ಶನಿವಾರ, ಫೆಬ್ರವರಿ 27, 2021
23 °C

ಹಾಕಿ: ಎಂಟರ ಘಟ್ಟಕ್ಕೆ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಎಂಟರ ಘಟ್ಟಕ್ಕೆ ಭಾರತ ತಂಡ

ರಿಯೊ ಡಿ ಜನೈರೊ (ಪಿಟಿಐ):    ರಿಯೊ ಒಲಿಂಪಿಕ್ಸ್‌ನ ಗುಂಪು ಹಂತದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆನಡಾ ವಿರುದ್ಧ ಭಾರತಕ್ಕೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ.ಈ ತಂಡದ ಎದುರು ಶ್ರೀಜೇಶ್ ಪಡೆ 2–2 ಗೋಲುಗಳಿಂದ ಡ್ರಾ ಮಾಡಿಕೊಂಡರೂ ಕ್ವಾರ್ಟರ್‌ ಫೈನಲ್‌ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಭಾರತ ಹಾಕಿ ತಂಡ 2012ರ ಒಲಿಂಪಿಕ್ಸ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿ  ಕೊನೆಯ ಸ್ಥಾನ ಪಡೆದಿತ್ತು. ಅದಕ್ಕೂ ಹಿಂದಿನ ಕೂಟಕ್ಕೆ ಅರ್ಹತೆಯೇ ಪಡೆದಿರಲಿಲ್ಲ. ಆದ್ದರಿಂದ ಈ ಬಾರಿ ಆಟಗಾರರ ಮೇಲೆ ಒತ್ತಡವಿತ್ತು.ಈ ಸವಾಲನ್ನು ಚೆನ್ನಾಗಿ ಅರಿತಿದ್ದ ಆಟಗಾರರು ಲೀಗ್ ಹಂತದಲ್ಲಿ ಒಟ್ಟು ಏಳು ಪಾಯಿಂಟ್ಸ್ ಕಲೆ ಹಾಕಿ ಗುಂಪಿನಲ್ಲಿ  ಮೂರನೇ ಸ್ಥಾನ ಪಡೆದರು. ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್‌ ಮತ್ತು ಜರ್ಮನಿ ತಲಾ ಹತ್ತು ಪಾಯಿಂಟ್‌ಗಳನ್ನು ಕಲೆ ಹಾಕಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಹೊಂದಿವೆ. ಈ ಮೂರೂ ತಂಡಗಳು ನಾಕೌಟ್ ತಲುಪಿರುವುದು ಖಚಿತವಾಗಿದೆ.ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಠ ತಂಡದ ಸವಾಲನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಬೇಕಾದರೆ ಭಾರತ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಬೇಕಿತ್ತು. ಆದರೆ ಶ್ರೀಜೇಶ್ ನಾಯಕತ್ವದ ತಂಡದ ಈ ಆಸೆ ಈಡೇರಲಿಲ್ಲ.ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನ ಹೊಂದಿರುವ ಭಾರತ ಗೋಲು ಗಳಿಸಲು ಮಾಡಿದ ಸಾಕಷ್ಟು ಪ್ರಯತ್ನಕ್ಕೆ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಫಲ ಲಭಿಸಲಿಲ್ಲ.ಆಕಾಶದೀಪ್‌ ಸಿಂಗ್ 33ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯ ಸಂಭ್ರಮದಲ್ಲಿದ್ದಾಗಲೇ ನಿರಾಸೆ ಎದುರಾಯಿತು. ಕೆನಡಾ ತಂಡದ ಟಪ್ಪರ್ ಸ್ಕಾಟ್‌ 32ನೇ ನಿಮಿಷದಲ್ಲಿಯೇ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣವಾದರು.ಈ ಪಂದ್ಯದಲ್ಲಿ ಭಾರತಕ್ಕೆ ಗೋಲು ಕಲೆ ಹಾಕಲು ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಗೋಲು ಪೆಟ್ಟಿಗೆಯ ಸಮೀಪವೇ ಬಂದು ಪದೇ ಪದೇ ವೈಫಲ್ಯ ಅನುಭವಿಸಿತು. ಆದ್ದರಿಂದ ಅಷ್ಟೇನು ಬಲಿಷ್ಠವಲ್ಲದ ತಂಡದ ಎದುರು ಪ್ರಾಬಲ್ಯ ಮೆರೆಯಲು ಶ್ರೀಜೇಶ್ ಪಡೆಗೆ ಸಾಧ್ಯವಾಗಲಿಲ್ಲ.ಭಾರತದ ರಮಣದೀಪ್‌ ಸಿಂಗ್ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಟಪ್ಪರ್‌ ಸ್ಕಾಟ್‌ (52ನೇ ನಿಮಿಷ) ಗೋಲು ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.ಕೊನೆಯಲ್ಲಿ ಭಾರತ ಸೋಲು ಅನುಭವಿಸುವ ಸಂಕಷ್ಟದಲ್ಲಿತ್ತು. ಎದುರಾಳಿ ತಂಡದ ಗೆಸ್ಟ್‌ ಮ್ಯಾಥ್ಯೂ ಗೋಲು ಗಳಿಸಲು ಮಾಡಿದ ಯತ್ನಕ್ಕೆ ಭಾರತದ ಆಟಗಾರರು ಅಡ್ಡಿಯಾದರು.   ಈ ಅವಧಿಯಲ್ಲಿ ಭಾರತಕ್ಕೂ ಹಿನ್ನಡೆ ಎದುರಾಯಿತು.59ನೇ ನಿಮಿಷದಲ್ಲಿ ಹರ್ಮನಪ್ರೀತ್ ಸಿಂಗ್ ಮತ್ತು ರಘುನಾಥ್‌ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಲು ವಿಫಲ ಯತ್ನ ನಡೆಸಿದರು.

ಹೇಗಾದರೂ ಮಾಡಿ ಪಂದ್ಯ ಗೆಲ್ಲಲೇಬೇಕೆನ್ನುವ ಗುರಿ ಹೊಂದಿದ್ದ ತಂಡದ ಮುಖ್ಯ ಕೊಚ್‌ ರೋಲಂಟ್‌ ಓಲ್ಟಮನ್ಸ್‌ ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡಿದರು. ಹರ್ಮನಪ್ರೀತ್ ಅವರನ್ನು ಹೊರಕ್ಕೆ ಕಳುಹಿಸಿ ಸುರೇಂದರ್ ಕುಮಾರ್‌ಗೆ ಅವಕಾಶ ಕೊಟ್ಟರು. ಆದರೂ ಗೋಲು ಗಳಿಸಲು ಸಾಧ್ಯವಾಗದ ಕಾರಣ ಡ್ರಾಕ್ಕೆ ತೃಪ್ತಿಪಡಬೇಕಾಯಿತು.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.