ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ಮೌಲ್ಯ ತಿಳಿಸುವ ರಂಜಾನ್

Last Updated 4 ಜುಲೈ 2016, 19:30 IST
ಅಕ್ಷರ ಗಾತ್ರ

ರಂಜಾನ್‌ ಎಂಬ ಹಸಿವಿನ ಮೌಲ್ಯ– ದಾನದ ಆದರ್ಶ ಪ್ರತಿಪಾದಿಸುವ ಹಬ್ಬ ಇದೀಗ ತುದಿ ಮುಟ್ಟಿದೆ. ಒಂದಿಡೀ ತಿಂಗಳು ನಿರೀಕ್ಷಿಸಿದ್ದ ಈದ್‌ ಬಾಗಿಲು ತಟ್ಟುತ್ತಿದೆ. ಬಾಯಿ ಚಪ್ಪರಿಸುವ ತರಹೇವಾರಿ ತಿನಿಸು, ಹೊಸ ಬಟ್ಟೆ, ಹೊಸ ನೋಟ, ಹೊಸ ಬದುಕಿನ ಆಶಯದಲ್ಲಿ ಮುಸ್ಲಿಮರು ಈದ್‌ ಎದುರುಗೊಳ್ಳಲು ಸನ್ನದ್ಧರಾಗುತ್ತಿದ್ದಾರೆ. ರಂಜಾನ್ ಎಂಬ ವಾರ್ಷಿಕ ಸಂಭ್ರಮಕ್ಕೆ ಅಕ್ಷರ ತೋರಣ ತೊಡಿಸಲು ಯತ್ನಿಸಿದ್ದಾರೆ ಹರವು ಸ್ಫೂರ್ತಿ.

ರೋಜಾ ಆಚರಿಸಿ, ರಂಜಾನ್ ಮಾಸ ಪೂರ್ತಿ ಅಧ್ಯಾತ್ಮದಲ್ಲೇ ಕಳೆದು ಕೊನೆಯ ದಿನದ ಈದ್‌ ಉಲ್‌ ಫಿತರ್‌ ಹಬ್ಬಕ್ಕೆ ಮುಸ್ಲಿಮರು ಸಿದ್ಧರಾಗುತ್ತಿದ್ದಾರೆ. ಒಂದು ತಿಂಗಳಿಂದ ಉಪವಾಸ ಆಚರಿಸಿ ಕೊನೆಯ ದಿನ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸಿ, ಹಂಚಿ ತಿನ್ನುವುದು ರಂಜಾನ್ ಆಚರಣೆ ವಿಶೇಷಗಳಲ್ಲಿ ಒಂದು.

ರಂಜಾನ್ ಮಾಸದಲ್ಲಿ ಬಹುತೇಕ ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡಿ, ಸೂರ್ಯ ಮುಳುಗುವವರೆಗೂ ಉಪವಾಸ ವ್ರತ ಆಚರಿಸುತ್ತಾರೆ. ಇದಕ್ಕೆ ಮಕ್ಕಳು, ಹಿರಿಯರು ಎಂಬ ವ್ಯತ್ಯಾಸವಿಲ್ಲ.

ಕೊನೆಯ ದಿನ ಸಾಮೂಹಿಕವಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಮತ್ತೊಂದು ವಿಶೇಷ. ಸಾಮಾನ್ಯ ತಿಂಗಳಲ್ಲಿ ಧರ್ಮದ ಆಚಾರ, ವಿಧಿವಿಧಾನಗಳನ್ನು ಅಷ್ಟಾಗಿ ಪಾಲಿಸದವರೂ ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಿನಿಂದ ವ್ರತಾಚರಣೆ ಮಾಡುತ್ತಾರೆ. ಪ್ರತಿದಿನ ಮುಂಜಾನೆ 4.30ರೊಳಗೆ ಆಹಾರ ಸೇವನೆ ಮಾಡಿದರೆ ಮುಗಿತು. ಮತ್ತೆ ಸಂಜೆ ಸೂರ್ಯಾಸ್ತವಾದ ಮೇಲೆ ಆಹಾರ ಸೇವನೆ.

