ಸೋಮವಾರ, ಮಾರ್ಚ್ 1, 2021
24 °C

ಹಳ್ಳಿ ಅನ್ನ ಬೀರಿದ ಘಮಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿ ಅನ್ನ ಬೀರಿದ ಘಮಲು

ತಿಪಟೂರು: ಒಂದೆಡೆ ಮಕ್ಕಳ ಅಪೌಷ್ಟಿಕತೆ ವಿಚಾರ ಕಳವಳ ಹುಟ್ಟಿಸಿದ್ದರೆ ಮತ್ತೊಂದೆಡೆ ಪೌಷ್ಟಿಕ ಆಹಾರ ಪೂರೈಕೆ ಗುತ್ತಿಗೆ ಅವ್ಯವಹಾರ ಅನಾಗರಿಕ ರೌದ್ರವಕ್ಕೆ ಸಾಕ್ಷಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಹಳೆ ರುಚಿ ಹಳ್ಳಿ ಅನ್ನದ ಪುಷ್ಟಿ ಐಶ್ವರ್ಯದ ಬಗ್ಗೆ `ಮೆಲುಕು~ ಹಾಕುವ ಪ್ರಯತ್ನ ನೊಣವಿನಕೆರೆಯಲ್ಲಿ ನಡೆಯಿತು.ಅಲ್ಲಿ ನೆರೆದಿದ್ದ ಎಂಬತ್ತೈದಕ್ಕೂ ಹೆಚ್ಚು ಮಹಿಳೆಯರ ಮಡಿಲಲ್ಲಿ ಅಜ್ಜಿ ಕಾಲದ ತರಹೇವಾರಿ ತಿಂಡಿ, ತಿನಿಸು ಮೆಲ್ಲಗೆ ಘಮಲು ಎಬ್ಬಿಸಿದ್ದರೆ ಕಾತರದಲ್ಲಿ ಕುಳಿತವರ ಬಾಯಲ್ಲಿ ಅರಿವಿಲ್ಲದೆ ಜೊಲ್ಲು ಸುರಿದಿತ್ತು. ಬಾಲ್ಯದಲ್ಲಿ ಕಂಡುಂಡ ತಿನಿಸನ್ನು ಮತ್ತೆ ಕಾಣುವ, ರುಚಿ ನೋಡುವ ಆಸೆ ಪುಟಿಯುತ್ತಿತ್ತು. ಅಂದ ಹಾಗೆ ಆ ಕಾರ್ಯಕ್ರಮದ ಹೆಸರೇ `ಹಳ್ಳಿ ಅನ್ನ~ !ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಪರಿಸರ ಪ್ರೇಮಿ ಗುಂಗುರಮಳೆ ಮುರಳೀಧರ್ ತಾಲ್ಲೂಕಿನ ನೊಣವಿನಕೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಈ ಕಾರ್ಯಕ್ರಮ ಹಳೆ ಹಳ್ಳಿ ಅನ್ನದ ರುಚಿಯ ಜತೆಗೆ ಶಕ್ತಿ ಸಾಮರ್ಥ್ಯ ಬಿಂಬಿಸಲು ಪ್ರಯತ್ನಿಸಿತು. 85 ಅಂಗನವಾಡಿ ಕಾರ್ಯಕರ್ತೆಯರು ತರಹೇವಾರಿ ತಿಂಡಿ, ಊಟ, ಕರಿದ ತಿನಿಸು ಮಾಡಿ ತಂದಿದ್ದರು. ಅವುಗಳನ್ನು ತಯಾರಿಸುವ ಬಗೆಯಷ್ಟೇ ಅಲ್ಲದೆ ಅದರ ಪೌಷ್ಟಿಕಾಂಶ, ರೋಗ ನಿರೋಧಕ ಗುಣಗಳ ಬಗ್ಗೆಯೂ ವಿವರಿಸಿದರು.