ಗುರುವಾರ , ಜೂಲೈ 2, 2020
22 °C

ಹವಾಮಾನ ಕೇಂದ್ರಕ್ಕೆ ಹೊಸ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವಾಮಾನ ಕೇಂದ್ರಕ್ಕೆ ಹೊಸ ಸ್ಪರ್ಶ

ಗದಗ ಜಿಲ್ಲೆ/ ವಿಶೇಷ ವರದಿ

ಗದಗ: ಮಧ್ಯ ಕರ್ನಾಟಕ ಭಾಗದ ಪ್ರಮುಖ ಹವಾಮಾನ ಕೇಂದ್ರವಾಗಿ ಹೊರಹೊಮ್ಮಲು ಗದಗ ಸಿದ್ಧವಾಗಿದೆ. ಇಲ್ಲಿನ ಸಂಭಾಪುರ ರಸ್ತೆಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಹವಾಮಾನ ಕೇಂದ್ರದ ಆಧುನೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ.ಗದಗ ಜಿಲ್ಲೆಯಲ್ಲಿನ ಹವಾಮಾನ ಕೇಂದ್ರವನ್ನು ಉತ್ತರ ಹಾಗೂ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವನ್ನಾಗಿ ಮಾಡಲು ಭಾರತೀಯ ಹವಾಮಾನ ಇಲಾಖೆ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ನಿರ್ಮಿಸಲಾಗಿದ್ದು. ಆರೋಹಣ ಬಲೂನ್ ವೀಕ್ಷಣಾಲಯ (ಪೈಲಟ್ ಬಲೂನ್ ಅಬ್ಸರ್ವೇಶನ್) ಸಹ ಕಾರ್ಯವನ್ನು ನಿರ್ವಹಿಸುತ್ತಿದೆ.ಪ್ರಸ್ತುತ ಸ್ವಯಂಚಾಲಿತ ಮಾಪನ ಕೇಂದ್ರಕ್ಕೆ ಬೇಕಾದ `ಫೀಲ್ಡ್ ಮೆಂಟೇನನ್ಸ್ ಯೂನಿಟ್~ (ಎಫ್‌ಎಂಯು) ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನಷ್ಟು ಯೋಜನೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.ಭಾರತೀಯ ಹವಾಮಾನ ಇಲಾಖೆಯು 2012ರಲ್ಲಿ ಆಧುನೀಕರಣ ಯೋಜನೆ ಅನುಷ್ಠಾನಗೊಳಿಸುತ್ತಿದೆ. ದೇಶದಲ್ಲಿನ ಎಲ್ಲ ಹವಾಮಾನ ಕೇಂದ್ರಗಳನ್ನು ಒಂದೇ ನೆಟ್‌ವರ್ಕ್‌ನ ಅಡಿಯಲ್ಲಿ ತರುವುದು ಈ ಯೋಜನೆಯ ಉದ್ದೇಶ. ಈ ಅಂಗವಾಗಿ ಗದುಗಿನ ಕೇಂದ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈ ಗೆತ್ತಿಕೊಳ್ಳಲಾಗುತ್ತದೆ.ಎರಡನೇ ಹಳೆಯ ಕೇಂದ್ರ: ಬೆಂಗಳೂರು ನಂತರ ರಾಜ್ಯದಲ್ಲಿ ಸ್ಥಾಪನೆಯಾದ ಎರಡನೇ ಹಳೆಯ ಕೇಂದ್ರ ಎನ್ನುವ ಕೀರ್ತಿ ಗದಗ ಹವಾಮಾನ ಕೇಂದ್ರದ್ದು. ಬ್ರಿಟಿಷರ ಕಾಲದಲ್ಲಿಯೇ ಇಲ್ಲಿ ಕೇಂದ್ರ ಕಾರ್ಯಾರಂಭ ಮಾಡಿದೆ ಎನ್ನಲಾಗಿದೆ.  