ಶುಕ್ರವಾರ, ಮಾರ್ಚ್ 5, 2021
18 °C

ಹಾಡಿಗೆ ಹರಿದ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಡಿಗೆ ಹರಿದ ಬೆಳಕು

ಗ್ರಾಮೀಣ ಪ್ರದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಬಳಕೆಗೆ ನೆರವಾಗುವ ‘ಎಂಜಿಐಆರ್‌ಇಡಿ’ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನಲ್ಲಿ ಸೌರ ವಿದ್ಯುತ್‌ ಒದಗಿಸಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಈಹಳ್ಳಿಗಳ ಜನ ಕತ್ತಲಾದರೆ ಚಡಪಡಿಸುತ್ತಿದ್ದರು. ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳುವ ಧಾವಂತ ಅವರದು. ತೋಟಕ್ಕೆ ಕೂಲಿಗೆ ಹೋದವರೂ ಅವಸರದಿಂದ ಬರಬೇಕಿತ್ತು. ಮಹಿಳೆಯರಿಗೆ ರಾತ್ರಿ ಅಡುಗೆ ಸಿದ್ಧಪಡಿಸುವ ಚಿಂತೆ. ಮಕ್ಕಳಿಗೆ ಹೋಂವರ್ಕ್‌ ಮಾಡಿಕೊಳ್ಳುವ ತಹತಹ.

