ಶುಕ್ರವಾರ, ಏಪ್ರಿಲ್ 16, 2021
21 °C

ಹಾದಾಡುವ ಹೊಸ್ತಿಲಲಿ ಹೊಯ್ದಾಡುವ ದೀಪವು

ಡಾ. ಎಂ.ಎಸ್. ಆಶಾದೇವಿ Updated:

ಅಕ್ಷರ ಗಾತ್ರ : | |

ಆತ್ಮವನ್ನೇ ನಿರಾಕರಿಸಲ್ಪಟ್ಟ ಮಹಿಳೆಯರು ಮತ್ತು ಶೂದ್ರರ ಆತ್ಮಕಥಾನಕಗಳು ಸಮಕಾಲೀನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಲನೆಗಳಿಗೆ ನೀಡುತ್ತಿರುವ ಒತ್ತಾಸೆ ಮತ್ತು ಮೂಡಿಸುತ್ತಿರುವ ಸಂಚಲನೆಗಳು ಗಂಭೀರ ಅಧ್ಯಯನವನ್ನು ಅಪೇಕ್ಷಿಸುವಷ್ಟು ಮಹತ್ವದ ಸಂಗತಿಯಾಗಿದೆ. ಮಹಿಳಾ ಮತ್ತು ದಲಿತ ಸಂಕಥನಗಳ ಹಿಂದಣ ಮುಂದಣ ಹೆಜ್ಜೆಗಳನ್ನು ಮಾತ್ರವಲ್ಲ ಮುಂದೂ ಹೆಜ್ಜೆಗಳನ್ನು ನಿರ್ಧರಿಸುವ ದೃಷ್ಟಿಯಿಂದಲೂ ಇವು ಮುಖ್ಯವಾಗಿವೆ.ಹಾಗೆ ನೋಡಿದರೆ, ಸಾಮಾನ್ಯವಾಗಿ ಆತ್ಮಕಥನಗಳು ಯಶೋಗಾಥೆಯ ಅಥವಾ ಮಾರ್ಗದರ್ಶಕ ಮಾದರಿಗಳಲ್ಲಿರುವುದೇ ಹೆಚ್ಚು. ಮಾನವ ಚೈತನ್ಯದ ಮೇರೆಯಿರದ ಶಕ್ತಿ ಸಾಧ್ಯತೆಗಳನ್ನು ಮತ್ತೆ ಮತ್ತೆ ಒರೆಗೆ ಹಚ್ಚಿ ಸ್ಥಾಪಿಸುವ ಆತ್ಮಕಥನಗಳು ನಿಜದಲ್ಲಿ ಮನುಷ್ಯನ ಬಗೆಗಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತಿರುತ್ತವೆ. ಇಷ್ಟಾಗಿ, ಈ ಮಾದರಿಗಳ ಆತ್ಮಕಥನಗಳ ಓದು ಅಂತಿಮವಾಗಿ ಓದುಗರ ಆಯ್ಕೆಯೇ ಆಗಿರುತ್ತದೆ.ಆದರೆ ಕಳೆದ 3-4 ದಶಕಗಳಲ್ಲಿ ಬಂದಿರುವ ದಲಿತ ಮತ್ತು ಮಹಿಳಾ ಆತ್ಮಕಥಾನಕಗಳು ಆಯ್ಕೆಯ ನೆಲೆಯನ್ನು ಮೀರಿ ಓದಲೇಬೇಕಾದ ಅನಿವಾರ್ಯ ಪಠ್ಯಗಳು ಎನ್ನುವ ಹಕ್ಕೊತ್ತಾಯವನ್ನು ಮಾಡುತ್ತವೆ ಎನ್ನುವುದೊಂದು ನಿರ್ಣಾಯಕ ಸಂಗತಿಯಾಗಿದೆ. ಸಾಮಾಜಿಕ ಸಂರಚನೆಗಳಲ್ಲಿನ ಮೂಲಭೂತ ಪಲ್ಲಟಗಳಿಗಾಗಿ ನಡೆಸುತ್ತಿರುವ ತಾತ್ವಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳಿಗೆ ಮುಖ್ಯವಾದ ಆಯಾಮ ಮತ್ತು ಬೆಂಬಲ ಆತ್ಮಕಥನಗಳಿಂದ ದೊರಕುತ್ತಿದೆ.

 

ಉದಾಹರಣೆಗೆಂದು ಆತ್ಮಕಥನಗಳಲ್ಲಿ ಮುಂಚೂಣಿಯಲ್ಲಿರುವ ಮರಾಠಿಯ ಆತ್ಮಕಥನಗಳನ್ನೇ ನೋಡಬಹುದು. `ಗಬಾಳ~, `ಉಚಲ್ಯಾ~, `ಅಕ್ರಮ ಸಂತಾನ~, `ಕುಣಿಯೇ ಘುಮಾ~, ನಾಳೀನ ಚಿಂತ್ಯಾಕ~ ಮೊದಲಾದ ಆತ್ಮಕಥಾನಕಗಳು ಸೃಷ್ಟಿಸಿದ ಸಂಚಲನಕ್ಕೆ ಹಲವು ಮಗ್ಗುಲುಗಳಿವೆ. ಸಮುದಾಯದ ಇತರ ವರ್ಗಗಳಲ್ಲಿ ಇವು ಮೂಡಿಸಿರುವ ಅರಿವು, ಎಬ್ಬಿಸಿರುವ ಪ್ರಶ್ನೆಗಳು ದಲಿತ ಮತ್ತು ಮಹಿಳಾ ಹೋರಾಟಕ್ಕೆ ಸಿಕ್ಕಿರುವ ಪರೋಕ್ಷ ನೈತಿಕ ಬೆಂಬಲಗಳೇ ಆಗಿವೆ.ಮತ್ತು ಸ್ವತಃ ದಲಿತ ಮತ್ತು ಮಹಿಳಾ ಹೋರಾಟಗಳಿಗೆ ತಾತ್ವಿಕ ಸ್ಪಷ್ಟತೆಯನ್ನು, ಹೋರಾಟದ ಮುಂದಿನ ನಡೆಗಳನ್ನೂ ಇವು ನಿರ್ಧರಿಸುತ್ತಿವೆ. ಏಕಕಾಲಕ್ಕೆ ಸಮುದಾಯದ ಎಲ್ಲ ವರ್ಗಗಳನ್ನೂ ವಿಭಿನ್ನ ಆದರೆ ಅಗತ್ಯವಿರುವ ದಾರಿಗಳಿಂದ ಇವು ಮುಟ್ಟುತ್ತಿವೆ ಎನ್ನುವ ಸಂಗತಿಯೇ ಇವುಗಳ ಪ್ರಾಮುಖ್ಯತೆಯನ್ನು ಹೇಳುತ್ತದೆ.

