ಸೋಮವಾರ, ಜನವರಿ 20, 2020
20 °C

ಹಾಡಿನ ಹಬ್ಬದಲ್ಲಿ ಮೌನವೇ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದ ಪ್ರಚಾರಕ್ಕೆಂದು ಸುದ್ದಿಮಿತ್ರರ ಮುಂದೆ ಕುಳಿತು ತುಟಿ ಬಿಚ್ಚದೆ, ‘ಮೌನವೇ ನಮ್ಮ ಮಾತು’ ಎಂಬಂತೆ ಇದ್ದರೆ ಹೇಗೆ? ಶೀರ್ಷಿಕೆಯಲ್ಲಿ ಭಾರಿ ಸದ್ದನ್ನೇ ಹೊಂದಿರುವ ಚಿತ್ರತಂಡದ್ದು ಪ್ರಚಾರದ ಸಂದರ್ಭದಲ್ಲಿ ಮೌನವ್ರತ. ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತನ್ನು ಆಚರಣೆಗೆ ತಂದಂತೆ ಕಾಣಿಸುತ್ತಿದ್ದರು ಚಿತ್ರತಂಡದ ಸದಸ್ಯರು.‘ಶಂಭೋ ಮಹಾದೇವ’ ಎಂಬ ಚಿತ್ರದ ಆಡಿಯೊ ಸೀಡಿ ಬಿಡುಗಡೆ ಸಮಾರಂಭವದು. ಹಾಡುಗಳನ್ನು ಹೊರತರುವ ಕಾರ್ಯಕ್ರಮವೆಂದರೆ ಹಾಡು ಮತ್ತದರ ಕುರಿತು ಒಂದಷ್ಟು ಮಾತುಗಳ ಗದ್ದಲವಿರಬೇಕು. ಆದರೆ ಇಲ್ಲಿ ಅದಕ್ಕೆ ವಿರುದ್ಧ ಪರಿಸ್ಥಿತಿ. ಆದಷ್ಟು ಬೇಗ ತಮ್ಮ ಮಾತುಗಳು ಮುಗಿದರೆ ಸಾಕು ಎಂಬ ತರಾತುರಿ ಎಲ್ಲರದ್ದು. ಎರಡು ಮೂರು ಸಾಲುಗಳನ್ನಾಡಿ ಮೈಕು ಹಸ್ತಾಂತರಿಸಿ ನೆಮ್ಮದಿಯ ಉಸಿರುಬಿಡುತ್ತಿದ್ದರು.ಸ್ವಲ್ಪಮಟ್ಟಿನ ಮಾತುಗಾರಿಗೆ ಕಾಣಿಸಿದ್ದು ನಿರ್ದೇಶಕ ಮೈಸೂರು ಮಂಜು ಅವರಲ್ಲಿ. ತಮ್ಮ ಚಿತ್ರದಲ್ಲಿ ಐಟಂ ಸಾಂಗ್ ಆಗಲೀ, ದ್ವಂದ್ವಾರ್ಥದ ಸಂಭಾಷಣೆಗಳಾಗಲೀ ಇಲ್ಲ ಎಂದು ಮಂಜು ಹೆಮ್ಮೆಯಿಂದ ಹೇಳಿಕೊಂಡರು. ಬೆಂಗಳೂರು ಸುತ್ತಮುತ್ತ ಈವರೆಗೆ ಯಾರೂ ಚಿತ್ರೀಕರಣ ನಡೆಸದ ತಾಣಗಳಲ್ಲಿ ಹಾಡುಗಳ ದೃಶ್ಯಗಳನ್ನು ಸೆರೆಹಿಡಿದಿದ್ದೇವೆ ಎಂಬ ಖುಷಿ ಅವರದು.ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಮಟ್ಟು ಹಾಕಿರುವುದು ಗಣೇಶ್ ಭಟ್. ಅವರಿಗಿದು ಮೊದಲ ಸಿನಿಮಾ. ಶಾಸ್ತ್ರೀಯ ಮತ್ತು ನವ್ಯ ಎರಡೂ ಶೈಲಿಯ ಸಂಗೀತವನ್ನು ಅವರು ಚಿತ್ರಕ್ಕೆ ಬಳಸಿಕೊಂಡಿದ್ದಾರಂತೆ. ಈ ನಾಲ್ಕೂ ಹಾಡುಗಳಿಗೆ ಸಾಹಿತ್ಯ ಹೊಸೆದಿರುವುದು ಹೊಸ ಪ್ರತಿಭೆ ಸಾಗರ್. ಹಾಡುಗಳನ್ನು ರಚಿಸಲು ಅವರಿಗೆ ನಿರ್ದೇಶಕರೇ ಸ್ಫೂರ್ತಿಯಂತೆ.

ಸಿನಿಮಾಗಳನ್ನು ನೋಡುವ ಅಭ್ಯಾಸವೇ ಇರದಿದ್ದ ನಿರ್ಮಾಪಕ ಕುಮಾರ್ ಅವರು, ಚಿತ್ರ ನಿರ್ಮಾಣಕ್ಕೆ ಇಳಿದ ಬಳಿಕವಷ್ಟೇ ಸಿನಿಮಾ ನೋಡಲು, ಹಾಡುಗಳನ್ನು ಕೇಳಲು ಪ್ರಾರಂಭಿಸಿದರಂತೆ. ಚೆನ್ನಾಗಿರುವ ಹಾಡುಗಳನ್ನು ನೀಡುತ್ತಿದ್ದೇನೆ ಎಂಬ ಹೆಮ್ಮೆ ಆಗುತ್ತಿದೆ ಎಂದರು ಅವರು.ನಾಯಕನಟ ಆಕಾಶ್‌ಜಿತ್, ನಾಯಕಿ ನೇಹಾಪಾಟೀಲ್ ಮತ್ತು ಛಾಯಾಗ್ರಾಹಕ ಹರೀಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)