ರಾಜ್ಯದ ಹವಾಮಾನ ಕೇಂದ್ರಗಳ ಪೈಕಿ ಬೆಂಗಳೂರು ದಕ್ಷಿಣದ ಕೇಂದ್ರವಾಗಿರುವಂತೆ ಗದಗ ಉತ್ತರ ಹಾಗೂ ಮಧ್ಯ ಕರ್ನಾಟಕದ ಕೇಂದ್ರವಾಗುತ್ತಿದೆ. ಈ ಜಿಲ್ಲೆ ಸಮುದ್ರ ಮಟ್ಟಕ್ಕಿಂತ 659.8 ಮೀಟರ್ ಎತ್ತರದಲ್ಲಿದ್ದು, ಚೆನ್ನೈ ಮತ್ತು ಮುಂಬೈ ವಾಯುಮಾರ್ಗದ ನಡುವಿನ ಮಧ್ಯಭಾಗದಲ್ಲಿ ಬರುತ್ತದೆ.  ಗದಗ ಹಮಾಮಾನ ಕೇಂದ್ರ ವ್ಯಾಪ್ತಿಗೆ ಸದ್ಯ ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳು ಬರುತ್ತವೆ. ಕೊಪ್ಪಳ, ರಾಯಚೂರು ಮೊದಲಾದ ಜಿಲ್ಲೆಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.ಕಳೆದ ಜನವರಿ 19ರಿಂದ ಇಲ್ಲಿ ಸ್ವಯಂಚಾಲಿತ ಹವಾಮಾನ ಮಾಪನ ಕೇಂದ್ರ ಕಾರ್ಯಾರಂಭ ಮಾಡಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಈ ರೀತಿಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.ಮಾನವ ಸಿಬ್ಬಂದಿಯ ಅಗತ್ಯವಿಲ್ಲದ ಈ ಕೇಂದ್ರಗಳು ಪ್ರತಿ ಗಂಟೆಗೊಮ್ಮೆ ಇಲ್ಲಿನ ಉಷ್ಣಾಂಶ, ಗಾಳಿಯ ದಿಕ್ಕು, ವೇಗ, ಒತ್ತಡ, ಮಳೆ ಪ್ರಮಾಣ ಇತ್ಯಾದಿಗಳನ್ನು ಸ್ವತಃ ದಾಖಲಿಸಿ ಪುಣೆಯಲ್ಲಿನ ಕೇಂದ್ರಕ್ಕೆ ವರದಿ ನೀಡುತ್ತವೆ. ಈ ವರದಿಯನ್ನು ಆಧರಿಸಿ ಹವಾಮಾನ ವಿಶ್ಲೇಷಿಸಲಾಗುತ್ತಿದೆ.ಆರೋಹಣ ಬಲೂನ್ ವೀಕ್ಷಣಾಲಯ ಕೂಡ ಇಲ್ಲಿದ್ದು, ಬಲೂನ್ ಹಾರಾಟದ ಮೂಲಕ ಮೇಲುಗಾಳಿಯ ವೇಗ, ದಿಕ್ಕು, ಅರಿಯಲಾಗುತ್ತಿದೆ. ವಿಮಾನಯಾನಕ್ಕೆ ಈ ಮಾಹಿತಿಗಳಿಂದ ಹೆಚ್ಚು ಅನುಕೂಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಗದಗದಲ್ಲಿ ಮಾತ್ರವೇ ಈ ವ್ಯವಸ್ಥೆ ಇದೆ ಎನ್ನುತ್ತಾರೆ ಗದಗದ ಹಿರಿಯ ವೀಕ್ಷಣಾಧಿಕಾರಿ ನಟರಾಜ ಸವಡಿ ಹಾಗೂ ಹವಾಮಾನ ಸಹಾಯಕ ರಾಜು ರೋಖಡೆ,ಸದ್ಯ ಇಲ್ಲಿನ ಕೃಷಿ ಮಾರುಕಟ್ಟೆ ಒಳಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಇಲಾಖೆಯು ಕಾಮಗಾರಿ ಮುಕ್ತಾಯದ ಬಳಿಕ ಹೊಸ ಜಾಗಕ್ಕೆ ಸ್ಥಳಾಂತರಗೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.