ದಟ್ಟ ಕಾಡಿನ ನಡುವಿರುವ ಮನೆಗಳಲ್ಲಿ  ಕತ್ತಲಾದರೆ ಸೀಮೆಎಣ್ಣೆ ಬುಡ್ಡಿಯೇ ಇವರಿಗಿದ್ದ ಬೆಳಕಿನ ಮೂಲ. ಮಳೆಗಾಲದಲ್ಲಿ ಈ ಹಳ್ಳಿಗಳ ಜನರ ಪಡಿಪಾಟಲು  ಇನ್ನೂ ಹೆಚ್ಚು.ಇದು ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲ್ಲೂಕಿನ 161  ಮತ್ತು ಕೊಡಗು ಜಿಲ್ಲೆಯ 9  ಮನೆಗಳ ದಿನನಿತ್ಯದ ಕಥೆಯಾಗಿತ್ತು. ಇಲ್ಲಿನ ನೂರಾರು ಜನ ಅಗತ್ಯವಾಗಿ ಬೇಕಾಗಿದ್ದ ಬೆಳಕಿನ ಮೂಲವಿಲ್ಲದೆ ತೊಂದರೆ ಎದುರಿಸುತ್ತಿದ್ದರು. ಈಗ ಅವರ ಸಮಸ್ಯೆ  ನಿವಾರಣೆಯಾಗಿದೆ.ಈ ಹಳ್ಳಿಗಳ ಮನೆಗಳಲ್ಲಿ ಬೆಳಕು ಮೂಡಿದೆ. ಕತ್ತಲಾಗುವುದಕ್ಕಿಂತ ಮೊದಲು ಮನೆ ಕೆಲಸ ಮುಗಿಸಿಕೊಳ್ಳುವ ಧಾವಂತ ಯಾರಲ್ಲೂ ಇಲ್ಲ. ಮಕ್ಕಳ ವಿದ್ಯಾಭ್ಯಾಸ ಸುಧಾರಿಸಿದೆ. ಕೂಲಿಗೆ ಹೋದ ಗಂಡಸರಿಗೆ ಅವಸರವೂ ಇಲ್ಲ. ಸೀಮೆಎಣ್ಣೆ ಬುಡ್ಡಿಯ ಜಾಗದಲ್ಲಿ ಸೌರ ಹಾಗೂ ವಿದ್ಯುತ್‌ ದೀಪಗಳು ಮಿಂಚುತ್ತಿವೆ. ಮಳೆಗಾಲದಲ್ಲೂ ಯಾವುದೇ ತೊಂದರೆ ಇಲ್ಲ.ಈ ರೀತಿ ಬೆಳಕು ಕಾಣದೆ ಕತ್ತಲೆಯ ಕೂಪದಲ್ಲಿದ್ದ ಗ್ರಾಮಗಳನ್ನು ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ (ಎಂಜಿಐಆರ್‌ಇಡಿ) ಗುರುತಿಸಿ ಅಲ್ಲಿ ವಿದ್ಯುತ್‌ ಸೌಲಭ್ಯ ಒದಗಿಸಿದೆ.  ಹಾಡಿಗಳಲ್ಲಿ ಮೂಡಿದ ಹೊಸ ಬೆಳಕು ಜನರಿಗೆ ಬದುಕಿನ ಬಗ್ಗೆ ಹೊಸ ವಿಶ್ವಾಸ ಮೂಡಿಸಿದೆ.ಗ್ರಾಮೀಣ ಪ್ರದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವುಗಳ ಬಳಕೆಗೆ ಎಂಜಿಐಆರ್‌ಇಡಿ ನೆರವಾಗುತ್ತಿದೆ. ಈ ಎಲ್ಲ ಯಶಸ್ಸಿನ ಹಿಂದೆ ಸಂಸ್ಥೆಯ ಹಿಂದಿನ ಕಾರ್ಯನಿರ್ವಾಹಕ ನಿರ್ದೇಶಕ ಪುನತಿ ಶ್ರೀಧರ್‌ ಮತ್ತು ಸಹೋದ್ಯೋಗಿಗಳ ಶ್ರಮವಿದೆ.ಸಂಪದ್ಭರಿತ ಜೀವವೈವಿಧ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆ  ಪಶ್ಚಿಮ ಘಟ್ಟದ ಸೆರಗಿನಲ್ಲಿದೆ. ಗೌಳಿ, ಸಿದ್ದಿ, ಹಾಲಕ್ಕಿ ಒಕ್ಕಲಿಗ ಹಾಗೂ ಕುಣಬಿ ಸಮುದಾಯ ಕಾಡುಗಳ ಮಧ್ಯದಲ್ಲಿ ವಾಸವಿವೆ. ಐಎಫ್‌ಎಸ್ ಅಧಿಕಾರಿಯಾಗಿದ್ದ ಶ್ರೀಧರ್‌ ಅವರಿಗೆ ದಟ್ಟ ಕಾಡುಗಳಲ್ಲಿ ವಾಸವಿರುವ ಜನರ ನೋವು ನಲಿವುಗಳ ಅರಿವಿತ್ತು.ಇದೆಲ್ಲಕ್ಕಿಂತ, ದೈನಂದಿನ ಬದುಕಿಗೆ ಅವರು ಬಳಸುತ್ತಿದ್ದ ಇಂಧನ ಮೂಲಗಳು ಎಲ್ಲಿಂದ ಬರುತ್ತಿದ್ದವು ಎಂಬುದು ತಿಳಿದಿತ್ತು. ಈ ಹಾಡಿಗಳಲ್ಲಿನ ಶೇ85ರಷ್ಟು ಜನಸಂಖ್ಯೆ ಬಡವರು. ಜೀವ ನೋಪಾಯಕ್ಕಾಗಿ ಅವರು ಕೂಲಿ ಮಾಡುತ್ತಿದ್ದರು.ಭಾರೀ ಮರಗಳ ಕಾಡುಗಳ ಮಧ್ಯೆ ವಿದ್ಯುತ್‌ ಮಾರ್ಗ ಎಳೆದು ವಿದ್ಯುತ್‌ ಒದಗಿಸುವುದು ಕನಸಿನ ಮಾತಾಗಿತ್ತು. ತಮಗೊಂದು ಇಂತಹ ಸೌಲಭ್ಯ ಬೇಕು ಎಂದು ಸರ್ಕಾರವನ್ನಾಗಲಿ, ತಮ್ಮ ಜನಪ್ರತಿನಿಧಿಗಳನ್ನಾಗಲಿ, ಸ್ಥಳೀಯ ಸರ್ಕಾರವನ್ನಾಗಲಿ ಅವರು ಒತ್ತಾಯಿಸುತ್ತಿರಲೂ ಇಲ್ಲ.ಕತ್ತಲೆಯಾದರೆ ಪರಿತಪಿಸುವ ಜನರಿಗೆ ಸ್ವಲ್ಪವಾದರೂ ನೆಮ್ಮದಿ ನೀಡುವ ಯೋಜನೆಯೊಂದನ್ನು ರೂಪಿಸಬೇಕು ಎಂದು ಪುನತಿ ಶ್ರೀಧರ್ ಯೋಚಿಸಿದರು. ಇವರ ಆಲೋಚನೆಗೆ ಸಂಸ್ಥೆಯ ಸಿಬ್ಬಂದಿ ಸಹ ಕೈಜೋಡಿಸಿದರು.