 

ಜವಾಬ್ದಾರಿಯುತ ನಾಗರಿಕರೆಲ್ಲರೂ ಅಗತ್ಯವಾಗಿ ಓದಲೇಬೇಕಾದ ಮೂಲ ಪಠ್ಯಗಳು ಎನ್ನುವ ಅನಿವಾರ್ಯತೆಯನ್ನು ಇವು ಸೃಷ್ಟಿಸಿವೆ ಎನ್ನುವ ವಾಸ್ತವಾಂಶವು ಸಹಜವಾಗಿಯೇ ಇವುಗಳ ಭಿತ್ತಿಯನ್ನು ವಿಸ್ತರಿಸಿವೆ ಮತ್ತು ಸಾಹಿತ್ಯ ಅಥವಾ ಕಲಾಪಠ್ಯಗಳಾಚೆಗೆ ಇವುಗಳನ್ನು ಸಮುದಾಯ ಪಠ್ಯಗಳನ್ನಾಗಿಸಿವೆ.ನಿರ್ದಿಷ್ಟವಾಗಿ ಕನ್ನಡದಲ್ಲಿನ ಮಹಿಳಾ ಆತ್ಮಕಥನಗಳ ಬಗ್ಗೆ ಚರ್ಚಿಸುವುದಾದರೆ ಸ್ಥೂಲವಾಗಿ ಈ ತನಕದ ಆತ್ಮಕಥನಗಳನ್ನು ಮೂರು ಮಾದರಿಗಳಲ್ಲಿ ಗುರುತಿಸಬಹುದೆಂದು ತೋರುತ್ತದೆ.1. ಋಣಭಾವದಲ್ಲಿ ತೋಯ್ದುಹೋಗುವ ಆತ್ಮಕಥಾನಕಗಳು.

2. ಆರೋಪ ಭಾವದಲ್ಲಿ ನಲುಗಿ ಹೋಗುವ ಆತ್ಮಕಥಾನಕಗಳು.

