿ (ದೆವ್ವ) ಎಂಬ ಹೆದರಿಕೆಯನ್ನು ನಾಯಕ ಪೃಥ್ವಿ ಗೇಲಿ ಮಾಡುತ್ತ ಎಲ್ಲರನ್ನು ಪಾರುಮಾಡಲು ಯತ್ನಿಸುತ್ತಾನೆ. ಆದರೆ ಅದೆಲ್ಲ ವಿಫಲವಾಗಿ ಆತನೂ ಕೊನೆಕೊನೆಗೆ ‘ಮಾಯಿ’ ಖೆಡ್ಡಾಕ್ಕೆ ಬೀಳುತ್ತಾನೆ.

ಅಸಲಿ ಕಥೆ ಇರುವುದು ಈ ಮಾಯಿಯ ಆಟದಲ್ಲಿ. ರಿಯಾಲಿಟಿ ಶೋ ನಿರ್ದೇಶಕ ಸ್ಯಾಂಡಿ, ಎಲ್ಲ ಘಟನೆಗಳೂ ನೈಜವಾಗಿ ಇರಲಿ ಎಂಬ ತಂತ್ರದಿಂದ ಅವರನ್ನು ಈ ಮನೆಯಲ್ಲಿ ಕೂಡಿಹಾಕಿರುತ್ತಾನೆ. ಸ್ಯಾಂಡಿ ಹೂಡುವ ತಂತ್ರಗಳು, ಆತನ ಹತೋಟಿ ಮೀರಿ ಎಲ್ಲೆಲ್ಲೋ ಹೋಗುತ್ತವೆ. ಅದು ಮಾನಸಿಕ ಸ್ಥಿಮಿತ ಕಳೆದುಕೊಂಡ ಸ್ಯಾಂಡಿ ಅನುಭವವೇ? ಮನೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳು ಅವರವರ ಮನಸ್ಸಿನಲ್ಲಿ ಹುದುಗಿರುವ ಆತಂಕ ಹೊರಹೋಗುವ ದಾರಿಯೇ? ಭಯ ಎಂಬುದು ದುರ್ಬಲ ಮನಸ್ಸುಗಳು ಅನುಭವಿಸುವ ಸಂಕಟದ ಪ್ರತಿಬಿಂಬವೇ? ಇಂಥವೇ ಹತ್ತಾರು ಪ್ರಶ್ನೆಗಳನ್ನು ‘ಲಾಸ್ಟ್ ಬಸ್’ ಎಸೆಯುತ್ತದೆ.

ಇರುವುದನ್ನು ಇಲ್ಲ ಅನಿಸುವ, ಇಲ್ಲದ್ದನ್ನು ಇದೆ ಎನಿಸುವಂತೆ ಮಾಡುವ ಥ್ರಿಲ್ಲರ್ ಗುಣ ಇಲ್ಲಿ ಧಾರಾಳವಾಗಿದೆ. ಎರಡು ಹಾಡುಗಳು ಚಿತ್ರದ ಜತೆಗೆ ಸಾಗುತ್ತವೆ. ಬಹುತೇಕ ಕತ್ತಲಿನಲ್ಲೇ ನಡೆಯುವ ಕಥೆಯನ್ನು ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಕ್ಯಾಮೆರಾ (ಅನಂತ ಅರಸ್) ಕೈಚಳಕವಿದೆ; ಹಿನ್ನೆಲೆ ಸಂಗೀತ (ಸ್ಟೀಫನ್) ಪೂರಕವಾಗಿದೆ. ಕಲಾವಿದರಿಂದ ಅಗತ್ಯ ಪ್ರಮಾಣಷ್ಟೇ ಅಭಿನಯ ಹೊರತೆಗೆಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಅತಿರಂಜಿತ, ನಾಯಕನ ವೈಭವೀಕರಣದ ಚರ್ವಿತ–ಚರ್ವಣ ಕಥೆಯುಳ್ಳ ಸಿನಿಮಾಗಳ ಮಧ್ಯೆ, ನೋಡುಗನನ್ನು ಚಿಂತನೆಗೆ ಪ್ರೇರೇಪಿಸುವ ಇಂಥ ಸಿನಿಮಾಗಳು ಭರವಸೆ ಮೂಡಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.