ಎರಡು ರೀತಿಯ ಯೋಜನೆ: ಶ್ರೀಧರ್‌ ಅವರ ಬಳಿ ಎರಡು ರೀತಿಯ ಯೋಜನೆಗಳಿದ್ದವು. ಒಂದು, ಸಾಮುದಾಯಿಕ ಮತ್ತು ವೈಯಕ್ತಿಕ ಬೆಳಕಿನ ಸೌಲಭ್ಯ ಒದಗಿಸುವುದು. ಕುಗ್ರಾಮಗಳ ಈ  ಜನರಿಗೆ ಸೌರ ಬೆಳಕಿನ ಮಹತ್ವದ ಬಗ್ಗೆ ಹೇಳಿ ಮನದಟ್ಟು ಮಾಡಲು ತೊಂದರೆಯಾಗಿದ್ದು ಭಾಷೆ. ಆಗ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ನೌಕರ ಜಯಾನಂದ ದೇರೆಕರ್‌ ಅವರು ನೆರವಿಗೆ ಬಂದರು.ಗೌಳಿ, ಕುಣಬಿ ಮುಂತಾದ ಜನರ ಬಗ್ಗೆ ಅರಿತಿದ್ದ ಅವರು ಪುನತಿ ಶ್ರೀಧರ್‌ ಅವರ ತಂಡವನ್ನು ಸೇರಿಕೊಂಡರು. ಒಂದೊಂದು ಮನೆಗಳಿಗೆ ಪ್ರತ್ಯೇಕ ಸೌರ ಬೆಳಕಿನ ಸೌಲಭ್ಯ ಕೊಡಲು ತೀರ್ಮಾನಿಸಿದರು. ಎಲ್ಲವೂ ಸರಿ. ಸಂಸ್ಥೆಯ ಬಳಿ ಇದಕ್ಕೆ ಸಾಕಷ್ಟು ಹಣಕಾಸು ಇರಲಿಲ್ಲ.ಆಗ ಹೊಳೆದಿದ್ದೇ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್). ಇದಕ್ಕಾಗಿ ಸರ್ಕಾರದ ವಿದ್ಯುತ್‌ ಯೋಜನೆಗಳಲ್ಲಿ ಕೆಲಸ ಮಾಡಿ ಅನುಭವವಿದ್ದ ಸಲಹೆಗಾರರನ್ನು ಬಳಸಿ  ವಿಸ್ತೃತ ಯೋಜನಾ ವರದಿ (ಡಿಪಿಆರ್‌)  ಸಿದ್ಧಪಡಿಸಲಾಯಿತು. ಸಿಎಸ್ಆರ್ ಅಡಿ ಹಣ ಹೊಂದಿಸಿ ಮೊದಲ ಬಾರಿಗೆ 2014ರಲ್ಲಿ ಚಿಕ್ಕ ಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೋಡು ಸುತ್ತಲಿನ ಗ್ರಾಮಗಳಲ್ಲಿ ಸೌರ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ತಜ್ಞರು ಪ್ರಸ್ತಾವವೊಂದನ್ನು ನೀಡಿದ್ದರು. 35 ಮನೆಗಳಿಗೆ ಸೌರ ಬೆಳಕು ನೀಡಲು ₹75 ಲಕ್ಷದ ಪ್ರಸ್ತಾವ ನೀಡಲಾಗಿತ್ತು.ಇದರಂತೆ ಪ್ರತಿ ಮನೆಗೆ ₹2.14 ಲಕ್ಷ ವೆಚ್ಚವಾಗುತ್ತಿತ್ತು. ಆದರೆ ಜೋಯಿಡಾ ತಾಲ್ಲೂಕಿನ ಜನರಿಗೆ ಇದು ಹೊರೆಯಾಗುತ್ತಿತ್ತು. ಆನಂತರ ತಮ್ಮ ತಂಡದೊಂದಿಗೆ ಚರ್ಚೆ ನಡೆಸಿದ ಪುನತಿ ಶ್ರೀಧರ್‌ ಅವರು ವೆಚ್ಚ ಕಡಿಮೆ ಮಾಡುವಂತೆ ಡಿಪಿಆರ್ ಸಿದ್ಧಪಡಿಸಲು ಮುಂದಾದರು.ಆನಂತರ ಜೋಯಿಡಾ ತಾಲ್ಲೂಕಿನ ಪಿಸೋಸೆ ಮಜಿರೆಯಲ್ಲಿ ಒಂದೊಂದು ಮನೆಗಳಿಗೆ ₹18 ಸಾವಿರ ವೆಚ್ಚ ಮಾಡುವ ಯೋಜನೆ ಸಿದ್ಧಪಡಿಸಲಾಯಿತು. ಇಷ್ಟು ಹಣದಲ್ಲಿ 60 ಡಬ್ಲ್ಯೂಪಿ ಎಸ್‌ಪಿವಿ ಪ್ಯಾನೆಲ್‌, 40 ಎಎಚ್‌ 12 ವಿ ನಿರ್ವಹಣಾ ಮುಕ್ತ ಬ್ಯಾಟರಿ, ಚಾರ್ಜ್‌ ನಿಯಂತ್ರಕ ಮತ್ತು ಮೊಬೈಲ್‌ ಚಾರ್ಜರ್‌ ನೀಡ ಲಾಯಿತು. 17 ತಿಂಗಳ ನಂತರವೂ ಈ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿತು. 161 ಮನೆಗಳಲ್ಲಿ ಸೌರ ಬೆಳಕು ಮೂಡಿತು.ಪರಿಸ್ಕೃತ ಡಿಪಿಆರ್‌ ಪ್ರಕಾರ ಫಲಾನುಭವಿಗಳು ಶೇ 10 ರಷ್ಟು ಹಣ ಪಾವತಿಸಬೇಕು. ಇದರಿಂದ ಅವರಲ್ಲಿ ಪುಕ್ಕಟೆ ಸಿಗುತ್ತದೆ ಎಂಬ ಭಾವನೆ ದೂರಾಗುತ್ತದೆ. ಸೋಲಾರ್ ಉಪಕರಣಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ.

