ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಜರಾತಿ ಕೊರತೆಯ ಅಡಕತ್ತರಿ

Last Updated 1 ಜೂನ್ 2016, 19:47 IST
ಅಕ್ಷರ ಗಾತ್ರ

ಹಾಜರಾತಿ ಕೊರತೆ ಶೈಕ್ಷಣಿಕ ವಲಯದಲ್ಲಿ ಬಹುಚರ್ಚಿತ ವಿಷಯ. ಪಿಯುಸಿಯಿಂದ  ಸ್ನಾತಕೋತ್ತರ ಅಧ್ಯಯನದವ ರೆಗೂ ಹಾಜರಾತಿ ಕೊರತೆಯ ಸಮಸ್ಯೆಯನ್ನು ಬಹು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ.

‘ತರಗತಿಗಳಲ್ಲಿ ಕಡ್ಡಾಯ ಹಾಜರಾತಿ ಎಂಬುದು ಒಂದು ಅಮಾನವೀಯ ಕ್ರಮ; ಇದು ವಿದ್ಯಾರ್ಥಿಗಳ ಸ್ವತಂತ್ರ ಕಲಿಕಾ ಪ್ರವೃತ್ತಿಗೆ ದೊಡ್ಡ ಅಡಚಣೆ’ ಎಂದು ವಾದಿಸುವವರು ಒಂದು ಕಡೆಯಾದರೆ, ‘ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹಾಜರಾತಿ ತುಂಬ ಅವಶ್ಯಕ; ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳಲು ಅದು ಅನಿವಾರ್ಯ’ ಎಂದು ವಾದಿಸುವವರು ಇನ್ನೊಂದು ಕಡೆ.

ಈ ಎಲ್ಲದರ ನಡುವೆ ಪ್ರತೀವರ್ಷ ಒಂದಷ್ಟು ವಿದ್ಯಾರ್ಥಿಗಳು ಹಾಜರಾತಿ ಕೊರತೆಯ ಕಾರಣದಿಂದ ಪರೀಕ್ಷೆ ಬರೆಯಲು ಅನರ್ಹರಾಗುವುದು,  ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಎದುರು ಧರಣಿ ಕೂರುವುದು, ಕೆಲವೊಮ್ಮೆ ಈ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುವುದು, ಪರಿಹಾರಕ್ಕೆ ಕೋರ್ಟ್ ಮೊರೆಹೋಗುವುದು ಇತ್ಯಾದಿಗಳು ನಡೆದೇ ಇವೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳು ನೀಡುವ ಕಾರಣ, ತಾವು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ಇಲ್ಲ ಎಂದು. ಅವರ ಮಾತಿನಲ್ಲಿ ನಿಜಾಂಶ ಇಲ್ಲದಿಲ್ಲ. ಗ್ರಾಮೀಣ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕಿಂತಲೂ ಹೊಟ್ಟೆಪಾಡೇ ಮುಖ್ಯವಾಗುತ್ತದೆ.

ಅವರಲ್ಲಿ ತುಂಬ ಮಂದಿ ಕೂಲಿಕಾರರ ಇಲ್ಲವೇ ಕಡುಬಡವರ ಮಕ್ಕಳಿದ್ದಾರೆ. ಮನೆಯಲ್ಲಿ ಅಶಕ್ತ ತಂದೆತಾಯಿಯರಿದ್ದು ಒಬ್ಬನೇ ಮಗನೋ ಮಗಳೋ ಆಗಿದ್ದರಂತೂ ಅದೇ ದೊಡ್ಡ ಸಮಸ್ಯೆ. ಅವರಿಗೆ ದುಡಿಮೆ ಅನಿವಾರ್ಯ.

ಇಂತಹ ವಿದ್ಯಾರ್ಥಿಗಳನ್ನು ಹಾಜರಾತಿಯ ವಿಷಯದಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬ ಮಾತು ಒಪ್ಪತಕ್ಕದ್ದೇ. ಆದರೆ ಒಂದು ಕುತೂಹಲದ ವಿಷಯ ಹೇಳುತ್ತೇನೆ: ನಾನು ಪಾಠ ಮಾಡುತ್ತಿರುವ ಕಾಲೇಜಿನ ಶೇ 90ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಬಡತನದ ಮತ್ತು ಗ್ರಾಮೀಣ ಹಿನ್ನೆಲೆಯವರು. ಅನೇಕರು ತಮ್ಮ ಶುಲ್ಕ ತುಂಬಲು ತಾವೇ ದುಡಿಯುವ ಅನಿವಾರ್ಯತೆ ಇರುವವರು. ಅದಕ್ಕಾಗಿ ಅರೆಕಾಲಿಕ ಕೆಲಸಗಳನ್ನು ಹಿಡಿದವರೂ ಇದ್ದಾರೆ. ವಿಶೇಷ ವೆಂದರೆ, ಇವರೆಲ್ಲ ಶಿಸ್ತಿನ ವಿದ್ಯಾರ್ಥಿಗಳು.