ಇಸ್ಲಾಂನಲ್ಲಿ 12 ತಿಂಗಳ ಕ್ಯಾಲೆಂಡರ್ ಇಲ್ಲ. ಚಂದ್ರ ಚಲನೆ ಮೇಲೆ ನಂಬಿಕೆಯಿಟ್ಟಿರುವ ಇಸ್ಲಾಂ ಧರ್ಮದಲ್ಲಿ  ಇರುವುದು 10 ತಿಂಗಳು ಮಾತ್ರ. ಇದರಲ್ಲಿ ಒಂದು ತಿಂಗಳ ಹೆಸರು ರಂಜಾನ್. ಅಂದರೆ ಸೂರ್ಯ ಉದಯವಾದ ಮೇಲೆ ನೀರು, ಆಹಾರ  ಸೇವನೆ ನಿಷಿದ್ಧ. ಈ ತಿಂಗಳಲ್ಲಿ ಚಂದ್ರ ದರ್ಶನವಾದ ಮೇಲೆ ಆಹಾರ ಸೇವನೆ ಮಾಡಬೇಕು.

ಬಾಂಧವ್ಯ ವೃದ್ಧಿ
ಹಳೆಯ ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು  ರಂಜಾನ್ ಮಾಸಾಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬವುದು ರಂಜಾನ್ ಆಚರಣೆಯ ಮುಖ್ಯ ನಿಯಮ.

ರಂಜಾನ್ ಮಾಸದ ರೋಜಾ ಆಚರಣೆ ವೇಳೆ ಥಾರವಿ (ಕುರಾನ್‌ಪಠಣ), ಸದಾಖ್–ಫಿತ್ರ್ (ಕುಟುಂಬ ಸದಸ್ಯರಿಂದ ಧನಸಹಾಯ), ಜಖಾತ್ (ಆದಾಯ ಗಳಿಕೆಯಲ್ಲಿ ಶೇ25ರಷ್ಟು ದಾನ) ಮುಂತಾದ ಪಾರಂಪರಿಕ ಆಚರಣೆಯನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತದೆ.

‘ಆಸ್ತಿ ಸಂಗ್ರಹ ಅಪರಾಧ’ ಎಂಬುದು ಇಸ್ಲಾಂನ ನಂಬಿಕೆಗಳಲ್ಲಿ ಒಂದು. ಅವಶ್ಯಕತೆಗಿಂತ ಹೆಚ್ಚಾಗಿ ಸಂಪತ್ತನ್ನು ಇಟ್ಟುಕೊಳ್ಳಬಾರದು. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು ಎಂಬುದು ಈ ನಂಬಿಕೆಯ ಆಶಯ.

ಪವಿತ್ರ (ಹದೀಸ್) ಗ್ರಂಥಗಳ ಸೂಚನೆಯಂತೆ ರಂಜಾನ್ ಮಾಸದಲ್ಲಿ ಲೌಖಿಕವನ್ನು ತೊರೆದು ದೇವರ ಸ್ಮರಣೆ ಮಾಡುವುದು, ತಪ್ಪುಗಳಿಗೆ ಕ್ಷಮೆ ಬೇಡುವುದು, ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಶ್ರೇಯಸ್ಕರ ಸಂಗತಿ. ಈ ಸಮಯದಲ್ಲಿ ಕೆಟ್ಟ ಆಲೋಚನೆ– ಪರನಿಂದೆ ಮಾಡುವಂತಿಲ್ಲ. ಅಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆಯೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ರಂಜಾನ್ ಸಾರುತ್ತದೆ.

ಕೆಟ್ಟದನ್ನು ನೋಡುವುದು, ಮಾಡುವುದು, ಕೇಳುವುದು ತಪ್ಪು. ದೇಹ ಮತ್ತು ಮನಸ್ಸಿನ ಮೇಲೆ ಹತೋಟಿ ಇರಬೇಕು ಎಂದು ಧರ್ಮಗ್ರಂಥಗಳು ಸಾರಿ ಹೇಳುತ್ತವೆ. ರೋಜಾ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ‘ಹೊಟ್ಟೆ ತುಂಬಿದರೆ ಹಸಿವಿನ ತಾಪ ತಟ್ಟುವುದಿಲ್ಲ, ರೋಜಾ ಆಚರಣೆ ಮಾಡಿ ಹಸಿದಿದ್ದರೆ ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಆಚರಣೆಯ ಸಾರ.’ ಎನ್ನುತ್ತಾರೆ ಪಂತರಪಾಳ್ಯ ನಿವಾಸಿ ಪರ್ವಿನ್.