ಸೌಲಭ್ಯ ಪಡೆದವರು ಪ್ರತಿ ತಿಂಗಳು ಆರ್‌.ಡಿ. ಕಟ್ಟುವಂತೆ ಸಲಹೆ ನೀಡಲಾಗುತ್ತದೆ. ಉಳಿಸಿದ ಹಣದಲ್ಲಿ 5 ವರ್ಷದ ನಂತರ ಸೋಲಾರ್‌ ಬ್ಯಾಟರಿ ಕೆಟ್ಟು ಹೋದರೆ ಹೊಸದನ್ನು ಖರೀದಿಸಲು ನೆರವಾಗುತ್ತದೆ. ಮಡಿಕೇರಿಯಲ್ಲಿ ಹೈಡ್ರೊ ಪ್ರಾಜೆಕ್ಟ್‌

ಜೋಯಿಡಾ ತಾಲ್ಲೂಕಿನಲ್ಲಿ ಸೋಲಾರ್‌ ಸೌಲಭ್ಯ ನೀಡಿದಂತೆ ಕೊಡಗು ಜಿಲ್ಲೆಯಲ್ಲಿ ಪಿಕೊ (ಸಣ್ಣ) ಜಲವಿದ್ಯುತ್‌ ಯೋಜನೆಯ ಮೂಲಕ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಮನೆಗಳಿಗೆ ಬೆಳಕು ನೀಡುತ್ತಿದೆ. ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಿ ಗ್ರಾಮದಲ್ಲಿ 40 ಜನಸಂಖ್ಯೆಯ 7 ಮನೆಗಳಿಗೆ ಜಲವಿದ್ಯುತ್‌ ಮೂಲಕ 2015ರ ಆಗಸ್ಟ್‌ನಲ್ಲಿ ಬೆಳಕು ನೀಡಲಾಗಿದೆ.

ಈ ಯೋಜನೆಯಲ್ಲಿ ಗ್ರಾಮಸ್ಥರು ‘ಗ್ರಾಮೀಣ ವಿದ್ಯುತ್‌ ಸಮಿತಿ’ ರಚಿಸಿಕೊಂಡು ಪ್ರತಿ ತಿಂಗಳು ಒಂದು ಮನೆಗೆ ₹100 ಅನ್ನು ಪಾವತಿ ಮಾಡಬೇಕು. ಈ ಹಣವನ್ನು ನಿರ್ವಹಣೆಗೆ ಬಳಲಾಗುತ್ತದೆ.ಹೊಗೆರಹಿತ ‘ಸರಳ’ ಸ್ಟೌ ನಿರ್ಮಾಣ: ಇದು ಎಂಜಿಐಆರ್‌ಇಡಿಯ ಮತ್ತೊಂದು  ಮಹತ್ವಾಕಾಂಕ್ಷಿ ಯೋಜನೆ. ಸಂಸ್ಥೆ ವತಿಯಿಂದ ಕಡಿಮೆ ವೆಚ್ಚದ ಹೊಗೆರಹಿತ  ಒಲೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಒಲೆಗಳು ಶೇ30ರಷ್ಟು ಕಟ್ಟಿಗೆ ಬಳಸುತ್ತವೆ. ಇವುಗಳ ನಿರ್ಮಾಣಕ್ಕೆ ಸ್ವಹಾಯ ಗುಂಪು, ಗ್ರಾಮೀಣ ಮಹಿಳೆಯರು ಮತ್ತು ಪುರುಷರಿಗೆ ತರಬೇತಿ ನೀಡಲಾಗುತ್ತದೆ. ಸೌಲಭ್ಯ ಪಡೆಯುವವರು ಇಟ್ಟಿಗೆ, ಮರಳು ಮತ್ತು  ಕೆಲಸದಾಳು ಒದಗಿಸಬೇಕು.ಪರಿಸರ ಮತ್ತು ಸಾಮಾಜಿಕ ಪರಿಣಾಮಗಳು: ಎಂಜಿಐಆರ್‌ಇಡಿ ಜೋಯಿಡಾ ತಾಲ್ಲೂಕಿನಲ್ಲಿ ಒದಗಿಸಿದ ಸೋಲಾರ್‌ ವಿದ್ಯುತ್‌ನಿಂದ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳು ಆಗಿವೆ ಎಂಬುದು ಬಹಳ ಮುಖ್ಯ.ಈ ಗ್ರಾಮಗಳ ಪ್ರತಿ ಮನೆಗಳು ತಿಂಗಳಿಗೆ 5 ಲೀಟರ್‌ ಸೀಮೆಎಣ್ಣೆ ಬಳಸುತ್ತಿದ್ದವು. ಇದಕ್ಕೆ  ಅವರು ₹90 ವೆಚ್ಚ ಮಾಡುತ್ತಿದ್ದರು. 161 ಮನೆಗಳಿಂದ 805 ಲೀಟರ್ ಸೀಮೆಎಣ್ಣೆ ಬಳಕೆ ಈಗ ತಪ್ಪಿದೆ. ಇದರಿಂದ ಪರಿಸರಕ್ಕೆ 1.25 ಲಕ್ಷ ಕೆ.ಜಿ ಕಾರ್ಬನ್‌ ಡೈ ಆಕ್ಸೆಡ್‌ ಸೇರುವುದು ನಿಂತಿದೆ.ಬಹಳಷ್ಟು ಮನೆಗಳಲ್ಲಿನ ಹಿರಿಯರು ಮೊದಲ ಬಾರಿಗೆ ಸೋಲಾರ್ ಬೆಳಕನ್ನು ಕಂಡರು. ಈಗ ಮಕ್ಕಳು ರಾತ್ರಿ ವೇಳೆಯೂ  ಅಧ್ಯಯನ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮನೆ ಕೆಲಸ ಮಾಡಲು ಹೆಚ್ಚಿನ ಅವಧಿ ಸಿಕ್ಕಿದೆ. ಇದರಿಂದ ಅವರ ಒತ್ತಡ ಕಡಿಮೆಯಾಗಿದೆ.ಅಧ್ಯಯನದ ನಂತರ ಜಾರಿಗೆ

‘ಈ ಹಾಡಿಗಳಿಗೆ  ದೂರದಿಂದ ವಿದ್ಯುತ್‌ ಒದಗಿಸುವುದು ಕಷ್ಟವಿತ್ತು. ವಿದ್ಯುತ್‌ ಮಾರ್ಗಗಳನ್ನು ತರುವುದೇ ಸಾಧ್ಯವಿರಲಿಲ್ಲ ಎಂಬಂಥ ಸ್ಥಿತಿ ಇತ್ತು. ವನ್ಯಜೀವಿಗಳ ಪ್ರದೇಶವಾದ ಕಾರಣ ಕಾನೂನಿನ ತೊಡಕಿತ್ತು.ಆದ್ದರಿಂದ ನಾವು ಕಡಿಮೆ ವೆಚ್ಚದ, ಪರಿಣಾಮಕಾರಿ, ಕಡಿಮೆ ನಿರ್ವಹಣೆಯ ಗೃಹ ಬೆಳಕಿನ ಮಾರ್ಗ ಕಂಡುಕೊಂಡೆವು. ಯಾವ ಬ್ಯಾಟರಿ ನೀಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಕೊನೆಗೊಂದು ತೀರ್ಮಾನ ಕೈಗೊಂಡೆವು. ನಮ್ಮ ಯೋಜನೆಯನ್ನು ಜನ ಒಪ್ಪಿಕೊಂಡಿದ್ದಾರೆ. ಅಲ್ಲದೆ ಅದು ಯಶಸ್ವಿಯಾಗಿದೆ ಎಂಬ ಹೆಮ್ಮೆ ನಮ್ಮದು’ ಎನ್ನುತ್ತಾರೆ ಕಾರ್ಯನಿರ್ವಾಹಕ ನಿರ್ದೇಶಕ ಪುನತಿ ಶ್ರೀಧರ್‌. 

** *** **

ಅಂದುಕೊಂಡದ್ದಕ್ಕಿಂತ ಯಶಸ್ವಿಯಾಗಿದೆ

ಪುನತಿ ಶ್ರೀಧರ್‌ ಅವರು ತಮ್ಮ ತಂಡದೊಂದಿಗೆ ಸಮೀಕ್ಷೆಗೆ ಬಂದಿದ್ದಾಗ ನಾನು ಅವರನ್ನು ಭೇಟಿ ಮಾಡಿದೆ. 2014ರ ಡಿಸೆಂಬರ್‌ನಲ್ಲಿ ಪಿಸೋಸೆಯಲ್ಲಿ ಯೋಜನೆ ಅನುಷ್ಠಾನ ಮಾಡಲಾಗಿತ್ತು. ಈ ಯೋಜನೆ ಈಗಿನ ಮಟ್ಟಕ್ಕೆ ತಲುಪಬಹುದು ಎಂದು ಆಗ ನಾನು ಅಂದುಕೊಂಡಿರಲಿಲ್ಲ. ಸೋಲಾರ್ ಉಪಕರಣಗಳಿಗೆ ಶೇ10 ಪಾವತಿಸಲು ಜನ ಸಿದ್ಧರಿರಲಿಲ್ಲ. ಇದು ಎಲ್ಲ ಸೋಲಾರ್‌ ಯೋಜನೆಯಂತೆ ಅಂದುಕೊಂಡಿದ್ದರು. ಆದರೆ ಪಿಸೋಸೆ ಮತ್ತು ಪಾದ್‌ಸೇಟ್‌ ಗ್ರಾಮಗಳಲ್ಲಿ ಈ ಯೋಜನೆ ಯಶಸ್ವಿಯಾಯಿತು.

–ಜಯಾನಂದ ದೇರೇಕರ್‌

ಅರಣ್ಯ ಇಲಾಖೆ ಸಿಬ್ಬಂದಿ

****

ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ

ಎಂಜಿಐಆರ್‌ಇಡಿ ಅನುಷ್ಠಾನ ಮಾಡಿದ ಗೃಹ ಬಳಕೆ ಸೌರ ಬೆಳಕಿನ  ಯೋಜನೆ ಇಲ್ಲಿನ ಜನರ ಜೀವನವನ್ನೇ ಬದಲಾಯಿಸಿದೆ. ಬಡ ಕುಟುಂಬದ ಮಕ್ಕಳ ಉತ್ತಮ ಅಭ್ಯಾಸಕ್ಕೆ ಅನುಕೂಲವಾಗಿದೆ. ಸೋಲಾರ್‌ ಉಪಕರಣಗಳ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ.

-ಕೇಶವ ನಾಗೊ ಮಿರಾಶಿ

ಧಾರ್ಮಿಕ ಮುಖಂಡರು, ವಾಘೇಲಿ ನಾಗೋಡ

*****

ಸೀಮೆಎಣ್ಣೆ  ಬುಡ್ಡಿ ಕಾಟ ತಪ್ಪಿದೆ

ನನ್ನ ಮನೆಯಲ್ಲಿ ಇಷ್ಟೊಂದು ಪ್ರಕಾಶಮಾನ ಬೆಳಕು ನೋಡಿ ಅಚ್ಚರಿಯಾಯಿತು. ಈ ಮೊದಲು ನಾನು ಸೀಮೆಎಣ್ಣೆ ದೀಪ ಬಳಸುತ್ತಿದ್ದೆ. ಇದರಿಂದ ಅಡುಗೆ ಕೆಲಸಕ್ಕೆ ತೊಂದರೆಯಾಗುತ್ತಿತ್ತು. ಈಗ ಸೋಲಾರ್ ದೀಪವಿದೆ. ಬೆಳಗಿನ ಜಾವ 4 ರಿಂದ 6 ರವರೆಗೆ ಸಂಜೆ 6 ರಿಂದ ರಾತ್ರಿ 10ರವರೆಗೆ ಬಳಸುತ್ತೇನೆ.

-ಸತ್ಯವತಿ  ಸಾವಂತ್‌

ನಾಗೋಡ ಗ್ರಾಮ ಪಂಚಾಯಿತಿ, ಜೋಯಿಡಾ

*****

ಮೊಬೈಲ್‌ ಚಾರ್ಜ್‌ಗೆ ಅಲೆದಾಟ ತಪ್ಪಿದೆ

ಸೋಲಾರ್‌ ಬೆಳಕಲ್ಲದೆ ಹೊಗೆರಹಿತ ಒಲೆಯನ್ನೂ ಒದಗಿಸಿದ್ದಾರೆ. ಮಳೆಗಾಲ ದಲ್ಲಿ ಬೆಳಕಿನ ವ್ಯವಸ್ಥೆ  ಇಲ್ಲದೆ ತೊಂದರೆ ಪಡುತ್ತಿದ್ದೆವು. ಪರ ಊರಿನ ಸಂಪರ್ಕವೇ ಇಲ್ಲದಂತಾಗುತ್ತಿತ್ತು. ಈಗ ಸೋಲಾರ್‌ ಬೆಳಕಿನ ಜತೆಗೆ ಮೊಬೈಲ್‌ ಚಾರ್ಜರ್ ಸಹ ಇರುವುದರಿಂದ ತುರ್ತು ಸಂದರ್ಭದಲ್ಲಿ  ನೆರವಾಗುತ್ತಿದೆ. ಈ ಮೊದಲು 4–5 ಕಿ.ಮೀ. ದೂರಕ್ಕೆ ಹೋಗಿ ₹5 ಪಾವತಿಸಿ ಮೊಬೈಲ್ ಚಾರ್ಜ್‌ ಮಾಡಿಕೊಳ್ಳುತ್ತಿದ್ದೆವು. ಈಗ ನನ್ನ ಮನೆಯಲ್ಲೇ ಮಳೆಗಾಲದಲ್ಲೂ ಬೆಳಕು ಇದೆ. ಎಲ್ಲ ಕೀರ್ತಿ ಎಂಜಿಐಆರ್ಇಡಿಗೆ ಸಲ್ಲಬೇಕು.  ರೋಹಿದಾಸ್‌

-ಪಾದ್‌ಸೇಟ್ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.