ಬುಧವಾರ, ಮೇ 12, 2021
24 °C

ಹಳೆ ಮೀನು ಮಾರುಕಟ್ಟೆ ದುರಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಬದಲಿ ವ್ಯವಸ್ಥೆ ಮಾಡದೇ ಹೊಸದಾಗಿ ರಚನೆ ಮಾಡುವ ಉದ್ದೇಶದಿಂದ ನಗರದ ಮೀನು ಮಾರುಕಟ್ಟೆಯನ್ನು ಏಕಾಏಕಿ ಕೆಡವಿದ ಚಾಂತಾರು ಗ್ರಾಮ ಪಂಚಾಯಿತಿಯ ಕ್ರಮಕ್ಕೆ ಸ್ಥಳೀಯ ಮೀನು ಮಾರಾಟಗಾರರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಂಚಾಯಿತಿ ಕೆಡವಿದ ಮಾರುಕಟ್ಟೆಯನ್ನು ಶನಿವಾರ ಮತ್ತೆ ದುರಸ್ತಿ ಮಾಡಿ ಮೀನು ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಟ್ಟಿತು.ಅತಂತ್ರ ಸ್ಥಿತಿಯಲ್ಲಿದ್ದ ಮಹಿಳಾ ಮೀನುಮಾರಾಟಗಾರರ ಸಮಸ್ಯೆಗೆ ಮಲ್ಪೆಯ ಉದ್ಯಮಿ ಪ್ರಮೋದ್ ಮಧ್ವರಾಜ್ ತಕ್ಷಣ ಸ್ಪಂದಿಸಿ ತಮ್ಮ ಖರ್ಚಿನಲ್ಲಿಯೇ ಪಂಚಾಯಿತಿ ಕೆಡವಿದ ಮೀನು ಮಾರುಕಟ್ಟೆಯನ್ನು ದುರಸ್ತಿ ಮಾಡಿಸಿ, ಮೀನು ಮಾರಾಟಕ್ಕೆ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಸ್ಥಳೀಯ ಮಹಿಳಾ ಮೀನು ಮಾರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.ಈ ಮಧ್ಯೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುಮಾರು ರೂ.17ಲಕ್ಷ ಅಂದಾಜಿನಲ್ಲಿ ನಿರ್ಮಿಸಬೇಕಾಗಿದ್ದ ಹೊಸ ಮೀನು ಮಾರುಕಟ್ಟೆಯ ನಿರ್ಮಾಣದ ಕಾಮಗಾರಿಯನ್ನು ಕೈಬಿಡುವ ಮಾತುಗಳು ಕೇಳಿ ಬರುತ್ತಿವೆ. ಮಾರುಕಟ್ಟೆ ಹತ್ತಿರವಿರುವ ಕಟ್ಟಡದ ಮಾಲೀಕರು ಹೊಸ ಮಾರುಕಟ್ಟೆಯ ನಿರ್ಮಾಣದ ಬಗ್ಗೆ ತಡೆಯಾಜ್ಞೆ ತಂದಿದ್ದಲ್ಲದೇ ಬೇರೆ ಕಡೆ ನಿರ್ಮಾಣ ಮಾಡುವಂತೆ ಒತ್ತಾಯ ಹೇರಿದ್ದಾರೆ ಎನ್ನಲಾಗಿದೆ.ಈಗಿನ ಮಾರುಕಟ್ಟೆಯ ರಸ್ತೆಯ ಬದಿಯಲ್ಲಿರುವುದರಿಂದ ವಾಹನ ಮತ್ತು ಜನಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೊಸ ಮಾರುಕಟ್ಟೆಯನ್ನು ಬೇರೆ ಕಡೆ ನಿರ್ಮಾಣ ಮಾಡುವುದೇ ಸೂಕ್ತ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮೀನು ಮಾರಾಟಕ್ಕೆ ಈಗಿರುವ ಸ್ಥಳವೇ ಸೂಕ್ತ ಎಂದು ಮೀನು ಮಾರಾಟಗಾರರು ಹೇಳುತ್ತಿದ್ದಾರೆ.ಮೀನು ಮಾರುಕಟ್ಟೆ ನಿರ್ಮಾಣ ವಿವಾದವನ್ನು ಬಗೆಹರಿಸಲಾಗದೆ ಗ್ರಾಮ ಪಂಚಾಯಿತಿ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.