ರಾಗಿಯಿಂದ ಮಾಡಿದ ಹುರಿಹಿಟ್ಟು, ಚಕ್ಕುಲಿ, ನಿಪ್ಪಟ್ಟು, ಉಪ್ಪಿಟ್ಟು, ವಡೆ, ಕಡುಬು, ಬಿಸ್ಕತ್ತು, ಪಡ್ಡು, ಉದಗ, ಮಿಠಾಯಿ, ಶಾವಿಗೆ, ಬೋಂಡಾ, ಇಡ್ಲಿ, ಮುದ್ದೆ ಸೀಕಿನಿ ಸಿಹಿ, ಮಸಾಲೆ ಸೊಪ್ಪಿನ ರಾಗಿ ರೊಟ್ಟಿ ಗಮನ ಸೆಳೆದವು. ಇದಲ್ಲದೆ ಕಿಚುಡಿ, ಮರಗೆಣಸು, ಹತ್ತಿಕಾಯಿ ಪಲ್ಯ, ಗರುಗದಕಾರ ರೊಟ್ಟಿ, ತಂಗಡಿ ಹೂವಿನ ಟೀ, ಅಗಸೆ ಸೊಪ್ಪಿನ ಮಸೊಪ್ಪು, ಅಮೃತ ಬಳ್ಳಿ ಪಲ್ಯ, ಗಟ್ಟಕ್ಕಿ ಪಾಯಸ, ದೊಡ್ಡಪತ್ರೆ ಪುಳಿಯೋಗರೆ, ದಾಸವಾಳ ದೋಸೆ, ಚಿನಕುರಳಿ, ನುಗ್ಗೆ ಸೊಪ್ಪಿನ ರೊಟ್ಟಿ, ಹುರಳಿ ಹೋಳಿಗೆ, ಹುರುಳಿ ಕಾಳು ಮತ್ತು ಹಲಸಂದೆ ವಡೆ, ಬೆರಕೆ ನುಚ್ಚಿನೊಡೆ.... ಹೀಗೆ ತಲೆಗೊಂದು ರೀತಿ ಭಕ್ಷ್ಯ ತಂದಿದ್ದರು. ಬೇಲಿ ಸೊಪ್ಪಿನ ಖ್ಯಾದಗಳೂ ಅಲ್ಲಿದ್ದವು. ಮರತೇ ಹೋಗಿದ್ದ ಎಷ್ಟೋ ತಿನಿಸು ನೆನಪಿನ ಅಂಗಳದಿಂದ ಗಂಗಳಕ್ಕೆ ಬಂದಿದ್ದವು.ಇವೆಲ್ಲವನ್ನೂ ನೋಡಲು, ತಿನ್ನಲು ಕಾರ್ಯಕ್ರಮದ ಭಾಗವಾಗಿ ಹಲವರು ಪಾಲ್ಗೊಂಡಿದ್ದರು. ಆಧುನಿಕ ವ್ಯಾಮೋಹದಲ್ಲಿ ಪುಷ್ಟಿಯಿಲ್ಲದ ಆಕರ್ಷಕ ಊಟ ತಂಡೊಡ್ಡಿರುವ ಆತಂಕದ ಬಗ್ಗೆ ಚರ್ಚೆಯಾಯಿತು. ಪಾಶ್ಚಿಮಾತ್ಯರಂತೆ ಏಕರೂಪ ಆಹಾರ ಪದ್ಧತಿಯೆಡೆಗೆ ಸಾಗದೆ ವೈವಿಧ್ಯತೆ ಕಾಯ್ದುಕೊಳ್ಳಬೇಕು ಎಂದು ಆಶಿಸಿದರು.ನಮ್ಮ ನೆಲ ಮೂಲದ ದವಸ-ಧಾನ್ಯ, ಹಿತ್ತಲ ತರಕಾರಿ-ಹಣ್ಣು, ಹೊಲ-ಬೇಲಿ ಸೊಪ್ಪು ಬಳಸಿ ಆರೋಗ್ಯವನ್ನಷ್ಟೇ ಅಲ್ಲದೆ ಆರ್ಥಿಕ ಲಾಭ ಪಡೆಯಬಹುದು ಎಂದು ಸಾರಿಸಿದರು. ಹಳೆ ಪದ್ಧತಿಯ ಉತ್ಕೃಷ್ಟ ಆಹಾರವನ್ನು ಮತ್ತೆ ಬಳಕೆಗೆ ತರಲು ಪ್ರೇರೇಪಿಸಿದರು.ಪರಿಸರ ತಜ್ಞ ಜಿ.ಎಲ್.ಜನಾರ್ದನ್ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ, ಪಂಡಿತ ಪರಮಶಿವಯ್ಯ, ತಹಶೀಲ್ದಾರ್ ವಿಜಯಕುಮಾರ್, ಸಿಡಿಪಿಒ ಎಸ್.ನಟರಾಜ್, ಬಿಇಒ ಮನಮೋಹನ್, ಇಒ ಷಡಕ್ಷರ ಮೂರ್ತಿ, ಕೊನೇಹಳ್ಳಿ ಸಂಶೋಧನಾ ಕೇಂದ್ರದ ಆಹಾರ ತಜ್ಞೆ ಮಮತಾ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ, ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ರಾಮಣ್ಣ, ಎಸಿಡಿಪಿಒ ಓಂಕಾರಪ್ಪ, ಸುಂದರಮ್ಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.