ಮಂಗಳವಾರ, ಜೂನ್ 22, 2021
22 °C

ಹಳೆಯ ಮುಖಗಳ ಜುಗಲ್‌ಬಂದಿ

ಪ್ರಜಾವಾಣಿ ವಾರ್ತೆ/ ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು, ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ.ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೆಂಬ ಸೂತ್ರದ ಅನ್ವಯ ಕಾಂಗ್ರೆಸ್‌ನಿಂದ ಆರ್‌. ಧ್ರುವನಾರಾಯಣ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಧ್ರುವನಾರಾಯಣಗೆ ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಎ.ಆರ್‌. ಕೃಷ್ಣಮೂರ್ತಿಗೆ ಬಿಜೆಪಿ ವರಿಷ್ಠರು ಮತ್ತೆ ಟಿಕೆಟ್‌ ನೀಡಿದ್ದಾರೆ. ಜೆಡಿಎಸ್‌ನಿಂದ ಕೋಟೆ ಎಂ. ಶಿವಣ್ಣ ಅಖಾಡಕ್ಕೆ ಇಳಿಯುವುದು ಖಚಿತವಾಗಿದೆ. ಈ ಮೂವರು ಕಳೆದ ಚುನಾವಣೆಯಲ್ಲಿ ಮುಖಾಮುಖಿ ಯಾಗಿದ್ದರು. ಹೀಗಾಗಿ, ಮತ್ತೆ ಕ್ಷೇತ್ರದಲ್ಲಿ ಹಳೆಯ ಮುಖಗಳ ಜುಗಲ್‌ಬಂದಿ ನಡೆಯುವುದು ನಿಶ್ಚಿತ.

