ಬುಧವಾರ, ಏಪ್ರಿಲ್ 21, 2021
24 °C

ಹಸಿರು ತೋಟ ನಡುವೆ ಪಾಠ

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

ತಮ್ಮ ಕಾಲೇಜಿನ ವಿಶಾಲ ಆವರಣದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಿ ನಂದನವನ ಮಾಡಿದ್ದಾರೆ ಚಿಕ್ಕಮಗಳೂರಿನ ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಸಿ.ಕೆ.ಸುಬ್ಬರಾಯ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ, ಕಾಲೇಜಿಗೆ ಭೇಟಿ ಕೊಡುವ ಸಾರ್ವಜನಿಕರಲ್ಲಿ, ಪೋಷಕರಲ್ಲಿ ಕೂಡ ಸಸ್ಯ ಪ್ರೀತಿ ಬೆಳೆಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.ಈ ಕಾಲೇಜು ಶಿಕ್ಷಣದ ಜತೆಗೆ ಉದ್ಯಾನಕ್ಕೂ ಹೆಸರುವಾಸಿ. ಇಲ್ಲಿನ ಐದು ಎಕರೆಗೂ ಹೆಚ್ಚು ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಕಟ್ಟಡಗಳನ್ನು ಬಿಟ್ಟು ಉಳಿದೆಡೆ ಮರ, ಗಿಡ, ಉದ್ಯಾನ, ಚೆಕ್ ಡ್ಯಾಂ, ಕಿರು ಅರಣ್ಯವೇ ತುಂಬಿಕೊಂಡಿದೆ.ಸುಬ್ಬರಾಯರಿಗೆ ಶೈಕ್ಷಣಿಕ ಕಾರ್ಯದ ಜತೆಗೆ ಬೇಸಾಯ, ತೋಟಗಾರಿಕೆಯಲ್ಲಿ ಅಪಾರ ಆಸಕ್ತಿ. ಅವರ ಹದಿನೈದು ವರ್ಷಗಳ ಪರಿಶ್ರಮ ಈ ಉದ್ಯಾನ. ವಿವಿಧ ಜಾತಿಯ ಹಣ್ಣಿನ ಮರಗಳು, ಔಷಧ ಸಸ್ಯಗಳು, ಬಗೆಬಗೆಯ ಹೂವಿನ ಗಿಡಗಳು ಸೇರಿದಂತೆ ನೂರಾರು ಬಗೆಯ ಸಸ್ಯರಾಶಿ ಇಲ್ಲಿವೆ. ಇವೆಲ್ಲ ಸೇರಿ ಕಾಲೇಜಿಗೆ ವಿಶೇಷ ಮೆರುಗು ಬಂದಿದೆ.ಉದ್ಯಾನ ನಿರ್ಮಾಣಕ್ಕೆ ಅವರು ಯಾವುದೇ ಲ್ಯಾಂಡ್‌ಸ್ಕೇಪ್ ಪರಿಣತರ ನೆರವು ಪಡೆದಿಲ್ಲ. ವಿದೇಶಗಳಿಗೆ ಹೋದಾಗ ಕಂಡುಬಂದ ಉದ್ಯಾನಗಳ ಒಳ್ಳೆಯ ಅಂಶಗಳನ್ನು ಇಲ್ಲಿ ಅಳವಡಿಸಿದ್ದಾರೆ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಬೆಳಿಗ್ಗೆ ಮತ್ತು ಸಾಯಂಕಾಲ ಇಲ್ಲಿ ಕಳೆಯುತ್ತಾರೆ.ಇಲ್ಲಿ ಗಿಡಗಳ ಆರೈಕೆಗಾಗಿ 7-8 ಕೆಲಸಗಾರರಿದ್ದಾರೆ. ಇದು ಸಂಪೂರ್ಣ ಸಾವಯವ ಉದ್ಯಾನ. ಕೊಟ್ಟಿಗೆ ಗೊಬ್ಬರ, ನೀರು ಇಷ್ಟರಿಂದಲೇ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಅತ್ತಿ, ತೆಂಗು, ಅಡಿಕೆ, ನೇರಳೆ, ಮಾವು, ಹಲಸು, ಸಪೋಟ, ಈಚಲು, ಪನ್ನೇರಳೆ, ಸೀಬೆ, ಬಾಳೆ, ನೆಲ್ಲಿಕಾಯಿ ಮತ್ತಿತರ ಹಣ್ಣಿನ ಮರಗಳಿವೆ.ಬಣ್ಣ ಬಣ್ಣದ ಗುಲಾಬಿ, ಕೇಪುಳ, ಚೆಂಡು ಹೂ, ಕ್ರೋಟನ್, ಕಣಗಿಲೆ, ಝೀನಿಯ ಇತ್ಯಾದಿ ಹೂ ಗಿಡಗಳು, ಆಯಾ ಋತುವಿಗೆ ತಕ್ಕಂತೆ ಹೂ ಬಿಡುವ (ಸೀಸನಲ್ ಫ್ಲವರ್) ಗಿಡಗಳನ್ನೂ ಇಲ್ಲಿ ನೋಡಬಹುದು. ಇಡೀ ಹೂತೋಟ ಹಸಿರು ಮಕಮಲ್ ಬಟ್ಟೆಯಂತೆ ಲಾನ್‌ನಿಂದ ಆವೃತ್ತಗೊಂಡಿದೆ.ಪ್ರಾಚಾರ್ಯರ ಕೊಠಡಿ ಇರುವ ಕಟ್ಟಡಕ್ಕೆ ಹೋಗುವ ದಾರಿಯಲ್ಲಿ ಸಾಲಾಗಿ ವಿವಿಧ ಜಾತಿಯ ಸಂಪಿಗೆ ಮರಗಳಿವೆ. ಅವುಗಳ ಹೂಗಳು ಸೂಸುವ ಪರಿಮಳ ಇಡೀ ವಾತಾವರಣವನ್ನು ಸುಗಂಧಮಯವಾಗಿಸಿದೆ. ಹೀಗಾಗಿ ಕಾಲೇಜಿನ ಕಟ್ಟಡದ ಸುತ್ತಲೂ 50ಕ್ಕಿಂತಲೂ ಹೆಚ್ಚು ಜೇನು ಗೂಡುಗಳಿವೆ. ಈ ಜೇನ್ನೊಣಗಳು ಕ್ಯಾಂಪಸ್‌ನಲ್ಲಿ ಹೂವಿನ ಮಕರಂದ ಹೀರುತ್ತಾ ಸ್ವಚ್ಛಂದವಾಗಿ ವಿಹರಿಸುತ್ತವೆ. ನೀರಿಗಾಗಿ ಎರಡು ಚೆಕ್ ಡ್ಯಾಂಗಳನ್ನು ಕಟ್ಟಲಾಗಿದೆ.`ಕಳೆದ ಹದಿನಾಲ್ಕು ವರ್ಷಗಳಿಂದ ತೋಟಗಾರಿಕಾ ಇಲಾಖೆಯವರು ಆಯೋಜಿಸುವ ಸಾಂಸ್ಥಿಕ ಉದ್ಯಾನ ವಿಭಾಗ ಸ್ಪರ್ಧೆಯಲ್ಲಿ 14 ಬಾರಿಯೂ ಪ್ರಥಮ ಬಹುಮಾನ ಬಂದಿರುವುದು ಈ ಉದ್ಯಾನದ ಹೆಗ್ಗಳಿಕೆ.ಇದಕ್ಕೆ ಸ್ಫೂರ್ತಿ ಸಂಸ್ಥೆಯ ಸಂಸ್ಥಾಪಕರಾದ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ. ಅವರ ಬಯಕೆಯಂತೆ ಗ್ರೀನ್ ಕ್ಯಾಂಪಸ್‌ನ ನಿರ್ಮಾಣ ಮಾಡಲಾಗಿದೆ. ಇದು ಪ್ಲಾಸ್ಟಿಕ್ ಮುಕ್ತ. ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪರಿಸರ ವಿದ್ಯಾರ್ಥಿಗಳ ಮನವನ್ನು ಮುದಗೊಳಿಸುತ್ತದೆ~ ಎನ್ನುವಾಗ ಸುಬ್ಬರಾಯರ ಮೊಗದಲ್ಲಿ ಅದೇನೋ ಖುಷಿ, ಸಂತೃಪ್ತಿ. ಕ್ಯಾಂಪಸ್‌ಗೆ ಬರುವ ಸಾರ್ವಜನಿಕರು ತೋಟದ ಅಂದಕ್ಕೆ ಮಾರು ಹೋಗಿ ಹೂಗಿಡಗಳ, ಲಾನ್‌ನ ಮಧ್ಯೆ ನಿಂತು ಫೋಟೋ ತೆಗೆಸುತ್ತಾರೆ.ವಿದ್ಯಾರ್ಥಿಗಳಿಗೆ ತಾಂತ್ರಿಕ ಪಾಠದ ಜೊತೆಗೆ ಹಸಿರಿನ ಪಾಠವನ್ನೂ ಕಲಿಸುತ್ತಿರುವ ಪ್ರಾಚಾರ್ಯರ ಅನುಭವ ತಿಳಿಯಲು 94484 80343 ಸಂಪರ್ಕಿಸಬಹುದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.