ಸವಿ ಸಿಹಿಗೆ ತುಸು ಖಾರದ ಮೆರುಗು
ರಂಜಾನ್ ಆಚರಣೆಯ ಹಬ್ಬದೂಟದಲ್ಲಿ ಖರ್ಜೂರ, ಸಮೋಸಾ ಹಲವು ಅರೇಬಿಯನ್ ಸಿಹಿ ತಿಂಡಿಗೆ ಮೊದಲ ಸ್ಥಾನವಿದೆ. ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಸೇರಿ ತರಹೇವಾರಿ ಸಿಹಿ ತಿನಿಸುಗಳು, ಹಣ್ಣು ಹಂಪಲು, ಮಾಂಸಾಹಾರ ಸವಿಯುವುದು ಸಹಬಾಳ್ವೆಯ ಸಂಕೇತವಾಗಿದೆ.  ಈದ್‌ ಆಚರಣೆಗೆ ನಗರದ ಹಲವೆಡೆ ಆಹಾರ ಬೀದಿಗಳೇ ಮೈದಳೆದಿವೆ.

ಬಿಲಾಲ್ ಮಸೀದಿ ಬಳಿ ನೂರಕ್ಕೂ ಹೆಚ್ಚು ಮಳಿಗೆ
ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲಾಲ್ ಮಸೀದಿ ರಂಜನ್‌ ಆಚರಣೆಯಂದು ಹೊಸ ರೂಪ ಪಡೆದುಕೊಳ್ಳುತ್ತದೆ. ಮಸೀದಿಗೆ ಹತ್ತಿರವಿರುವ ವಿಶಾಲ ಮೈದಾನದಲ್ಲಿ ಸಿಹಿ ಖಾದ್ಯ ಮತ್ತು ಮಾಂಸಾಹಾರ ಮಳಿಗೆಗಳು ತೆಲೆಯೆತ್ತಿವೆ. ಹೈದರಾಬಾದ್ ಹಲೀಮದಿಂದ ಹಿಡಿದು ಕಬಾಬ್‌, ತೀತರ್‌ ಘೋಷ್‌, ಫಿಶ್‌ ಫ್ರೈ, ಪತ್ಥರ್‌ ಘೋಷ್‌, ಆವೋ ಭೈ ಚಿಕನ್‌ ಕಬಾಬ್‌, ಫಾಲ್‌ ಗರಮಾ ಗರಂ ಮಾಂಸಾಹಾರ ಭಕ್ಷ್ಯಗಳ ಅಂಗಡಿಗಳು ಸಾಲುಸಾಲಾಗಿ ಇವೆ.

ಜೊತೆಗೆ ಸಿಹಿ ತಿನಿಸು ಮತ್ತು ಹರೀರಾಗಳು ರಂಜಾನ್ ಕಳೆ ಹೆಚ್ಚಿಸಿವೆ. ನೂರಾರು ಆಹಾರ ಮಳಿಗೆಗಳಿಂದ ತುಂಬಿರುವ ಮೈದಾನ ಸಂಜೆ ಪ್ರಾರ್ಥನೆ ನಂತರ ಪುಟ್ಟಪುಟ್ಟ ದೀಪ ಹಚ್ಚಿಕೊಂಡು ಝಗಮಗವೆಂದು ವ್ಯಾಪಾರಕ್ಕೆ ಸಿದ್ಧವಾಗುತ್ತದೆ.  ಸ್ಥಳೀಯ ಆಹಾರದ ಜೊತೆಗೆ ಹಲವು ಬಗೆಯ ಅರೇಬಿಯನ್, ಮೊಘಲ್ ಪಾರಂಪರಿಕ ತಿನಿಸುಗಳು ಇಲ್ಲಿ ಲಭ್ಯ.

ಪ್ರತಿ ಅಂಗಡಿಗಳಲ್ಲೂ ಇಫ್ತಾರ್‌ನಿಂದ ಸಹರಿವರೆಗೆ ಭರ್ಜರಿ ವ್ಯಾಪಾರ. ಆದರೆ ವ್ಯಾಪಾರಿಗಳು ಮಾತ್ರ ಒಮ್ಮೆಲೆ ಇದನ್ನು ಒಪ್ಪಿಕೊಳ್ಳುವುದಿಲ್ಲ. ವ್ಯಾಪಾರದ ಬಗ್ಗೆ ಕೇಳಿದರೆ ‘ಅಚ್ಚಿ ನಹೀ ಹೇ’ ಎನ್ನುವ ಕೋರಸ್‌ ತಪ್ಪುವುದೇ ಇಲ್ಲ. ‘ಪೊಲೀಸ್‌ ಕೋ ಮತ್‌ ಬತಾವ್‌’ ಎಂಬ ಪಲ್ಲವಿಯೂ ಇರುತ್ತದೆ.

ವರ್ಷವಿಡೀ ದುಡಿಯುವ ಬದಲು ರಂಜಾನ್ ಮಾಸದಲ್ಲಿ ಹಾಕುವ ಮಳಿಗೆಯಿಂದಲೇ ಹೆಚ್ಚು ಲಾಭ ಎನ್ನುವುದು ಬಲ್ಲವರ ಮಾತು. ರಂಜಾನ್ ಉಪವಾಸದ ಆರಂಭದ ದಿನಗಳಲ್ಲಿ ಪ್ರತಿದಿನ ₹50 ಸಾವಿರದವರೆಗೆ ವ್ಯಾಪಾರ ಮಾಡುತ್ತಾರೆ. ಮಾಸದ ಕೊನೆ ಕೊನೆಯಲ್ಲಿ ವ್ಯಾಪಾರ ಲಕ್ಷ ದಾಟುತ್ತದೆ.

‘ಬಕ್ಲಾವಾ’ ಮೋಡಿಯಲ್ಲಿ ಫ್ರೇಜರ್ ಟೌನ್
ರಂಜಾನ್ ಪ್ರಯುಕ್ತ ಫ್ರೇಜರ್‌ ಟೌನ್‌ನಲ್ಲಿ ವಿಶೇಷ ತಿನಿಸುಗಳು ಹೊಸ ಆಹಾರ ಮಳಿಗೆಗಳು ತಲೆ ಎತ್ತಿವೆ. ಅರೇಬಿಯನ್ ಜನಪ್ರಿಯ ಸಿಹಿ ತಿನಿಸು ‘ಬಕ್ಲಾವ್’ ಸವಿಯುವವರ ನಾಲಿಗೆಯ ಮೇಲೆ ನಲಿಯುತ್ತಿದೆ. ಎಂಟು ಬಗೆಯ ಡ್ರೈ ಫ್ರೂಟ್ಸ್‌ಗಳನ್ನು ಸಮೃದ್ಧವಾಗಿ ಹಾಕಿ ತಯಾರಿಸುವ ಬಕ್ಲಾವ್ ಹಲವು ಆಕಾರ ಮತ್ತು ಸ್ವಾದದಲ್ಲಿ ಲಭ್ಯ.

ಪ್ರೇಜರ್ ಟೌನ್‌ನಲ್ಲಿ ಇರುವ ‘ಕೆಫೆ ಅರೇಬಿಕಾ’ದಲ್ಲಿ ರಂಜಾನ್‌ಗಾಗಿ ‘ಬಕ್ಲಾವ್‌’ ಅನ್ನು ಹಲವು ಬಗೆಯ ವಿನ್ಯಾಸದಲ್ಲಿ ತಯಾರಿಸಿದ್ದಾರೆ. ಈ ಸಿಹಿ ತಿನಿಸಿನಲ್ಲಿ ಸಕ್ಕರೆ ಇರುವುದಿಲ್ಲ!. ಜೇನುತುಪ್ಪ, ಬೆಣ್ಣೆಯಿಂದ ಸಮೃದ್ಧವಾಗಿರುತ್ತದೆ. ಕ್ರಂಚಿ ಪಫ್‌ನಿಂದ ಸುತ್ತುವರೆದು ಮಧ್ಯೆ ಡ್ರೈ ಫ್ರೂಟ್ಸ್‌ಗಳ ಫಿಲ್ಲಿಂಗ್‌ ಇರುತ್ತದೆ. ಸ್ವಾದಿಷ್ಟ ಡ್ರೈ ಫ್ರೂಟ್ಸ್‌ಗಳ  ಸಿಹಿ ಅಂಶವು ‘ಬಕ್ಲಾವ್‌’ ರುಚಿ ಹೆಚ್ಚಿಸುತ್ತದೆ.

ರಂಜಾನ್‌ನ ಮತ್ತೊಂದು ವಿಶೇಷ ಸಿಹಿ ತಿನಿಸು ‘ಬಾದಾಮ್ ದೂದ್‌’. ಇದರ ರುಚಿಯೂ ಬಹುಕಾಲ ನೆನಪಿನಲ್ಲಿರುತ್ತದೆ.  ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿಯನ್ನು ರುಬ್ಬಿ ಹಾಲಿನೊಂದಿಗೆ ಮಿಶ್ರಣ ಮಾಡಿ ಗಂಟೆಗಟ್ಟಲೆ ಕುದಿಸುತ್ತಾರೆ. ಒಮ್ಮೆ ಇದನ್ನು ಕುಡಿದವರು ರುಚಿ ಮರೆಯುವುದು ಅಸಾಧ್ಯ. ಈ ಹಾಲಿನ ಸವಿಯ ಮುಂದೆ ಜಿಲೇಬಿ, ಕ್ಯಾರೆಟ್‌ ಹಲ್ವ, ಜಾಮೂನು, ರಸಗುಲ್ಲ, ಪನ್ನೀರ್‌ ಸಿಹಿ ತಿನಿಸುಗಳು ಸಾಧಾರಣ ಎನಿಸುತ್ತದೆ.

ಫ್ರೇಜರ್‌ ಟೌನ್‌ನಲ್ಲಿ ಮಾಂಸಾಹಾರದ ಘಮ
ರಂಜಾನ್ ಆಚರಣೆಯ ವಿಶೇಷ ಭಕ್ಷ್ಯಗಳಲ್ಲಿ ಮಾಂಸಾಹಾರದ್ದೇ ಸಿಂಹಪಾಲು. ನೂರಾರು ಬಗೆಯ ಚಿಕನ್, ಮಟನ್ ಬಿರಿಯಾನಿ ಆಹಾರ ಪ್ರಿಯರ ಬಾಯಿಯಲ್ಲಿ ನೀರೂರಿಸುತ್ತವೆ. ಕೂರ್ಮ ಬಿರಿಯಾನಿ ದಾವತ್, ಮಂಡಿ ಬಿರಿಯಾನಿ ದಾವತ್, ಕಬ್ಸಾ ಬಿರಿಯಾನಿ, ಮಜ್‌ಪೋಸ್‌ ಬಿರಿಯಾನಿ ದಾವತ್, ಹೀಗೆ ಬಿರಿಯಾನಿಗಳ ಸರಮಾಲೆಯೇ ಫ್ರೇಜರ್‌ ಟೌನ್‌ನಲ್ಲಿ ತೆರೆದುಕೊಂಡಿದೆ. ಹಲೀಮ್‌ಗೆ ರಂಜಾನ್‌ ಮಾಂಸಾಹಾರದಲ್ಲಿ ವಿಶೇಷ ಸ್ಥಾನವಿದೆ. ಮಾಂಸ, ಅಕ್ಕಿ, ಗೋಧಿ, ಡ್ರೈ ಫ್ರೂಟ್ಸ್‌ಗಳನ್ನು ಮಸಾಲೆಯೊಂದಿಗೆ ಹಲವು ಗಂಟೆಗಳ ಕಾಲ ಬೇಯಿಸಿ ಈ ತಿನಿಸು ಸಿದ್ಧಪಡಿಸಲಾಗುತ್ತದೆ.