ಇವರಿಗೆ ಕನಿಷ್ಠ ಹಾಜರಾತಿಯ ಕೊರತೆ ಇಲ್ಲ. ತಮ್ಮ ಕಾಲೇಜಿನ ಸಮಯ ಮತ್ತು ದುಡಿಮೆಯ ಸಮಯವನ್ನು  ಜತನದಿಂದ ಯೋಜಿಸಿ ಕೊಂಡು ಬದುಕಿನಲ್ಲಿ ಹೇಗಾದರೂ ಮುಂದೆ ಬರಬೇಕೆಂದು ಒದ್ದಾಡುವ ಇವರನ್ನು ಕಂಡಾಗ ಅಭಿಮಾನ ಉಂಟಾಗುತ್ತದೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಒಂದು ಕುಂಟುನೆಪ ಮಾತ್ರ. ಕಾಲೇಜು ಆವರಣದಲ್ಲೇ ಇದ್ದು ತರಗತಿಗಳಿಗೆ ಹಾಜರಾಗದೆ, ಸ್ನೇಹಿತರ ದಂಡು ಕಟ್ಟಿಕೊಂಡು ಬೀದಿ ಸುತ್ತುವ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯ ಸಮೀಪಿಸಿದಾಗ ತಮ್ಮ ಕೌಟುಂಬಿಕ ಹಿನ್ನೆಲೆ ನೆನಪಾಗುವುದನ್ನು ನೋಡಿದಾಗ ಮಾತ್ರ ಅಯ್ಯೋ ಎನಿಸುತ್ತದೆ.

ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ 75ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಶೇ 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ 5ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ.

ನ್ಯಾಯಮೂರ್ತಿ ಜೆ.ಎಂ. ಲಿಂಗ್ಡೊ ಸಮಿತಿ ಕೂಡ ವಿದ್ಯಾರ್ಥಿ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಶೇ 75ರಷ್ಟು ಹಾಜರಾತಿ ಕಡ್ಡಾಯವಾಗಿ ಇರಬೇಕೆಂದು ಶಿಫಾರಸು ಮಾಡಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯನ್ನು ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಹೈಕೋರ್ಟ್‌ ಮತ್ತು  ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಹೇಳಿವೆ.

‘ವಿದ್ಯಾರ್ಥಿಗಳು ತಾರುಣ್ಯಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ 25ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

ಅಪಾತ್ರರಿಗೆ ಅನುಕಂಪ ತೋರುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕುಂಠಿತಗೊಳಿಸಬಾರದು. ಹೈಕೋರ್ಟ್‌ಗಳು ಕೂಡ ಕಾನೂನು ತತ್ವಗಳ ಉಲ್ಲಂಘನೆ ಆಗದ ಹೊರತು ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಹಾಗೂ ನಿಯಮಾವಳಿಗಳಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಬಂದಿದೆ.

ಕಡ್ಡಾಯ ಹಾಜರಾತಿಯ ಅಸ್ತ್ರವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಅಧ್ಯಾಪಕರು ದುರ್ಬಳಕೆ ಮಾಡುತ್ತಿದ್ದಾರೆ ಎಂಬುದು ಅನೇಕ ವಿದ್ಯಾರ್ಥಿಗಳ ಆರೋಪ. ತಮಗಾಗದ ವಿದ್ಯಾರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವು ಅಧ್ಯಾಪಕರು ಸುಳ್ಳೇ ಹಾಜರಾತಿ ಕೊರತೆ ತೋರಿಸುತ್ತಾರೆ ಎಂಬುದು ಕೆಲವರ ದೂರು. ಹಾಜರಾತಿ ಕೊರತೆ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಕೀಳುವ ದಂಧೆ ಮಾಡಿಕೊಂಡಿವೆ ಎಂಬುದು ಇನ್ನು ಕೆಲವರ ಆರೋಪ.