3. ಬಿಡುಗಡೆಯ ಭಾವದಲ್ಲಿ ನಿರುಮ್ಮಳವಾಗಲು ಹಂಬಲಿಸುವ ಆತ್ಮಕಥಾನಕಗಳು.ಮೊದಲ ಘಟ್ಟದ ಆತ್ಮಕಥಾನಕಗಳನ್ನು ಗಮನಿಸಿದರೆ, ಮಲ್ಲಿಕಾ ಕಡಿದಾಳ್ ಮಂಜಪ್ಪ, ಶಾಂತಾದೇವಿ ಮಾಳವಾಡ ಮೊದಲಾದವರ ಆತ್ಮನಿರೂಪಣೆಗಳನ್ನು ಓದುತ್ತಿದ್ದರೆ, ಓದು-ಬರವಣಿಗೆಯೂ ಸೇರಿದಂತೆ ಹೊರಜಗತ್ತಿಗೆ ತಮ್ಮನ್ನು ತೆರೆದುಕೊಳ್ಳಲು ಅವಕಾಶ ಮಾಡಿಕೊಟ್ಟ ಪುರುಷೋತ್ತಮರ ಔದಾರ್ಯವನ್ನು ಕುರಿತ ಕೃತಜ್ಞತೆಯ ದೃಷ್ಟಿಕೋನವೊಂದು ಸ್ಥಾಯಿಯಾಗಿರುವಂತೆ ಕಾಣಿಸುತ್ತದೆ.ಕುಟುಂಬದ ಮೂಲ ಕೇಂದ್ರಕ್ಕೆ ಯಾವ ಧಕ್ಕೆಯೂ ಆಗದಂತೆ ತಮ್ಮ ಚಟುವಟಿಕೆಗಳನ್ನು ನಿಭಾಯಿಸಬೇಕೆನ್ನುವ ಎಚ್ಚರ ಒಳಗಿನಿಂದಲೂ, ಹೊರಗಿನಿಂದಲೂ ಅವರನ್ನು ರೂಪಿಸಿರುವುದು, ನಿಯಂತ್ರಿಸಿರುವುದು ಇಲ್ಲಿ ನಿಚ್ಚಳ. ದಾಂಪತ್ಯವನ್ನು ಕುರಿತಂತೆ, ಕುಟುಂಬದ ಜವಾಬ್ದಾರಿಗಳನ್ನು ಕುರಿತಂತೆ ಹೆಣ್ಣಿಗಿರುವ ಕರ್ತವ್ಯಗಳು ಒಂದು ಘಟ್ಟದಲ್ಲಿ ಯಾಕೆ ಹೆಣ್ಣಿಗೆ ಮಾತ್ರ ಕರಾರುಗಳಾಗಿ, ಗಂಡಿಗೆ ಆಯ್ಕೆಯ ಸಂಗತಿಗಳಾಗಿ ಉಳಿಯುತ್ತವೆ ಎನ್ನುವ ಪ್ರಶ್ನೆ ಇವರಲ್ಲಿ ಏಳುವುದಿಲ್ಲವೆಂದಲ್ಲ.ಆದರೆ ಆ ಪ್ರಶ್ನೆಗಳನ್ನು ಹೆಣ್ಣಿನ ಸಹನೆಯ, ವಾತ್ಸಲ್ಯದ, ಅನಿವಾರ್ಯತೆಯ ಪರದೆಯಲ್ಲಿ ಇವರು ಮುಚ್ಚಿಬಿಡುತ್ತಾರೆ. ಇವರು ಬಲಿಪಶುಗಳು ಎನ್ನುವುದು ಇದರರ್ಥವಲ್ಲ, ಪಿತೃಸಂಸ್ಕೃತಿ ನಿರ್ದೇಶಿತವಾದ ಹೆಣ್ಣಿನ ಮನೋವಿಲಾಸ ಎಷ್ಟು ಶಕ್ತವಾದುದು ಎನ್ನುವ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ.(ಎಷ್ಟು ಕಷ್ಟವೊ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬಾಳಿನಲಿ ಎನ್ನುವ ಪ್ರಶ್ನೆ ಕಣ್ಣೆದುರಿಗೆ ರಾಚಿದರೂ, ಹೇಗೂ ಹೆಂಡಿರಾಗಿ ಬದುಕಬೇಕಾದ್ದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು ಎನ್ನುವ ನಿಲುವಿಗೆ ಇವರು ಶರಣಾಗುವುದರ ಹಿಂದೆ ವ್ಯವಸ್ಥೆಯ ಪ್ರಬಲ ಹಿಡಿತವನ್ನೇ ಇಲ್ಲಿ ಗುರುತಿಸಬಹುದು). ಸುತ್ತಲಿನ ಹೆಣ್ಣುಮಕ್ಕಳ ಸ್ಥಿತಿ-ಗತಿಗೆ ಹೋಲಿಸಿದರೆ ತಾವೇ ಭಾಗ್ಯವಂತರೆನ್ನುವ ಸಾರ್ಥಕ ಭಾವ ಇವರನ್ನು ಕೃತಜ್ಞತೆಯ ಮಜಲಿಗೆ ಒಯ್ದು ನಿಲ್ಲಿಸುತ್ತದೆ.ಆದರೆ ಕಲೆಯ ಮಾಂತ್ರಿಕ ಶಕ್ತಿಯಿರುವುದೇ ಅಪ್ರಿಯ ಸತ್ಯಗಳನ್ನು ಧ್ವನಿಸುವುದರಲ್ಲಿ. ಈ ಮೊದಲ ಘಟ್ಟದ ಆತ್ಮಕಥಾನಕಗಳಲ್ಲಿಯೂ ಅಲ್ಲಲ್ಲಿ ದುರ್ದಮ್ಯವಾದ ಮೂಕ ಅಮೈತ್ರಿಯ ಅಘೋಷಿತ ನಿಟ್ಟುಸಿರುಗಳು ಕಾಣಿಸುತ್ತವೆ. ಇದು ತಾನು ಪಡೆದುಕೊಂಡ ರೂಪಿಸಿಕೊಂಡ ಬದುಕೇ, ಕೊಡಮಾಡಲ್ಪಟ್ಟ ಬದುಕೇ ಎನ್ನುವ ಅಸ್ಪಷ್ಟ ಪ್ರಶ್ನೆಗಳು ಇಣುಕಿ ಹಾಕುತ್ತವೆ.ಸಾರ್ಥಕವೆಂದು ಭಾವಿಸಿಕೊಳ್ಳುತ್ತಿರುವ ಬದುಕಿನಲ್ಲೂ ಕಿಂಚಿದೂನವಾಗಿರುವುದು ಯಾವುದರಿಂದ ಎನ್ನುವ ಪ್ರಶ್ನೆಯನ್ನು ನೇರವಾಗಿ ಮುಖಾಮುಖಿಯಾಗಲು ಇವು ಹಿಂಜರಿಯುತ್ತವೆ. ಪಿತೃಸಂಸ್ಕೃತಿಯ ಸರ್ಪಗಾವಲಿನಲ್ಲಿ ನಿರೀಕ್ಷಿತ ಹೆಣ್ಣಿನ ಪ್ರತಿನಿಧಿಯೋ, ಮಾದರಿಯೋ ಆಗುವ ಅನಿವಾರ್ಯತೆಯನ್ನು ಹೆಚ್ಚಿನ ಪ್ರತಿರೋಧವಿಲ್ಲದೆ ಇವರು ಒಪ್ಪುತ್ತಾರೆ.ಎರಡನೆಯ ಘಟ್ಟದ ಆತ್ಮಕಥಾನಕಗಳು ದತ್ತ ಮನೋವಿನ್ಯಾಸದಿಂದ ಬಿಡುಗಡೆ ಪಡೆಯಲು ನಡೆಸುವ ಧೀರೋದಾತ್ತ ಪ್ರಯತ್ನಗಳಾಗಿ ಕಾಣಿಸುತ್ತವೆ. ತಮ್ಮ ಬದುಕನ್ನು ತಮ್ಮ ಆಶಯ ಮತ್ತು ದೃಷ್ಟಿಕೋನಗಳಿಗನುಗುಣವಾಗಿ ಬದುಕಬಲ್ಲೆವು ಅನ್ನುವ ನಂಬಿಕೆಯಲ್ಲಿ ಹೊರಡುವ ಆದರೆ ಬಹುತೇಕ ಸಲ ಇದು ಸಾಧ್ಯವಾಗದೇ ಹೋಗುವ ಮತ್ತು ಇದಕ್ಕೆ ಪಿತೃಸಂಸ್ಕೃತಿಯನ್ನು ಹೊಣೆಯಾಗಿಸುವ ದೃಷ್ಟಿಕೋನ ಈ ಘಟ್ಟದ ಆತ್ಮಕಥಾನಕಗಳ ಪ್ರಧಾನ ಲಕ್ಷಣ.