ತೆಳುವಾದ ಮಸಾಲೆಯೊಂದಿಗೆ ಹದವಾಗಿ ಬೆರೆಯುವ ಮಾಂಸದ ರುಚಿ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಬಿಲಾಲ್‌ ಮಸೀದಿ ಬಳಿಯ ಹಲೀಮ್‌ಗಿಂತ ಫ್ರೇಜರ್‌ ಟೌನ್‌ ಬಳಿ ಸಿಗುವ ಹಲೀಮ್‌ ಹೆಚ್ಚು ರುಚಿಸಿತು. ತೀತರ್‌ ಹಕ್ಕಿಯ ಮಾಂಸದಿಂದ ತಯಾರಿಸಿದ ಭಕ್ಷ್ಯಗಳೂ ಇಲ್ಲಿ ಲಭ್ಯ. ಸ್ವಲ್ಪ ನಾಟಿ ಕೋಳಿ ರುಚಿ ನೀಡುವ ತೀತರ್. ಹೆಚ್ಚು ಮಾಂಸವಿಲ್ಲದೆ ತೆಳುವಾಗಿ ಇರುವುದರಿಂದ ಮಸಾಲೆಗಳು ಹಕ್ಕಿಯನ್ನು ಆವರಿಸಿಕೊಂಡಿರುತ್ತದೆ. ತಿಂದಷ್ಟೂ ರುಚಿ ನೀಡುತ್ತದೆ ತೀತರ್.

ಇದರೊಂದಿಗೆ ಮಟನ್‌ ಪೇಯ, ಘೋಷ್‌ ನಿಹಾರ್, ಮೀನು, ಏಡಿ, ಪ್ರಾನ್, ಹೀಗೆ ಆಹಾರ ಮಳಿಗೆಯಲ್ಲಿ ಇದ್ದ ಸಾಲು ಸಾಲು ತಿನಿಸುಗಳು ತಿಂದಷ್ಟು ಮನ ಸೆಳೆಯುತ್ತವೆ.ಇಡೀ ರಾತ್ರಿ ತಿಂದರೂ ಆಹಾರ ಸರಣಿ ಮುಗಿಯುವುದಿಲ್ಲ. ಅರುಣೋದಯದ ಆರಂಭಕ್ಕೆ ಹೊಟ್ಟೆ ತುಂಬಿದೆ ಎನಿಸಿದರೆ ಕುಲ್ಫಿ ಹೌಸ್‌ನಲ್ಲಿ ಸೀಬೆ, ಮಾವು, ಸೀತಾಫಲ ಕುಲ್ಫಿ ತಿಂದು ಸುಧಾರಿಸಿಕೊಳ್ಳಬಹುದು. ಯಾವ ರುಚಿಯನ್ನೂ ಮರೆಯಬಾರದು ಎನಿಸಿದರೆ, ಕೊನೆಯಲ್ಲೊಂದು ಕರ್ಜೂರ ಬೀಡಾ, ಗುಲ್ಕನ್ ಬೀಡಾ ಮೆಲ್ಲಬೇಕು.

ಹಬ್ಬಕ್ಕೆ ಖವ್ವಾಲಿ ಸಂಗೀತ ಮೆರುಗು
ಇಸ್ಲಾಂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಖವ್ವಾಲಿ ಹಾಡಿಸುವ ಸಂಪ್ರದಾಯ ಇಂದಿಗೂ ಉಳಿದಿದೆ. ನಾಥ್, ಹಮ್ದ್, ಮನ್ಕ್‌ಬತ್, ಗಜಲ್, ಅಲಿಮೋಲ, ಶಹದತ್, ಹಜರದ್ ಕಾಜ ಕರೀಬ್ ನವಾಜ್ ಹಜಮೀರ್ ಸಾಧು ಹೀಗೆ ಹಲವು ವಿಧಾನಗಳೊಂದಿಗೆ ಖವ್ವಾಲಿ ಹಾಡುತ್ತಾರೆ.

ಬೆಂಗಳೂರು ನಗರದಲ್ಲಿ ನೂರಾರು ಗುರುಗಳು ಈ ಮೌಖಿಕ ಕಾವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇವರ ಪೈಕಿ ಹಜರತ್ ಸೈಯದ್ ಮೊಹಿಯುದ್ದೀನ್ ಶಾ ಅವರದು ದೊಡ್ಡ ಹೆಸರು.

‘ನಾನು ಐದು ವರ್ಷದವನಿದ್ದಾಗ ಖವ್ವಾಲಿ ಹಾಡುವವರ ಪಕ್ಕ ಕೂರುತ್ತಿದ್ದೆ, ಹಾಡುಗಾರಿಕೆ ಬಗ್ಗೆ ಏನೋ ಒಂದು ಸೆಳೆತ ಸಣ್ಣ ವಯಸ್ಸಿನಲ್ಲೇ ನನ್ನ ಆವರಿಸಿತು. ನೂರಾರು ವರ್ಷಗಳಿಂದ ಹಾಡುತ್ತಿರುವ ಸಾಧುಸಂತರ ಬಗೆಗಿನ ಹಾಡುಗಳು ವಿಶೇಷವೆನಿಸುತ್ತಿದ್ದವು. ನಮ್ಮ ಕುಟುಂಬದಲ್ಲಿ ಯಾರೂ ಹಾಡುತ್ತಿರಲಿಲ್ಲ  ಆದರೆ ಸಂಗೀತದ ಬಗ್ಗೆ ನನಗೆ ವಿಶೇಷ ಸೆಳೆತವಿತ್ತು. ಅದು ನನ್ನ ಅನುಭವಕ್ಕೆ ಬಂದಾಗ ಗುರುಗಳ ಅರಸುತ್ತಾ ಹೊರಟೆ’ ಎಂದು ತಾವು ಖವ್ವಾಲಿ ಕಲಿತ ಬಗೆಯನ್ನು ವಿವರಿಸುತ್ತಾರೆ ಸೈಯದ್.

ಆಂಧ್ರ ಮೂಲದ ಸೈಯದ್ ಅವರು ತಮ್ಮ 11ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದರು. ಚಿಂತಾಮಣಿಯ ಹಜರತ್ ನೂರುದ್ದೀನ್ ಷಾ ಗುರುಗಳ ಬಳಿ 14 ವರ್ಷ ಖವ್ವಾಲಿ ಅಭ್ಯಾಸ ಮಾಡಿದ್ದಾರೆ.

ಸಾಧುಗಳು, ಮೆಕ್ಕಾ ಮದೀನ, ಕುರಾನ್‌ ಮತ್ತು ಇತರ ಜಾನಪದ ಉರ್ದು ಖವ್ವಾಲಿಗಳನ್ನು ಸೊಗಸಾಗಿ ಹಾಡುತ್ತಾರೆ. ಇದನ್ನೇ ತಮ್ಮ ಮೂಲ ವೃತ್ತಿಯನ್ನಾಗಿ ತೆಗೆದುಕೊಂಡಿದ್ದಾರೆ. ಸದ್ಯ ಹೊಸಹಳ್ಳಿ ಮುಖ್ಯರಸ್ತೆಯಲ್ಲಿರುವ ಪಂತರಪಾಳ್ಯದ ಧಾರ್ಮಿಕ ಕೇಂದ್ರದಲ್ಲಿ ಮುರ್ಷೀದ್ (ಗುರು) ಆಗಿ ಕೆಲಸ ಮಾಡುತ್ತಿದ್ದಾರೆ. ದರ್ಗಾಗಳಲ್ಲಿ ನಡೆಯುವ ವಿಶೇಷ ಪೂಜೆ ಮತ್ತು ಮೃತರ ಸಮಾಧಿಗಳಿಗೆ ‘ಸಂದಲ್’ (ಗಂಧ ಹಚ್ಚಿ ಪೂಜೆ ಮಾಡುವುದು) ಕಾರ್ಯಕ್ಕೆ ಮುರ್ಶದ್‌ರನ್ನು ಕರೆಸುತ್ತಾರೆ.

ಇಂಥ ಕಾರ್ಯಕ್ರಮಗಳಲ್ಲಿ ಸಾಧುಗಳ ಬಗ್ಗೆ ಇರುವ ಕಥೆಯನ್ನು ಹಾಡುವುದು ನಿತ್ಯದ ಕೆಲಸ. ಈ ಮೂಲಕ ಕರ್ನಾಟಕ ನೆಲದಲ್ಲಿ ಇರುವ ಪಾರಂಪರಿಕ ಉರ್ದು ಮೌಖಿಕ ಕಾವ್ಯವನ್ನು ಜೀವಂತ ಇಡುವ ಕೆಲಸವನ್ನು ಸೈಯದ್‌ ಮಾಡುತ್ತಿದ್ದಾರೆ.