ಹಿಂದಿನ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ಎನ್‌. ಮಹೇಶ್‌ ಕ್ಷಣಕ್ಕೆ ಇಳಿದಿದ್ದರು. ಇನ್ನೂ ಆ ಪಕ್ಷದಿಂದ ಅಭ್ಯರ್ಥಿಯ ಹೆಸರು ಅಂತಿಮಗೊಂಡಿಲ್ಲ.ಹಿಂದಿನ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ನೀಡಿರುವುದು ಸ್ಪಷ್ಟ. ಹೀಗಾಗಿ, ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ 8 ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್‌ ಶಾಸಕರಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಚುನಾವಣೆ ಅಗ್ನಿಪರೀಕ್ಷೆಗೆ ಒಡ್ಡಲಿದೆ. ಹಿಂದಿನ ಚುನಾವಣೆಯಲ್ಲಿ ಕೇಂದ್ರದ ಯುಪಿಎ ಅಲೆ ಹಾಗೂ ಎಂಟು ಶಾಸಕರಿದ್ದರೂ ಕಡಿಮೆ ಅಂತರದಲ್ಲಿ ಪಕ್ಷದ ಅಭ್ಯರ್ಥಿಯು ಗೆಲುವು ಸಾಧಿಸಿರುವ ಅಂಶ ಕಾಂಗ್ರೆಸ್‌ ವರಿಷ್ಠರಿಗೆ ಗೊತ್ತಿದೆ. ಹೀಗಾಗಿ, ಗೆಲುವಿಗಾಗಿ ವಿಭಿನ್ನವಾದ ರಣತಂತ್ರ ರೂಪಿಸುವ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದೆ.ಕೆಜೆಪಿ ಅಸ್ತಿತ್ವಕ್ಕೆ ಬಂದ ಪರಿಣಾಮ ಜಿಲ್ಲೆಯಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಕೊಡಲಿಪೆಟ್ಟು ಬಿದ್ದಿತ್ತು. ಚದುರಿಹೋಗಿದ್ದ ಕೆಜೆಪಿ ಮುಖಂಡರು ಈಗ ಬಿಜೆಪಿ ಸೇರಿದ್ದಾರೆ. ಅವರ ಆಗಮನ ಎಷ್ಟರಮಟ್ಟಿಗೆ ಪಕ್ಷದ ಅಭ್ಯರ್ಥಿಗೆ ನೆರವಾಗಲಿದೆ ಎಂಬದನ್ನು ನಿರ್ಧರಿಸುವುದು ತುಸು ಕಷ್ಟಸಾಧ್ಯ. ಕೆಜೆಪಿಯು ಜನ್ಮ ತಳೆಯುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಂಕಿಯಿಂದ ಬಾಣಲೆಗೆ ನೂಕಿತ್ತು.ಪಕ್ಷ ಹೊಂದಿದ್ದ ಮತ ಬ್ಯಾಂಕ್‌ ಒಡೆದು ಹೋಗಿತ್ತು. ಇದರ ಲಾಭ ಕಾಂಗ್ರೆಸ್‌ಗೆ ದಕ್ಕಿತ್ತು. ಪ್ರಸ್ತುತ ಕೆಜೆಪಿ ಮುಖಂಡರು ಕಮಲ ಪಾಳಯಕ್ಕೆ ಬಂದಿದ್ದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆಯೇ? ಎಂಬ ಪ್ರಶ್ನೆ ಬಿಜೆಪಿಯ ನಿಷ್ಠಾವಂತ ಮುಖಂಡರು, ಕಾರ್ಯ ಕರ್ತರಿಗೆ ಕಾಡುತ್ತಿದ್ದರೂ ಅಚ್ಚರಿಪಡಬೇಕಿಲ್ಲ. ಇದಕ್ಕೆ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಮುಖಂಡ ರಲ್ಲಿದ್ದ ಮುಸುಕಿನ ಗುದ್ದಾಟವೇ ಮೂಲ ಕಾರಣ.ದಶಕದ ಹಿಂದೆ ಲೋಕಸಭಾ ಕ್ಷೇತ್ರದಲ್ಲಿದ್ದ ಹಿಡಿತ ಈಗ ಜೆಡಿಎಸ್‌ನ ಕೈತಪ್ಪಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯಲು ಜೆಡಿಎಸ್‌ ವಿಫಲವಾಗಿದೆ.ಆದರೆ, ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರತಿನಿಧಿಸುವ ಶಾಸಕರಿದ್ದಾರೆ. ಜತೆಗೆ, ನಂಜನ ಗೂಡು, ತಿ. ನರಸೀಪುರ, ಹೆಗ್ಗಡದೇವಕೋಟೆ ತಾ.ಪ. ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಪ್ರಾಬಲ್ಯ ಕೊಂಚ ಹೆಚ್ಚಿರುವುದು ಜೆಡಿಎಸ್‌ಗೆ ಧನ್ಯಾತ್ಮಕ ಅಂಶ.ಮತವಾರು ಲೆಕ್ಕಾಚಾರ: 2009ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಒಟ್ಟು 14,33,835 ಮತದಾರರು ಇದ್ದರು. ಶೇ 67.91ರಷ್ಟು ಮತದಾನವಾಗಿತ್ತು.ಪ್ರಸಕ್ತ ಚುನಾವಣೆಯಲ್ಲಿ ಅಧಿಕೃತವಾಗಿ 15,28,611 ಮತದಾರರು ಇದ್ದಾರೆ. ಐದೇ ವರ್ಷದಲ್ಲಿ 94,786 ಮತದಾರರು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಮಾ. 16ರವರೆಗೆ ಮತದಾರರ ನೋಂದಣಿಗೆ ಅವಕಾಶವಿದೆ. ಹೀಗಾಗಿ, 8 ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ನೋಂದಣಿಯಾಗುವ ನಿರೀಕ್ಷೆಯಿದೆ.ಚಲಾವಣೆಗೊಂಡಿದ್ದ ಮತಗಳಲ್ಲಿ ಕಾಂಗ್ರೆಸ್‌ ಶೇ 38ರಷ್ಟು ಮತ ಪಡೆದಿತ್ತು. ಬಿಜೆಪಿ ಶೇ 37.59, ಜೆಡಿಎಸ್‌ ಶೇ 10.98 ಹಾಗೂ ಬಹುಜನ ಸಮಾಜ ಪಕ್ಷ ಶೇ 10.98ರಷ್ಟು ಮತ ಪಡೆದಿತ್ತು. ಜೆಡಿಯು, ಸಮಾಜವಾದಿ ಪಕ್ಷ ಸೇರಿದಂತೆ ಇತರೇ ಪಕ್ಷಗಳು ಹಾಗೂ ಪಕ್ಷೇತರರಲ್ಲಿ 62 ಸಾವಿರ ಮತಗಳು ಹಂಚಿಕೆಯಾಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.