ಸೋಮವಾರ, ಏಪ್ರಿಲ್ 19, 2021
32 °C

ಹಲವು ಪ್ರಸ್ತಾವನೆ- ಕೆಲವು ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಿ, ನಗರ ಪ್ರದಕ್ಷಿಣೆ ಮಾಡಿಸುವುದು. ನಂತರ ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಹಣ ಕೋರುವುದು. ನಗರದಲ್ಲಿನ ಕೋಟೆ, ಹುಲಿಕೆರೆ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ, ಎಂಜಿನಿಯರಿಂಗ್ ಕಾಲೇಜು, ಸಂಚಾರ ಪೊಲೀಸ್ ಠಾಣೆ ಸ್ಥಾಪನೆ....ಇದು ಈಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡು, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಂಗಣ್ಣ ಕರಡಿ ಅವರ ಆದ್ಯತೆಗಳು.ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಗರ ಹಾಗೂ ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗಾಗಿ ತಾವು ನಡೆಸಿರುವ ಪ್ರಯತ್ನಗಳನ್ನು ವಿವರಿಸಿದರು.ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ನಗರಕ್ಕೆ ಆಹ್ವಾನಿಸಿ, ನಗರದಲ್ಲಿ ಸಂಚರಿಸಲಾಗುವುದು. ವಸ್ತುಸ್ಥಿತಿಯನ್ನು ಅವರ ಮುಂದಿಡುವ ಜೊತೆಗೆ, ನಗರದ ಅಭಿವೃದ್ಧಿಗೆ ಮತ್ತಷ್ಟೂ ಅನುದಾನ ಕೇಳಲಾಗುವುದು. ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಅವರ ಸಹಕಾರದೊಂದಿಗೆ ಮುಖ್ಯಮಂತ್ರಿಗಳಿಂದ ಈ ಹಣ ಬಿಡುಗಡೆಯಾಗುವಂತೆ ಮಾಡಿ, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.ನಗರದಲ್ಲಿನ ಹುಲಿಕೆರೆಯನ್ನು ಅಭಿವೃದ್ಧಿಗೊಳಿಸಲು 1 ಕೋಟಿ ರೂಪಾಯಿ, ಅದರ ಬಳಿ ಸುಮಾರು 11 ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡು ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ ನೀಡುವಂತೆ ಕೋರಲಾಗಿದೆ.ಐತಿಹಾಸಿಕ ಮಹತ್ವದ ಕೋಟೆಯನ್ನು ಅಭಿವೃದ್ಧಿಗೊಳಿಸಿ, ಸಂರಕ್ಷಣೆ ಮಾಡುವ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಅಗತ್ಯವಿದೆ. ಇದಕ್ಕಾಗಿ 3 ಕೋಟಿ ರೂಪಾಯಿಗಳನ್ನು ನೀಡುವಂತೆ ಕೋರಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಗೊಳ ಹಾಗೂ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕಾಗಿ 3 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಸಹ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ. ಇನ್ನು ಕಟ್ಟಡ ಒದಗಿಸಿದ ನಂತರ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು ಎಂಬ ನೂತನ ನಿಯಮವಿದೆ. ಅದಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಿಸಿ, ಕಾಲೇಜು ಆರಂಭಿಸುವುದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಾವಳಿಗಳಲ್ಲಿನ ತೊಂದರೆಯಿಂದಾಗಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದೂ ಅವರು ಹೆಃಳಿದರು.ಇನ್ನು, ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನೇಕ ಬೇಡಿಕೆಗಳನ್ನು ಮುಂದಿಡಲಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು 100 ಕೋಟಿ ರೂಪಾಯಿಗಳ ಪೈಕಿ ಮೊದಲ ಹಂತದಲ್ಲಿ 33 ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸಿಂಗಟಾಲೂರು ಯೋಜನೆಯಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುವೆ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಬೆಟಗೇರಿ, ಕವಲೂರು, ಗಿಣಿಗೇರಾ ಮತ್ತು ಹೊಸನಿಂಗಾಪುರ ಗ್ರಾಮಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಬೇಕು, 6 ಪ್ರೌಢಶಾಲೆಗಳು, 2 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 3 ಐ.ಟಿ.ಐ. ಕಾಲೇಜುಗಳನ್ನು ಆರಂಭಿಸುವಂತೆ ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ.ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚುತ್ತಿರುವುದನ್ನು ಅನುಲಕ್ಷಿಸಿ, ಜಿ.ಟಿ.ಟಿ.ಸಿ. ಆರಂಭಿಸುವಂತೆ ಸಹ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಳಕಪ್ಪ ಜಾಧವ, ನಗರಸಭೆ ಸದಸ್ಯ ವಿಷ್ಣುತೀರ್ಥ ಗುಬ್ಬಿ, ವಿರುಪಾಕ್ಷಪ್ಪ ಮೋರನಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಗಡಾದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಮೈನಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.