 

ಗೀತಾ ನಾಗಭೂಷಣ, ಶಶಿಕಲಾ ವೀರಯ್ಯಸ್ವಾಮಿ, ಕುಲಶೇಖರಿ.... ಹೀಗೆ ಆ ಕಾಲಘಟ್ಟದ ಯಾವ ಮುಖ್ಯ ಆತ್ಮಕಥನಗಳನ್ನು ಗಮಸಿದರೂ ಅಪೇಕ್ಷಿತ ಹೆಣ್ಣಿನ ಚೌಕಟ್ಟು ಮತ್ತು ಕರಾರುಗಳನ್ನು ಮುರಿದು ಆಯ್ಕೆಯ ಬದುಕನ್ನು ಕಟ್ಟಿಕೊಳ್ಳುವ ಯತ್ನಗಳನ್ನು ನೋಡುತ್ತೇವೆ. ಆದರೆ ನಿರ್ಣಾಯಕ ಘಳಿಗೆಗಳಲ್ಲಿ ತಾವು ಸೋತೆವೇನೋ, ಮೋಸಹೋದವೇನೋ ಎನ್ನುವ ಭಾವ ಇವರನ್ನು ಅತೀವವಾಗಿ ಕಂಗೆಡಿಸುತ್ತದೆ.ಆರಿಸಿಕೊಂಡ ದಾರಿ ಸರಿಯಾಗಿರುವಾಗಲೂ, ಅದರಲ್ಲಿ ಪೂರ್ಣ ಯಶಸ್ಸು ಸಿಗದೇ ಇರುವುದಕ್ಕೆ ಪಿತೃಸಂಸ್ಕೃತಿಯೇ ಕಾರಣ ಎನ್ನುವುದಕ್ಕೆ ಸಮರ್ಥನೆಗಳನ್ನು ಉದ್ದಕ್ಕೂ ಹುಡುಕುತ್ತ ಹೋಗುವುದರಿಂದ ಆರೋಪ ಭಾವವೊಂದು ಇವರ ದೃಷ್ಟಿಕೋನವನ್ನು ರೂಪಿಸಿರುವಂತೆ ಕಾಣಿಸುತ್ತದೆ. ಪಿತೃ ಸಂಸ್ಕೃತಿಯ ಹುನ್ನಾರ, ಛದ್ಮವೇಷಗಳು, ಉಕ್ಕಿನ ಹಿಡಿತಗಳಲ್ಲಿ ನಾವು ಸಿಕ್ಕಿದೆವೋ ಎನ್ನುವ ಪರಿತಾಪವೊಂದು ಇವರನ್ನು ಬೆಂಕಿಯಂತೆ ಸುಡುತ್ತದೆ. ಎಂತಲೇ ದುರಂತ ನಾಯಕಿಯರ ಹಾಗೆ ಇವರು ಕಾಣತೊಡಗುತ್ತಾರೆ.ಈ ಮಾತುಗಳನ್ನು ಹೇಳುತ್ತಿರುವಾಗ, ಇವರ ದೃಷ್ಟಿಕೋನದ ಮಿತಿಯನ್ನಲ್ಲ ನಾನು ಗುರುತಿಸುತ್ತಿರುವುದು. ನನ್ನ ಗಮನವಿರುವುದು ಆ ಕಾಲಘಟ್ಟದ ಮಹಿಳೆಯರು ಎದುರಿಸಿದ ಸವಾಲುಗಳ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿ. ಬದಲಾವಣೆಯ ಪ್ರಕ್ರಿಯೆಯಲ್ಲಿ ಕೆಲವು ತಲೆಮಾರುಗಳು ಮುಖಾಮುಖಿಯಾಗುವ ದ್ವಂದ್ವಗಳು ಎಷ್ಟು ದಾರುಣವಾಗಿರುತ್ತವೆ ಎನ್ನುವುದರ ಜ್ವಲಂತ ಉದಾಹರಣೆಗಳಾಗಿ ಇವು ಕಾಣಿಸುತ್ತವೆ.ಇಲ್ಲಿಂದಾಚೆಗಿನ ಮೂರನೆಯ ಘಟ್ಟದ ಕಥಾನಕಗಳು ಮೊದಲ ಎರಡು ಘಟ್ಟದ ಮಹಿಳೆಯರ ಮನೋವಿನ್ಯಾಸದಿಂದ, ದೃಷ್ಟಿಕೋನದಿಂದ ಹೊರಬಂದವಾಗಿ ಕಾಣಿಸುತ್ತವೆ. ತಾನು ಬದುಕುತ್ತಿರುವ ಜನಸಮುದಾಯದಿಂದ no objection (certificate)  ಪಡೆಯಬೇಕೆನ್ನುವ ಯಾವ ಇರಾದೆಯೂ ಇವುಗಳಿಗಿಲ್ಲ. ಎರಡನೆಯ ಘಟ್ಟದ ಮಹಿಳಾ ಆತ್ಮಕಥಾನಕಗಳು ನಡೆಸಿದ ಪ್ರಯತ್ನಗಳು ಇಲ್ಲಿ ಯಶಸ್ವಿಯಾಗಿರುವಂತೆ ಕಾಣಿಸುತ್ತವೆ.ಎಂತಲೇ ಮಹಿಳಾ ಆತ್ಮಕಥಾನಕಗಳು ಮಹಿಳಾ ಸಂಕಥನದ ಪ್ರಕ್ರಿಯೆಯ ಮಜಲುಗಳ ಅಧಿಕೃತ ದಾಖಲಾತಿಗಳಾಗಿವೆ. ಈ ಘಟ್ಟದ ಮಹಿಳೆಯರ ಬಹುದೊಡ್ಡ ಅರಿವಿನ ಸ್ಫೋಟವೆಂದರೆ, ಹೆಣ್ಣು ಬಯಸುವ ಬಿಡುಗಡೆ ಎನ್ನುವುದು ನಿಜದಲ್ಲಿ ಹೊರಗಿನಿಂದ ಬರುವುದಲ್ಲ, ಅದು ಬರಬೇಕಾದ್ದು ಹೆಣ್ಣಿನ ಒಳಗಿನಿಂದಲೇ ಎನ್ನುವುದು.ಬದಲಾಗಬೇಕಾದ್ದು ಲೋಕವಲ್ಲ, ತಾನು ಎನ್ನುವ ದೃಷ್ಟಿಕೋನದ ಪಲ್ಲಟವು ತರಬಹುದಾದ ಅಸಾಧಾರಣ ಬದಲಾವಣೆಯನ್ನು ಈ ಸಂದರ್ಭದ ಎಲ್ಲ ಮುಖ್ಯ ಆತ್ಮಕಥಾನಕಗಳಲ್ಲೂ ಗುರುತಿಸಬಹುದು. `ಸ್ವಗ್ರಹಿಕೆ~ ಬದಲಾದಾಗ ಲೋಕ ಮತ್ತು ಬದುಕು ಎರಡೂ ಹೊಸದಾಗಿ, ಭಿನ್ನವಾಗಿ, ಆಪ್ತವಾಗಿ ಕಾಣತೊಡಗುವ ಸಾಧ್ಯತೆಯನ್ನು ಈ ಮಹಿಳೆಯರು ಶೋಧಿಸುತ್ತಿರುವಂತೆ ಕಾಣಿಸುತ್ತದೆ.ಪ್ರೇಮಾ ಕಾರಂತರ `ಸೋಲಿಸಬೇಡ ಗೆಲಿಸಯ್ಯಾ~, ಭಾರ್ಗವಿ ನಾರಾಯಣರ `ನಾನು ಭಾರ್ಗವಿ~, ಉಮಾಶ್ರೀಯವರ `ಬೆಂಕಿ ಬೆಡಗು~ ಈ ಶೀರ್ಷಿಕೆಗಳೇ ಬದಲಾದ ದೃಷ್ಟಿಕೋನದ ಥಾಟನ್ನು ಸ್ಪಷ್ಟವಾಗಿ ಹೇಳುತ್ತವೆ. ಕೃತಜ್ಞತೆಯ ಭಾರವಿಲ್ಲದ, ಆರೋಪಗಳ ಭಾರವೂ ಇಲ್ಲದ ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಆಸಕ್ತವಾದ ಈ ಕಥನಗಳು ಆತ್ಮವನ್ನು ಬಿಚ್ಚಿಡುವ ಪ್ರಕ್ರಿಯೆಗಿಂತ ಆತ್ಮದೊಂದಿಗೆ ನಡೆಸುವ ಸ್ವಗತಗಳ ಹಾಗೆ ಕಾಣಿಸುತ್ತವೆ.ಇನ್ನೂ ಮಹತ್ವದ ಮಾತೆಂದರೆ, `ಸ್ವ ವಕೀಲಿ~ಯೂ ಇಲ್ಲಿ ಗೈರು ಹಾಜರಾಗಿದೆ. ತಮ್ಮ ಬದುಕಿನ ಸನ್ನಿವೇಶಗಳನ್ನು ನಿರೂಪಿಸುವಾಗ ಇವರು ಕಾಯ್ದುಕೊಂಡಿರುವ ಅಂತರವೂ ಓದುಗರಲ್ಲಿ ಅಚ್ಚರಿ ಹುಟ್ಟಿಸುತ್ತದೆ. ಪಿತೃಸಂಸ್ಕೃತಿಯೊಂದಿಗಿನ ಮುಖಾಮುಖಿಯನ್ನು ಬದಲಾದ ಸ್ವಗ್ರಹಿಕೆಯ ಹಿನ್ನೆಲೆಯಲ್ಲಿ ಕುಂದಿಲ್ಲದ ಆತ್ಮವಿಶ್ವಾಸದಿಂದ ಸಹಜ ಸ್ವಾಭಾವಿಕವೆನ್ನುವ ನೆಲೆಯಲ್ಲಿ ಇವರು ನಿಭಾಯಿಸುತ್ತಾ ಹೋಗುತ್ತಾರೆ. ಬದುಕಿನ ಏಳು-ಬೀಳುಗಳಲ್ಲಿ, ದುರ್ಭರ ಸನ್ನಿವೇಶಗಳಲ್ಲಿ ತನ್ನ ಪಾಲೆಷ್ಟು ಎನ್ನುವ ಎಚ್ಚರವೊಂದು ಆತ್ಮಕಥನಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ನಾಟಕೀಯ, ಏಕಪಕ್ಷೀಯ ಮಂಡನೆಯನ್ನು ಆದಷ್ಟು ತಡೆಗಟ್ಟಿದೆ.ಪ್ರತಿಭಾ ನಂದಕುಮಾರ್ ಅವರ `ಅನುದಿನದ ಅಂತರಗಂಗೆ~ ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡ ಮಹಿಳಾ ಆತ್ಮಕಥನಗಳಲ್ಲಿ ದೃಷ್ಟಿಕೋನ, ಸಂವೇದನೆ ಮತ್ತು ಅಭಿವ್ಯಕ್ತಿ- ಈ ಎಲ್ಲ ದೃಷ್ಟಿಗಳಿಂದಲೂ ನಮ್ಮ ಕಾಲದ ಮಹತ್ವದ ಆತ್ಮಕಥನ ಎನಿಸುತ್ತದೆ. ಇದು ಪ್ರತಿಭಾರ ಬದುಕು ಅಸಾಧಾರಣ ಎನ್ನುವ ಅರ್ಥದಲ್ಲಲ್ಲ, ಬದುಕನ್ನು ಕುರಿತ ಅವರ ದೃಷ್ಟಿಕೋನ ಅಸಾಧಾರಣವಾದುದು ಎನ್ನುವ ಕಾರಣಕ್ಕೆ.ನನ್ನ ಬದುಕಿಗೆ ನಾನೇ ಜಬಾಬ್ದಾರಳು ಎನ್ನುವುದೇ ಪ್ರತಿಭಾರ ವ್ಯಕ್ತಿತ್ವದ ಮೂದ್ರಲವ್ಯ. ಬದುಕಿನ ಯಾವ ಹಂತದಲ್ಲಿಯೂ, ಎಂತಹ ಬಿಕ್ಕಟ್ಟಿನಲ್ಲಿಯೂ ಪ್ರತಿಭಾ ಈ ಜವಾಬ್ದಾರಿಯಿಂದ ವಿಮುಖರಾಗುವುದಿಲ್ಲ. ಈ ನಿಲುವಿನ ಖಾಚಿತ್ಯದ ಹಿಂದೆ ಖಂಡಿತವಾಗಿಯೂ ಕೆಲಸ ಮಾಡಿರುವುದು ಬದಲಾದ ಮತ್ತು ವಿಸ್ತೃತವಾದ ಆತ್ಮಘನತೆಯ ಕಲ್ಪನೆ. ಈ ಬದಲಾದ ಆತ್ಮಘನತೆಯ ಮುಖ್ಯ ಲಕ್ಷಣವೆಂದರೆ ಸ್ವಮರುಕದಿಂದ ಪಾರಾಗಿರುವುದು.ಸದಾ ತನ್ನನ್ನು ಹತ್ತಿಕ್ಕುವ ನೂರು ದಾರಿಗಳನ್ನು ಹುಡುಕುತ್ತಲೂ, ಪ್ರಯೋಗಿಸುತ್ತಲೂ ಇರುವ ಪಿತೃಸಂಸ್ಕೃತಿಯ ಒಳಗ್ದ್ದಿದೂ ಅದನ್ನು ನಿಧಾನವಾಗಿ ಧಿಕ್ಕರಿಸುವ, ಕಡೆಗಣ್ಣಿನ ದೃಷ್ಟಿಕೋನವೊಂದನ್ನು ಬೆಳೆಸಿಕೊಳ್ಳುವ ಪ್ರಯತ್ನವನ್ನು ಪ್ರತಿಭಾ ಉದ್ದಕ್ಕೂ ಮಾಡುತ್ತಾ ಹೋಗುತ್ತಾರೆ. ಆಲಯದೊಳಗಿದ್ದೇ ಬಯಲಿನ ವಿಸ್ತಾರಕ್ಕೆ ಹಂಬಲಿಸುವವರಂತೆ ಪ್ರತಿಭಾ ಕಾಣಿಸುತ್ತಾರೆ.  U lived your life like a candle in d wind ಎನ್ನುವುದು ಇವರ ಬದುಕಿನ ಕ್ರಮವೇ ಇದ್ದೀತು, ಆದರೆ ಬದುಕಿನ ದೀಪ ಗಳಿಗೆಯೂ ಆರದಂತೆ ನೋಡಿಕೊಳ್ಳುವ ಆತ್ಮಚೈತನ್ಯವೂ ಅದರ ಪರಾಕಾಷ್ಠೆಯಲ್ಲಿ ಪ್ರತಿಭಾರಲ್ಲಿ ಕಾಣಿಸುತ್ತದೆ.ದಿವಾನ್ ವಿ.ಪಿ. ಮಾಧವರಾಯರ ಮರಿಮಗಳು, ಸ್ಕೌಟ್ ರಾಮಚಂದ್ರರಾಯರ ಮಗಳು ತನ್ನ ಉಬ್ಬುಹಲ್ಲಿನ ಕಾರಣಕ್ಕಾಗಿ ಎದುರಿಸಿದ ಕೀಳರಿಮೆಯ ಸವಾಲುಗಳನ್ನು ಗೆಲ್ಲುವ ಹಾದಿ ಕಂಡುಕೊಂಡಂತೆಯೇ ಜೀವಮಾನದುದ್ದಕ್ಕೂ ಎದುರಾದ ಅಸಂಖ್ಯ ಸವಾಲುಗಳನ್ನು ತಾನು ಆರಿಸಿಕೊಂಡ ಬದುಕಿದು, ತಾನೇ ನಿಭಾಯಿಸಬೇಕು ಎನ್ನುವ ಬದ್ಧತೆಯಲ್ಲಿ, ಛಲದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೀತಿಯಲ್ಲಿ ಪ್ರತಿಭಾ ಮಾಖಾಮುಖಿಯಾಗುತ್ತಾರೆ. ಇಂಥ ಮುಖಾಮುಖಿಯಲ್ಲಿ ಪ್ರತಿಭಾ ನೆಚ್ಚುವುದು ಎರಡು ಮೂಲಸಂಗತಿಗಳನ್ನು.ಒಂದು ವೃತ್ತಿಯಿರಲಿ, ದಾಂಪತ್ಯವಿರಲಿ, ಸಂಬಂಧಗಳಿರಲಿ, ಜೀವನೋಪಾಯದ ಅನಿವಾರ್ಯತೆಯಲ್ಲಿ ಕೈಗೊಳ್ಳುವ ಯಾವುದೇ ಸಾಹಸವಿರಲಿ ಪ್ರತಿಭಾಗೆ ತಮ್ಮ ಆಯ್ಕೆಯ ಬಗ್ಗೆ ಖಾಚಿತ್ಯವಿದೆ ಮತ್ತು ನಂಬಿಕೆಯಿದೆ. ಇನ್ನೊಂದು, ಮನುಷ್ಯ ಘನತೆಯಲ್ಲಿ ಪ್ರತಿಭಾಗಿರುವ ಅತುಲ ವಿಶ್ವಾಸ. ಎಂಥ ಪ್ರತಿಕೂಲ ಘಳಿಗೆಗಳಲ್ಲಿಯೂ ಪ್ರತಿಭಾ ಕುಸಿಯದಿರುವುದರ ಹಿಂದಿನ ಕಾರಣಗಳು ಇವೇ.ದಾಂಪತ್ಯದ ಅಗ್ನಿದಿವ್ಯದ ಹಲವು ಸಂದರ್ಭಗಳಲ್ಲಿ ಅದರಿಂದ ಹೊರಬರುವ ಪ್ರಯತ್ನ ನಡೆಸಿದ ಮೇಲೂ ಪ್ರತಿಭಾ ಮತ್ತೆ ಆ ಚೌಕಟ್ಟಿಗೆ ಅನಾಯಾಸವಾಗಿರುವಂತೆ ಮರಳುವುದು ಇದೇ ಮನುಷ್ಯ ಘನತೆಯ ಮೇಲಿನ ವಿಶ್ವಾಸದಿಂದ. `ಪ್ರಿಯ ವ್ಯಕ್ತಿಯನ್ನು ದೋಷಗಳ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ನಿಜವಾದ ಪ್ರೀತಿಗಿರುತ್ತದೆ - ಇರಬೇಕು~ ಎನ್ನುವ ಕಚನ ಮಾತನ್ನು ಅಕ್ಷರಶಃ ನಂಬಿ ಪಾಲಿಸುವವರಂತೆ ಕಾಣುತ್ತಾರೆ ಪ್ರತಿಭಾ.

 

ಇತರ ಗೆಳೆತನಗಳನ್ನು ಪ್ರತಿಭಾ ಕಟ್ಟಿಕೊಳ್ಳುವಾಗಲೂ, ಅವುಗಳಲ್ಲಿ ಸಂಕಷ್ಟಗಳು ಎದುರಾದಾಗಲೂ ಅಪೂರ್ಣಗೊಂಡಾಗಲೂ, ಉದ್ದೇಶಪೂರ್ವಕವಾಗಿ ಇವರನ್ನು ಘಾಸಿಗೊಳಿಸಿದಾಗಲೂ ಪ್ರತಿಭಾ ನೆಮ್ಮುವುದು ಇದೇ ಮನುಷ್ಯ ಘನತೆ ಮತ್ತು ಪ್ರೀತಿಯನ್ನು. ಯಾವುದೇ ಮನುಷ್ಯ ಸಂಬಂಧದ ಮೂಲಕವೂ ಪ್ರತಿಭಾ ಸತತವಾಗಿ ಹುಡುಕುವುದು ಬದುಕಿನ ಸಮೃದ್ಧತೆಯನ್ನು, ಫಲವಂತಿಕೆಯನ್ನು ಮತ್ತು ಸೌಂದರ್ಯವನ್ನು. ಇಂಥ ಹುಡುಕಾಟದಲ್ಲಿ ಅವರು ಮಾನ ಅವಮಾನಗಳ ವ್ಯಾಖ್ಯಾನವನ್ನೇ ತಿರುವು ಮುರುವು ಮಾಡಿಕೊಂಡವರಂತೆ ಭಾಸವಾಗುತ್ತಾರೆ.ಗಂಡಿನ ಮಟ್ಟಿಗೆ ಸಹಜವಾದ ನಿಲುವಾಗಿ ಕಾಣುವುದು, ಹೆಣ್ಣಿನ ಮಟ್ಟಿಗೆ ಭಂಡತನವಾಗಿ ವ್ಯಾಖ್ಯಾನಿಸಲ್ಪಡುತ್ತದೆಯಷ್ಟೇ. ಹೆಣ್ಣನ್ನು ಮೌನಿಯಾಗಿಸುವ, ನಿಷ್ಕ್ರಿಯಳಾಗಿಸುವ, ಅಧೀರಳಾಗಿಸುವ ಇಂತಹ ತಂತ್ರಗಳಿಗೆ ಮಣಿಯದಿರುವುದರಲ್ಲಿಯೇ ಪ್ರತಿಭಾ ಹೊಸ ದೃಷ್ಟಿಕೋನವೊಂದನ್ನು ಸಾಧಿಸಿಕೊಳ್ಳುತ್ತಾರೆ.

 

ಹೆಣ್ಣನ್ನು ವಸ್ತುವಿಶೇಷವಾಗಿ ಬಳಸಿ ಗೆಲುವಿನ ನಗೆ ಬೀರುವವರೆದುರಿಗೆ ಇವರು, ಅವರದು ಗೆಲುವೇ ಅಲ್ಲ ಎನ್ನುವ ನಿಲುವು ತಳೆಯುವುದರ ಮೂಲಕವೇ ಅವರ ಬಗೆಗೆ ಅಪಾರ ಘನತೆಯಲ್ಲಿ ವರ್ತಿಸುವುದರ ಮೂಲಕವೇ ಸ್ಥಾಪಿತ ಪಿತೃಸಂಸ್ಕೃತಿಯ ಮುಖ್ಯ ವಿನ್ಯಾಸವೊಂದನ್ನು ಪ್ರತಿಭಾ ಮುರಿಯುತ್ತಾರೆ. ಮಹಿಳಾ ಸಂಕಥನದಲ್ಲಿ  ಇದೊಂದು ಬಹುಮುಖ್ಯ ಸಾಧನೆಯೆಂದೇ ಹೇಳಬೇಕು.ಇದಕ್ಕೆ ಹೊಂದಿಕೊಳ್ಳುವಂತೆ ಇನ್ನೊಂದು ಅಂಶವಿದೆ. ಪಾಪಪ್ರಜ್ಞೆಯ ಸೋಂಕಿಲ್ಲದ ಶುದ್ಧ ಜೀವನ ಪ್ರೀತಿಯಲ್ಲಿ ಪ್ರತಿಭಾ ಬದುಕಿನ ಪ್ರಯಾಣ ಮುಂದುವರೆಸುತ್ತಾ ಹೋಗುವುದು. ಬದುಕು - ವ್ಯಕ್ತಿಗಳನ್ನು ಉತ್ಕಟವಾಗಿ ಪ್ರೀತಿಸುತ್ತಲೇ, ಆ ಪ್ರೀತಿಯ ದಾಖಲೆಯೇ ಎಂಬಂತೆ ಸತತ ಕಾವ್ಯೋದ್ಯೋಗದಲ್ಲಿ ತೊಡಗುತ್ತಲೇ ಬದುಕಿಗೆ ತನ್ನನ್ನು ಪರವಶತೆಯಿಂದ ಕೊಟ್ಟುಕೊಳ್ಳುವ ಪ್ರತಿಭಾ ಇದೇ ಬದುಕಿಗೆ ಸಲ್ಲಿಸಬೇಕಾದ ಬಹುದೊಡ್ಡ ಗೌರವ ಎಂದು ತಿಳಿದವರಂತೆ ಭಾಸವಾಗುತ್ತದೆ.

 

ಈ ದೃಷ್ಟಿಕೋನವೇ ಬಹುಶಃ ಹೆಣ್ಣಿನ ಮಟ್ಟಿಗೆ ಹೊಸ ಮೌಲ್ಯ ವ್ಯವಸ್ಥೆಯೊಂದು ರೂಪುಗೊಳ್ಳಲು ಕಾರಣವಾಗಬಹುದೆಂದು ತೋರುತ್ತದೆ. `ಅವರ~ ಕಣ್ಣುಗಳಲ್ಲಿ `ನಮ್ಮ~ ಜೀವನವನ್ನು ನೋಡಿಕೊಳ್ಳುವುದಕ್ಕೆ ಬದಲು, ಅವರಿಂದ ಅಧಿಕೃತತೆಯನ್ನು ಪಡೆಯುವ ಬದಲು ನಮ್ಮ ಬದುಕನ್ನು ನಮ್ಮ ಕಣ್ಣಿಂದಲೇ ನೋಡಿ ಸ್ವ ಅಧಿಕೃತತೆಯನ್ನು ಪಡೆಯಲು ಯತ್ನಿಸುವುದೇ ಪ್ರತಿಭಾ ನಂದಕುಮಾರ್ ಆತ್ಮಚರಿತ್ರೆಯ ಯಶಸ್ಸು.ಹಾಗೆ ನೋಡಿದರೆ, ಇದು `ಆತ್ಮಚರಿತ್ರೆ~ ಎನ್ನುವ ಸ್ಪಷ್ಟ ಉದ್ದೇಶದಿಂದ ಮಾಡಿದ ಬರವಣಿಗೆಯೇ ಅಲ್ಲ. `ಪ್ರೀತಿಗಾಗಿ ಹುಡುಕಾಟ~ ಎನ್ನುವುದು ಇದರ ಮೊದಲ ಶೀರ್ಷಿಕೆಯಾಗಿತ್ತು ಎಂದು ಪ್ರತಿಭಾ ಒಂದು ಕಡೆ ಹೇಳಿದ್ದು ನೆನಪಾಗುತ್ತಿದೆ. ಹೀಗಾಗಿ ಬಾಲ್ಯದ ಆಧಾರವಿಲ್ಲದೇ ನಮ್ಮೆದುರಿಗೆ ಧುತ್ತೆಂದು ಪ್ರತಿಭಾರ ಯೌವನದೊಂದಿಗೆ ಓದುಗ ಮುಖಾಮುಖಿಯಾಗುವಂತಾಗಿದೆ.ಇದಕ್ಕಿಂತ ಬಹುದೊಡ್ಡ ಮಿತಿ ಎಂದು ಓದುಗರಿಗೆ ಅನ್ನಿಸುವುದು ಪ್ರತಿಭಾರ ಕಾವ್ಯ ಜೀವನದ ಪ್ರಕ್ರಿಯೆಯ ವಿವರಗಳು ತಿಳಿಯದೇ ಹೋಗುವುದು. ಆತ್ಮಚರಿತ್ರೆಯೊಂದರಲ್ಲಿ ಒಳಗೊಳ್ಳಬೇಕಾದ ವಿವರಗಳನ್ನು ನಿರ್ಧರಿಸುವ ಹಕ್ಕು ಲೇಖಕರದೇ ಎನ್ನುವುದನ್ನು ಒಪ್ಪಿಯೂ ಕನ್ನಡದ ಮಹತ್ವದ ಕವಯತ್ರಿಯೊಬ್ಬರ ಬರವಣಿಗೆಯ ರೋಮಾಂಚಕ ವಿವರಗಳನ್ನು ತಿಳಿಯುವ ಹಕ್ಕು ಓದುಗರಿಗಿದ್ದೀತು ಎನ್ನುವ ಅಧಿಕ ಪ್ರಸಂಗದಲ್ಲಿ ಈ ಮಾತುಗಳನ್ನು ಹೇಳುತ್ತಿದ್ದೇನೆ.ಅನುದಿನದ ಅಂತರಗಂಗೆ

ಲೇ: ಪ್ರತಿಭಾ ನಂದಕುಮಾರ್

ಪು: 256; ಬೆ: ರೂ. 210

ಪ್ರ: ಅಹರ್ನಿಶಿ ಪ್ರಕಾಶನ, ಪ್ರಶಾಂತ ನಿಲಯ, 4ನೇ ಕ್ರಾಸ್, ವಿದ್ಯಾನಗರ, ಶಿವಮೊಗ್ಗ. ಮೊ.94491 74662

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.