ಈ ಆರೋಪಗಳೂ ತಳ್ಳಿಹಾಕುವಂಥವಲ್ಲ. ಪ್ರತೀ ವಿಷಯದ ಹಾಜರಾತಿ ಕೊರತೆಗೆ ಇಂತಿಷ್ಟು ದಂಡ ನಿಗದಿ ಮಾಡಿ ವಿದ್ಯಾರ್ಥಿಗಳಿಂದ ಹಣ ಕೀಳುವ ಸಂಸ್ಥೆಗಳೂ ಇವೆ.ಇದಕ್ಕೆ ಪೂರಕವಾಗಿ ಹಾಜರಾತಿ ಕೊರತೆಯಿದ್ದರೆ ಏನಂತೆ? ಇಂತಿಷ್ಟು ಹಣ ಚೆಲ್ಲಿದರಾಯಿತು ಎಂಬ ಉಡಾಫೆ ಮನಸ್ಸಿನ ವಿದ್ಯಾರ್ಥಿಗಳೂ ಇದ್ದಾರೆ.

ಆದರೆ ಇಂತಹ ಸಮಸ್ಯೆಗಳ ಪರಿಹಾರದ ದಾರಿಯನ್ನು ನಾವು ಹುಡುಕಬೇಕೇ ಹೊರತು ಹಾಜರಾತಿಯ ಪರಿಕಲ್ಪನೆ ಯನ್ನೇ ಒಂದು ಅನವಶ್ಯಕ ಮತ್ತು ಅನಾಗರಿಕ ಕ್ರಮವೆಂದು ವಾದಿಸುವುದು ಹಾಸ್ಯಾಸ್ಪದ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತಾದ ಶ್ರದ್ಧೆಯನ್ನು ಬೆಳೆಸಬೇಕಾದರೆ ಉತ್ತಮ ಹಾಜರಾತಿ ಒಂದು ಪ್ರಮುಖ ಮಾರ್ಗ. ತರಗತಿಗೆ ಅನಿವಾರ್ಯವಾಗಿಯಾದರೂ ಹಾಜರಾದಾಗ ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಕಳೆದುಹೋಗುವುದು ತಪ್ಪಿ ಕಲಿಕೆಯಲ್ಲಿ ಒಂದಿಷ್ಟಾದರೂ ಶಿಸ್ತು ಮೂಡಬಹುದು.

ಇಷ್ಟವಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಮಾಡಿದರೆ ಅವರಿಂದ ತೊಂದರೆಯೇ ಹೆಚ್ಚು ಎಂಬ ಮಾತೂ ಅತಾರ್ಕಿಕವಾದದ್ದು. ಸ್ವತಂತ್ರ ಕಲಿಕೆಯ ವಾತಾವರಣ ಬೆಳೆಸುವುದೆಂದರೆ ವಿದ್ಯಾರ್ಥಿಗಳು ಮನಬಂದಂತೆ ತರಗತಿಗೆ ಹಾಜರಾಗುವ ಅಥವಾ ಹಾಜರಾಗದಿರುವ ಅವಕಾಶ ಮಾಡಿಕೊಡುವುದೇ?

ತರಗತಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಗುಣಮಟ್ಟದ ಅಧ್ಯಾಪನ ಮಾಡುವುದು ಉಪನ್ಯಾಸಕರ ಜವಾಬ್ದಾರಿ; ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಮತ್ತು ಸರ್ಕಾರದ ಹೊಣೆ.

ತಮ್ಮದೇ ಬೇಜವಾಬ್ದಾರಿಯಿಂದ ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳ ಬೆಂಬಲಕ್ಕೆ ಬರುವವರು ದುಡುಕಿನ ಹೋರಾಟ ಮಾಡುವ ಬದಲು ಜಾಗೃತಿ ಮೂಡಿಸುವುದು ಒಳ್ಳೆಯದು. ಹಾಜರಾತಿ ಕೊರತೆಯನ್ನು ಒಂದು ಸೇಡಿನ ಅಥವಾ ಆದಾಯದ ಅಸ್ತ್ರವನ್ನಾಗಿ ಬಳಸಿಕೊಳ್ಳುವ  ಪ್ರವೃತ್ತಿಯನ್ನು ನಿಯಂತ್ರಿಸುವುದಕ್ಕೆ ಬಯೊಮೆಟ್ರಿಕ್ ಹಾಜರಾತಿಯಂತಹ ಕ್ರಮಗಳು ಸಹಕಾರಿಯಾಗಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT