ಶನಿವಾರ, ಜನವರಿ 18, 2020
18 °C

ಹಳದಿ ಎಲೆ ರೋಗ: ಮುಖ್ಯಮಂತ್ರಿ ಬಳಿಗೆ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ಶಾಸಕ ಡಿ.ಎನ್.ಜೀವರಾಜ್ ಅವರ ನೇತೃತ್ವದಲ್ಲಿ ಕ್ಷೇತ್ರದ ಅಡಿಕೆ ಹಳದಿ ಎಲೆರೋಗ ಪೀಡಿತ ರೈತರ ನಿಯೋಗವು ಸದ್ಯದಲ್ಲೇ ಮುಖ್ಯಮಂತ್ರಿ ಭೇಟಿ ಮಾಡಲಿದೆ ಮತ್ತು ತುರ್ತು ಪರಿಹಾರಕ್ಕಾಗಿ ಒತ್ತಾಯಿಸಲಿದೆ.ನಂತರ ಮುಖ್ಯಮಂತ್ರಿ ನೇತೃತ್ವದಲ್ಲಿ ಅಡಿಕೆ ಬೆಳೆಗಾರರ ನಿಯೋಗವು ಪ್ರಧಾನಿ ಮತ್ತು ಕೇಂದ್ರ ಕೃಷಿ ಮಂತ್ರಿಗಳನ್ನು ಭೇಟಿ ಮಾಡಲಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಸ್.ಮಹಾಬಲ ಹೇಳಿದರು.ಇಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಡಿಕೆ ಹಳದಿ ಎಲೆ ರೋಗದ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗಮನಹರಿಸಬೇಕು. ಈ ಭಾಗದ ಅಡಿಕೆ ಹಳದಿ ಎಲೆ ಪೀಡಿತ ರೈತರ ಸಾಲಮನ್ನಾ ಮಾಡುವುದರ ಜತೆಗೆ ಅಂತರ ಬೆಳೆ ಬೆಳೆಯಲು ಹಣಕಾಸು ಸೌಲಭ್ಯ ಕೊಡಬೇಕು  ಎಂದು ಅವರು ಒತ್ತಾಯಿಸಿದರು.  ಅಡಿಕೆ ಬೆಳೆಯ ಹಳದಿ ಎಲೆ ರೋಗದ ಬಗ್ಗೆ ಪೂರ್ಣ ಪ್ರಮಾಣದ ಸಮೀಕ್ಷೆ ಮುಗಿದಿದ್ದು, ವರದಿ ಸರ್ಕಾರದ ಕೈ ಸೇರಿದೆ. ಶೃಂಗೇರಿ ತಾಲ್ಲೂಕಿನಲ್ಲಿ 3929 ಎಕರೆ, ಕೊಪ್ಪ ತಾಲ್ಲೂಕಿನಲ್ಲಿ 5075ಎಕರೆ ಮತ್ತು ನರಸಿಂಹರಾಜಪುರ ತಾಲ್ಲೂಕಿನಲ್ಲಿ 930 ಎಕರೆ ಅಡಿಕೆ ತೋಟವು ಹಳದಿ ಎಲೆ ರೋಗಕ್ಕೆ ತುತ್ತಾಗಿದೆ ಎಂದು ಹೇಳಿದರು.  ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಅಡಿಕೆ ಹಳದಿ ಎಲೆ ಪೀಡಿತ ಬೆಳೆಗಾರರಿಗೆ ತೋಟಗಳ ಪುನಃಶ್ಚೇತನಕ್ಕಾಗಿ ಎಕರೆಗೆ ರೂ.6000 ದಂತೆ ಗರಿಷ್ಠ 5 ಎಕರೆಗಳಿಗೆ ಸಹಾಯ ಧನ ನೀಡಲಾಗುತ್ತಿದೆ. ಈಗಾಗಲೇ ರೈತರಿಂದ ಅರ್ಜಿಗಳನ್ನು ಪಡೆದಿದ್ದು, ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ.

 

ಅಡಿಕೆ ಹಳದಿ ಎಲೆರೋಗದ ಪುನಃಶ್ಚೇತನಕ್ಕೆ ನೀಡುವ ಸಹಾಯ ಧನವನ್ನು ಬಯಲುಸೀಮೆ ತಾಲ್ಲೂಕುಗಳಿಗೂ ನೀಡಬೇಕೆಂಬ ಕಾಂಗ್ರೆಸ್ ಮುಖಂಡರ ವಾದ ಸರಿಯಲ್ಲ. ಇದರಿಂದ ಸಾಂಪ್ರಾದಾಯಿಕ ಅಡಿಕೆ ಬೆಳೆ ಗಾರರಾದ ಮಲೆನಾಡಿನ ರೈತರಿಗೆ ಅನ್ಯಾಯ ವಾದಂತಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕಾರ್ಯದರ್ಶಿ ಉಮೇಶ್‌ಶೇಟ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ.ನರೇಂದ್ರ ಇದ್ದರು.

ಪ್ರತಿಕ್ರಿಯಿಸಿ (+)