ಟಿಪ್ಪು ಸಂಬಂಧಿಕರ ಸಮಾಧಿಗೆ ‘ಸಂದಲ್’
ಬೆಂಗಳೂರಿನಲ್ಲಿ ಇರುವ ಟಿಪ್ಪು ಸಂಬಂಧಿಕರ ಸಮಾಧಿಗಳಿಗೆ ಪ್ರತಿವರ್ಷ ‘ಸಂದಲ್’ ಮಾಡುವುದು ಸೈಯದ್ ಮತ್ತು ತಂಡ. ಟಿಪ್ಪು ಸುಲ್ತಾನ್ ಕಾಲದ ಸೂಫಿ ಸಂತರ ಕಥನ ಗೀತೆಗಳನ್ನು ಹಾಡುವುದರ ಜೊತೆಗೆ ಮೊಹಮದ್ ಮುಸ್ತಫಾ, ಮೌಲಾ ಅಲಿ, ಇಮಾಮಿ ಹಸೈನ್, ಹೌಸುಲಾಝಂ ದಸ್ತಗಿರ್, ಖ್ವಾಜ ಗರೀಬ್ ನವಾಜ್, ಶಿರಡಿ ಸಾಯಿಬಾಬ ಹೀಗೆ ನಾನಾ ಸಂತರ ಜೀವನ ಚರಿತ್ರೆಯನ್ನು ಉರ್ದು ಭಾಷೆಯಲ್ಲಿ ಹಾಡುತ್ತಾರೆ. ಸೈಯದ್ ಅವರ ತಂಡದಲ್ಲಿ ಹಲವು ಭಾಷೆಯ ಗೀತೆಗಳನ್ನು ಹಾಡುವ ಮುರ್ಶೀದರು ಇದ್ದಾರೆ. ರಾಜ್ಯ– ಹೊರ ರಾಜ್ಯದ ಹಲವು ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಡುತ್ತಾರೆ.

ಬೀದಿಯಲ್ಲಿ ದಫ್‌ ಬಾರಿಸುತ್ತಾ...
ರಂಜಾನ್‌ ವೇಳೆ ದರ್ಗಾದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಖವ್ವಾಲಿ ಹಾಡುತ್ತಾರೆ. ಹಗಲು ರೋಜಾ ಆಚರಿಸಿ ರಾತ್ರಿ ವೇಳೆ ಬೀದಿಬೀದಿಯಲ್ಲಿ ಸೂಫಿಸಂತರ ಚರಿತ್ರೆಯನ್ನು ಹಾಡುತ್ತಾರೆ. ‘ರಂಜಾನ್‌ ಸಮಯದಲ್ಲಿ ದಫ್ (ಒಂದು ರೀತಿಯ ತಮಟೆ) ಬಾರಿಸಿಕೊಂಡು ಬೀದಿಗಳಲ್ಲಿ ಓಡಾಡುತ್ತೇವೆ. ರಾತ್ರಿ ಮಲಗಿರುವವರನ್ನು ಎಬ್ಬಿಸಿ ದೇವರ ಧ್ಯಾನ ಮಾಡುವಂತೆ ಎಚ್ಚರಿಸುತ್ತೇವೆ. ಗುರು ಪರಂಪರೆಯ ಇತಿಹಾಸವನ್ನು ಹಾಡುತ್ತೇವೆ. ಇದರಿಂದ ಇಂದಿನ ಯುವಕರಿಗೆ ನಮ್ಮ ಹಿಂದಿನ ಸೂಫಿ ಸಂತರ ಬಗ್ಗೆ ತಿಳಿಯುತ್ತದೆ’ ಎನ್ನುತ್ತಾರೆ  ಸೈಯದ್.

ಸೈಯದ್‌ ಹಾಡಿರುವ 18 ಸೀಡಿಗಳು ಬಿಡುಗಡೆಯಾಗಿವೆ. ಹೊಸದಾಗಿ ಕಾಟನ್‌ಪೇಟೆಯ ತೌಕಲ್‌ ಮಸ್ತಾನಿ ಬಗ್ಗೆ ಹಾಡು ಕಟ್ಟಿದ್ದಾರೆ. ಇದುವರೆಗೂ 70 ಜನ ಶಿಷ್ಯರಿಗೆ ತಮ್ಮ ಕಲೆಯನ್ನು ಧಾರೆಯೆರೆದಿದ್ದಾರೆ. ಸೈಯದ್‌ ಅವರ ಎರಡನೇ ಮಗ ಕೂಡ ತಂದೆಯ ಹಾದಿಯನ್ನು ತುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT