ಬುಧವಾರ, ಮೇ 12, 2021
17 °C

ಹಾಕಿ ಪ್ರೇಮದ ಕಥೆ...!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಒಂದು ಆಸ್ಟ್ರೊ ಟರ್ಫ್ ಕ್ರೀಡಾಂಗಣ ಇಲ್ಲ; ಅನುಕೂಲಕರ ಹವಾಮಾನ ಇಲ್ಲ; ಬೇಕಾದಷ್ಟು ಕಾಸಿಲ್ಲ; ಪ್ರಾಯೋಜಕರ ಬೆಂಬಲವೂ ಇಲ್ಲ.ಇಂತಹ `ಇಲ್ಲ~ಗಳ ದೊಡ್ಡ ಪಟ್ಟಿಯ ನಡುವೆ ಧಾರವಾಡದಲ್ಲಿ ಕಳೆದ ವಾರ ರಾಷ್ಟ್ರಮಟ್ಟದ ಮಹಿಳಾ ಹಾಕಿ ಉತ್ಸವವನ್ನು ನಡೆಸಿ, ಎಲ್ಲರಿಂದಲೂ `ಸೈ~ ಎನಿಸಿಕೊಂಡವರು ರಾಷ್ಟ್ರೀಯ ಕ್ರೀಡೆಯ ಅಭಿಮಾನಿಗಳು. ಮೂವತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಅಸ್ತಿತ್ವದಲ್ಲಿದ್ದ `ಬ್ಲ್ಯೂ ಬರ್ಡ್ಸ್~ ಕ್ಲಬ್ ಸದಸ್ಯರು ಒಟ್ಟಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ ರಚಿಸಿದ್ದರು.ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕಾಲೇಜಿನ ಪುಲಕೇಶಿ ಶೆಟ್ಟೆಪ್ಪನವರ ಈ ಸಮಿತಿಯ ನೇತೃತ್ವ ವಹಿಸಿಕೊಂಡಿದ್ದರು. `ಬ್ಲ್ಯೂ ಬರ್ಡ್ಸ್~ ಕ್ಲಬ್ ಇದ್ದಾಗಲೂ ಅವರೇ ಅಧ್ಯಕ್ಷರಾಗಿದ್ದರು. ದೇಶದ ನಾನಾ ಭಾಗಗಳಲ್ಲಿ ನೆಲೆಯೂರಿದ ತಮ್ಮ ಹಾಕಿ ತಂಡದ ಗೆಳೆಯರನ್ನು ಒಟ್ಟುಗೂಡಿಸಿದ ಶೆಟ್ಟೆಪ್ಪನವರ ತವರೂರಿನಲ್ಲಿ ಒಂದು ದೊಡ್ಡ ಹಾಕಿ ಉತ್ಸವವನ್ನೇ ಮಾಡುವ ಸಂಕಲ್ಪ ತೊಟ್ಟರು.ಒಟ್ಟು 20 ತಂಡಗಳು ಸೆಣಸಾಟ ನಡೆಸಲು ಆಗಮಿಸಿದ್ದವು. ಭಾರತ ತಂಡದ ಸಂಭವನೀಯರ ಪಟ್ಟಿಯಲ್ಲಿ ಇದ್ದವರು, ವಿಶ್ವವಿದ್ಯಾಲಯ ಹಾಗೂ ಕ್ಲಬ್‌ಗಳಿಗೆ ಆಡಿದ ಆಟಗಾರ್ತಿಯರು ಬಂದಿದ್ದರಿಂದ ಟೂರ್ನಿ ರೋಚಕ ಹೋರಾಟದಿಂದ ಕೂಡಿತ್ತು.

ಆಟ ಆರಂಭವಾಗುವ ಹಿಂದಿನ ದಿನ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪಂದ್ಯಗಳು ನಡೆಯಬೇಕಿದ್ದ ಕರ್ನಾಟಕ ಕಾಲೇಜು ಮೈದಾನ ಸಂಪೂರ್ಣ ಒದ್ದೆಯಾಗಿತ್ತು.ಶೆಟ್ಟೆಪ್ಪನವರ ಸ್ವತಃ ಸ್ಪಂಜ್ ಹಿಡಿದು ನೀರು ತೆಗೆಯಲು ನಿಂತರು. ಉಳಿದವರೂ ಕೈಜೋಡಿಸಿದರು. ಮಧ್ಯಾಹ್ನದ ಹೊತ್ತಿಗೆ ಮೈದಾನ ಸಿದ್ಧವಾಯಿತು. ಸಂಘಟಕರ ಪರಿಶ್ರಮ ನೋಡಿ ಮಳೆರಾಯನಿಗೂ ಖೇದ ಎನಿಸಿರಬೇಕು. ಲೀಗ್ ಪಂದ್ಯಗಳು ಮುಗಿಯುವವರೆಗೆ ಪುನಃ ಕಾಡುವ ಗೋಜಿಗೆ ಹೋಗಲಿಲ್ಲ.ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುವ ದಿನ ಬೆಳಗ್ಗಿನಿಂದಲೂ ಮಳೆಯದ್ದೇ ಆಟ. ಮಧ್ಯ ಒಂದಿಷ್ಟು ಬಿಡುವು ಕೊಟ್ಟಾಗ ಸಂಘಟಕರ ಜೊತೆ ಪ್ರೇಕ್ಷಕರೂ ಕೈಜೋಡಿಸಿ ಮೈದಾನವನ್ನು ಆಟಕ್ಕೆ ಅಣಿಗೊಳಿಸಿದರು. ಆಟಗಾರ್ತಿಯರು ಸಹ ಸುರಿಯುವ ಮಳೆ ಹಾಗೂ ಜಾರುವ ಅಂಕಣದಲ್ಲಿ ಆಡುವ ಮೂಲಕ ತಮ್ಮ ಹಾಕಿ ಪ್ರೇಮ ಮೆರೆದರು.ಕೊನೆಯ ದಿನ ಏನೇ ಮಾಡಿದರೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಪೆನಾಲ್ಟಿ ಸ್ಟ್ರೋಕ್‌ಗಳ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು.ಟೂರ್ನಿ ನಡೆದ ಒಂದು ವಾರದ ಕಾಲ ಸಾವಿರ, ಸಾವಿರ ಸಂಖ್ಯೆಯಲ್ಲಿ ಪ್ರೇಕ್ಷಕರು ಮೈದಾನಕ್ಕೆ ಲಗ್ಗೆ ಇಟ್ಟರು. `ಮಹಿಳಾ ಹಾಕಿ~ ಎಂಬ ಆಯಸ್ಕಾಂತ ಯುವಕರನ್ನು ಸೆಳೆದಿದ್ದು ನಿಜವಾದರೂ ಅವರಲ್ಲಿ ರಾಷ್ಟ್ರೀಯ ಕ್ರೀಡೆಯ ಪ್ರೇಮ ಜಾಗೃತವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಮಳೆ ಸುರಿದರೂ ಮೈದಾನದಿಂದ ಪ್ರೇಕ್ಷಕರು ಹೊರಡಲಿಲ್ಲ. ಸಂಜೆವರೆಗೆ ಆಟ ಶುರುವಾಗುತ್ತದೆ ಎಂದು ಕಾಯುತ್ತಲೇ ಇದ್ದರು.