ಬುಧವಾರ, ಜನವರಿ 22, 2020
24 °C

ಹಸ್ತಾಂತರ ಭಾಗ್ಯ ಕಾಣದ ಪುನರ್ವಸತಿ ಕಾತರಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ನೆರೆಹಾವಳಿ ಸಂಭವಿಸಿ ಎರಡು ವರ್ಷಗಳು ಗತಿಸಿದರೂ ಸರ್ಕಾರ ನೆರೆಸಂತ್ರಸ್ತರಿಗೆ ಪೂರ್ಣಪ್ರಮಾಣದ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ತಾಲ್ಲೂಕಿನ ಕಾತರಕಿ ಗ್ರಾಮದ `ಪುನರ್ವಸತಿ ಗ್ರಾಮ~ದ ಮನೆಗಳು ಸಾಕ್ಷಿಯಾಗಿವೆ. ಶಾಶ್ವತ ನೆರೆಪೀಡಿತ ಕಾತರಕಿ ಗ್ರಾಮದಲ್ಲಿ 2009ರ ನೆರೆಹಾವಳಿ ನಂತರ ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಸಂತ್ರಸ್ತರ ಪುನರ್ವಸತಿಗಾಗಿ `ಆಸರೆ~ ಯೋಜನೆ ಅಡಿಯಲ್ಲಿ 356 ಮನೆಗಳನ್ನು ನಿರ್ಮಿಸಲಾಗಿದೆ.ಈ `ಆಸರೆ~ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸುವಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ `ನಿರ್ಮಿತಿ ಕೇಂದ್ರ~ದ ಗುಣಮಟ್ಟದ ಕುರಿತು ಈ ಕಾಲೊನಿಯ ಮನೆಗಳನ್ನು ಒಮ್ಮೆ  ವೀಕ್ಷಿಸಿದರೆ ಬಹಿರಂಗವಾಗಿ ಗೋಚರವಾಗುತ್ತದೆ.ಸಂತ್ರಸ್ತರಿಗೆ ಹಸ್ತಾಂತರವಾಗುವ ಮುನ್ನವೇ ಇಲ್ಲಿನ ಕೆಲವು ಮನೆಗಳು ಬಿರುಕು ಬಿಡುವ ಮೂಲಕ ದುಸ್ಥಿತಿ ತಲುಪಿರುವುದು ಕಾಮಗಾರಿಯ ಗುಣಮಟ್ಟದ ಕುರಿತು ಸಂತ್ರಸ್ತರು ಪ್ರಶ್ನಿಸುವಂತಾಗಿದೆ. ಮನೆಗಳ ನಿರ್ಮಾಣ  ಪೂರ್ಣಗೊಂಡಿದ್ದರೂ ಶೌಚಾಲಯಗಳ ನಿರ್ಮಾಣ ಇನ್ನೂ ಪ್ರಗತಿಯಲ್ಲಿರುವುದು ಆಮೆಗತಿಯ ಕಾಮಗಾರಿಗೆ ಸಾಕ್ಷಿಯಾಗಿದೆ.ಮೂಲಸೌಲಭ್ಯ: ಈ ಪುನರ್ವಸತಿ ಕಾಲೊನಿಗೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ 92.35 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ  ಕೈಗೊಳ್ಳಲಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಹಾಗೂ ಸಿಡಿ ನಿರ್ಮಾಣ  ಮತ್ತಿತರ  ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನೂ ಸುಮಾರು 18 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ಈ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಮೂಲಗಳು ತಿಳಿಸಿವೆ. ಒಳರಸ್ತೆ ಬದಿಯಲ್ಲಿ ನಿರ್ಮಿಸಲಾದ ಚರಂಡಿಯ ಬಂಡೆಗಳು ಅನೇಕ ಕಡೆ ಒಡೆದು ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕಡೆ ಚರಂಡಿಗೆ ಅಳವಡಿಸಲಾದ ಬಂಡೆಗಳನ್ನು ಕದ್ದೊಯ್ಯಲಾಗಿದೆ. `ಆಸರೆ~ ಮನೆಗಳ ಹಸ್ತಾಂತರದಲ್ಲಿನ ವಿಳಂಬವೂ ಕೂಡ ಇಲ್ಲಿ ನಿರ್ಮಾಣಗೊಂಡ ರಸ್ತೆ ಹಾಗೂ ಚರಂಡಿಗಳು ಹಾಳಾಗಲು ಕಾರಣವಾಗಿದೆ.ಇಷ್ಟೆಲ್ಲಾ ಅವಾಂತರಗಳಿದ್ದರೂ ಕಳೆದ ನವೆಂಬರ್ 2ರಂದು ಮನೆಗಳನ್ನು ಹಸ್ತಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಅಪೂರ್ಣಗೊಂಡಿರುವ ಮನೆಗಳ ಹಸ್ತಾಂತರಕ್ಕೆ ಸ್ಥಳೀಯ ಶಾಸಕ ಜಿ.ಹಂಪಯ್ಯ ನಾಯಕ ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿ ಕೇವಲ ದದ್ದಲ  ಗ್ರಾಮದ `ಆಸರೆ~ ಮನೆಗಳನ್ನು ಮಾತ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿತ್ತು.ಒತ್ತಾಯ: ಕಾತರಕಿ ಗ್ರಾಮದಲ್ಲಿ ಮನೆಗಳ ನಿರ್ಮಾಣ ಪ್ರಕ್ರಿಯೆ ಆರಂಭವಾಗಿ ಎರಡು ವರ್ಷ  ಗತಿಸಿದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದಿರುವುದು ಸಂತ್ರಸ್ತರಲ್ಲಿ ನಿರಾಸೆಗೆ ಕಾರಣವಾಗಿದೆ. ಕಾತರಕಿ ಗ್ರಾಮದ `ಆಸರೆ~ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಬೇಕು.  ಬಿರುಕು ಬಿಟ್ಟ ಕೆಲವು ಮನೆಗಳನ್ನು ದುರಸ್ತಿಗೊಳಿಸಬೇಕು. ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಪ್ರತಿಕ್ರಿಯಿಸಿ (+)