ಕೊನೆಯ ದಿನ ಮಳೆ ಬಿಡುವು ಕೊಟ್ಟಾಗಲೆಲ್ಲ ಮೈದಾನದ ನೀರನ್ನೆಲ್ಲ ಸಂಘಟಕರು ತೆಗೆದು ಹೊರ ಹಾಕುತ್ತಿದ್ದರು. ಅಷ್ಟರಲ್ಲಿ ಮತ್ತೆ ಮಳೆ ಸುರಿಯುತ್ತಿತ್ತು. ಹೀಗೆ ಮೂರು ಸಲ ಪಂದ್ಯ ನಡೆಸುವ ಭಗೀರಥ ಯತ್ನ ಫಲ ನೀಡಲೇ ಇಲ್ಲ. ಪ್ರಶಸ್ತಿ ಸುತ್ತಿನ ನೈಜ ಹೋರಾಟವನ್ನೂ ಕಾಣಲಾಗಲಿಲ್ಲ.`ಧಾರವಾಡದಲ್ಲಿ ಒಂದು ಆಸ್ಟ್ರೊ ಟರ್ಫ್ ಕ್ರೀಡಾಂಗಣ ಇದ್ದಿದ್ದರೆ ಈ ಸಮಸ್ಯೆ ಇರುತ್ತಲೇ ಇರಲಿಲ್ಲ~ ಎಂದು ಶೆಟ್ಟೆಪ್ಪನವರ ಮರಗುತ್ತಿದ್ದರು. ಧಾರವಾಡದಲ್ಲಿ ಹಾಕಿ ಉತ್ಸವ ನಡೆಸುವ ಅವರ ಉದ್ದೇಶಗಳಲ್ಲಿ ಆಸ್ಟ್ರೊ ಟರ್ಫ್ ಕ್ರೀಡಾಂಗಣ ನಿರ್ಮಾಣವೂ ಒಂದಾಗಿತ್ತು. ಆದರೆ, ಯಾವ ಜನಪ್ರತಿನಿಧಿಗಳು ಹಾಕಿಪ್ರಿಯರ ಕೂಗಿಗೆ ಕಿವಿಗೊಡಲಿಲ್ಲ.ಅತ್ಯುತ್ತಮ ಆಟಗಾರ್ತಿಯರು ಹಾಗೂ ಗೆಲ್ಲಬೇಕೆಂಬ ಅವರಲ್ಲಿದ್ದ ಕೆಚ್ಚು ಪಂದ್ಯಗಳಿಗೆ ರೋಚಕತೆತುಂಬಿತ್ತು. ಮಡಿಕೇರಿ ತಂಡದ ಎಂ.ಬಿ. ತೃಪ್ತಿ, ಬಿ.ಎಸ್. ಅಂಕಿತಾ, ಬಿ.ಸಿ. ಭವ್ಯಾ, ಮೈಸೂರಿನ ಕಾವ್ಯಶ್ರೀ, ರಂಜಿತಾ, ರಷ್ಮಿ, ಮುಬೀನಾ, ಹುಬ್ಬಳ್ಳಿಯ ಲಕ್ಷ್ಮಿ ಸುಬೇದಾರ್, ಡಿ.ಸಿ. ಕುಲ್ಸುಂಬಿ, ಮುನಿರತ್ನಮ್ಮ, ಅಮೃತಸರದ ಅಮನ್‌ದೀಪ್    ಕೌರ್, ಗುರುಜೀತ್ ಕೌರ್, ರಾಜದೀಪ್ ಕೌರ್, ಹರ್ದೀಪ್ ಕೌರ್, ಟೂರ್ನಿಯುದ್ದಕ್ಕೂ ಗಮನ ಸೆಳೆದರು.ಪುಲಕೇಶಿ ಅವರ ಪ್ರಯತ್ನಕ್ಕೆ ಜಿ.ಬಿ. ಹೊಸಮನಿ, ನಾಗೇಶ ಮುದ್ರಾಭಟ್, ಸತೀಶ ಲಗಳಿ, ಎಸ್.ಜಿ. ಕೊಪ್ಪದ, ಆರ್.ಎಸ್. ಮಿಟ್ಟಿಮನಿ, ಶಂಕರ ತೋಳಮಟ್ಟಿ ಬೆನ್ನೆಲುಬಾಗಿ ನಿಂತಿದ್ದರು. ಗೆಳೆಯರೆಲ್ಲ ಸೇರಿ ತಮ್ಮ ಜೇಬಿನಿಂದ ದುಡ್ಡು ಹಾಕಿ ಟೂರ್ನಿ ನಡೆಸಿದರು. ಪೊಲೀಸ್ ಇಲಾಖೆ ಟೂರ್ನಿಗೆ ಸಂಪೂರ್ಣ ಸಹಕಾರ ನೀಡಿತು. ಆಟಗಾರ್ತಿಯರಿಗೆ ವಸತಿ ವ್ಯವಸ್ಥೆಯನ್ನು ಪೊಲೀಸ್ ವಸತಿ ಗೃಹದಲ್ಲೇ ಒದಗಿಸಲಾಗಿತ್ತು.ಹಾಕಿ ಕ್ರೀಡೆಗೆ ಚೈತನ್ಯ ತುಂಬುವುದು, ಯುವಕರಲ್ಲಿ ಹಾಕಿ ಮೇಲೆ ಆಸಕ್ತಿ ಮೂಡಿಸುವುದು, ಆಸ್ಟ್ರೊ    ಟರ್ಫ್ ಮೈದಾನ ನಿರ್ಮಾಣಕ್ಕೆ ಒತ್ತಡ ಹೇರುವುದು, ನೈರುತ್ಯ ರೈಲ್ವೆಯಲ್ಲಿ ಹಾಕಿ ತಂಡದ ರಚನೆಗೆ ಒತ್ತಾಯಿಸುವುದು, ಉತ್ತರ ಕರ್ನಾಟಕದಲ್ಲಿ ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ ಆಗ್ರಹಿಸುವುದು ಟೂರ್ನಿಯ ಉದ್ದೇಶವಾಗಿತ್ತು ಎಂದು ಶೆಟ್ಟೆಪ್ಪನವರ ಹೇಳುತ್ತಾರೆ.ಟೂರ್ನಿ ಸಂಘಟನೆಗೆ ರೂ ಹತ್ತು ಲಕ್ಷ ವ್ಯಯವಾಗಿದ್ದು, ಬಹಳ ಕಡೆಯಿಂದ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಇದರಿಂದ ದೃತಿಗೆಡದ ಗೆಳೆಯರ ಗುಂಪು ತಮ್ಮ ಜೇಬಿನಿಂದಲೇ ಹೆಚ್ಚುವರಿ ಹೊಣೆಯನ್ನು ನಿಭಾಯಿಸಿತು. ವಿವಿಧ ರಾಜ್ಯಗಳಿಂದ ಬಂದ ಹಾಕಿ ತಂಡಗಳಂತೂ ಇಲ್ಲಿಯ ಆತಿಥ್ಯಕ್ಕೆ ಮಾರುಹೋದವು. ಅಮೃತಸರ ತಂಡದ ಕೋಚ್ ಅಮನ್‌ದೀಪ್ ಕೌರ್ (ಸಿನಿಯರ್) ಇಷ್ಟೊಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ನಾವೆಲ್ಲೂ ಕಂಡಿರಲಿಲ್ಲ ಎಂದು ಹೇಳುತ್ತಿದ್ದರು.ಕೊನೆಯ ದಿನ ಮಳೆ ಆಗಿರದಿದ್ದರೆ ಟೂರ್ನಿಯ ಮಜವೇ ಬೇರೆಯಾಗಿರುತ್ತಿತ್ತು. ಧಾರವಾಡದಲ್ಲಿ ಕುಸ್ತಿ ನಂತರದ ದೊಡ್ಡ ಸಂಖ್ಯೆಯ ಪ್ರೇಕ್ಷರನ್ನು ಹಾಕಿ ಆಟ ಸೆಳೆಯಿತು. ಈ ಬೆಳವಣಿಗೆ ಉಳಿದ ಕ್ರೀಡೆಗಳಿಗೂ ಆಶಾದಾಯಕವಾಗಿ ಕಂಡಿದ್ದರೆ ಅಚ್ಚರಿಯಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.